ಭೂ ಪರಿವರ್ತನೆ ಇನ್ನು ಎಷ್ಟು ಸುಲಭ ಗೊತ್ತಾ!!
ಕರ್ನಾಟಕ ರಾಜ್ಯ ಸರಕಾರವು ಕೃಷಿ ಭೂಮಿಯನ್ನು ಪರಿಭಾವಿತ ಭೂ ಪರಿವರ್ತನೆಗೆ (ಡೀಮ್ಡ್ ಕನ್ವರ್ಶನ್) ಪರಿವರ್ತನಾ ವಿಧಾನವನ್ನು ಸರಳೀಕರಣಗೊಳಿಸಿರುವ ಬಗ್ಗೆ ಸೆಪ್ಟೆಂಬರ್ 17 ರಂದು ಸುತ್ತೋಲೆ ಹೊರಡಿಸಿದೆ. ಈ ಮೂಲಕ ಬರುವ ದಿನಗಳಲ್ಲಿ ಭೂ ಪರಿವರ್ತನೆ ಸರಳೀಕೃತವಾಗುವ ಸೂಚನೆಗಳು ಸಿಕ್ಕಿವೆ. ಮಂಗಳೂರಿನಲ್ಲಿ ಕಳೆದ ಕೆಲವು ಸಮಯದಿಂದ ಯಾವುದೇ ಕೃಷಿ ಜಮೀನು ಬೇರೆ ಉದ್ದೇಶಗಳಾದ ವಾಸ್ತವ್ಯ ಅಥವಾ ವಾಣಿಜ್ಯ ಕಟ್ಟಡಗಳನ್ನು ಕಟ್ಟಲು ಪರಿವರ್ತನೆಯಾಗುವ ವ್ಯವಸ್ಥೆಯಲ್ಲಿ ಸಮಸ್ಯೆ ಇತ್ತು. ಭೂ ಪರಿವರ್ತನೆ ಆಗುತ್ತಿರಲಿಲ್ಲ. ಆದರೆ ಹೊಸ ಸುತ್ತೋಲೆಯ ಪ್ರಕಾರ ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ರ ಕಲಂ 95 (2) ರಲ್ಲಿ ಕೃಷಿ ಉದ್ದೇಶಕ್ಕಾಗಿ ಹೊಂದಿರುವ ಭೂಮಿಯ ಅಧಿಬೋಗದಾರನು ಆ ಜಮೀನನ್ನು ಅಥವಾ ಅದರ ಯಾವುದೇ ಭಾಗವನ್ನು ಇತರೆ ಉದ್ದೇಶಕ್ಕಾಗಿ ಬದಲಿಸಲು ಇಚ್ಚಿಸಿದರೆ, ಅಂತಹ ಅಧಿಭೋಗದಾರನು ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಸತಾವಿತ ಕಲಂ 95(2) ರ ಮೊದಲನೇ ಪರಂತುಕದ ಪ್ರಕಾರ ಸಲ್ಲಿಸಿದ ಅರ್ಜಿಯಲ್ಲಿನ ಭೂ ಉಪಯೋಗದ ಉದ್ದೇಶವು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ, 1961 ರಡಿ ರಾಜ್ಯ ಸರಕಾರವು ಪ್ರಕಟಿಸುವ ಮಹಾ ಯೋಜನೆಯಲ್ಲಿರುವ (ಮಾಸ್ಟರ್ ಪ್ಲಾನ್) ಉದ್ದೇಶದಂತೆ ಇದ್ದರೆ, ಅರ್ಜಿದಾರನ ಕೋರಿಕೆಯನ್ನು ಜಿಲ್ಲಾಧಿಕಾರಿಯು ತಿರಸ್ಕರಿಸುವಂತಿಲ್ಲ. ಅಲ್ಲದೇ, ಒಂದು ವೇಳೆ ಜಿಲ್ಲಾಧಿಕಾರಿಯು ಸದರಿ ಅರ್ಜಿ ತಲುಪಿದ ದಿನಾಂಕದಿಂದ ನಾಲ್ಕು ತಿಂಗಳ ಅವಧಿಯೊಳಗೆ ತನ್ನ ತೀರ್ಮಾನವನ್ನು ಅರ್ಜಿದಾರನಿಗೆ ತಿಳಿಸದೇ ಇದ್ದಂತಹ ಸಂದರ್ಭದಲ್ಲಿ ಅದು “ಪರಿಭಾವಿತ ಭೂ ಪರಿವರ್ತನೆ” (ಡೀಮ್ಡ್ ಕನ್ವರ್ಷನ್) ಎಂದು ಭಾವಿಸಲು ಕಲಂ 95 (5) ರಲ್ಲಿ ಅವಕಾಶವಿರುತ್ತದೆ.
ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ, 1)ರ ಅಡಿಯಲ್ಲಿ ಪ್ರಕಟಿಸಲಾದ ಮಹಾಯೋಜನೆ (ಮಾಸ್ಟರ್ ಪ್ಲಾನ್) ಯಡಿಯಲ್ಲಿ ಬರುವ ಜಮೀನುಗಳ ಪರಿವರ್ತನೆಯನ್ನು ಸರಳೀಕೃತಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ರ ಕಲಂ 95 (2) ಗೆ ಉಲ್ಲೇಖಿತ ಅಧಿಸೂಚನೆಯ ದಿನಾಂಕ: 17-03-2018 ರಲ್ಲಿ ಹೇಳಲಾಗಿದೆ.
ಇಲ್ಲಿ ಇರುವ ವಿಷಯ ಏನೆಂದರೆ ಈ ನಿಯಮ ನೀವು ಮಂಗಳೂರಿನವರಾದರೇ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಂದರೆ ಮೂಡಾದ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಮಾತ್ರ ಉಪಯೋಗವಾಗಲಿದೆ. ಹಾಗಾದರೆ ಮೂಡಾದ ಹೊರಗೆ ವಾಸಿಸುವ ಜನರಿಗೆ ಇದರಿಂದ ಏನೂ ಪ್ರಯೋಜನವಿಲ್ಲ. ಆದ್ದರಿಂದ ಒಂದು ಯೋಜನೆ ಕೇವಲ ನಗರವಾಸಿಗಳಿಗೆ ಮಾತ್ರ ಮಾಡಿರುವುದು ಸರಿನಾ ಎನ್ನುವುದು ಸದ್ಯದ ಪ್ರಶ್ನೆ.
Leave A Reply