ಎಸ್ ಡಿಪಿಐಯಿಂದ ಹೆದರಿಕೆ ಇಲ್ಲ ಎಂದಿರುವ ಖಾದರ್ ಆತ್ಮಾವಲೋಕನ ಮಾಡಿಕೊಳ್ಳಲಿ!!
ದಕ್ಷಿಣ ಕನ್ನಡ ಲೋಕಸಭಾ ಸ್ಥಾನಕ್ಕೆ ಎಸ್ ಡಿಪಿಐ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಇಲ್ಯಾಸ್ ತುಂಬೆ ಎನ್ನುವವರು ಎಸ್ ಡಿಪಿಐಯಿಂದ ಸ್ಪರ್ಧಿಸಲಿದ್ದಾರೆ. ಈ ವಿಷಯದಲ್ಲಿ ಸುದ್ದಿಗಾರರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅವರ ಅಭಿಪ್ರಾಯ ಕೇಳಿದ್ದಾರೆ. ಅದಕ್ಕೆ ಯುಟಿ ಖಾದರ್, ಎಸ್ ಡಿಪಿಐ ಸ್ಪಧರ್ೆಯಿಂದ ನಮಗೆನೂ ಹೆದರಿಕೆ ಇಲ್ಲ, ಅವರಿಗೆ ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ನಿಲ್ಲುವ ಅವಕಾಶ ಇದೆ. ಇದೆಲ್ಲ ಬಿಜೆಪಿಗೆ ಲಾಭವಾಗಲಿದೆ. ಎಸ್ ಡಿಪಿಐಯನ್ನು ನಿಲ್ಲಿಸುವುದು ಬಿಜೆಪಿಯವರದ್ದೇ ಪ್ಲ್ಯಾನ್ ಎನ್ನುವ ಅರ್ಥದ ಮಾತುಗಳನ್ನು ಆಡಿದ್ದಾರೆ. ಖಾದರ್ ಹೀಗೆ ಬಹಿರಂಗವಾಗಿ ನಮಗೇನೂ ಹೆದರಿಕೆ ಇಲ್ಲ ಎನ್ನುತ್ತಿರುವುದನ್ನು ಕೇಳಿ ಎಸ್ ಡಿಪಿಐ ನಾಯಕರು ತಮ್ಮ ಕಚೇರಿಯಲ್ಲಿ ಕುಳಿತು ಜೋರಾಗಿ ನಗುತ್ತಿದ್ದರಂತೆ. ನೀವು ಯಾವುದಾದರೂ ಎಸ್ ಡಿಪಿಐ ನಾಯಕರನ್ನು ವೈಯಕ್ತಿಕವಾಗಿ ಕೇಳಿ ನೋಡಿ. ನಿಜಕ್ಕೂ ನಿಮ್ಮ ಸ್ಪರ್ಧೇಯಿಂದ ಕಾಂಗ್ರೆಸ್ ನಾಯಕರಿಗೆ ಏನೂ ತೊಂದರೆ ಇಲ್ವಾ? ಅದಕ್ಕೆ ಅವರ ಉತ್ತರ ಸ್ಪಷ್ಟವಾಗಿರುತ್ತದೆ.
ಎಸ್ ಡಿಪಿಐ ಉತ್ತರ ಗೊತ್ತಾ?
ಒಂದು ವೇಳೆ ನಮ್ಮಿಂದ ತೊಂದರೆ ಇಲ್ಲದಿದ್ದರೆ ಮೇಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಯಾಕೆ ನಮಗೆ ದಂಬಾಲು ಬಿದ್ದು ನಮ್ಮ ಅಭ್ಯರ್ಥಿನ್ನು ಹಿಂದಕ್ಕೆ ಪಡೆಯುವಂತೆ ಮಾಡಿದ್ರು. ಅವರಿಗೆ ಹೆದರಿಕೆ ಇಲ್ಲದಿದ್ದರೆ ನಮ್ಮ ಸ್ಪರ್ಧೇಗೆ ಅವರು ಅಷ್ಟು ತಲೆಕೆಡಿಸುವ ಅಗತ್ಯ ಏನಿದೆ ಎಂದು ಕೇಳುತ್ತಾರೆ. ಅಷ್ಟೇ ಅಲ್ಲದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯುಟಿ ಖಾದರ್ ಉಳ್ಳಾಲದಲ್ಲಿ ಎಸ್ ಡಿಪಿಐ ಅಭ್ಯರ್ಥಿ ಹಾಕದ ಹಾಗೆ ನೋಡಿಕೊಂಡದ್ದು ಯಾಕೆ ಎಂದು ಪ್ರಶ್ನಿಸುತ್ತಾರೆ. ನಾವು ನಿಜಕ್ಕೂ ಅಭ್ಯರ್ಥಿ ಹಾಕಿದ್ರೆ ಖಾದರ್ ಗೆಲ್ಲುವುದು ಸಾಧ್ಯವಿತ್ತಾ ಎನ್ನುವುದು ಎಸ್ ಡಿಪಿಐ ನಾಯಕರ ಪ್ರಶ್ನೆ.
