ಕರ್ತವ್ಯಕ್ಕೆ ಅಡ್ಡಿ ಆರೋಪ : ಕೆಎಸ್‌ಆರ್‌ಟಿಸಿ ಬಸ್ ಚಾಲಕ ರಮೇಶ್ ಅಮಾನತು
ಮಂಗಳೂರು: ತನಿಖಾಧಿಕಾರಿಯು ಟಿಕೆಟ್ ಪರಿಶೀಲನೆ ನಡೆಸುತ್ತಿದ್ದ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ರಮೇಶ್ ಎಂಬಾತನೆ ಸೇವೆಯಿಂದ ಅಮಾನತುಗೊಂಡ ಬಸ್ ಚಾಲಕ. ಈತ ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಅವ್ಯವಸ್ಥೆ ಇದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದ. ಧರ್ಮಸ್ಥಳ ಡಿಪೋದಲ್ಲಿ ಶೌಚಾಲಯ ವ್ಯವಸ್ಥೆ ಉತ್ತಮವಾಗಿಲ್ಲ. ಅಲ್ಲದೆ ಡಿಸೇಲ್ ಪಂಪ್ ವ್ಯವಸ್ಥೆ ಸರಿಯಿಲ್ಲ ಎಂದು ಆರೋಪಿಸಿ ವಾಟ್ಸಪ್‌ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದ. ಇದೀಗ ತನಿಖಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದಾನೆ.
ಈತ ಬಸ್ ಚಾಲನೆ ಮಾಡುತ್ತಿದ್ದ ಸಮಯದಲ್ಲಿ ನೆಟ್ಟಣ್ಣದ ಬಳಿ ಟಿಕೆಟ್ ತಪಾಸಣೆ ಮಾಡಲು ತನಿಖಾಧಿಕಾರಿಗಳು ಬಂದಿದ್ದರು. ಆದರೆ ಆಗ ಚಾಲಕ ರಮೇಶ್ ಏಕಾಏಕಿ ಬಸ್ ನಿಲ್ಲಿಸಿ ತನಿಖಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರಯಾಣಿಕರನ್ನು ಎತ್ತಿಕಟ್ಟಿ ಅದನ್ನು ವಿಡಿಯೋ ಮಾಡಿ ಶಿಸ್ತು ಉಲ್ಲಂಘಿಸಿದ್ದಾನೆ ಎಂಬ ಆರೋಪದ ಮೇಲೆ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
Leave A Reply