ಆರ್ ಎಸ್ ಎಸ್ ಸಭೆಯಲ್ಲಿ ಪ್ರಣಬ್ ಜೀ ಭಾಷಣ ಎಫೆಕ್ಟ್: ಸಂಘ ಸೇರ್ಪಡೆಗೆ ಹೆಚ್ಚುತ್ತಿರುವ ಜನರ ಒಲವು
ಕೊಲ್ಕತ್ತಾ: ತನ್ನ ಜನಸೇವಾ ಕಾರ್ಯಕ್ರಮಗಳು, ಜನರ ನೆರವಿಗೆ ಧಾವಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಅರಿವು ಇರುವ ಯಾರೇ ಆದರೂ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ಸದಾ ಮುಂದಾಗುತ್ತಾರೆ. ಇದೀಗ ಸಂಘದ ಸೇವಾ ತತ್ವದೊಂದಿಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್ ಎಸ್ ಎಸ್ ಸಭೆಯಲ್ಲಿ ಭಾಗಿಯಾಗಿ, ಮಾಡಿರುವ ಭಾಷಣದ ಎಫೆಕ್ಟ್ ಸಹ ಜೋರಾಗಿದೆ. ಪ್ರಣಬ್ ಜೀ ಮಾತನಾಡಿದ ನಂತರ ಸಂಘದತ್ತ ಹೆಚ್ಚಿನ ಜನರು ಒಲವು ತೋರಿಸುತ್ತಿದ್ದಾರೆ. ವಿಶೇಷವಾಗಿ ಪ್ರಣಬ್ ಮುಖರ್ಜಿ ಅವರ ತವರು ಪಶ್ಚಿಮ ಬಂಗಾಳದಲ್ಲಿ ನಿತ್ಯ ನೂರಾರು ಯುವಕರು ಸಂಘ ಸೇರ್ಪಡೆಗೆ ಮುಂದಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಶ್ಚಿಮ ಬಂಗಾಳದ ಹಿರಿಯ ಮುಖಂಡ ಬಿಪ್ಲಬ್ ರಾಯ್ ಹೇಳಿದ್ದಾರೆ.
ಪ್ರಣಬ್ ಮುಖರ್ಜಿ ಅವರು ಜೂನ್ 7ರಂದು ನಾಗಪುರದಲ್ಲಿ ನಡೆದ ಸಂಘ ಶಿಕ್ಷಾ ವರ್ಗದ ಸಭೆಯಲ್ಲಿ ಮಾತನಾಡಿದ ನಂತರ ಆರ್ ಎಸ್ ಎಸ್ ಸೇರ್ಪಡೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಜೂನ್ 1 ರಿಂದ 6 ರವರೆಗೆ ನಿತ್ಯ 378 ಅರ್ಜಿ ಸಲ್ಲಿಕೆಯಾಗುತ್ತಿದ್ದವು. ಆದರೆ ಜೂನ್ 7ರ ನಂತರ ನಿತ್ಯ ಒಂದು ಸಾವಿರಕ್ಕಿಂತ ಹೆಚ್ಚಿನ ಆಕಾಂಕ್ಷಿಗಳು ಸಂಘ ಸೇರ್ಪಡೆಗೆ ಒಲವು ತೋರಿಸಿದ್ದಾರೆ. ಇದರಲ್ಲಿ ವಿಶೇಷವಾಗಿ ಶೇ.40 ರಷ್ಟು ಜನರು ಪಶ್ಚಿಮ ಬಂಗಾಳದಿಂದಲೇ ಅರ್ಜಿ ಸಲ್ಲಿಸಿದ್ದಾರೆ ಎಂದು ರಾಯ್ ತಿಳಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದಿನಿಂದಲೂ ತನ್ನ ಕಾರ್ಯ ಚಟುವಟಿಕೆ, ಸೇವಾ ಕಾರ್ಯಗಳು ಸೇರಿ ನಾನಾ ಕಾರಣಗಳಿಂದ ಜನರನ್ನು ಆಕರ್ಷಿಸುತ್ತದೆ. ಆದರೂ ಪ್ರಣಬ್ ಮುಖರ್ಜಿ ಭೇಟಿ ನಂತರ ಸಂಘ ಸೇರ್ಪಡೆಯಾಗುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಕುತೂಹಲ ತೀವ್ರವಾಗಿದೆ ಎಂದು ತಿಳಿಸಿದ್ದಾರೆ.
Leave A Reply