ಸೈನ್ಯದ ಬಗ್ಗೆ ಹಗುರವಾಗಿ ಮಾತನಾಡುವವರೇ ನೆನಪಿಡಿ, ಇಂಥವರಿಂದಲೇ ನಾವು ಮನೆಯಲ್ಲಿ ಬೆಚ್ಚಗೆ ಮಲಗೋದು!
ಸೈನಿಕನಾಗಿ ಜಮ್ಮು-ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುವುದು ಎಂದರೆ ಅದು ಸಾವಿನ ಜತೆಯೇ ಸರಸ ಆಡಿದಂತೆ. ಇದೇ ಕಾರಣಕ್ಕಾಗಿ ದಿನಬೆಳಗಾದರೆ ಅಷ್ಟು ಯೋಧರು ಹುತಾತ್ಮರಾದರು, ಇಷ್ಟು ಯೋಧರು ದೇಶಕ್ಕಾಗಿ ಮಡಿದರು ಎಂಬ ಸುದ್ದಿ ಓದುತ್ತೇವೆ ಹಾಗೂ ನಮ್ಮ ಮನದಲ್ಲೇ ಅವರಿಗೊಂದು ಪುಟ್ಟ ಸೆಲ್ಯೂಟ್ ಹೊಡೆದು ಸುಮ್ಮನಾಗುತ್ತೇವೆ.
ಆದರೂಇತ್ತೀಚೆಗೆ ಕೆಲವು ಎಡಬಿಡಂಗಿಗಳು, ರಾಜಕಾರಣಿಗಳು ಸೇನೆಯ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಬರೀ ಹೊಟ್ಟೆಪಾಡಿಗಾಗಿ ಜನ ಯೋಧರಾಗುತ್ತಾರೆ ಎಂದು ಕೃತಘ್ನರಾಗಿ ಮಾತನಾಡುತ್ತಾರೆ. ನಾವು ಮನೆಯಲ್ಲಿ ಬೆಚ್ಚಗೆ ಮಲಗುವ ಹಿಂದೆ, ನಮ್ಮ ಉತ್ತಮ ನಾಳೆಗಳಿಗಾಗಿ ಯೋಧರು ತಮ್ಮ ಇಂದಿನ ನೆಮ್ಮದಿ ಅಡವಿಡುತ್ತಾರೆ ಎಂಬುದನ್ನು ಮರೆತುಬಿಡುತ್ತಾರೆ.
ಆದರೇನಂತೆ ನಮ್ಮ ಸೈನಿಕರು ಎಂದಿಗೂ ದೇಶಕ್ಕಾಗಿ ಹೋರಾಡುವುದನ್ನು ಮಾತ್ರ ಬಿಟ್ಟಿಲ್ಲ. ಇದಕ್ಕೆ ನಿದರ್ಶನವಾಗಿ ಮೊನ್ನೆ ಕಾಶ್ಮೀರದಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿ, ಹತ್ಯೆಗೀಡಾದ ಔರಂಗಜೇಬ್ ಅವರು ಹುತಾತ್ಮರಾದ ವಿಷಯ ಹಾಗೂ ಅದರ ನಂತರದ ಬೆಳವಣಿಗೆಗಳು ಮನ ಮಿಡಿಯುವಂತಿವೆ.
ಯಾವುದೇ ಕುಟುಂಬವಾಗಲಿ, ಯಾವುದೇ ಅಪ್ಪನಾಗಲಿ, ಅಣ್ಣನಾಗಲಿ, ತಮ್ಮ ಸಂಬಂಧಿ ಸೇನೆ ಸೇರಿ ಹುತಾತ್ಮರಾದರೆ ಹೆಮ್ಮೆಯ ಜತೆಗೆ ಸಾಗರದಷ್ಟು ದುಃಖ ಆವರಿಸುತ್ತದೆ. ಆದರೆ, ಆ ದುಃಖ ಎಲ್ಲವನ್ನೂ ಮರೆತ ಔರಂಗಜೇಬ್ ಅಪ್ಪ ಮೊಹಮ್ಮದ್ ಹನೀಫ್ ಮಾತ್ರ ನನ್ನ ಮಗ ಹುತಾತ್ಮನಾಗಿರಬಹುದು, ಹಾಗಂತ ಬೇರೆಯವರು ತಮ್ಮ ಮಕ್ಕಳನ್ನು ಸೇನೆಗೆ ಕಳುಹಿಸದೇ ಇರದಿರಿ. ನನ್ನ ಮಗನ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.
ಇನ್ನು ಔರಂಗಜೇಬ್ ಅವರ ಸಹೋದರನದ್ದೂ ಇದೇ ಮಾತು. ಮೊಹಮ್ಮದ್ ಖಾಸಿಂ ಸಹ ಸೈನಿಕನಾಗಿದ್ದು, ನಮ್ಮದು ಯೋಧರ ಕುಟುಂಬ. ನನ್ನ ತಮ್ಮನ ಜೀವ ತೆಗೆದ ನೂರು ಉಗ್ರರ ಚೆಂಡಾಡುತ್ತೇನೆ ಎನ್ನುವ ಮೂಲಕ ಎಲ್ಲರೂ ಹೆಮ್ಮೆಪಡುವ ಮಾತುಗಳನ್ನಾಡಿದ್ದಾರೆ. ಹೇಳಿ ಇಂತಹ ವೀರ ಗಂಡುಮಕ್ಕಳ ತ್ಯಾಗದಿಂದಲೇ ನಾವು ಮನೆಯಲ್ಲಿ ಬೆಚ್ಚಗೆ ಮಲಗುತ್ತೇವೆ ಅಲ್ಲವೇ? ಇಂತಹ ಹೆಮ್ಮೆಯ ಪುತ್ರರ ಬಗ್ಗೆ ನಾವೂ ಹಗುರವಾಗಿ ಮಾತನಾಡಬಾರದಲ್ಲವೇ? ಯೋಚಿಸಿ ನೋಡಿ.
Leave A Reply