ನಗರ ಕ್ಲೀನ್ ಆಗದಿದ್ದರೂ ಎರಡೆರಡು ಕೋಟಿ ತಿಂಗಳಿಗೆ ಕೊಟ್ಟು ತಿಜೋರಿ ಕ್ಲೀನ್ ಆಗುತ್ತಿದೆ
ನಗರ ಕ್ಲೀನ್ ಆಗದಿದ್ದರೂ ಎರಡೆರಡು ಕೋಟಿ ತಿಂಗಳಿಗೆ ಕೊಟ್ಟು ತಿಜೋರಿ ಕ್ಲೀನ್ ಆಗುತ್ತಿದ!!
ನಮ್ಮ ಕೇಂದ್ರ ಸರಕಾರ ಪ್ರತಿ ವರ್ಷ ರಾಷ್ಟ್ರದಲ್ಲಿ ಸ್ವಚ್ಚತೆಯಲ್ಲಿ ಮಾದರಿಯಾಗಿರುವ ಯಾವುದಾದರೂ ನಗರವನ್ನು ತೆಗೆದು ಅದಕ್ಕೆ ಪ್ರಶಸ್ತಿಯನ್ನು ನೀಡುವ ಪರಿಪಾಠ ಪ್ರಾರಂಭಿಸಿಕೊಂಡು ಬಂದಿದೆ. ಒಳ್ಳೆಯ ವಿಚಾರ. ಇದರಿಂದ ಬೇರೆ ನಗರಗಳೊಂದಿಗೆ ಒಳ್ಳೆಯ ಸೌಹಾರ್ದಯುತ ಸ್ಪರ್ಧೆ ಬಂದು ಪ್ರತಿಯೊಂದು ನಗರವೂ ಸ್ವಚ್ಚವಾಗಲು ಇದು ಸಹಕಾರಿ. ಕಳೆದ ಎರಡು ವರ್ಷಗಳಿಂದ ಈ ಪ್ರಶಸ್ತಿ ಮೈಸೂರಿನ ಪಾಲು ಆಗುತ್ತಿದೆ. ಈ ಬಾರಿ ಈ ಸ್ವಚ್ಚ ಭಾರತ್ ಸರ್ವೇಕ್ಷಣ್ ಅಭಿಯಾನದಡಿಯಲ್ಲಿ ಪ್ರಶಸ್ತಿ ನಮಗೆ ಸಿಗಬೇಕು ಎನ್ನುವುದು ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಮೊಹಮ್ಮದ್ ನಝೀರ್ ಅವರ ಆಶಯ. ಅದಕ್ಕಾಗಿ ಅವರು ಸಭೆ ನಡೆಸಿ ಸುದ್ದಿಗೋಷ್ಟಿ ಎಲ್ಲಾ ಮಾಡಿ ನಾಗರಿಕರಿಗೆ ಕರೆ ಕೊಡುತ್ತಿದ್ದಾರೆ. ಆದರೆ ಮಂಗಳೂರು ಅವರು ಅಂದುಕೊಂಡದ್ದು ಮತ್ತು ಪ್ರಶಸ್ತಿ ಸಿಗುವಷ್ಟು ಸ್ವಚ್ಚವಾಗುತ್ತಿಲ್ಲ. ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡುಗಳನ್ನು ಬಿಡಿ, ಕಮೀಷನರ್ ಅವರ ಸರಕಾರಿ ಬಂಗ್ಲೆ ಇರುವ ವೇರ್ ಹೌಸ್ ರಸ್ತೆಯಲ್ಲಿಯೇ ಸಾಕಷ್ಟು ಗಲೀಜು ಇದೆ. ಅದೇ ಕ್ಲೀನ್ ಇಲ್ಲ. ಹಾಗಿರುವಾಗ ಇಡೀ ಮಂಗಳೂರು ನಗರ ಸ್ವಚ್ಚವಾಗಿರಲಿ ಎಂದು ಕನಸಿಟ್ಟುಕೊಳ್ಳುವುದು ಎಷ್ಟರಮಟ್ಟಿಗೆ ಭ್ರಮೆ. ಅಷ್ಟಕ್ಕೂ ಈ ಪ್ರಶಸ್ತಿ ಸಿಗಬೇಕಾದರೆ ನಿಜಕ್ಕೂ ಕೆಲಸ ಮಾಡಬೇಕಾದವರು ಯಾರು? ಅವರಿಗೆ ಕೊಡುವ ಪೇಮೆಂಟ್ ಎಷ್ಟು ಮತ್ತು ಅವರು ಯಾಕೆ ಮಾಡುತ್ತಿಲ್ಲ?
ನಾವೇ ನಗರವನ್ನು ಕ್ಲೀನ್ ಇಟ್ಟುಕೊಳ್ಳುವುದಾದರೆ ತಿಂಗಳಿಗೆ 2 ಕೋಟಿ ಯಾಕೆ ಆಂಟೋನಿಗೆ..
ಮಂಗಳೂರು ಸ್ವಚ್ಚವಾಗಬೇಕು. ಅದಕ್ಕಾಗಿ ಪ್ರತಿ ಮನೆಯಿಂದ ತ್ಯಾಜ್ಯ ಸಂಗ್ರಹ ಆಗಬೇಕು. ಅದರೊಂದಿಗೆ ಬೀದಿ ಗುಡಿಸಿ ಕ್ಲೀನ್ ಇಟ್ಟುಕೊಳ್ಳಬೇಕು. ಒಂದು ಮೀಟರ್ ಅಗಲದ ಚರಂಡಿಗಳು ಕ್ಲೀನ್ ಇರಬೇಕು. ಇದಕ್ಕೆಲ್ಲ ಎಷ್ಟು ಖರ್ಚಾಗುತ್ತದೋ ಹೇಳಿ. ನಾವು ಕೊಡುತ್ತೇವೆ ಎಂದು ಪಾಲಿಕೆ ಯಾವಾಗ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರಿಗೆ ಹೇಳಿದ್ರೋ ಆ ಘಳಿಗೆಯೇ ಸರಿ ಇಲ್ಲ ಎಂದು ಅನಿಸುತ್ತದೆ. ಹಾಗೆ ಆಂಟೋನಿ ವೇಸ್ಟ್ ನವರಿಗೆ ಯಾವಾಗ ಪಾಲಿಕೆಯಿಂದ ಮೊದಲ ಚೆಕ್ ಸಂದಾಯವಾಯಿತೋ ಆ ಘಳಿಗೆ ಆಂಟೋನಿ ಸಂಸ್ಥೆಯವರ ಮಟ್ಟಿಗೆ ತುಂಬಾ ಲಕ್ಕಿ ಇತ್ತು ಎಂದು ಅನಿಸುತ್ತದೆ. ಯಾಕೆಂದರೆ ಮಂಗಳೂರು ಎಷ್ಟು ಸ್ವಚ್ಚವಾಯಿತೋ ದೇವರೇ ಬಲ್ಲ, ಆದರೆ ಆಂಟೋನಿಯವರಿಗೆ ಪ್ರತಿ ತಿಂಗಳು ಸುಮಾರು ಎರಡು ಕೋಟಿಯಷ್ಟು ರೂಪಾಯಿಯನ್ನು ನೀಡಿ ನೀಡಿ ನಮ್ಮ ಪಾಲಿಕೆಯ ತಿಜೋರಿ ಮಾತ್ರ ಕ್ಲೀನ್ ಆಗುತ್ತಾ ಇದೆ. ಈ ಆಂಟೋನಿಯವರು ಪರ್ಮನೆಂಟ್ ಆಗಿ ನಮ್ಮ ಪಾಲಿಕೆಯ ಸ್ವಚ್ಚತೆಯ ಗುತ್ತಿಗೆಯನ್ನು ಪಡೆದುಕೊಂಡರೆ ಕೆಲವರಿಗೆ ಅರವತ್ತು ಆಗುವಾಗ ತಲೆಯ ಮೇಲೊಂದು ಮೈದಾನ ಸೃಷ್ಟಿಯಾಗುತ್ತಲ್ಲ, ಹಾಗೆ ಕ್ಲೀನ್ ಆಗುತ್ತಾ ಹೋಗುವುದು ಮಾತ್ರ ಬಾಕಿ.
