51 ದೇವಾಲಯ ನಿರ್ಮಾಣಕ್ಕೆ ಜಾಗ, ಹಣ ನೀಡುವ ಮೂಲಕ ಸೌಹಾರ್ದತೆ ಮೆರೆದ ಮುಸ್ಲಿಂ ಉದ್ಯಮಿ!
ದೇಶದಲ್ಲಿ ಹಿಂದೂಗಳು ಎಂದರೆ ಅಸಹಿಷ್ಣುಗಳು, ಮುಸ್ಲಿಮರು ಹಿಂದೂಗಳ ಜತೆ ಬೆರೆಯಬಾರದು ಎಂಬ ಗಾಳಿ ಸುದ್ದಿ ಹಬ್ಬಿಸುವವರು ತುಂಬ ಜನ ಇದ್ದಾರೆ. ಇದೇ ಕಾರಣಕ್ಕೆ ಹಲವು ಮುಸ್ಲಿಮರು ಹಿಂದೂಗಳನ್ನು ಕಂಡರೆ ದ್ವೇಷ ಸಾಧಿಸುತ್ತಾರೆ. ಇನ್ನೂ ಕೆಲವು ಮುಸ್ಲಿಂ ಮೂಲಭೂತವಾದಿಗಳಂತೂ ಹಿಂದೂಗಳ ವಿರುದ್ಧ ಲವ್ ಜಿಹಾದ್, ಮತಾಂತರದಂತಹ ಅಸ್ತ್ರ ಬಳಸುತ್ತಾರೆ. ಅಷ್ಟರಮಟ್ಟಿಗೆ ಅಸಹಿಷ್ಣುತೆ, ಕಪಟತನ ಮೆರೆಯುತ್ತಾರೆ.
ಆದರೆ ಉತ್ತರ ಪ್ರದೇಶದ ಈ ಮುಸ್ಲಿಂ ಉದ್ಯಮಿ ಮಾತ್ರ ಈ ಮೇಲಿನ ಮಾತಿಗೆ ಅಪವಾದದಂತಿದ್ದು, ಉತ್ತರ ಪ್ರದೇಶ ಮತ್ತು ಬಿಹಾರದ ಹಲವೆಡೆ ಸುಮಾರು 51 ಹಿಂದೂ ದೇವಾಲಯ ನಿರ್ಮಾಣಕ್ಕಾಗಿ ಹಣ ಹಾಗೂ ಜಾಗ ನೀಡಲು ನಿರ್ಧರಿಸುವ ಮೂಲಕ ಹಿಂದೂ ದೇವರ ಮೇಲೆ ವಿಶೇಷ ಪ್ರೀತಿ ತೋರಿಸುವ ಜತೆಗೆ ಸೌಹಾರ್ದತೆ ಪ್ರದರ್ಶಿಸಿದ್ದಾನೆ.
ಹೌದು, ಶೈನ್ ಗ್ರೂಪ್ ನ ಚೇರ್ಮನ್ ಆಗಿರುವ ರಷೀದ್ ನಸೀಮ್ ಎಂಬುವವರೇ ಈ ಸೌಹಾರ್ದ ಮೆರೆದ ಉದ್ಯಮಿಯಾಗಿದ್ದು, ಭಾರತದಲ್ಲಿರುವ ಜಾತ್ಯತೀತತೆ ಉಳಿಸಲು ಹಾಗೂ ದೇವರು ಎಲ್ಲರಿಗೂ ಒಂದೇ ಎಂಬುದನ್ನು ಸಾಬೀತುಪಡಿಸುವ ದೃಷ್ಟಿಯಿಂದ ದೇವಾಲಯ ನಿರ್ಮಾಣಕ್ಕೆ ಹಣ ಹಾಗೂ ಜಾಗ ನೀಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
ನಾನೊಬ್ಬ ಮುಸ್ಲಿಂ ವ್ಯಕ್ತಿಯಾಗಿ ಧಾರ್ಮಿಕವಾಗಿ ಉತ್ತಮ ಕಾರ್ಯ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೇವಾಲಯ ನಿರ್ಮಾಣಕ್ಕೆ ಹಣ ನೀಡಿರುವುದು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯ ಹೆಚ್ಚಾಗಲಿ ಎಂದು. ಈ ಉತ್ತಮ ಕಾರ್ಯಕ್ಕೆ ಎಲ್ಲರೂ ಸಹಕರಿಸಲಿದ್ದಾರೆ ಎಂಬ ನಂಬಿಕೆ ಎಂದು ರಷೀದ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಧರ್ಮದ ಉದ್ಧಾರಕ್ಕಾಗಿ ದುಡಿಯುತ್ತೇನೆ ಎಂದು ಜಿಹಾದ್ ಹಾಗೂ ಮತಾಂತರದಲ್ಲಿ ತೊಡಗುವವರ ಮಧ್ಯೆ, ಎಲ್ಲ ಧರ್ಮಗಳ ಸಹಿಷ್ಣುತೆಗಾಗಿ ಹಿಂದೂ ದೇವಾಲಯಕ್ಕೆ ಅಪಾರ ಹಣ ನೀಡಲು ನಿರ್ಧರಿಸಿರುವ ರಷೀದ್ ನಡೆ ಉತ್ತಮ ಹಾಗೂ ಅನುಕರಣೀಯವಾಗಿದೆ.
Leave A Reply