ದೊಡ್ಡ ಯೋಜನೆಗಳು ಬಂದಾಗ ಪಾಲಿಕೆಗೆ ಹೊರಗಿನ ಇಂಜಿನಿಯರ್ಸ್ ಏಕೆ ಬೇಕು!!
ನೀವು ಸಾರ್ವಜನಿಕ ಶೌಚಾಲಯಕ್ಕೆ ಹೋಗಿ ಅದನ್ನು ಬಳಸಿ ಹೊರಗೆ ಬಂದಾಗ ಅಲ್ಲಿ ಹೊರಗೆ ಟೇಬಲ್ ಚೇರ್ ಹಾಕಿ ಕುಳಿತ ವ್ಯಕ್ತಿಗೆ ನೀವು ಒಂದೆರಡು ರೂಪಾಯಿ ಕೊಡಬೇಕಾಗುತ್ತದೆ. ನೀವು ಕೊಡದಿದ್ದರೆ ಅವನು ಕೇಳಿ ತೆಗೆದುಕೊಳ್ಳುತ್ತಾನೆ. ನೀವು ಹೋಗಿರುವುದು ಸರಕಾರಿ ಶೌಚಾಲಯವಾಗಿದ್ದರೂ ಕೊಡುವುದು ಕೊಡಲೇಬೇಕಾಗುತ್ತದೆ. ಹಾಗಿರುವಾಗ ಒಂದೀಡಿ ಅಂತಸ್ತನ್ನು ಕೆಲವು ವರ್ಷ ಬಳಸಿ ನಂತರ ಒಂದು ದಿನ ಸೀದಾ ಎದ್ದು ಹೋದರೆ ಮಾಲೀಕಾದವನು ಬಾಡಿಗೆಗೆ ಇದ್ದವನಿಗೆ “ಏನು ಸ್ವಾಮಿ, ಬಾಡಿಗೆ ಕೊಡ್ತೀರಾ, ಹೇಗೆ?” ಎಂದು ಕೇಳಬೇಕಾ? ಬೇಡ್ವಾ? ನಮ್ಮ ಮಂಗಳೂರು ಮಹಾನಗರ ಪಾಲಿಕೆಯವರು ಕೇಳಲಿಲ್ಲ. ಅದರ ಪರಿಣಾಮ ಜಿಲ್ಲಾ ನ್ಯಾಯಾಲಯದವರು ಕೆಲವು ವರ್ಷ ಬಳಸುತ್ತಿದ್ದ ಪಾಲಿಕೆಯ ಮೂರನೇ ಅಂತಸ್ತಿನ ಬಾಡಿಗೆ 9.67 ಲಕ್ಷ ಹಾಗೆ ಬಾಕಿ ಇದೆ. ಅಷ್ಟೇ ಅಲ್ಲ ಮೆಸ್ಕಾಂ ಆಫೀಸು ಇರುವುದು ಪಾಲಿಕೆಯ ಕಟ್ಟಡದಲ್ಲಿ. ಅವರು 4.50 ಲಕ್ಷ ರೂಪಾಯಿ ಬಾಕಿ ಇಟ್ಟಿದ್ದಾರೆ. ಆಶ್ಚರ್ಯ ಎಂದರೆ ಇದೇ ಮೆಸ್ಕಾಂನವರಿಗೆ ಪಾಲಿಕೆ ಕಟ್ಟಡದಲ್ಲಿರುವ ಮಂಗಳೂರು-1 ಅವರು ಒಂದು ಲಕ್ಷ ಬಾಕಿ ಇಟ್ಟಿದ್ದಕ್ಕೆ ಅಲ್ಲಿಯ ಫ್ಯೂಸ್ ತೆಗೆದುಕೊಂಡು ಹೋಗಿದ್ದರು. ಅವರು ನಾಲ್ಕೂವರೆ ಲಕ್ಷ ಬಾಕಿ ಇಟ್ಟರೆ ಪಾಲಿಕೆಯವರು ಸುಮ್ಮನೆ ಕುಳಿತುಕೊಂಡಿದ್ದಾರೆ ಎಂದರೆ ಇವರ ನಿರ್ಲಕ್ಷ್ಯಕ್ಕೆ ಏನು ಹೇಳಬೇಕು? ನಮ್ಮ ಪಾಲಿಕೆಯ ಆಸ್ತಿ ಎಂದರೆ ಅದು ಸಾರ್ವಜನಿಕ ಆಸ್ತಿ ಎಂದು ಹೆಚ್ಚಿನವರು ಉಂಡು ಹೋದ ಕೊಂಡು ಹೋದ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ.
