ದೆವ್ವದ ಅರಮನೆ ಮಾಡಲು ನಮ್ಮ ತೆರಿಗೆಯ ಹಣ ಖರ್ಚು ಮಾಡುವ ಪಾಲಿಕೆ!!
ಮಹಾಬಲ ಮಾರ್ಲ ಅವರು ಮೇಯರ್ ಆಗಿದ್ದಾಗ ಮೇಯರ್ ಆಗಿ ಬರುವವರಿಗೆ ಒಂದು ಬಂಗ್ಲೆ ಬೇಕು ಎನ್ನುವ ನಿರ್ಧಾರಕ್ಕೆ ಬಂದ್ರು. ಆ ಕಾರಣಕ್ಕೆ ಮಣ್ಣಗುಡ್ಡೆಯ ಸರಕಾರಿ ಉಗ್ರಾಣ ಇದೆಯಲ್ಲ, ಅಲ್ಲಿ ಒಂದು ಬಂಗ್ಲೆಯನ್ನು ಗುರುತಿಸಲಾಯಿತು. ಆ ಬಂಗ್ಲೆಯನ್ನು ಹತ್ತು ಲಕ್ಷ ರೂಪಾಯಿ ಖರ್ಚು ಮಾಡಿ ನವೀಕರಣ ಮಾಡಲಾಯಿತು. ಬಂಗಲೆ ರೆಡಿ ಆದ ನಂತರ ಒಂದು ಒಳ್ಳೆಯ ದಿನ ನೋಡಿ ಗಣ್ಯರು ಅಲ್ಲಿ ಒಳಪ್ರವೇಶ ಮಾಡಿದರು. ಚಾ, ಕಾಫಿ, ತಿಂಡಿ ಆಯಿತು. ಸ್ವಲ್ಪ ಹೊತ್ತಿನ ನಂತರ ಎಲ್ಲರೂ ಅಲ್ಲಿಂದ ಹೋದರು. ಆವತ್ತಿನಿಂದ ಇವತ್ತಿನ ತನಕ ಐದು ವರ್ಷಗಳು ಆಗಿರಬಹುದು. ಆ ಬಂಗ್ಲೆ ಇವತ್ತು ಹಣ್ಣು ಹಣ್ಣು ಮುದುಕಿಯ ಗೆಟಪ್ಪಿಗೆ ಬಂದಿದೆ. ಮಹಾಬಲ ಮಾರ್ಲ ಮೇಯರ್ ಆಗಿದ್ದಾಗ ನಮ್ಮ ತೆರಿಗೆಯ ಹಣ ಹತ್ತು ಲಕ್ಷ ಖರ್ಚು ಮಾಡಿ ಆ ಬಂಗಲೆಗೆ ಚೆಂದದ ರೂಪ ಕೊಡಿಸಿದ್ದರು. ಇವತ್ತು ಆ ಬಂಗ್ಲೆಯನ್ನು ಕೇಳುವವರೇ ಇಲ್ಲ. ಆ ಬಂಗ್ಲೆ ನವೀಕರಣ ಆದ ನಂತರ ಅಪ್ಪಿತಪ್ಪಿಯೂ ಒಂದೇ ಒಂದು ಮೇಯರ್ ಅಲ್ಲಿಗೆ ಬಂದು ಒಂದು ದಿನ ಠಿಕಾಣಿ ಹೂಡಿಲ್ಲ. ಬೇರೆಯವರು ಯಾಕೆ, ಸ್ವತ: ಮಹಾಬಲ ಮಾರ್ಲ ಅವರೇ ಅತ್ತ ಕಡೆ ಸುಳಿದಿಲ್ಲ. ಅವರ ನಂತರ ಮೂರ್ನಾಕು ಜನ ಮೇಯರುಗಳು ಪಾಲಿಕೆಯ ಚೇರ್ ಅನ್ನು ಬಿಸಿ ಮಾಡಿ ಹೋಗಿದ್ದಾರೆ. ಯಾರೊಬ್ಬರೂ ಇಂತಹ ಒಂದು ಮನೆ ಇದೆ. ಅಲ್ಲಿ ನಮಗೆ ವಾಸ ಮಾಡಬಹುದು ಎಂದು ಯೋಚಿಸಿಯೇ ಇಲ್ಲ. ಈ ನಡುವೆ ಕೆಲ ಮಾಧ್ಯಮ ಮಿತ್ರರಿಗೆ ಈ ಬಂಗ್ಲೆಯ ಸ್ಥಿತಿಯನ್ನು ಕಂಡು ಮರುಕವಾಗಿ ಈ ಬಗ್ಗೆ ಸುದ್ದಿ ಮಾಡಿದರೆ ಪಾಲಿಕೆ ಎಚ್ಚರವಾಗಬಹುದು. ಇದನ್ನು ರಿಪೇರಿ ಮಾಡಬಹುದು. ಮತ್ತೆ ಯಾರಾದರೂ ಮೇಯರ್ ಬಂದು ಇರಬಹುದು ಎಂದು ಅಂದುಕೊಂಡು ವರದಿ ಮಾಡಿದರು.
