ಕಲಬುರಗಿ ರೈತರ ನೆರವಿಗೆ ಮುಂದಾದ ಆರೆಸ್ಸೆಸ್, ಉಚಿತವಾಗಿ ಎತ್ತು ನೀಡಿ ಶ್ಲಾಘನೀಯ ಕಾರ್ಯ!
ಕಲಬುರಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಎಂದರೇನೆ ಹಾಗೆ. ಈ ಸಂಘಟನೆ ದೇಶದ ಯಾವುದೇ ಮೂಲೆಯಲ್ಲಿ ಯಾರಿಗೇ ತೊಂದರೆಯಾಗಿ, ತಕ್ಷಣ ಕಾರ್ಯಕರ್ತರು ನೆರವಿಗೆ ಧಾವಿಸುತ್ತಾರೆ. ಪ್ರಕೃತಿ ವಿಕೋಪ ಸೇರಿ ಯಾವುದೇ ದುರ್ಘಟನೆ ಸಂಭವಿಸಿದರೂ ಆರೆಸ್ಸೆಸ್ ಕಾರ್ಯಕರ್ತರು ಅಲ್ಲಿರುತ್ತಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ಸಿನ ಜವಾಹರ್ ಲಾಲ್ ನೆಹರೂ ಅವರು ಆರೆಸ್ಸೆಸ್ ಕಾರ್ಯಕರ್ತರನ್ನು ಕರೆಸಿ ಸನ್ಮಾನ ಮಾಡಿದ್ದರು.
ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಇಂಥಾದ್ದೇ ಮಹತ್ಕಾರ್ಯವೊಂದನ್ನು ಮಾಡಿದ್ದು, ಕಲಬುರಗಿ ಜಿಲ್ಲೆಯ ಗೌಡಗಾಂವ ಗ್ರಾಮದ ಒಂಬತ್ತು ರೈತರಿಗೆ 14 ಎತ್ತುಗಳನ್ನು ಉಚಿತವಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಕಳೆದ ಮೂರ್ನಾಲ್ಕು ವರ್ಷದಿಂದ ಕಲಬುರಗಿ ಸುತ್ತಮುತ್ತ ಬರದ ಪರಿಸ್ಥಿತಿ ಆವರಿಸಿದ್ದು, ರೈತರು ತಮ್ಮ ಜೀವನಕ್ಕೆ ಆಧಾರವಾಗಿದ್ದ ಎತ್ತುಗಳನ್ನೂ ಮಾರಾಟ ಮಾಡಿದ್ದರು. ಆದರೆ ಈಗ ಮಳೆಗಾಲ ಆರಂಭವಾಗಲಿದ್ದು, ಬಿತ್ತನೆ ಮಾಡಲು ಎತ್ತು ಖರೀದಿಸದ ಪರಿಸ್ಥಿತಿಯಲ್ಲಿ ರೈತರು ಇದ್ದರು. ಇದನ್ನು ಗಮನಿಸಿದ ಆರೆಸ್ಸೆಸ್ ಬಡ ರೈತರನ್ನು ಗುರುತಿಸಿ ಎತ್ತುಗಳನ್ನು ಒಪ್ಪಂದದ ಮೂಲಕ ನೀಡಿದೆ.
ಸರಿಯಾಗಿ ಮಳೆಯಾಗದೆ ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ನಾವು ಜೀವನಕ್ಕೆ ಆಧಾರವಾಗಿದ್ದ ಎತ್ತುಗಳನ್ನು ಮಾರಾಟ ಮಾಡಲೇಬೇಕಾಗಿತ್ತು. ಆದರೆ ಈ ಬಾರಿ ಮಳೆಯಾದರೆ ಎತ್ತುಗಳಿಲ್ಲದೆ ಹೇಗೆ ಬಿತ್ತನೆ ಮಾಡಬೇಕು ಎಂಬ ಚಿಂತೆಯಲ್ಲಿದ್ದೆವು. ಆದರೆ ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ನಮ್ಮ ನೆರವಿಗೆ ಧಾವಿಸಿದ್ದು, ವ್ಯವಸಾಯ ಮಾಡಲು ತುಂಬ ಸಹಾಯಕವಾಗಿದೆ ಎಂದು ಗೌಡಗಾಂವ್ ಗ್ರಾಮದ ರೈತ ಸಂತೋಷ್ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ರೈತನೇ ದೇಶದ ಬೆನ್ನೆಲುಬು, ರೈತನೇ ನಮಗೆ ಅನ್ನದಾತ ಎಂಬುದು ಸಾರ್ವಕಾಲಿಕ ಸತ್ಯ. ಅಂತಹ ರೈತರಿಗೆ ಆರೆಸ್ಸೆಸ್ ವತಿಯಿಂದ ಎತ್ತುಗಳನ್ನು ನೀಡಿರುವುದು ಶ್ಲಾಘನೀಯ. ಎಲ್ಲ ಸಂಘಟನೆಗಳೂ ಹೀಗೆ ರೈತರಿಗೆ ನೆರವಾದರೆ, ರೈತ ಕಣ್ಣೀರಲ್ಲಿ ಕೈ ತೊಳೆಯಲಾರ.
Leave A Reply