ದಂಡದ ಮೊತ್ತ ಸರಿಯಿದೆ. ಕಡಿಮೆ ಮಾಡಿದರೆ ಉದ್ದೇಶ ಫೇಲ್ ಆಗುತ್ತದೆ!!
ನೋಪಾರ್ಕಿಂಗ್ ನಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮೂಲಕ ಎತ್ತಾಕಿಕೊಂಡು ಹೋಗುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ಬಗ್ಗೆ ಮೊನ್ನೆಯ ಶನಿವಾರದ ನನ್ನ ಹಿಂದಿನ ಜಾಗೃತ ಅಂಕಣದಲ್ಲಿ ಬರೆದಿದ್ದೆ. ಅದನ್ನು ಈಗ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ನೋಪಾರ್ಕಿಂಗ್ ನಲ್ಲಿ ನಿಲ್ಲಿಸುವ ವಾಹನಗಳಲ್ಲಿ ಟ್ರೋಯಿಂಗ್ ಮೂಲಕ ಎತ್ತಾಕಿಕೊಂಡು ಹೋಗುವ ವಾಹನಗಳನ್ನು ಬಿಡಿಸುವಾಗ ದ್ವಿಚಕ್ರ ವಾಹನಗಳಿಗೆ 750 ರೂಪಾಯಿ ಮತ್ತು ಕಾರುಗಳಿಗೆ 1100 ರೂಪಾಯಿ ದಂಡವನ್ನು ವಿಧಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಕೇಳಿಬರುತ್ತಿದೆ. ದಂಡದ ಮೊತ್ತದ ಹೆಚ್ಚಾಯಿತು ಎನ್ನುವುದು ಅವರ ಕೂಗು. ಆದರೆ ನಾನು ಇದನ್ನು ಒಪ್ಪುವುದಿಲ್ಲ. ದಂಡದ ಮೊತ್ತ ಕಡಿಮೆ ಆದಷ್ಟು ಅದರ ಬಿಸಿ ಕಡಿಮೆಯಾಗುತ್ತದೆ. ಬಿಸಿ ಕಡಿಮೆಯಾದರೆ ಅದರ ಉದ್ದೇಶ ಇಳಿಯುತ್ತದೆ. ಉದ್ದೇಶ ಫೇಲ್ ಆದರೆ ಅದು ಕಾಟಾಚಾರಕ್ಕೆ ಮಾಡಿದ್ದು ಎಂದು ಆಗುತ್ತದೆ. ಕಾಟಾಚಾರಕ್ಕೆ ಮಾಡಿದರೆ ಏನೂ ಉಪಯೋಗವಿಲ್ಲ. ಅದಕ್ಕೆ ನಾನು ಹೇಳುವುದು ತಪ್ಪು ಮಾಡಿದವನಿಗೆ ತಾನೇ ಹೆದರಿಕೆ.
ಎಲ್ಲೋ ಚಿವುಟಿದರೆ ಎಲ್ಲಿಯೋ ನೋವಾಗುವುದು ಎಂದರೆ ಇದೇ..
