ಹೊಸ ಶಾಸಕರುಗಳು ಏನು ಮಾಡಬೇಕು? ಜನರಲ್ಲಿ ಹೇಗೆ ವಿಶ್ವಾಸ ಮೂಡಿಸಬೇಕು!
ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಅವರು ಸರಕಾರಿ ಆಸ್ಪತ್ರೆಗಳಿಗೆ ಧೀಡೀರ್ ಭೇಟಿಕೊಡುತ್ತಿದ್ದಾರೆ. ಒಳ್ಳೆಯ ಕೆಲಸ. ಹಾಗೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಆರು ಜನ ಹೊಸ ಶಾಸಕರು ತಮ್ಮ ವ್ಯಾಪ್ತಿಯಲ್ಲಿ ಇದ್ದ ಬದ್ದ ಸರಕಾರಿ ಕಚೇರಿಗೆ ದೀಢಿರ್ ಭೇಟಿ ಕೊಟ್ಟು ಪರಿಶೀಲಿಸಲೇಬೇಕು. ಆಗಲೇ ಅವರಿಗೆ ಜನರು ಅಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗೊತ್ತಾಗುವುದು. ಉದಾಹರಣೆಗೆ ಮಂಗಳೂರಿನಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಇದೆ. ನೀವು ಅಲ್ಲಿ ಹೋಗಿ ಡ್ರೈವಿಂಗ್ ಲೈಸೆನ್ಸ್ ಅನ್ನು ಸ್ಮಾರ್ಟ್ ಕಾರ್ಡ್ ಮಾಡಿಸಲು ಇದೆ ಎಂದು ಹೇಳಿ. ಕನಿಷ್ಟ ಎರಡು ತಿಂಗಳು ತನಕ ಸ್ಮಾರ್ಟ್ ಕಾರ್ಡ್ ನಿಮ್ಮ ಕೈಗೆ ಬರುವುದೇ ಇಲ್ಲ. ಅದೇ ನೀವು ಅಲ್ಲಿ ಯಾವುದಾದರೂ ಬ್ರೋಕರ್ ಹತ್ರ ಹೋಗಿ ಸ್ಮಾರ್ಟ್ ಕಾರ್ಡ್ ಮಾಡಿಸಲು ಹೇಳಿ. ನೀವು ಯಾವ ದಿನ ಬೇಕು ಎನ್ನುತ್ತಿರೋ ಅದೇ ದಿನ ಸ್ಮಾರ್ಟ್ ಕಾರ್ಡ್ ನಿಮಗೆ ಸಿಗುತ್ತದೆ. ಅದು ಹೇಗೆ. ನೀವು ಆರ್ ಟಿಒದಲ್ಲಿ ಏನಾದರೂ ದಾಖಲೆ ಮಾಡಲು ಎರಡು ತಿಂಗಳು ಯಾಕೆ ಹಿಡಿಯುತ್ತದೆ ಎಂದು ಅಲ್ಲಿನ ಅಧಿಕಾರಿಗಳ ಬಳಿ ವಿಚಾರಿಸಿ ನೋಡಿ. ನಮ್ಮಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎನ್ನುತ್ತಾರೆ. ಓಕೆ, ನಿಮ್ಮಲ್ಲಿ ಸಿಬ್ಬಂದಿಗಳ ಕೊರತೆ ಇದ್ರೆ ಬ್ರೋಕರ್ ಗಳಿಗೆ ಹೇಗೆ ಬೇಗ ಕೆಲಸ ಆಗುತ್ತದೆ? ಈ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ. ಇದಕ್ಕೆ ಪರಿಹಾರ ಸಿಗಬೇಕು. ಇನ್ನು ಸ್ಮಾರ್ಟ್ ಕಾರ್ಡ್ ಮಾಡಲು ಅಷ್ಟು ದಿನಗಳು ಯಾಕೆ ಎಂದು ಆರ್ ಟಿಒ ಅಧಿಕಾರಿಗಳ ಬಳಿ ಕೇಳಿದರೆ ಅದು ಹೊರಗುತ್ತಿಗೆ ಕೊಟ್ಟಿದ್ದು , ನಮಗೆ ಅದು ಕನೆಕ್ಷನ್ ಇಲ್ಲ ಎನ್ನುತ್ತಾರೆ. ಒಂದೊಂದು ಕೆಲಸ ಆಗಲು ಇಲ್ಲಿ ತಿಂಗಳುಗಟ್ಟಲೆ ಆಗುತ್ತದೆ. ಸಾರ್ವಜನಿಕರು ಯಾವಾಗಲೂ ಇಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಆರ್ ಟಿಒಗೆ ದಿಢೀರ್ ಭೇಟಿ ಕೊಟ್ಟರೆ ಅಲ್ಲಿನ ಎಲ್ಲಾ ಸಮಸ್ಯೆ ಗೊತ್ತಾಗುತ್ತದೆ ಮತ್ತು ಆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದರೆ ಜನರು ಕೂಡ ಖುಷಿಯಾಗುತ್ತಾರೆ.
