ಡಾ.ಕೇಶವ್ ಬಲಿರಾಮ್ ಹೆಡ್ಗೆವಾರ್ ಸ್ಮಾರಕ ಇನ್ನು ಪ್ರವಾಸಿ ತಾಣವಾಗಿ ಮಹಾರಾಷ್ಟ್ರ ಸರ್ಕಾರ ಘೋಷಣೆ!
ಮುಂಬೈ: ಮಹಾರಾಷ್ಟ್ರ ಸರ್ಕಾರ ಮಹತ್ತರ ಘೋಷಣೆಯೊಂದನ್ನು ಮಾಡಿದ್ದು, ರಾಷ್ಟ್ರೀಯ ಸ್ವಯಂ ಸಂಘದ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಸ್ಮಾರಕವನ್ನು ಪ್ರವಾಸಿ ತಾಣ ಎಂದು ಘೋಷಿಸಿದೆ.
ನಾಗಪುರದಲ್ಲಿ ಇರುವ ಸ್ಮೃತಿ ಮಂದಿರ ಎಂದೇ ಪ್ರಸಿದ್ಧಿಯಾಗಿರುವ ಸ್ಮಾರಕವನ್ನು ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಪೋರೇಷನ್ ಹಾಗೂ ಜಿಲ್ಲಾ ಯೋಜನಾ ಆಯೋಗ ಶಿಫಾರಸಿನ ಮೇರೆಗೆ ಸಿ ಗ್ರೇಡ್ ಪ್ರವಾಸಿ ತಾಣದ ಸ್ಥಾನಮಾನ ನೀಡಿ ಘೋಷಣೆ ಮಾಡಿದೆ.
ನಾಗಪುರ ಬಿಜೆಪಿ ಉಪಾಧ್ಯಕ್ಷ ಭೂಷಣ್ ದಾವ್ಡೆ ಅವರು ಒಂದು ವರ್ಷದ ಹಿಂದೆ ನಾಗಪುರದ ರೇಷಿಮ್ ಬಾಗ್ ಸ್ಮೃತಿ ಮಂದಿರ್ ಸ್ಮಾರಕವನ್ನು ಪ್ರವಾಸಿ ತಾಣ ಎಂಬುದಾಗಿ ಘೋಷಿಸಬೇಕು ಎಂದು ಬೇಡಿಕೆ ಇಟ್ಟು ಮನವಿ ಸಲ್ಲಿಸಿದ್ದರು. ಈಗ ಒಂದು ವರ್ಷದ ಬಳಿಕ ಸ್ಥಾನಮಾನ ಸಿಕ್ಕಿದೆ.
ಸ್ಮೃತಿ ಮಂದಿರ್ ಪ್ರಮುಖ ಸ್ಮಾರಕವಾಗಿದ್ದು, ವಿಜಯ ದಶಮಿ ಸೇರಿ ಹಲವು ಪ್ರಮುಖ ದಿನಗಳಂದು ನೂರಾರು ಜನ ಸೇರುತ್ತಾರೆ. ಈಗ ಪ್ರವಾಸಿ ತಾಣ ಸ್ಥಾನಮಾನವೂ ಸಿಕ್ಕಿದ್ದು, ನಾಗಪುರ ನಗರ ಪಾಲಿಕೆ ಸ್ಮಾರಕದ ಅಭಿವೃದ್ಧಿಗೆ 3 ಕೋಟಿ ರೂಪಾಯಿ ಸಹ ಮಂಜೂರು ಮಾಡಿದೆ.
ಡಾ.ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರು ಬೇರೆ ನಾಲ್ಕು ಜನರೊಂದಿಗೆ ಸೇರಿ ಮಹಲ್ ಎಂಬಲ್ಲಿ 1925ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯನ್ನು ಸ್ಥಾಪಿಸಿದರು. ಇವರು 1940ರಂದು ನಿಧನರಾಗಿದ್ದು, ನಾಗಪುರದಲ್ಲಿ ಶವಸಂಸ್ಕಾರ ಮಾಡಲಾಗಿತ್ತು. ಇದು ಮುಂದೆ ಸ್ಮಾರಕವಾಗಿ ಬದಲಾವಣೆಯಾಗಿತ್ತು.
Leave A Reply