ಯಾರು ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸುತ್ತಿದ್ದರೋ ಅವರಿಗೆ ಇನ್ನು ಒಂದಿಷ್ಟು ಬಿಸಿ ಮುಟ್ಟಲಿದೆ. ಅಂತವರೇ ಈಗ ಸ್ಕೂಟರ್, ಬೈಕ್ ಗೆ 750 ರೂಪಾಯಿ ಮತ್ತು ಕಾರಿಗೆ 1100 ರೂಪಾಯಿ ದಂಡ ಜಾಸ್ತಿಯಾಯಿತು ಎನ್ನುತ್ತಿದ್ದಾರೆ. ಹಾಗಂತ ಎಲ್ಲರದ್ದೂ ಕೇಳುತ್ತಾ ಹೋದರೆ ಸ್ಕೂಟರ್, ಬೈಕ್ ಗೆ ನೂರು ರೂಪಾಯಿ, ಕಾರಿಗೆ 200 ರೂಪಾಯಿ ಇಡಿ ಎಂದು ಅಭಿಪ್ರಾಯ ಬರಬಹುದು. ಹಾಗಂತ ನೂರು, ಇನ್ನೂರು ಇಟ್ಟರೆ ಅದು ಇವತ್ತಿನ ದಿನಗಳಲ್ಲಿ ಕ್ಯಾರೇ ಇಲ್ಲ. ಅದರಿಂದ ಯಾರೂ ಈ ಯೋಜನೆಯ ಬಗ್ಗೆ ಟೆನ್ಷನ್ ಮಾಡುವುದಿಲ್ಲ. ಆ ನಿಟ್ಟಿನಲ್ಲಿ ಈಗ ಇರುವ ದಂಡ ಮೇಲ್ನೋಟಕ್ಕೆ ಹೆಚ್ಚು ಎಂದು ಎನಿಸಿದರೂ ನೂರಕ್ಕೆ ನೂರು ಸರಿ ಇದೆ. ಹೀಗೆ ಮಾಡಿದರೆ ಏನು ಉಪಯೋಗ ಎಂದರೆ ಪಾರ್ಕಿಂಗ್ ಇಲ್ಲದ ಕಡೆ ವಾಹನಗಳ ಮಾಲೀಕರು ಶಾಪಿಂಗ್ ಅಥವಾ ಏನಾದರೂ ಖರೀದಿಗೆ ಹೋಗುವುದೇ ಇಲ್ಲ. ಆಗ ಅಂತಹ ಮಳಿಗೆಗಳ ವ್ಯಾಪಾರ ಕಡಿಮೆಯಾಗುತ್ತದೆ. ಇದರಿಂದ ಟೆನ್ಷನ್ ಆದ ಅಂಗಡಿಯ ಓನರ್ ಗಳು ಅವರು ತಮ್ಮ ಮಳಿಗೆಗಳಲ್ಲಿ ಪಾರ್ಕಿಂಗ್ ಗೆ ಜಾಗವನ್ನು ನಿಗದಿಗೊಳಿಸುತ್ತಾರೆ. ಅದರಿಂದ ಆಟೋಮೇಟಿಕ್ ಆಗಿ ಪಾರ್ಕಿಂಗ್ ಸಮಸ್ಯೆ ಕಡಿಮೆಯಾಗುವತ್ತ ಸಾಗಲಿದೆ. ಎಲ್ಲೋ ಚಿವುಟಿದರೆ ಎಲ್ಲಿಯೋ ನೋವಾಗುವುದು ಎಂದರೆ ಇದೇ.
ಪಾರ್ಕಿಂಗ್ ಇಲ್ಲದ ಕಟ್ಟಡಗಳ ಪಟ್ಟಿ ರೆಡಿ ಇದೆ…
ಇನ್ನು ಇವತ್ತಿನ ದಿನಪತ್ರಿಕೆಯಲ್ಲಿ ಟ್ರಾಫಿಕ್ ಎಸಿಪಿ ಮಂಜುನಾಥ ಶೆಟ್ಟಿಯವರ ಹೇಳಿಕೆ ಓದಿದೆ. ಪಾರ್ಕಿಂಗ್ ಗೆ ಕಾದಿರಿಸಿದ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿರುವ ತಾಣಗಳನ್ನು ಗುರುತಿಸಿ ಆ ಪಟ್ಟಿಯನ್ನು ಪಾಲಿಕೆಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಒಳ್ಳೆಯ ನಿರ್ಧಾರ. ಈಗ ಪಾಲಿಕೆಯಲ್ಲಿ ಮೇಯರ್ ಆಡಳಿತ ಇಲ್ಲ. ಜಿಲ್ಲಾಧಿಕಾರಿಗಳೇ ಪಾಲಿಕೆಯ ಆಡಳಿತಾಧಿಕಾರಿ. ಟ್ರಾಫಿಕ್ ಎಸಿಪಿಯವರ ಸಲಹೆಗಳನ್ನು, ಪೊಲೀಸ್ ಕಮೀಷನರ್ ಅವರ ಅಭಿಪ್ರಾಯಗಳನ್ನು ಪಡೆದು ಪೊಲೀಸ್ ಇಲಾಖೆ ಕೊಟ್ಟಿರುವ ಪಟ್ಟಿಯನ್ನು ಓದಿದರೆ ಮುಗಿಯಿತು. ನಂತರ ಜಿಲ್ಲಾಧಿಕಾರಿಗಳು ಫೀಲ್ಡಿಗೆ ಇಳಿದು ಎಲ್ಲೆಲ್ಲಿ ಪಾರ್ಕಿಂಗ್ ಗಾಗಿ ನಿಗದಿಗೊಳಿಸಿದ್ದ ಜಾಗದಲ್ಲಿ ಕೋಣೆ ಕಟ್ಟಿಸಿ ಆ ಕಟ್ಟಡ ಮಾಲೀಕರು ಬೇರೆಯವರಿಗೆ ಬಾಡಿಗೆಗೆ ಕೊಟ್ಟಿದ್ದಾರೋ ಅವರಿಗೆ ಎಚ್ಚರಿಕೆ ಕೊಟ್ಟು, ಕೇಳದಿದ್ದರೆ ತಾವೇ ಕೆಡವಲು ಸೂಚನೆ ಕೊಡುವುದು ಒಳ್ಳೆಯದು. ಜಿಲ್ಲಾಧಿಕಾರಿಗಳನ್ನು ತಡೆಯುವ ಶಕ್ತಿ ಮತ್ತು ಉತ್ಸಾಹ ಸದ್ಯಕ್ಕೆ ಯಾರಿಗೂ ಇದ್ದಂತೆ ಕಾಣುವುದಿಲ್ಲ. ಮುಂಚೆ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇದ್ದಾಗ ಕಾರ್ಪೋರೇಟರ್ ಗಳ ಇನ್ಫೂಯೆನ್ಸ್ ನಡೆಯುತ್ತಿತ್ತು. ಈಗ ಪಾಲಿಕೆಯಲ್ಲಿ ಮೇಯರ್, ಪಾಲಿಕೆ ಸದಸ್ಯರು ಇಲ್ಲದೆ ಇರುವುದರಿಂದ ಯಾರಿಗೂ ಶಿಫಾರಸ್ಸು ಮಾಡಿ ಯೋಜನೆ ಜಾರಿಗೆ ಬರದಂತೆ ತಡೆಯುವ ಉಮ್ಮೇದು ಇಲ್ಲ. ಅಷ್ಟಕ್ಕೂ ಯಾರಾದರೂ ಅನಧಿಕೃತ ಕಟ್ಟಡಗಳ ತೆರವು ತಡೆಯುವ ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ಅಡ್ಡಿ ಮಾಡಲು ಹೋದರೆ ಅವರ ಕುರಿತು ಇದೇ ಜಾಗೃತ ಅಂಕಣದಲ್ಲಿ ಬರೆದು ಅವರ ಮುಖವಾಡ ಕಳಚಲಾಗುವುದು. ಪಾರ್ಕಿಂಗ್ ಜಾಗದಲ್ಲಿ ಅಕ್ರಮ ಅಂಗಡಿಗಳನ್ನು ನಿರ್ಮಿಸುವವರು ಎಷ್ಟು ದೊಡ್ಡ ಅಪರಾಧಿಗಳೋ ಅವರಿಗೆ ಬೆಂಬಲ ಕೊಡುವ ಜನಪ್ರತಿನಿಧಿಗಳು ಕೂಡ ಅಷ್ಟೇ ದೊಡ್ಡ ಅಪರಾಧಿಗಳು. ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ!
Leave A Reply