ಮಂಗಳೂರಿನಲ್ಲಿ ಬೃಹತ್ ಮಾದಕ ವಸ್ತು ಕೊಕೇನ್ ಮಾರಾಟ ಜಾಲ ಪತ್ತೆ: ೫ ಮಂದಿಯ ಬಂಧನ
ಮಂಗಳೂರು: ನಗರದಲ್ಲಿ ಮಾದಕ ವಸ್ತುವಾದ ಕೋಕೆನ್‌ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಬೃಹತ್ ಜಾಲವನ್ನು ಪತ್ತೆ ಮಾಡಿದ ಮಂಗಳೂರು ಸಿಸಿಬಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಜತ್ತೂರು ನಿವಾಸಿ ವಿಜೇಶ್ ಕುಮಾರ್(೩೪), ಪುತ್ತೂರು ನರಿಮೊಗರು ಎಳಿಕಾ ಹೌಸ್ ನಿವಾಸಿ, ಜಿಮ್ ಟ್ರೈನರ್ ನಿತಿನ್ (೩೫), ಮಂಗಳೂರು ಬಿಜೈ ಚರ್ಚ್ ರಸ್ತೆಯ ಎಕ್ಸೋಟಿಕಾ ಆಪಾರ್ಟ್ ಮೆಂಟ್ ನಿವಾಸಿ ಸಂತೋಷ್ ಕುಮಾರ್ (೩೬), ಮಂಗಳೂರು ಬೊಂದೇಲ್ ಕೆಎಚ್ ಬಿ ಕಾಲೋನಿ ನಿವಾಸಿ ಸಂದೀಪ್ ಕುಮಾರ್ (೩೪), ಹಾಗೂ ಮಂಗಳೂರು ಬಿಕರ್ನಕಟ್ಟೆ ಸೌಜನ್ಯ ಲೇನ್, ೨ ನೇ ಕ್ರಾಸ್ ನಿವಾಸಿ ರಾಹುಲ್ (೨೬) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ೫೦,೦೦೦ ರೂ. ಕೋಕೆನ್, ಹೊಂಡಾ ಜಾಝ್, ಹುಂಡೈ ಐ೨೦, ಮಾರುತಿ ಝೆನ್, ೭ ಮೊಬೈಲ್ ಫೋನ್ ಹಾಗೂ ೧,೦೨,೦೦೦ ರೂ. ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿ ಕೊಕೇನ್ ಮಾರಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಗೋವಾದಿಂದ ಈ ಮಾದಕ ವಸ್ತುಗಳನ್ನು ತಂದು ನಗರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಮಾದಕ ವಸ್ತುವಾದ ಕೋಕೆನ್‌ನ್ನು ನಗರದಲ್ಲಿ ಮಾರಾಟ ಮಾಡಿರುವ ಬಗ್ಗೆ ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave A Reply