ಇನ್ನು ನಗರವನ್ನು ಕ್ಲೀನ್ ಆಗಿಡಿ ಎಂದು ಪಾಲಿಕೆ ಮತ್ತು ಜಿಲ್ಲಾಡಳಿತ ವಿನಂತಿ ಮಾಡುವುದು ಸಾರ್ವಜನಿಕರಿಗೆ. ಅದರ ಬದಲು ಇವರು ಆಂಟೋನಿಯವರಿಗೆ ಯಾಕೆ ಕರೆದು ಮಂಗಳೂರನ್ನು ಕ್ಲೀನ್ ಆಗಿ ಇಡಬೇಕೆಂದು ಹೇಳುವುದಿಲ್ಲ. ತಿಂಗಳಿಗೆ ಎರಡೆರಡು ಕೋಟಿ ಕೊಡುವುದು ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ನವರಿಗೆ. ಕ್ಲೀನ್ ಆಗಿ ಇಡಬೇಕಾಗಿರುವುದು ನಾವು ನಾಗರಿಕರಾ? ಇಲ್ಲಿಯ ತನಕ ಪಾಲಿಕೆಯ ಯಾವ ವಾರ್ಡಿನ ಮನಪಾ ಸದಸ್ಯ/ಸ್ಯೆ ಕಮೀಷನರ್ ಅವರಿಗೆ ಲಿಖಿತವಾಗಿ “ನನ್ನ ವಾರ್ಡ್ ಗಲೀಜಾಗಿರಲು ಕಾರಣ ಅಲ್ಲಿ ಪಾಲಿಕೆ ಕೊಟ್ಟಿರುವ ಗುತ್ತಿಗೆದಾರರು ಸರಿಯಾಗಿ ಕಸ ಸಂಗ್ರಹ ಮಾಡುವುದಿಲ್ಲ” ಎಂದು ಬರೆದುಕೊಟ್ಟಿದ್ದಾರೆ. “ನನ್ನ ವಾರ್ಡಿನ ಒಂದು ಮೀಟರ್ ಅಗಲದ ತೋಡನ್ನು ಆಂಟೋನಿಯವರು ಕ್ಲೀನ್ ಮಾಡಿಲ್ಲ, ನನ್ನ ವಾರ್ಡಿನ ರಸ್ತೆಯನ್ನು ಆಂಟೋನಿಯವರು ಗುಡಿಸಿಲ್ಲ” ಎಂದು ಎಷ್ಟು ಮಂದಿ ಕಾರ್ಪೋರೇಟರ್ ಗಳು ಲಿಖಿತವಾಗಿ ದೂರು ಕೊಟ್ಟಿದ್ದಾರೆ. ಯಾರೂ ಕೊಟ್ಟಿಲ್ಲ. ಹಾಗಾದರೆ ಆಂಟೋನಿ ಸಂಸ್ಥೆಯವರು ಕವರ್ ಗಳನ್ನು ಸದಸ್ಯರ ಮನೆಗಳಿಗೆ ಕಳುಹಿಸಿಕೊಡುತ್ತಿದ್ದಾರಾ? ಯಾರೂ ಮಾತನಾಡುತ್ತಿಲ್ಲ ಎಂದರೆ ಅದರ ಅರ್ಥ ಮಂಗಳೂರು ನಗರ ಕ್ಲೀನ್ ಆಗಿದೆ ಎಂದು ತಾನೇ. ಹಾಗಾದರೆ ನಮಗೆ ಸ್ವಚ್ಚತೆಯ ಪ್ರಶಸ್ತಿ ಬರಬೇಕಿತ್ತು, ತಾನೆ. ಬರುತ್ತಿಲ್ಲ.ಜೋರು ಮಾಡಿ, ಹಣ ಸುಮ್ಮನೆ ಕೊಡುವುದಲ್ಲ..
