ಮಾಜಿ ಪ್ರಧಾನಿ ರಾಜೀವ ಗಾಂಧಿ ಹತ್ಯೆ ಮಾದರಿಯಲ್ಲೇ ನರೇಂದ್ರ ಮೋದಿ ಹತ್ಯೆಗೆ ಪ್ಲಾನ್
ಮುಂಬೈ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರೆಯುತ್ತಿರುವ ಭಾರಿ ಜನಬೆಂಬಲದಿಂದ ಬಲ ಕಳೆದುಕೊಂಡಿರುವ ಮಾವೋವಾದಿಗಳು ಅವರ ಹತ್ಯೆಗೆ ಸಂಚು ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಮಾಜಿ ಪ್ರಧಾನಿ ರಾಜೀವ ಗಾಂಧಿ ಮಾಡಿದ ರೀತಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿರುವ ಪತ್ರವೊಂದು ಮಹಾರಾಷ್ಟ್ರ ಪೊಲೀಸರಿಗೆ ದೊರಕಿದೆ.
ಮಹಾರಾಷ್ಟ್ರದಲ್ಲಿ ನಡೆದ ಭೀಮಾ ಕೋರೆಗಾಂವ್ ಗಲಭೆ ಕಾರಣರಾದ ಆರೋಪಿಗಳ ವಿಚಾರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಡೆಸಿರುವ ಸಂಚು ಹೊರ ಬಿದ್ದಿದೆ. ಕೋರೇಗಾಂವ್ ಗಲಭೆ ಕುರಿತ ಬಂಧಿತ ಆರೋಪಿಗಳ ಬಳಿ ವಿಚಾರಣೆ ವೇಳೆ ಪತ್ರವೊಂದು ದೊರಕ್ಕಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ನಾನಾ ಮಾದರಿಯ ಯೋಜನೆಗಳ ಕುರಿತು ವಿಸ್ತೃತ ಮಾಹಿತಿಯನ್ನು ನೀಡಲಾಗಿದೆ.
‘ಹಿಂದೂ ಕಟ್ಟರವಾದಿಗಳನ್ನು ಮಟ್ಟಹಾಕುವುದು ನಮ್ಮ ಪಕ್ಷದ ಪ್ರಮುಖ ಅಜೆಂಡಾವಾಗಿದೆ. ಪಶ್ಚಿಮ ಬಂಗಾಲ ಮತ್ತು ಬಿಹಾರದಲ್ಲಿ ಮೋದಿ ಅವರನ್ನು ಸೋಲಿಸುವಲ್ಲಿ ನಾವು ಸಫಲರಾಗಿದ್ದೇವು. ಆದರೂ ನಂತರ ಅವರು 15 ರಾಜ್ಯಗಳಲ್ಲಿ ಅಧಿಕಾರಕ್ಕೇರಿದ್ದರು. ಈ ಬೆಳವಣಿಗೆ ನಮ್ಮ ಪಕ್ಷಕ್ಕೆ ಒಳ್ಳೆಯದಲ್ಲ.
ನಾವು ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಪ್ರಯತ್ನಿಸಬಹುದು. ಇದರಲ್ಲಿ ನಾವು ವಿಫಲರಾಗಬಹುದು. ಆದರೂ ಪಕ್ಷ ಈ ನಿಲುವನ್ನು ಒಪ್ಪಿಕೊಳ್ಳಬೇಕು. ಇಲ್ಲವೇ ನರೇಂದ್ರ ಮೋದಿ ನಡೆಸುವ ರೋಡ್ ಶೋಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯ ನಿರ್ವಹಿಸಬಹುದು’ ಎಂಬುದು ಸೇರಿ ದೇಶದ ವಿವಿಧ ರಾಜ್ಯದಲ್ಲಿ ಬಿಜೆಪಿ ಹೇಗೆ ಅಧಿಕಾರಕ್ಕೇರಿದೆ ಎಂಬುದರ ಕುರಿತು ಪತ್ರದಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಈ ಕುರಿತು ನಾನಾ ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Leave A Reply