ಖಾದರ್ ಆಗಲಿ, ರಮಾನಾಥ ರೈ ಅವರಾಗಲೀ ಮಾಧ್ಯಮದವರ ಎದುರು ತಮಗೆ ಎಸ್ ಡಿಪಿಐಯಿಂದ ಯಾವುದೇ ಹೆದರಿಕೆ ಇಲ್ಲ ಎಂದೇ ಹೇಳಬೇಕು. ಯಾಕೆಂದರೆ ಹೆದರಿಕೆ ಇದೆ ಎಂದು ಹೇಳಲು ಆಗುವುದಿಲ್ಲ. ಯಾಕೆಂದರೆ ರಾಜಕೀಯದಲ್ಲಿ ಯಾವ ಪಕ್ಷದವರೂ ಕೂಡ ಎದುರಾಳಿಯ ಸ್ಪರ್ಧೇಯಿಂದ ಹೆದರಿಕೆಯಾಗುತ್ತದೆ ಎಂದು ಹೇಳುವುದಿಲ್ಲ. ಅಷ್ಟಕ್ಕೂ ಎಸ್ ಡಿಪಿಐ ಈಗಾಗಲೇ ಪಾಲಿಕೆಯಲ್ಲಿ ಕಳೆದ ಬಾರಿ ಖಾತೆ ತೆರೆದಿದೆ. ಹಾಗೇ ಜಿಲ್ಲೆಯ ಕೆಲವು ಗ್ರಾಮ ಪಂಚಾಯತ್ ನಲ್ಲಿ ಅದರ ಸದಸ್ಯರಿದ್ದಾರೆ. ಕರ್ಮಟ ಮುಸಲ್ಮಾನರು ಕಾಂಗ್ರೆಸ್ಸಿಗೆ ಮತ ಹಾಕಲು ಮನಸ್ಸಿಲ್ಲದೆ, ಬಿಜೆಪಿಗೆ ಹಾಕಲು ಆತ್ಮಸಾಕ್ಷಿ ಒಪ್ಪದೇ ಎಸ್ ಡಿಪಿಐಗೆ ಮತ ಹಾಕುತ್ತಿದ್ದಾರೆ. ಹಾಗಂತ ಎಸ್ ಡಿಪಿಐ ಭಾರತೀಯ ಜನತಾ ಪಾರ್ಟಿಯವರೊಂದಿಗೆ ಒಳ ಒಪ್ಪಂದ ಮಾಡಿ ಅಭ್ಯರ್ಥಿಯನ್ನು ನಿಲ್ಲಿಸುತ್ತದೆ ಎಂದು ಹೇಳಲು ಆಗುವುದಿಲ್ಲ. ಯಾಕೆಂದರೆ ಕಳೆದ ಬಾರಿ ಬಂಟ್ವಾಳದಲ್ಲಿ ಎಸ್ ಡಿಪಿಐ ತನ್ನ ಅಭ್ಯರ್ಥಿಯನ್ನು ರಮಾನಾಥ ರೈ ಅವರ ಎದುರು ನಿಲ್ಲಿಸಿತ್ತು. ಕೊನೆಯ ಕ್ಷಣದಲ್ಲಿ ರೈ ವಿರುದ್ಧ ತನ್ನ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಅದಕ್ಕೆ ಆವತ್ತು ಎಸ್ ಡಿಪಿಐ ಅಭ್ಯರ್ಥಿ ಕೊಟ್ಟ ಸಮಜಾಯಿಷಿಕೆ ಏನೆಂದರೆ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವುದಕ್ಕೆ ಮತ್ತು ಜಾತ್ಯಾತೀತ ಮತಗಳು ಒಡೆಯುವುದನ್ನು ತಡೆಯುವುದಕ್ಕಾಗಿ ನಾವು ನಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಒಳಗೆ ಯಾವ ಒಪ್ಪಂದ ನಡೆದಿತ್ತೋ, ಕೊನೆಗೂ ಎಸ್ ಡಿಪಿಐ ತನ್ನ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆದುಕೊಂಡರೂ ಬಂಟ್ವಾಳದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಗೆಲ್ಲುವುದನ್ನು ತಡೆಯಲು ಆಗಲಿಲ್ಲ. ಇದರಿಂದ ಒಂದು ವಿಷಯ ಸ್ಪಷ್ಟವಾಯಿತು. ಅದು ನಿಮಗೆ ಅರ್ಥವಾಗಿರಬಹುದು. ಹಾಗಾದರೆ ಆವತ್ತು ಎಸ್ ಡಿಪಿಐ ನಿಂತರೆ ಯಾರಿಗೆ ಲಾಭ? ಅಥವಾ ಯಾರಿಗೆ ನಷ್ಟ?
ಎಸ್ ಡಿಪಿಐ ಯಾರನ್ನೂ ಗೆಲ್ಲಿಸಲು ಆಗಲ್ಲ, ಹಾಗೆ ಸೋಲಿಸಲೂ ಆಗಲ್ಲ..
ಹೇಗೆ ಮುಸ್ಲಿಮರು ಬಿಜೆಪಿಯನ್ನು ಕೋಮುವಾದಿ ಪಕ್ಷ ಎನ್ನುತ್ತಾರೋ ಹಾಗೆ ಹಿಂದೂಗಳು ಎಸ್ ಡಿಪಿಐಯನ್ನು ಕೋಮುವಾದಿ ಪಕ್ಷ ಎನ್ನುತ್ತಾರೆ. ಪ್ರತಿಬಾರಿ ಎಸ್ ಡಿಪಿಐ ಲೋಕಸಭೆ, ವಿಧಾನಸಭೆಯಲ್ಲಿ ಸ್ಪರ್ಧೆ ಕೊಡುತ್ತದೆ. ಗೆಲ್ಲಲು ಆಗಲ್ಲ ಎಂದು ಗೊತ್ತಿರುತ್ತದೆ. ಆದರೂ ಕಾಂಗ್ರೆಸ್ಸಿಗರು ಹೆದರುತ್ತಾರೆ. ಬಿಜೆಪಿಯವರು ಹೆದರಲ್ಲ. ಕಾಂಗ್ರೆಸ್ಸಿಗರು ತಮ್ಮ ಮತ ಬ್ಯಾಂಕ್ ಗೆ ಎಸ್ ಡಿಪಿಐಯಿಂದ ತೊಂದರೆ ಆಗುತ್ತದೆ ಎಂದು ಎಸ್ ಡಿಪಿಐಯಿಂದ ಅಭ್ಯರ್ಥಿಯನ್ನು ವಿತ್ ಡ್ರಾ ಮಾಡಿಸುತ್ತಾರೆ. ಆದರೂ ಬಿಜೆಪಿ ಗೆಲ್ಲುತ್ತದೆ. ಈ ಬಾರಿಯೂ ಹಾಗೆ ಆಗುತ್ತದಾ? ಅಷ್ಟಕ್ಕೂ ಎಸ್ ಡಿಪಿಐಯಿಂದ ಹೆದರಿಕೆ ಇಲ್ಲ ಎಂದಿರುವುದು ಖಾದರ್. ಅವರೇನೂ ಲೋಕಸಭಾ ಅಭ್ಯರ್ಥಿ ಅಲ್ಲವಲ್ಲ. ಹೆದರಿಕೆ ಹುಟ್ಟಬೇಕಿರುವುದು ರೈ ಅವರಿಗಾ? ಕಾದು ನೋಡಬೇಕು!
Leave A Reply