ಸರಕಾರಿ ಆಸ್ಪತ್ರೆಗಳಲ್ಲಿಯೂ ಅದೇ ಪರಿಸ್ಥಿತಿ…
ಇನ್ನು ಮಂಗಳೂರಿನ ಪ್ರಖ್ಯಾತ ಸರಕಾರಿ ಆಸ್ಪತ್ರೆಗಳಾದ ವೆನ್ ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಗಳಿಗೆ ಹೋದರೆ ಅಲ್ಲಿನ ಪರಿಸ್ಥಿತಿ ಗೊತ್ತಾಗುತ್ತದೆ. ಬಡರೋಗಿಗಳು ಅಲ್ಲಿ ಅನುಭವಿಸುವ ಸಂಕಟ ತಿಳಿಯುತ್ತದೆ. ರೋಗಿಗೆ ಯಾವುದಾದರೂ ಮದ್ದು ಬೇಕು ಎಂದು ಹೇಳಿದರೆ ಅಲ್ಲಿ ಸಿಗುವುದಿಲ್ಲ. ಹೊರಗಿನಿಂದ ತನ್ನಿ ಎಂದು ಬರೆದುಕೊಡುತ್ತಾರೆ. ಅಲ್ಲಿ ನೀರಿನ ಸಮಸ್ಯೆ ಕೂಡ ಇದೆ. ಇತ್ತೀಚೆಗೆ ಡಯಾಲೀಸಿಸ್ ಚಿಕಿತ್ಸೆ ಮಾಡಿಸಲು ನೀರಿನ ಸಮಸ್ಯೆ ಇದೆ ಎನ್ನುವುದು ಟಿವಿ ಮಾಧ್ಯಮದ ಮೂಲಕ ಎಲ್ಲಾ ಕಡೆ ಸುದ್ದಿಯಾಗಿತ್ತು. ಡಯಾಲೀಸಿಸ್ ಮಾಡಿಸಬೇಕಾದ ರೋಗಿಗಳು ಸರದಿಯಲ್ಲಿ ಕಾಯುತ್ತಿದ್ದರಂತೆ. ರೋಗಿಗಳ ಸಂಖ್ಯೆ ಜಾಸ್ತಿಯಾದರೆ ಕಾರಿಡಾರ್ ಗಳಲ್ಲಿ ಮಲಗಿಸುತ್ತಾರೆ. ಸಿಬ್ಬಂದಿಗಳ ಕೊರತೆ ಅಲ್ಲಿಯೂ ಇದೆ. ಈ ಬಗ್ಗೆ ಶಾಸಕರು ಗಮನ ನೀಡಿದರೆ ಉತ್ತಮ. ಈ ಕುರಿತು ಆರೋಗ್ಯ ಸಚಿವರ ಗಮನ ಸೆಳೆಯಲು ಪತ್ರ ಬರೆಯಬೇಕು. ಬೆಂಗಳೂರಿಗೆ ಹೋದಾಗ ಅಲ್ಲಿ ಆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಬೇಕು. ಇನ್ನು ಆರ್ ಟಿಒ ಸಮಸ್ಯೆಗೆ ಪರಿಹಾರಕ್ಕಾಗಿ ಸಾರಿಗೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಬೇಕು.