ನವೀಕರಣದ ಕಮೀಷನ್ ಯಾರಿಗೆ…
ಈ ಬಂಗ್ಲೆಯ ಬಾಗಿಲು ಬಿದ್ದಿದೆ. ಅವಸ್ಥೆ ನೋಡೋಕೆ ಆಗಲ್ಲ ಎಂದಲ್ಲ ಸುದ್ದಿಯಾಯಿತು. ನಿರೀಕ್ಷೆಯಂತೆ ಪಾಲಿಕೆಗೆ ಎಚ್ಚರವಾಯಿತು. ಒಂದಿಷ್ಟು ಅಧಿಕಾರಿಗಳು ಓಡೋಡಿ ಬಂದರು. ಛೇ, ಹತ್ತು ಲಕ್ಷ ಖರ್ಚು ಮಾಡಿ ನವೀಕರಣ ಮಾಡಿದ್ದು ಹೀಗೆ ಆಯಿತಲ್ಲ ಎಂದು ಒಳಗೊಳಗೆ ಖುಷಿಪಟ್ಟರು(!). ಇದನ್ನು ಮತ್ತೆ ಸರಿ ಮಾಡೋಣ ಎನ್ನುವ ನಿರ್ಧಾರಕ್ಕೆ ಬಂದರು. ಮತ್ತೆ ಅದು ಇದು ಮಾಡಿ ರಿಪೇರಿ ಮಾಡಲಾಯಿತು. ವಾಸಯೋಗ್ಯ ಮಾಡಲಾಯಿತು. ಅದಕ್ಕೆ ಖರ್ಚಾದದ್ದು ಭರ್ಥಿ ಎರಡು ಲಕ್ಷ. ನಂತರವಾದರೂ ಯಾರಾದರೂ ಬಂದರಾ? ಇಲ್ಲ. ಸುದ್ದಿಯೇ ಇಲ್ಲ. ಇವತ್ತಿಗೂ ಆ ಕಡೆಯಿಂದ ಹೋಗುವವರಿಗೆ ಈ ಬಂಗ್ಲೆ ಕಿಸಕ್ಕನೆ ನಕ್ಕಂತೆ ಆಗುತ್ತದೆ. ಯಾಕೆಂದರೆ ಹನ್ನೆರಡು ಲಕ್ಷ ಖರ್ಚು ಮಾಡಿಯೂ ಯಾರೂ ಕೂಡ ಬಂದಿಲ್ಲ ಎನ್ನುವ ಕುಹಕ ನಗೆ ಆ ಬಂಗ್ಲೆಯಿಂದ ಹೊರಗೆ ಬೀಳುತ್ತದೆ. ಬಹುಶ: ಆ ಹನ್ನೆರಡು ಲಕ್ಷದಲ್ಲಿ ಎಷ್ಟು ಶೇಕಡಾ ಹಣ ಯಾರ್ಯಾರ ಜೇಬಿಗೆ ಹೋಯಿತು ಎನ್ನುವುದು ಇವತ್ತಿಗೂ ಯಕ್ಷ ಪ್ರಶ್ನೆ.
