ಪ್ಲಾಸ್ಟಿಕ್ ನಿಷೇಧ ಕುರಿತು ಮಹಾರಾಷ್ಟ್ರದ ದಂಡ ಹಾಗೂ ಶಿಕ್ಷೆಯ ವಿಧಾನ ರಾಜ್ಯದಲ್ಲೂ ಏಕೆ ಅನುಸರಿಸಬಾರದು?
ಮುಂಬೈ: ಪ್ರಸ್ತುತ ಪರಿಸರಕ್ಕೆ ಪ್ಲಾಸ್ಟಿಕ್ ಗಂಭೀರವಾಗಿ ಪರಿಣಾಮ ಬೀರುತ್ತಿದ್ದು, ಬಹುತೇಕ ರಾಜ್ಯಗಳೂ ಪ್ಲಾಸ್ಟಿಕ್
ನಿಷೇಧಿಸಿವೆ. ಕರ್ನಾಟಕದಲ್ಲೂ ಪ್ಲಾಸ್ಟಿಕ್ ನಿಷೇಧಿಸಲಾಗಿದೆಯಾದರೂ ಕಠಿಣ ನಿಯಮ, ಬಳಕೆಯ ನಿಯಂತ್ರಣ ಹಾಗೂ
ಉಸ್ತುವಾರಿಗಳ ಕೊರತೆಯಿಂದ ಎಲ್ಲೆಡೆ ಯಥೇಚ್ಛವಾಗಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ.
ಆದರೆ ಈ ಪ್ಲಾಸ್ಟಿಕ್ ನಿಷೇಧಕ್ಕೆ ಮಹಾರಾಷ್ಟ್ರ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದು, ರಾಜ್ಯಾದ್ಯಂತ ಪ್ಲಾಸ್ಟಿಕ್ ನಿಷೇಧಿಸಿ
ಆದೇಶ ಹೊರಡಿಸಿದೆ. ಕ್ಯಾರಿ ಬ್ಯಾಗ್, ಥರ್ಮಾಕೋಲ್ ಸೇರಿ ಯಾವುದೇ ಪ್ಲಾಸ್ಟಿಕ್ ಉತ್ಪನ್ನ ಮಾರಾಟ ಮಾಡುವಂತಿಲ್ಲ
ಹಾಗೂ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಹಾಗೊಂದು ವೇಳೆ ಪ್ಲಾಸ್ಟಿಕ್ ಬಳಕೆ ಮಾಡಿದರೆ ಮೊದಲ ಬಾರಿಗೇ 5 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಎರಡನೇ
ಬಾರಿಗೆ 10 ಸಾವಿರ ರೂಪಾಯಿ ಮೂರನೇ ಬಾರಿಗೆ 25 ಸಾವಿರ ರೂಪಾಯಿ ದಂಡ ಹಾಗೂ ಮೂರು ತಿಂಗಳು ಜೈಲು ಶಿಕ್ಷೆ
ವಿಧಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಪರಿಸರಕ್ಕೆ ಪ್ಲಾಸ್ಟಿಕ್ ಮಾರಕವಾಗಿ ಪರಿಣಮಿಸುತ್ತಿರುವ ಕಾರಣ ರಾಜ್ಯಾದ್ಯಂತ ನಿಷೇಧಿಸಲಾಗಿದೆ. ಹಾಗಾಗಿ ಎಲ್ಲರೂ
ಪ್ಲಾಸ್ಟಿಕ್ ವಸ್ತುಗಳ ಬಳಕೆ, ಸಂಗ್ರಹಣೆ ಹಾಗೂ ಮರು ಉತ್ಪಾದನೆ ಮಾಡಬಾರದು. ಆ ಮೂಲಕ ಪ್ಲಾಸ್ಟಿಕ್ ಬಳಸದೆ ಇರುವ
ಹೊಣೆಗಾರಿಕೆಯನ್ನು ಎಲ್ಲರೂ ಹೊರಬೇಕು. ಯೋಜನೆ ಯಶಸ್ವಿಯಾಗುವಲ್ಲಿ ಎಲ್ಲರ ಸಹಕಾರ ಮಹತ್ತರವಾಗಿದೆ ಎಂದು
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಮಾರಾಟ ಮಾಡುವ ಸಣ್ಣ ಹಾಗೂ ಮಧ್ಯಮ ವರ್ಗದ ಮಾರಾಟಗಾರರ ಕುರಿತು ನಮ್ಮ ಸರ್ಕಾರಕ್ಕೆ ಕಾಳಜಿ ಇದೆ.
ಇದರಿಂದ ಅವರ ವ್ಯಾಪಾರಕ್ಕೆ ತಕ್ಕಮಟ್ಟಿಗೆ ಹೊಡೆತ ಬಿದ್ದರೂ, ಬೇರೆ ಮಾರ್ಗ ಅನುಸರಿಸುವ ಹಾಗೂ ಸರ್ಕಾರದ ನೆರವು
ಪಡೆಯುವ ಮೂಲಕ ಪ್ಲಾಸ್ಟಿಕ್ ನಿಷೇಧ ಆದೇಶ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ. ನಮ್ಮ ರಾಜ್ಯದಲ್ಲೂ ಸರ್ಕಾರ
ಇಂಥದ್ದೊಂದು ದಿಟ್ಟ ಕ್ರಮ ಕೈಗೊಂಡರೆ ಅನುಕೂಲ.
Leave A Reply