ತಾಲೂಕು ಕಚೇರಿಯಲ್ಲಿಯೂ ಇದೇ ಕಥೆ…
ಇನ್ನು ತಾಲೂಕು ಕಚೇರಿಯಲ್ಲಿ 9/11, 94 ಸಿಸಿ ಇದರ ತೊಂದರೆ ಇದೆ. ಆರ್ ಟಿಸಿ ಸಿಗಲು ಕಷ್ಟ ಇದೆ. ವಿದ್ಯಾರ್ಥಿಗಳಿಗೆ ಆದಾಯ, ಜಾತಿ ಪ್ರಮಾಣ ಪತ್ರ ಮಾಡಿಸಲು ತುಂಬಾ ಕಿರಿಕಿರಿ ಆಗುತ್ತದೆ. ಸಿಬ್ಬಂದಿಗಳ ಕೊರತೆ ಇರುವುದರಿಂದ ಕೆಲಸ ಆಗಲ್ಲ ಎನ್ನುತ್ತಾರೆ. ಅದೇ ಬ್ರೋಕರ್ ಗಳಿಗೆ ಹಣ ಕೊಟ್ಟರೆ 24 ಗಂಟೆಯೊಳಗೆ ಕೆಲಸ ಆಗುತ್ತದೆ. ಆಧಾರ್ ಕಾರ್ಡ್ ಮಾಡಿಸಲು ತಿಂಗಳುಗಟ್ಟಲೆ ಹೋಗುತ್ತದೆ.
ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳು ಬೆಳಿಗ್ಗೆ ಸರಿಯಾಗಿ ತಮ್ಮ ಟೇಬಲ್ ನಲ್ಲಿ ಇರುವುದೇ ಇಲ್ಲ. ಅವರ ಕುರ್ಚಿಗಳು ಖಾಲಿಯಾಗಿರುತ್ತದೆ. ಶಾಸಕರುಗಳು ದೀಢೀರ್ ಭೇಟಿ ಕೊಟ್ಟು ಅಲ್ಲಿನ ಹಾಜರಾತಿ ಪುಸ್ತಕ ನೋಡಬೇಕು. ಸಿಬ್ಬಂದಿ, ಅಧಿಕಾರಿ ತಮ್ಮ ಕೆಲಸದ ಜಾಗದಲ್ಲಿಯೇ ಇದ್ದಾರಾ ಎಂದು ಪರಿಶೀಲಿಸಬೇಕು. ಇಲ್ಲದಿದ್ದರೆ ಕರೆದು ಕಾರಣ ಕೇಳಬೇಕು. ಸುಳ್ಳು ಎಂದು ಅನಿಸಿದರೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೀಗೆಲ್ಲ ಆದಾಗ ಸರಕಾರಿ ವ್ಯವಸ್ಥೆಯಲ್ಲಿ ಶಿಸ್ತು ಬರುತ್ತದೆ. ಜನರ ಕೆಲಸಗಳು ತನ್ನಿಂದ ತಾನೇ ಆಗುತ್ತದೆ. ಸಾರ್ವಜನಿಕರಲ್ಲಿ ನೆಮ್ಮದಿ ಮೂಡುತ್ತದೆ. ಅವರು ಶಾಸಕರಿಗೆ ಧನ್ಯವಾದ ಅರ್ಪಿಸುತ್ತಾರೆ. ಇದು ನಾನು ಉದಾಹರಣೆ ಕೊಟ್ಟಿರುವುದು ಅಷ್ಟೇ. ಹೀಗೆ ಎಲ್ಲಾ ಕ್ಷೇತ್ರಗಳ ಶಾಸಕರು ಸರಕಾರಿ ಕಚೇರಿಗಳ ಮೇಲೆ ಮೂಗುದಾರ ಹಾಕಿದರೆ ಅರ್ಧ ಸಮಸ್ಯೆಗಳು ಪರಿಹಾರವಾಗುತ್ತವೆ!
Leave A Reply