ಯರಿಗಾದರೂ ಕೊಡ್ರಿ ಮಾರಾಯ್ರೆ…
ಅಷ್ಟಕ್ಕೂ ಅಷ್ಟು ಲಕ್ಷ ಖರ್ಚು ಮಾಡಿ ನವೀಕರಣ ಮಾಡಿದ ಬಂಗ್ಲೆಯನ್ನು ಹಿಂದೆ ಕಂದಾಯ ಅಧಿಕಾರಿಗಳಿಗೆ ಕ್ವಾಟ್ರಸ್ ಆಗಿ ಕೊಡಲಾಗುತ್ತಿತ್ತು. ಈ ಕಟ್ಟಡದ ಎದುರೇ ಇನ್ನೆರಡು ಬಂಗ್ಲೆಗಳು ಕೂಡ ಇದರ ಸಹೋದರ ಸಂಬಂಧಿಗಳೋ ಎನ್ನುವಂತೆ ಪಾಳು ಬಿದ್ದು ಹೋಗಿದೆ. ಅದರಲ್ಲಿ ಒಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ಒಬ್ಬರು ವಾಸವಾಗಿದ್ದ ಬಂಗಲೆ ಮತ್ತೊಂದು ಜಂಟಿ ಆಯುಕ್ತರು ಇದ್ದ ಬಂಗ್ಲೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರು ಮೂರು ವರ್ಷಗಳ ಹಿಂದೆ ನಿವೃತ್ತರಾಗಿ ಹೋಗಿದ್ದಾರೆ. ಅವರ ನಂತರ ಆ ಬಂಗ್ಲೆಯೊಳಗೆ ಯಾರೂ ಕಾಲು ಇಟ್ಟಿಲ್ಲ. ಇನ್ನೊಂದು ಪಾಲಿಕೆ ಜಂಟಿ ಆಯುಕ್ತರು ಎರಡೂವರೆ ವರ್ಷಗಳ ಹಿಂದೆ ನಿವೃತ್ತರಾಗಿ ಹೋಗಿದ್ದಾರೆ. ಆ ಮನೆ ಕೂಡ ಈಗ ಖಾಲಿಯಾಗಿದೆ. ಸದ್ಯ ಪಾಲಿಕೆಯಲ್ಲಿ ಮೂರು ಜನ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಇದ್ದಾರೆ. ಅವರಲ್ಲಿ ಒಬ್ಬರಿಗೆ ಮಾತ್ರ ಸ್ವಂತ ಮನೆ ಇದೆ. ಇನ್ನು ಇಬ್ಬರು ಬಾಡಿಗೆ ಮನೆಯಲ್ಲಿ ಇದ್ದಾರೆ. ಅವರ ಬಾಡಿಗೆಯನ್ನು ನಮ್ಮದೇ ತೆರಿಗೆಯ ಹಣದಿಂದ ಪಾವತಿಸಲಾಗುತ್ತದೆ. ಅದರ ಬದಲು ಈಗ ಖಾಲಿ ಇರುವ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಬಂಗಲೆಯಲ್ಲಿ ಅವರಿಗೆ ಅವಕಾಶ ಕೊಡಬಹುದಿತ್ತು. ಇನ್ನೊಂದು ಜಂಟಿ ಆಯುಕ್ತರ ಬಂಗಲೆಯನ್ನು ಕೂಡ ಬಾಡಿಗೆ ಮನೆಯಲ್ಲಿರುವ ಯಾವುದಾದರೂ ಅಧಿಕಾರಿಗೆ ಕೊಡಬಹುದಿತ್ತು. ಇನ್ನು ಒಂದು ವರ್ಷಕ್ಕಾಗಿ ಯಾವುದೇ ಮೇಯರ್ ಅವರು ಸರಕಾರಿ ಬಂಗ್ಲೆಗೆ ಶಿಫ್ಟ್ ಆಗುವುದಿಲ್ಲ. ಯಾಕೆಂದರೆ ಹೆಚ್ಚಿನವರಿಗೆ ಇದಕ್ಕಿಂತ ಒಳ್ಳೆಯ ಮನೆ ಇದೆ. ಅದು ಬಿಟ್ಟರೆ ಪಾಲಿಕೆಯ ಐಶಾರಾಮಿ ಕೊಠಡಿ ಇದೆ. ಆದ್ದರಿಂದ ಅದನ್ನು ಕೂಡ ಯಾವುದಾದರೂ ಅಧಿಕಾರಿಗೆ ವಾಸ್ತವ್ಯಕ್ಕೆ ಕೊಡಬಹುದಿತ್ತು. ಆದರೆ ಇವರು ಪ್ರತಿ ಬಾರಿ ನವೀಕರಣದ ಹೆಸರಿನಲ್ಲಿ ಬಿಲ್ ಮಾಡುತ್ತಾರೆ ವಿನ: ಅಲ್ಲಿ ಯಾರನ್ನು ನಿಲ್ಲಲು ಬಿಡುವುದಿಲ್ಲ. ಅವು ದೆವ್ವದ ಅರಮನೆಯಾಗಿಯೇ ಉಳಿಯುತ್ತಿವೆ!
Leave A Reply