ಎಟಿಎಂ ಮೇಲೆ ತೆರಿಗೆ ಹಾಕಿ…
ಈ ಕರಾವಳಿ ಉತ್ಸವ ಮೈದಾನದಲ್ಲಿ ಜಂಬೋ ಸರ್ಕಸ್ ಒಮ್ಮೆ ಬಂದಿತ್ತಲ್ಲ. ಆಗ ಅವರು ನೀರಿನ ಕನೆಕ್ಷನ್ ಅನ್ನು ಮಂಗಳೂರು ಮಹಾನಗರ ಪಾಲಿಕೆಯಿಂದ ಪಡೆದುಕೊಂಡಿದ್ದರಲ್ಲ, ಅದರ ಬಾಕಿಯನ್ನು ಇನ್ನು ಕೊಟ್ಟಿಲ್ಲ. ಇದೆಲ್ಲ ಯಾಕೆ ನಡೆಯುತ್ತದೆ ಎಂದರೆ ಯಾರಿಗೂ ಪಾಲಿಕೆಗೆ ಆದಾಯ ತರಬೇಕು ಎನ್ನುವ ಉದ್ದೇಶ ಇಲ್ಲವೇ ಇಲ್ಲ. ಅದೇ ನೀವು ನಮ್ಮ ಎಂಜಿ ರಸ್ತೆಯಲ್ಲಿರುವ ಮದುವೆ ಸಭಾಂಗಣಕ್ಕೆ ಹೋಗಿ. ಅಲ್ಲಿರುವ ಮೂರು ಹಾಲ್ ಗೂ ಮೂರು ರೀತಿಯ ಬಾಡಿಗೆ ಇರುತ್ತದೆ. ನೀವು ಒಂದು ತೆಗೆದುಕೊಂಡಿರಿ ಎಂದು ಇರಲಿ ಬೇಕಾದರೆ ಇನ್ನೊಂದು ಕೂಡ ಉಪಯೋಗಿಸಿ ಎಂದು ಅವರು ಕೊಡುತ್ತಾರಾ, ಕೇಳಿ. ಇಲ್ಲ, ಕೊಡಲ್ಲ. ಯಾಕೆಂದರೆ ಖಾಸಗಿಯವರಿಗೆ ಅವರ ಒಂದು ಚದರ ಅಡಿ ಜಾಗಕ್ಕೂ, ಒಂದು ಬಕೆಟ್ ನೀರಿಗೂ ಎಷ್ಟು ಬೆಲೆ ಎಂದು ಗೊತ್ತಿದೆ.
ಇನ್ನು ಅನೇಕ ಬ್ಯಾಂಕಿನವರು ತಮ್ಮ ಬ್ಯಾಂಕ್ ಆವರಣದಲ್ಲಿ ಎಟಿಎಂ ಮಾಡುತ್ತಾರೆ. ಆದರೆ ಎಷ್ಟು ಬ್ಯಾಂಕಿನವರು ಉದ್ದಿಮೆ ಪರವಾನಿಗೆ ಎಂದು ಪಡೆದುಕೊಂಡಿದ್ದಾರೆ. ಎಟಿಎಂ ಕೂಡ ಒಂದು ವ್ಯವಹಾರವೇ ಅಲ್ವಾ? ಎಷ್ಟೋ ಸಲ ಬ್ಯಾಂಕಿನಲ್ಲಿ ಉತ್ಪತ್ತಿಯಾಗುವ ಕಸದಷ್ಟೇ ಒಂದು ಲಿಫ್ಟ್ ಗೂಡಿನಕ್ಕಿಂತ ಸ್ವಲ್ಪ ದೊಡ್ಡದಾಗಿರುವ ಎಟಿಎಂ ಕೌಂಟರ್ ನಲ್ಲಿ ಕಸ ಉತ್ಪತ್ತಿಯಾಗುತ್ತದೆ. ಅನೇಕ ಬ್ಯಾಂಕುಗಳ ಸೆಟ್ ಬ್ಯಾಕ್ ಏರಿಯಾಗಳಲ್ಲಿ, ಪಾರ್ಕಿಂಗ್ ಜಾಗದಲ್ಲಿ ಈ ಎಟಿಎಂಗಳನ್ನು ಅಳವಡಿಸಿರುತ್ತಾರೆ. ಕೆಲವು ಕಡೆ ಬಿಲ್ಡಿಂಗ್ ನವರು ಎಟಿಎಂ ಇಡಲು ತಮ್ಮ ಬಿಲ್ಡಿಂಗ್ ಗಳಲ್ಲಿ ವ್ಯವಸ್ಥೆ ಮಾಡಿಕೊಟ್ಟು ಹದಿನೈದರಿಂದ ಹದಿನೆಂಟು ಸಾವಿರ ಬಾಡಿಗೆ ಪಡೆದುಕೊಳ್ಳುತ್ತಾರೆ. ಆದರೆ ಇದರಿಂದ ಪಾಲಿಕೆಗೆ ಏನು ಆದಾಯ ಇದೆ?
ಹೊರಗಿನವರ ಮೇಲೆ ಪ್ರೀತಿ ಯಾಕೆ..
ಇನ್ನು ಕೊನೆಯ ಪಾಯಿಂಟಿಗೆ ಬರುತ್ತೇನೆ. ಅಂದ ಹಾಗೆ ನಿಮಗೆ ಮತ್ತೊಮ್ಮೆ ನೆನಪು ಮಾಡಲು ಬಯಸುತ್ತೇನೆ. ಇದೆಲ್ಲ ನಾನು ಎರಡು ದಿನಗಳಿಂದ ಬರೆಯುತ್ತಿರುವ ಮತ್ತು ಈ ಮೂರನೆ ದಿನದ ಜಾಗೃತ ಅಂಕಣದ ವಿಷಯ ನಾನು ಮಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಪೂರ್ವ ಕಾಟಾಚಾರದ ಸಭೆಯಲ್ಲಿ ಮಾತನಡಿದ್ದು. ಇನ್ನು ಕೊನೆಯ ಪಾಯಿಂಟ್ ಗೆ ಬರೋಣ. ಪಾಲಿಕೆಯಲ್ಲಿ ಸೂಪರಿಟೆಂಡೆಂಟ್ ಇಂಜಿನಿಯರ್ ಇದ್ದಾರೆ. ಮೂರು ಜನ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಇದ್ದಾರೆ. ಐದು ಜನ ಅಸ್ಟಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಇದ್ದಾರೆ. ಇವರ ಕೆಳಗೆ 21 ಜನ ಜ್ಯೂನಿಯರ್ ಇಂಜಿನಿಯರ್ಸ್ ಇದ್ದಾರೆ. ಇಷ್ಟೆಲ್ಲ ಜನ ಇಂಜಿನಿಯರ್ಸ್ ಇರುವಾಗ ಪಾಲಿಕೆಗೆ ಕೇಂದ್ರ ಸರಕಾರದಿಂದ ಎಡಿಬಿ, ಅಮೃತ ಯೋಜನೆಯಂತಹ ಯೋಜನೆಗಳು ಬಂದಾಗ ಪಾಲಿಕೆಯವರು ಹೊರಗಿನಿಂದ ಇಂಜಿನಿಯರ್ಸ್ ಗಳನ್ನು ಇಟ್ಟುಕೊಳ್ಳುತ್ತಾರೆ. ಒಂದೊಂದು ಪ್ರಾಜೆಕ್ಟ್ ಮುಗಿಯುವಾಗ ಕನಿಷ್ಟ ಮೂರು ವರ್ಷ ಹಿಡಿಯುತ್ತದೆ. ಒಂದು ಪ್ರತ್ಯೇಕ ವ್ಯವಸ್ಥೆ ಮಾಡಿ ಮೂರು ವರ್ಷ ಒಂದು ಪ್ರಾಜೆಕ್ಟಿಗೆ ಹೊರಗಿನ ಇಂಜಿನಿಯರ್ಸ್ ಗಳನ್ನು ನೇಮಕ ಮಾಡುವಾಗ ಅವರೇನು ಉಚಿತವಾಗಿ ಬಂದು ಕೆಲಸ ಮಾಡಿಹೋಗುತ್ತಾರಾ? ಅದರ ಬದಲು ನಮ್ಮ ಇಂಜಿನಿಯರ್ಸ್ ಗಳಿಗೆ ಅದೇ ಕೆಲಸ ಕೊಟ್ಟರೆ ಹಣ ಉಳಿಯಲ್ವಾ? ಅಷ್ಟಕ್ಕೂ ಹೊರಗಿನಿಂದ ತಂದ ಇಂಜಿನಿಯರ್ಸ್ ಕಡಿದು ಏನಾದರೂ ಗುಡ್ಡೆ ಹಾಕಿದ್ದಾರಾ? ಎಡಿಬಿ-1 ಅನ್ನು ಅವರ ಕೈಯಲ್ಲಿ ಕೊಟ್ಟಿದ್ದಕ್ಕೆ ಇವತ್ತಿಗೂ ಎಲ್ಲಾ ವಾರ್ಡ್ ಗಳಲ್ಲಿ ಕುಡಿಯುವ ನೀರು ದಿನದ ಇಪ್ಪತ್ತನಾಲ್ಕು ಗಂಟೆ ಬಿಡಿ, ಇಪ್ಪತ್ತ ನಾಲ್ಕು ಗಂಟೆ ವಾರಕ್ಕೆ ಬರುತ್ತದಾ, ನೋಡಬೇಕು. ಅಷ್ಟು ಕೋಟಿ ಖರ್ಚು ಮಾಡಿ ಹೊರಗಿನ ಇಂಜಿನಿಯರ್ಸ್ ಗಳೇ ಹೀಗೆ ವೈಫಲ್ಯ ಕಾಣುವುದಾದರೆ ನಮ್ಮವರೇ ಮಾಡಲಿಯಲ್ಲ. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುತ್ತಾರೆ. ಪಾಲಿಕೆಗೆ ದೊಡ್ಡ ಯೋಜನೆ ಬಂದಾಗ ಹೊರಗಿನ ಹೆಗ್ಗಣಗಳ ಮೇಲೆನೆ ಪ್ರೀತಿ ಜಾಸ್ತಿ!�
Leave A Reply