ಚಿನ್ನದ ಮೊಟ್ಟೆ ಇಡುವ ಕಾಂಕ್ರೀಟ್ ಕಟ್ಟಿಂಗ್!!
ಮಂಗಳೂರು ನಗರದಲ್ಲಿ ಎಲ್ಲಾ ಕಡೆ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಲಾಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯ ಹೆಚ್ಚಿನ ಸದಸ್ಯರು ಸ್ಪರ್ಧೆಗೆ ಬಿದ್ದವರಂತೆ ತಮ್ಮ ವಾರ್ಡಿನ ಒಳರಸ್ತೆಗಳನ್ನು ಕೂಡ ಕಾಂಕ್ರೀಟಿಕರಣ ಮಾಡಿಸುತ್ತಿದ್ದಾರೆ. ಒಂದು ಚುನಾವಣೆಗೆ ತಮಗೆ ಸೆಪ್ಟೆಂಬರ್ ನಲ್ಲಿ ಮೈಲೇಜ್ ಸಿಗಲಿ ಎನ್ನುವ ದುರಾಸೆ. ಮತ್ತೊಂದೆಡೆ ಕಮೀಷನ್ ಚೆನ್ನಾಗಿ ಸಿಗುತ್ತದೆ. ಆದರೆ ಜನರು ತಮ್ಮ ಕಾರ್ಪೋರೇಟರ್ ಗಳ ಕೆಲಸ ಕಂಡು ಖುಷಿಪಡುತ್ತಿದ್ದಾರೆ. ಮನಪಾ ಸದಸ್ಯರು ಕೂಡ ಕಮೀಷನ್ ಸಿಗುವ ಖುಷಿಯಲ್ಲಿ ಕಾಂಕ್ರೀಟ್ ರಸ್ತೆಗಳಿಗೆ ಜೈ ಎನ್ನುತ್ತಿದ್ದಾರೆ. ಆದರೆ ಯಾರೂ ಕೂಡ ಕಾಂಕ್ರೀಟ್ ಹಾಕುವ ಯೋಚನೆ ಮಾಡುತ್ತಿದ್ದಾರೆ ವಿನ: ಅದರ ಕೆಳಗೆ ಇರುವ ನೀರಿನ ಪೈಪು, ಒಳಚರಂಡಿ ಪೈಪುಗಳ ಬಗ್ಗೆ ಯೋಚಿಸುವುದೇ ಇಲ್ಲ. ಇದರಿಂದ ಏನಾಗುತ್ತದೆ ಎಂದರೆ ರಸ್ತೆಯಲ್ಲಿ ಕಾಂಕ್ರೀಟಿಕರಣ ಆದ ನಂತರ ಅದರ ಕೆಳಗೆ ಇರುವ ನೀರಿನ ಪೈಪು ತೂತಾಗಿ ನೀರು ಲೀಕ್ ಆಗುತ್ತಾ ಇರುತ್ತದೆ. ತಕ್ಷಣ ಪಾಲಿಕೆಯವರು ಎಚ್ಚೆತ್ತುಗೊಳ್ಳುತ್ತಾರೆ. ಕೇಕ್ ಕಟ್ ಮಾಡಿದ ಹಾಗೆ ಅದೇ ಕಾಂಕ್ರೀಟ್ ರಸ್ತೆಯನ್ನು ಕಟ್ ಮಾಡುತ್ತಾರೆ. ಅದನ್ನು ನೋಡುವಾಗಲೇ ಹೊಟ್ಟೆ ಚುರ್ ಎನ್ನುತ್ತದೆ. ಇತ್ತೀಚೆಗಷ್ಟೇ ಹಾಕಿದ ಕಾಂಕ್ರೀಟ್ ರಸ್ತೆಯನ್ನು ಇವರು ಕೇಕ್ ಕಟ್ ಮಾಡುವಂತೆ ಮಾಡುವಾಗ ಕಾಂಕ್ರೀಟ್ ರಸ್ತೆ ಕೂಡ ಧೀರ್ಘ ಬಾಳಿಕೆ ಬರುವುದು ನಿಂತು ಹೋಗುತ್ತದೆ. ಇದನ್ನು ಈ ಹಿಂದೆ ಒಮ್ಮೆ ಹೇಳಿದ್ದೆ. ಆದರೆ ಇತ್ತೀಚೆಗೆ ನಿರಂತರವಾಗಿ ಎಲ್ಲ ಕಡೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ ಆಗುತ್ತಿರುವಾಗ ನನ್ನ ಕಳಕಳಿ ಮನಪಾ ಸದಸ್ಯರುಗಳಿಗೆ ಏನೆಂದರೆ ದಯವಿಟ್ಟು ಕಾಂಕ್ರೀಟ್ ರಸ್ತೆ ಆದ ನಂತರ ಅದರ ಕೆಳಗಿರುವ ನೀರಿನ ಪೈಪುಗಳನ್ನು ಅಲ್ಲಿಯೇ ಬಿಟ್ಟು ರಸ್ತೆಯ ಎರಡು ಸೈಡ್ ಗಳಲ್ಲಿ ಹೊಸದಾಗಿ ನೀರಿನ ಪೈಪುಗಳನ್ನು ಅಳವಡಿಸುವುದು ಒಳ್ಳೆಯದು. ಹಾಗೇ ಒಳಚರಂಡಿ ವ್ಯವಸ್ಥೆ ಕೂಡ ಮಾಡಿಬಿಡಬೇಕು. ಹಿಂದೆ ಒಲ್ಡ್ ಸ್ಟೋನ್ ವೈಯರ್ ಗುಣಮಟ್ಟದ ಒಳಚರಂಡಿ ಪೈಪುಗಳು ಇದ್ದವು. ಅವು 1969 ಕಾಲಕ್ಕೆ ಹಾಕಿದವು. ಈಗ ಮಂಗಳೂರು ಬೆಳೆದಿದೆ. ಅದೇ ಪೈಪುಗಳು ಈಗ ಅಲ್ಲಲ್ಲಿ ಒಡೆದಿರುತ್ತವೆ. ಅದರಿಂದ ಆ ತ್ಯಾಜ್ಯಗಳು ಕೂಡ ಮಂಗಳೂರಿನ ಕುಡಿಯುವ ನೀರಿನ ಬಾವಿಗಳನ್ನು ಸೇರುತ್ತಿವೆ. ಆದ್ದರಿಂದ ಮಂಗಳೂರಿನ 90% ಬಾವಿಗಳು ಈಗಾಗಲೇ ಹಾಳಾಗಿವೆ. ಅದನ್ನು ಕೂಡ ನೋಡಿ ಎಲ್ಲೆಲ್ಲಿ ಒಳಚರಂಡಿಗಳು ಹಾಳಾಗಿವೆಯೋ ಅಲ್ಲೆಲ್ಲ ಪಿವಿಸಿ ಪೈಪುಗಳನ್ನು ಜೋಡಿಸಿ ಬಾವಿಗಳು ಹಾಳಾಗುವುದು ತಪ್ಪಿಸಬೇಕು.
