ನಿಯಮಗಳೆಲ್ಲವೂ ಮೀರಿ ಹೋಗಿರುವಾಗ ನೀರು ಉಳಿಸಪ್ಪ ಎಂದು ದೇವರಿಗೆ ಬೇಡುವುದು ಮಾತ್ರ ಬಾಕಿ!!
ನಾನು ಎರಡು ಅಂಕಣಗಳ ಹಿಂದೆ ಪ್ರಾರಂಭದಲ್ಲಿಯೇ ಒಂದು ವಾಕ್ಯ ಬರೆದಿದ್ದೆ. ಅದೇನೆಂದರೆ ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವ ಗಾದೆಯಂತೆ ಮಂಗಳೂರು ಮಹಾನಗರ ಪಾಲಿಕೆಯವರು ವರ್ತಿಸುತ್ತಿದ್ದಾರೆ ಎಂದು ಬರೆದಿದ್ದೆ. ಅದನ್ನು ಇವತ್ತು ಮತ್ತೆ ಬರೆಯಬೇಕಿದೆ. ಅಂತಹ ಒಂದು ಘನಂದಾರಿ ಕೆಲಸವನ್ನು ಪಾಲಿಕೆಯವರು ಮಾಡಿದ್ದಾರೆ. ಅದೇನು ಎನ್ನುವುದೇ ಇವತ್ತಿನ ಜಾಗೃತ ಅಂಕಣದ ವಿಶೇಷ.
ತುಂಬೆ ವೆಂಟೆಂಡ್ ಡ್ಯಾಂನಲ್ಲಿ ದಿನಕ್ಕೆ 21 ಎಂಜಿಡಿ ನೀರು ಪಂಪ್ ಮಾಡಲಾಗುತ್ತದೆ. ಅದರಲ್ಲಿ 19 ಎಂಜಿಡಿ ನೀರು ನಮಗೆ ಸಾಕಾಗುತ್ತದೆ. ಹೇಗೆ ಎನ್ನುವುದನ್ನು ನಾನು ಮೊನ್ನೆಯ ಜಾಗೃತ ಅಂಕಣದಲ್ಲಿ ವಿವರಿಸಿದ್ದೇನೆ. ವಿಷಯ ಇರುವುದು ಅದಲ್ಲ. ತುಂಬೆಯಲ್ಲಿ ಪಂಪ್ ಆಗುವ ಹೆಚ್ಚುವರಿ ಎರಡು ಎಂಜಿಡಿ ನೀರು ಎಲ್ಲಿಗೆ ಹೋಗುತ್ತೆ ಎನ್ನುವುದು ಯಾರಿಗಾದರೂ ಗೊತ್ತಿದೆಯಾ ಎನ್ನುವ ಪ್ರಶ್ನೆಯನ್ನು ಕೂಡ ಎತ್ತಿದೆ. ನೀರು ಎಲ್ಲಿ ಪೋಲಾಗುತ್ತಿದೆ ಎನ್ನುವುದಕ್ಕೆ ಹಲವು ದಾರಿಗಳಿರಬಹುದು. ಅದರಲ್ಲಿ ಒಂದು ಕಾರಣ ಇವತ್ತು ಹೇಳುತ್ತಿದ್ದೇನೆ. ತುಂಬೆಯಿಂದ ಮಂಗಳೂರಿಗೆ ಬರುವ ನೀರು ಮಂಗಳೂರಿನ ಕೆಲವು ಕಡೆ ನಿರ್ಮಿಸಿರುವ ಬೃಹತ್ ಟ್ಯಾಂಕ್ ಗಳಲ್ಲಿ ಸಂಗ್ರಹವಾಗುತ್ತದೆ. ಅದರಲ್ಲಿ ಒಂದು ಟ್ಯಾಂಕ್ ಬೆಂದೂರ್ ವೆಲ್ ನಲ್ಲಿ ಇದೆ. ಹದಿನೈದು ದಿನಗಳ ಹಿಂದೆ ಆ ನೀರಿನ ಟಾಂಕಿಯನ್ನು ರಿಪೇರಿ ಮಾಡಲಾಗಿತ್ತು. ಏಕೆಂದರೆ ಅದರಲ್ಲಿ ಲಿಕೇಜ್ ಇತ್ತು. ಲಿಕೇಜ್ ಇದ್ರೆ ರಿಪೇರಿ ಮಾಡುವುದರಲ್ಲಿ ತಪ್ಪೇನು ಎಂದು ನೀವು ಕೇಳಬಹುದು. ವಿಷಯ ಇರುವುದು ರಿಪೇರಿ ಮಾಡಿದ್ದರಲ್ಲಿ ಅಲ್ಲ. ಲಿಕೇಜ್ ಏಳು ತಿಂಗಳ ಹಿಂದೆಯೇ ಇತ್ತು ಎನ್ನುವುದರಲ್ಲಿ. ಹಾಗಾದರೆ ಏಳು ತಿಂಗಳಿನಿಂದ ಎಷ್ಟು ನೀರು ಹೋಗುತ್ತಿತ್ತು ಎನ್ನುವುದು ನೀವು ಅರ್ಥ ಮಾಡಿಕೊಳ್ಳಿ. ಟ್ಯಾಂಕ್ ಗಳಲ್ಲಿ ರಂಧ್ರ ಇದ್ದು ಅದರಿಂದ ನೀರು ಏಳು ತಿಂಗಳುಗಳಿಂದ ಎಷ್ಟು ಹೋಗುತ್ತಿದೆ ಎನ್ನುವುದು ಪಾಲಿಕೆಯ ನೀರಿನ ವಿಭಾಗದವರಿಗೆ ಗೊತ್ತೆ ಇಲ್ಲ. ಅವರಿಗೆ ಗೊತ್ತಾಗುವಾಗ ನೀರು ತುಂಬಾ ಪೋಲಾಗಿ ಹೋಗಿತ್ತು. ಕೊನೆಗೆ ನಮ್ಮ ಪುಣ್ಯ. ಯಾರೋ ಆ ಟ್ಯಾಂಕ್ ರಿಪೇರಿ ಮಾಡಿಸುವ ಯೋಜನೆ ಹಾಕಿ ಸರಿ ಮಾಡಿದ್ದಾರೆ. ಅದರಿಂದ ನೀರು ಪೋಲಾಗುವುದು ನಿಂತಿದೆ. ಹಾಗಾದರೆ ಇಷ್ಟು ದಿನ ಎಷ್ಟು ಪ್ರಮಾಣದಲ್ಲಿ ನೀರು ