ಭಾರೀ ಮಳೆಯಿಂದಾಗಿ ಮಂಡಗದ್ದೆಯಲ್ಲಿ ಮೂಕ ಪಕ್ಷಿಗಳ ರೋಧನೆ!
ಶಿವಮೊಗ್ಗ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ ನದಿಯು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಜಿಲ್ಲೆಯ ಪ್ರಸಿದ್ಧ ಮಂಡಗದ್ದೆ ಪಕ್ಷಿಧಾಮದಲ್ಲಿ ನೀರಿನ ರಭಸಕ್ಕೆ ಸಾವಿರಾರು ಪಕ್ಷಿಗಳು ಕೊಚ್ಚಿ ಹೋಗಿವೆ.
ಪ್ರಸಿದ್ಧ ಪಕ್ಷಿಧಾಮ ಮಂಡಗದ್ದೆಯಲ್ಲೀಗ ಶೋಕ ಮಡುಗಟ್ಟಿದ್ದು, ಪ್ರತಿ ವರ್ಷ ಸಂತಾನಭಿವೃದ್ಧಿಗೆ ಬರುವ ಸಾವಿರಾರು ಪಕ್ಷಿಗಳು ತುಂಗೆಯ ಅಬ್ಬರಕ್ಕೆ ತತ್ತರಿಸಿ ಹೋಗಿವೆ. ನಿರಂತರ ಮಳೆಯಿಂದಾಗಿ ತುಂಗಾ ನದಿಯು ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಲ್ಲಿ ಇಲ್ಲಿನ ಸಾವಿರಾರು ಪಕ್ಷಿಗಳ ಗೂಡುಗಳು ಕೊಚ್ಚಿಕೊಂಡು ಹೋಗಿವೆ.
ಪ್ರತಿ ವರ್ಷ ಉತ್ತರ ಭಾರತದಿಂದ ಮೇ ಹಾಗೂ ಜೂನ್ ತಿಂಗಳಲ್ಲಿ ಬರುವ ಜಾಲಪಾದ, ತುಪ್ಪಳದ ಹಕ್ಕಿಗಳು ಇಲ್ಲಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿಗಳೊಂದಿಗೆ ಅಕ್ಟೋಬರ್ ವೇಳೆಗೆ ಹಿಂತಿರುಗುತ್ತವೆ. ಆದರೆ ಈ ವರ್ಷ ಪ್ರವಾಹದಿಂದಾಗಿ ತಳಮಟ್ಟದಲ್ಲಿದ್ದ ಗೂಡುಗಳು ಮೊಟ್ಟೆ-ಮರಿಗಳ ಸಮೇತ ಕೊಚ್ಚಿಕೊಂಡು ಹೋಗಿವೆ.
ಮೇಲ್ಭಾಗದಲ್ಲಿ ಇರುವ ಕೆಲವು ಗೂಡುಗಳು ಮಾತ್ರ ಉಳಿದುಕೊಂಡಿದ್ದು, ನಿರಂತರ ಮಳೆಯಿಂದಾಗಿ ಪಕ್ಷಿಗಳು ತತ್ತರಿಸಿ ಹೋಗಿವೆ. ಎಂದು ಮಳೆ ನಿಲ್ಲುವುದೋ ಎಂದು ಪಕ್ಷಿಗಳು ಆಕಾಶ ನೋಡುವಂತಾಗಿದೆ.
Leave A Reply