ಅಧಿಕಾರ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸಿದ ಕೇಜ್ರಿವಾಲ್ ಸರ್ಕಾರ ಹೇಗೆ ತಪರಾಕಿ ನೋಡಿ!
ದೆಹಲಿ: ಸದಾ ಒಂದಿಲ್ಲೊಂದು ವಿವಾದದಿಂದಲೇ ಸುದ್ದಿಯಲ್ಲಿರುವ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಇತ್ತೀಚೆಗಷ್ಟೇ ಶಾಸಕರ ಅಮಾನತುಗೊಳಿಸಿದ್ದು ನುಂಗಲಾರದ ತುತ್ತಾಗಿತ್ತು. ಈ ನೋವು ಮರೆಮಾಚುವ ಮುನ್ನವೇ ಈಗ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸಿದ ಆರೋಪದಲ್ಲಿ ಕೇಂದ್ರ ಸರ್ಕಾರದಿಂದ ಹಿನ್ನಡೆ ಅನುಭವಿಸಿದೆ.
ಹೌದು, ಕೇಂದ್ರ ಸರ್ಕಾರದ ಶಿಫಾರಸು ಮೇರೆಗೆ ದೆಹಲಿ ಸರ್ಕಾರದ ಸಾಮಾನ್ಯ ಆಡಳಿತ ವಿಭಾಗವು ದೆಹಲಿ ಸರ್ಕಾರದ ಹಲವು ಸಚಿವರಿಗೆ ನೇಮಿಸಲಾಗಿದ್ದ ಸಲಹೆಗಾರರ ನೇಮಕ ರದ್ದುಗೊಳಿಸಿದೆ.
ಅಮರ್ ದೀಪ್ ತಿವೇರಿ, ಅರುಣೋದಯ್ ಪ್ರಕಾಶ್, ಆತಿಶಿ ಮರ್ಲೇನಾ, ದಿನಕರ್ ಆದಿಬ್, ರಾಮ್ ಕುಮಾರ್ ಝಾ, ಸಮೀರ್ ಮಲ್ಹೋತ್ರಾ, ರಾಘವ್ ಚಂದಾ, ಪ್ರಶಾಂತ್ ಸಕ್ಸೇನಾ ಸೇರಿ ಹಲವು ಸಲಹೆಗಾರರ ನೇಮಕವನ್ನು ಸಾಮಾನ್ಯ ಆಡಳಿತ ವಿಭಾಗ ಮಂಗಳವಾರ ರದ್ದುಗೊಳಿಸಿದೆ.
ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಹಾಗೂ ತನ್ನ ಅಧಿಕಾರದ ವ್ಯಾಪ್ತಿಯಲ್ಲಿ ಬರದ ಕಾರ್ಯವನ್ನು ಮಾಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ದೆಹಲಿ ಸರ್ಕಾರದ ಸಾಮಾನ್ಯ ಆಡಳಿತ ವಿಭಾಗಕ್ಕೆ ಪತ್ರ ಬರೆದಿತ್ತು. ಈ ಪತ್ರದ ಅನ್ವಯ ಸಲಹೆಗಾರರ ನೇಮಕವನ್ನು ರದ್ದುಗೊಳಿಸಲಾಗಿದೆ.
ನೇಮಕ ರದ್ದಾದವರಲ್ಲಿ ಇಬ್ಬರು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸಲಹೆಗಾರರಾಗಿ ಇದ್ದರು ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಸದಾ ಒಂದಿಲ್ಲೊಂದು ಅಚಾತುರ್ಯ ಹೇಳಿಕೆ, ವಿವಾದ, ಸದಾ ಸುದ್ದಿಯಲ್ಲಿರಲು ಬಯಸುವ ಅರವಿಂದ್ ಕೇಜ್ರಿವಾಲ್ ಅವರಿಗೆ ಈ ನಡೆಯಿಂದ ಮುಖಭಂಗವಾದಂತಾಗಿದೆ.
Leave A Reply