ಎಲ್ಲಾ ಕಡೆ ಕಾಂಕ್ರೀಟ್ ರಸ್ತೆ, ಅಡಿಯಲ್ಲಿರುವ ನೀರಿನ ಪೈಪ್, ಡ್ರೈನೇಜ್ ಅಯೋಮಯ…
ಇನ್ನು ಕಾಂಕ್ರೀಟ್ ರಸ್ತೆಗಳನ್ನು ನಮ್ಮ ಪಾಲಿಕೆಯವರು ಆಗಾಗ ತುಂಡರಿಸುತ್ತಾರಲ್ಲ. ಅದರಿಂದ ಕಳೆದ 15 ವರ್ಷಗಳಲ್ಲಿ ನಮ್ಮ ಪಾಲಿಕೆಗೆ ಆದ ನಷ್ಟ ಸಣ್ಣದಲ್ಲ. ಏಕೆಂದರೆ ಮಂಗಳೂರಿನ ರಸ್ತೆಗಳು ಮೊದಲು ಕಾಂಕ್ರೀಟ್ ಕಂಡು ಕನಿಷ್ಟ ಹದಿನೈದು ವರ್ಷಗಳಾಗಿವೆ. ಪಾಲಿಕೆಗೆ ಕಾಂಕ್ರೀಟ್ ಹಾಕುವುದು, ಒಡೆಯುವುದು ಅಭ್ಯಾಸವಾಗಿ ಬಿಟ್ಟಿದೆ. ಆದ್ದರಿಂದ ಎಲ್ಲೋ ಒಂದು ಕಡೆ ಕಾಂಕ್ರೀಟ್ ರಸ್ತೆಗಳನ್ನು ಹಾಕುವಾಗಲೇ ಇದು ಚಿನ್ನದ ಮೊಟ್ಟೆ ಇಡುವ ಕೋಳಿ ಎನ್ನುವುದು ಪಾಲಿಕೆಯವರಿಗೆ ಪಕ್ಕ ಆಗಿರುತ್ತದೆ. ಪ್ರತಿ ಬಾರಿ ಒಡೆಯುವಾಗಲೂ ಯಾರ್ಯಾರಿಗೆ ಎಷ್ಟೆಷ್ಟು ಹೋಗಬೇಕೋ ಅಷ್ಟು ಕಮೀಷನ್ ಹೋಗುತ್ತದೆ. ಆದರೆ ನಷ್ಟ ನಮಗೆ. 2017-18 ರಲ್ಲಿ ಕಾಂಕ್ರೀಟ್ ತುಂಡು ಮಾಡಲು ನಮ್ಮ ಪಾಲಿಕೆ ಖರ್ಚು ಮಾಡಿದ ಹಣ 42 ಲಕ್ಷದ 93 ಸಾವಿರದ ಎಂಟುನೂರ ತೊಂಭತ್ತ ಏಳು ರೂಪಾಯಿ. ಹಾಗೆ 2018-19 ರಂದು ಇಲ್ಲಿಯ ತನಕ ಕೇವಲ ಬಿಲ್ ಆದ ಮೊತ್ತವೇ ಹದಿನಾರು ಲಕ್ಷದ ಇಪ್ಪತ್ತು ಸಾವಿರದ ಮುನ್ನೂರ ಎಂಭತ್ತ ಐದು ರೂಪಾಯಿ. ಕೇವಲ ಎರಡು ವರ್ಷಗಳಲ್ಲಿ ಕೇವಲ ಕಾಂಕ್ರೀಟ್ ಕಟ್ ಮಾಡಲು ಎಪ್ಪತ್ತು ಲಕ್ಷ ರೂಪಾಯಿ ಪೋಲಾಗಿದೆ ಎಂದರೆ ಹದಿನೈದು ವರ್ಷಗಳಲ್ಲಿ ಎಷ್ಟಾಗಿರಬಹುದು.!!
Leave A Reply