ಯಾಕೆಂದರೆ ಮಂಗಳೂರು ಎಷ್ಟು ಕ್ಲೀನ್ ಆಗಬೇಕಿತ್ತೋ, ಅಷ್ಟು ಆಗುತ್ತಿಲ್ಲ. ಹೇಳಿ ಮಾಡಿಸಬೇಕಾದವರು ಮಾಡಿಸುತ್ತಿಲ್ಲ. ಯಾಕೆಂದರೆ ಹೇಳಬೇಕಾದರೆ ನೈತಿಕತೆಯ ಕೊರತೆ ಇದೆ. ಮಂಗಳೂರನ್ನು ಕ್ಲೀನ್ ಆಗಿಟ್ಟುಕೊಳ್ಳಲು ನಾವು ಖಂಡಿತ ಸಹಕರಿಸುತ್ತೇವೆ. ಆದರೆ ನಮ್ಮ ತೆರಿಗೆಯ ಹಣದಲ್ಲಿ ನೀವು ಎರಡು ಕೋಟಿ ತೆಗೆದು ಪ್ರತಿ ತಿಂಗಳು ಆಂಟೋನಿಯವರ ಹರಿವಾಣದಲ್ಲಿ ಹಾಕುತ್ತಿರಲ್ಲ, ಅದೇನು ನೀವು ದುಡಿದ ಹಣವಾ ಕಮೀಷನರ್ ಅವರೇ. ಸಾರ್ವಜನಿಕರ ಹಣ ತಾನೇ, ಹಾಗಾದರೆ ಆ ಗುತ್ತಿಗೆದಾರರ ಕಿವಿ ಹಿಡಿದು ಕೆಲಸ ಮಾಡಿಸಿ. ಆ ಸಂಸ್ಥೆಯವರು ನೋಡಿದ್ರೆ ತಮ್ಮ ಕೆಲಸದವರಿಗೆ ಕೈಗೆ, ಕಾಲಿಗೆ ಅದು ಕೊಟ್ಟಿಲ್ಲ, ಇದು ಕೊಟ್ಟಿಲ್ಲ ಎನ್ನುವ ದೂರುಗಳಿವೆ. ಪೇಮೆಂಟ್ ಕೆಲವು ದಿನ ತಡವಾದರೆ ಅವರು ಕೆಲಸ ನಿಲ್ಲಿಸಿಬಿಡುತ್ತಾರೆ. ಹಾಗಿರುವಾಗ ಅವರು ಕರೆಕ್ಟಾಗಿ ಹಣಕ್ಕಾಗಿಯೇ ಕೆಲಸ ಮಾಡುವ ಕಮರ್ಶಿಯಲ್ ಸಂಸ್ಥೆಯಾದರೆ ನಾವು ಯಾಕೆ ಅವರ ಮೇಲೆ ಕನಿಕರ ತೋರಿಸಬೇಕು. ನೀವು ಸಹಿತ ಪಾಲಿಕೆಯ ಹಿರಿಯ ಸದಸ್ಯರು ಬೆಳಿಗ್ಗೆ ಒಂದೊಂದು ಟೀಮ್ ಮಾಡಿ ವಿವಿಧ ವಾರ್ಡುಗಳಲ್ಲಿ ಹೋಗಿ. ತ್ಯಾಜ್ಯ ಕಂಡರೆ ಅಲ್ಲಿಂದ ಆಂಟೋನಿಯವರಿಗೆ ಫೋನ್ ಮಾಡಿ. ಅವರಿಗೆ ಪೇಮೇಂಟ್ ಸುಮ್ಮನೆ ಕೊಡಲ್ಲ ಎಂದು ತೋರಿಸಿಕೊಡಿ. ಅದು ಬಿಟ್ಟು ಸುಮ್ಮನೆ ಸುದ್ದಿಗೋಷ್ಟಿ ಮಾಡಿ ಜನರಿಗೆ ವಿನಂತಿ ಮಾಡುವುದಕ್ಕಿಂತ ಯಾರಿಗೆ ಜೋರು ಮಾಡಬೇಕೋ ಅವರಿಗೆ ಮಾಡಿ!
Leave A Reply