ಕೆಎಫ್ ಡಿ ಎನ್ನುವ ಕಾಯಿಲೆ ಮಂಗಗಳಿಗೆ ಬರುತ್ತದೆ!!
1957 ರಲ್ಲಿ ಮಂಗನ ಕಾಯಿಲೆ ಭಾರತದಲ್ಲಿ ಮೊದಲ ಬಾರಿಗೆ ಪತ್ತೆ ಹಚ್ಚಲಾಯಿತು. ಅದರ ನಂತರ ಇದು ನಮ್ಮ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲಿಯೂ ಮಲೆನಾಡು ಈ ಕಾಯಿಲೆಯ ಫೆವರಿಟ್ ಜಾಗ. ಮಲೆನಾಡು ಮತ್ತು ಕರಾವಳಿಯ ಗಡಿ ಪ್ರದೇಶಗಳಲ್ಲಿರುವ ಕಾಡುಗಳಲ್ಲಿ ಈ ಕಾಯಿಲೆ ತನ್ನ ವರ್ಷದ ಪಿಕ್ ನಿಕ್ ಗೆ ಬಂದಂತೆ ಬರುತ್ತದೆ.
ಸಾಮಾನ್ಯವಾಗಿ ಜನವರಿಯಿಂದ ಜೂನ್ ತನಕ ಈ ಕಾಯಿಲೆಯ ಸೀಸನ್ ಎಂದೇ ಹೇಳಬಹುದು. ಈ ಸಮಯಕ್ಕೆ ಯಾಕೆ ಎನ್ನುವ ಪ್ರಶ್ನೆ ಮೂಡಬಹುದು. ಈ ಆರು ತಿಂಗಳ ಅವಧಿ ಮಂಗಗಳ ಪಾಲಿಗೆ ರಮ್ಯ ಚೈತ್ರಕಾಲದ ಸಮಯ ಅಂದರೆ ಹನಿಮೂನ್ ಅವಧಿ. ಹೆಚ್ಚಾಗಿ ಗಂಡು ಮತ್ತು ಹೆಣ್ಣು ಮಂಗಗಳ ಮಿಲನವಾಗುವುದು ಇದೇ ಸಮಯದಲ್ಲಿ. ಮಂಗನ ಕಾಯಿಲೆ ಕೂಡ ಹರಡುವುದು ಇದೇ ಅವಧಿಯಲ್ಲಿ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಕೆಎಫ್ ಡಿ ಎಂದು ಕರೆಯುತ್ತಾರೆ. ನಮ್ಮಲ್ಲಿ ಕೆಎಫ್ ಡಿ ಎನ್ನುವ ಸಂಘಟನೆಯೊಂದಿದೆ. ಅದಕ್ಕೂ ಮಂಗನ ಕಾಯಿಲೆಗೂ ಏನು ಸಂಬಂಧವಿಲ್ಲ. ಅದು ಬೇರೆ ವಿಷಯ.ಮಂಗವೊಂದು ಕಾಡಿನಲ್ಲಿ ಸತ್ತರೆ ಅದು ಮಂಗನ ಕಾಯಿಲೆಯಿಂದಲೇ ಸತ್ತಿದೆ ಎಂದು ಹೇಳಲು ಆಗುವುದಿಲ್ಲ. ಮಂಗಗಳು ವಿವಿಧ ಕಾರಣಗಳಿಂದ ಸಾಯುತ್ತವೆ. ಎರಡು ಮಂಗಗಳು ಪರಸ್ಪರ ಹೊಡೆದಾಡಿ ಸಾಯಬಹುದು. ಮಂಗಕ್ಕೆ ವಯಸ್ಸಾಗಿ ಸಾಯಬಹುದು. ಬೇರೆ ಪ್ರಾಣಿಯಿಂದ ದಾಳಿಗೊಳಗಾಗಿ ಸಾಯಬಹುದು. ಆದರೆ ಒಂದು ಮಂಗ ಫ್ಲೇವಿ ಎನ್ನುವ ವೈರಸ್ ಅನ್ನು ಮೈಯಲ್ಲಿ ಹೊತ್ತುಕೊಂಡಿರುವ ಉಣ್ಣೆಯಿಂದ ಕಚ್ಚಲ್ಪಟ್ಟರೆ ಆಗ ಆ ವೈರಸ್ ಮಂಗನ ದೇಹವನ್ನು ಪ್ರವೇಶ ಮಾಡುತ್ತದೆ. ನಂತರ ಅಂತಹ ಉಣ್ಣೆ ಮನುಷ್ಯನಿಗೆ ಕಚ್ಚಿದರೆ ಆ ಕಾಯಿಲೆ ಮನುಷ್ಯನಿಗೆ ಹರಡುತ್ತದೆ. ಒಂದು ವಾರದ ಒಳಗೆ ಕಚ್ಚಲ್ಪಟ್ಟ ಮನುಷ್ಯನ ದೇಹದೊಳಗೆ ವಿಚಿತ್ರ ನೋವು, ಜ್ವರ, ರಕ್ತಕಾರುವಿಕೆ, ಗಂಟಲು ಉಬ್ಬುವುದು ಸಹಿತ ಅನಾರೋಗ್ಯ ಸಂಭವಿಸುತ್ತದೆ. ಆಗ ಆತ ತಕ್ಷಣ ಸನಿಹದ ವೈದ್ಯರನ್ನು ಸಂಪರ್ಕಿಸಿ ವಿಷಯವನ್ನು ಹೇಳಬೇಕು. ಆಗ ಅವರು ಕೇಳುವ ಮೊದಲ ಪ್ರಶ್ನೆ- ನೀವು ಇತ್ತೀಚೆಗೆ ಕಾಡಿನ ಒಳಗೆ ಹೋಗಿದ್ದೀರಾ?
ಕಾಡೊಳಗೆ ಈಗ ಹೋಗುವುದು ರಿಸ್ಕ್.
ಹೌದು, ಕಾಡನ್ನು ಅವಲಂಬಿಸಿರುವ, ಕಾಡಿನಲ್ಲಿ ಜೀವನೋತ್ಪತಿಯ ವಸ್ತುಗಳನ್ನು ಹೆಕ್ಕಲು ಹೋಗುವವರ, ಬೇಟೆಗೆ ಹೋಗುವವರ ಮತ್ತು ಚಾರಣಿಗರಿಗೆ ಈ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚು. ಅದೇಗೆ ಅಂದರೆ ಕಾಡಿನಲ್ಲಿ ವೈರಸ್ ಇರುವ ಉಣ್ಣೆಯಿಂದ ಕಚ್ಚಲ್ಪಟ್ಟ ಮಂಗ ಓಡಾಡುತ್ತಿರುವಾಗ ಅದನ್ನು ಸಾಮಾನ್ಯ ಉಣ್ಣೆಗಳು ಕೂಡ ಬಂದು ಕಚ್ಚುತ್ತವೆ. ಆಗ ಕಾಯಿಲೆಯ ಮಂಗನ ದೇಹದಿಂದ ವೈರಸ್ ಗಳು ಆ ಸಾಮಾನ್ಯ ಉಣ್ಣಿಗಳ ದೇಹವನ್ನು ಕೂಡ ಪ್ರವೇಶಿಸುತ್ತವೆ. ಅವು ಕಾಡಿನಲ್ಲಿ ಕಾಲಿಟ್ಟ ಮನುಷ್ಯನಿಗೆ ಕಚ್ಚಿದರೆ ಅವನಿಗೆ ಮಂಗನ ಕಾಯಿಲೆ ಗ್ಯಾರಂಟಿ. ಆದ್ದರಿಂದ ಇಲ್ಲಿ ಉಣ್ಣಿಗಳು ಕೇವಲ ವಾಹಕಗಳಾಗಿ ಕೆಲಸ ಮಾಡುತ್ತವೆ. ಅಷ್ಟಕ್ಕೂ ಉಣ್ಣಿಗಳು ಎಂದರೆ ಏನು ಎನ್ನುವುದು ನಗರಗಳಲ್ಲಿ ವಾಸಿಸುವವರಿಗೆ ಇರುವ ಐಡಿಯಾ ಕಡಿಮೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಉಣ್ಣಿಗಳ ಬಗ್ಗೆ ಹೇಳಲೇಬೇಕಾಗಿಲ್ಲ. ಅವು ನಿತ್ಯ ದರ್ಶನ ಕೂಡುವ ಕ್ರಿಮಿಗಳು. ಸಾಮಾನ್ಯವಾಗಿ ಉಣ್ಣಿಗಳು ಕಾಡಿಗೆ ಮೇಯಲು ಹೋಗಿ ಬರುವ ದನಗಳ ಕಿವಿಯಲ್ಲಿ ಖಾಯಂ ಆಗಿ ಕುಳಿತುಬಿಟ್ಟಿರುತ್ತವೆ. ಹಳ್ಳಿಗಳ ನಾಯಿಗಳು ಕಾಡೆಲ್ಲ ಸುತ್ತಾಡಿ ಸಂಜೆ ಮನೆಗೆ ಬಂದಾಗ ಅವುಗಳ ಮೈ ತುಂಬಾ ಉಣ್ಣಿಗಳದ್ದೇ ಕಾರುಬಾರು. ಪ್ರತಿ ಉಣ್ಣಿ ವೈರಸ್ ಹೊತ್ತುಕೊಂಡು ತಿರುಗುವುದಿಲ್ಲವಾದ್ದರಿಂದ ಎಲ್ಲಾ ಉಣ್ಣಿಗಳು ಡೇಂಜರ್ ಅಲ್ಲ. ಅವು ಪ್ರಾಣಿಗಳ ಅಥವಾ ನಮ್ಮ ಮೈಮೇಲೆ ಕುಳಿತು ರಕ್ತವನ್ನು ಹೀರುತ್ತಾ ಇರುತ್ತವೆ. ಆದರೆ ವೈರಸ್ ಉಣ್ಣಿಯ ಎದುರು ಒಬ್ಬ ಮಂಗ ಮತ್ತು ಒಬ್ಬ ಮನುಷ್ಯ ಸಿಕ್ಕಿದರೆ ಅವು ಮೊದಲು ಮನುಷ್ಯನ ರಕ್ತವನ್ನು ಹೀರುತ್ತವೆ ಎನ್ನುತ್ತಾರೆ ವೈದ್ಯರು. ಅವುಗಳಿಗೆ ಮನುಷ್ಯನ ದೇಹ ಅಷ್ಟು ಪ್ರಿಯವಾಗಿರಬಹುದೇನೋ.
ಮುಂಜಾಗ್ರತೆ ಹೇಗೆ?
ಮಂಗನ ಕಾಯಿಲೆ ಬಂದ ತಕ್ಷಣ ಮಂಗಗಳು ನರಳಿ ಸಾಯುತ್ತವೆ. ಅವು ಸಾಯುವ ತನಕ ಅವುಗಳನ್ನು ಕಚ್ಚುವ ಪ್ರತಿಯೊಂದು ಉಣ್ಣಿ ಕೂಡ ತನ್ನ ದೇಹದೊಳಗೆ ವೈರಸ್ ತುಂಬಿಕೊಂಡು ಬಿಡುತ್ತವೆ. ಅವು ದಿನಕ್ಕೆ ಮೂವರಿಗೆ ಕಚ್ಚಿದರೂ ಅವರು ಆ ಕಾಯಿಲೆಗೆ ಒಳಗಾಗುತ್ತಾರೆ. ಆದ್ದರಿಂದ ಮಂಗನ ಕಾಯಿಲೆ ಬಂದು ಸತ್ತಿರುವ ಮಂಗಗಳು ಇದ್ದ ಕಾಡನ್ನು ಯಾರೂ ಪ್ರವೇಶಿಸದೇ ಇರುವುದು ಒಳ್ಳೆಯದು. ಹಾಗಾದರೆ ಒಂದು ವೇಳೆ ಹೋಗಲೇ ಬೇಕಾದರೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಣ್ಣೆಯೊಂದನ್ನು ಕೊಡುತ್ತಾರೆ. ಅದನ್ನು ಮೈತುಂಬಾ ಹಚ್ಚಿ ಅದರ ಮೇಲೆ ಮೈ ಒಂದು ಚೂರು ಕಾಣದಂತೆ ಬಟ್ಟೆ ಧರಿಸಿ, ಶೂ ಹಾಕಿ ಹೋಗುವ ರಿಸ್ಕ್ ತೆಗೆದುಕೊಳ್ಳಬಹುದು. ಕಾಡಿನಿಂದ ಕಾಡಂಚಿನಲ್ಲಿರುವ ಊರುಗಳಿಗೆ ಬಂದು ಮಂಗಗಳು ಸಾಯುತ್ತಿರುವುದರಿಂದ ಈ ಕಾಯಿಲೆಯ ಬಗ್ಗೆ ಹೆದರಿಕೆ ಹೆಚ್ಚಾಗುತ್ತಿದೆ. ಮರಣ ಹೊಂದಿರುವ ಮಂಗಗಳ ಅಂಗಾಗಳನ್ನು ಸೀಝ್ ಮಾಡಿ ಶಿವಮೊಗ್ಗದ ವೈರಸ್ ಡಯಾಗ್ನಸೀಸ್ ಲ್ಯಾಬ್ ಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ಮೊದಲ ಹಂತದಲ್ಲಿ ಕಾಯಿಲೆ ಧೃಢಪಟ್ಟರೆ ಎರಡನೇ ರೌಂಡ್ ಪುಣೆಯ ವಿಡಿಎಲ್ ಗೆ ತೆಗೆದುಕೊಂಡು ಹೋಗುತ್ತದೆ. ದೇವರ ದಯೆಯಿಂದ ಈ ಕಾಯಿಲೆ ಸದ್ಯ ಯಾರನ್ನು ಬಲಿ ತೆಗೆದುಕೊಂಡಿಲ್ಲ. ನಗರದಲ್ಲಿ ವಾಸಿಸುವ ಜನರಿಗೆ ಮಂಗನ ಕಾಯಿಲೆ ಬರುವ ಸಾಧ್ಯತೆ ಇಲ್ಲ. ಯಾಕೆಂದರೆ ವೈರಸ್ ಇರುವ ಉಣ್ಣಿಗಳು ಕಾಡಿನಿಂದ ಹೊರಗೆ ತುಂಬಾ ದೂರ ಸಂಚರಿಸಲಾರವು. ಹಾಗಂತ ಕಾಡಿನೊಳಗೆ ಬಂದರೆ ಬಿಡಲಾರವು. ಯಾಕೆಂದರೆ ಅವುಗಳಿಗೆ ಮನುಷ್ಯನ ರಕ್ತ ಇಷ್ಟ. ಮಂಗನ ಕಾಯಿಲೆ ಬಂದಿರುವ ವ್ಯಕ್ತಿಯಿಂದ ಕಾಯಿಲೆ ಇನ್ನೊಬ್ಬರಿಗೆ ಹರಡುವುದಿಲ್ಲ. ಕಾಡಿನಲ್ಲಿಯೇ ಕೆಲಸ ಮಾಡುವ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಳಿಗ್ಗೆ ಮತ್ತು ಸಂಜೆ ಬಿಸಿನೀರಿನ ಸ್ನಾನ ಮಾಡಿ ಉಟ್ಟ ಬಟ್ಟೆಗಳನ್ನು ಬಿಸಿನೀರಿನಲ್ಲಿ ಒಗೆಯುವುದು ಒಳ್ಳೆಯದು. ಯಾವುದಕ್ಕೂ ನಿಮ್ಮ ಎಚ್ಚರಿಕೆಯಲ್ಲಿಯೇ ನೀವು ಇರುವುದು ಒಳ್ಳೆಯದು. ಸದ್ಯ ಕಾಡೊಳಗೆ ಪ್ರವೇಶ ಬೇಡಾ!�
Leave A Reply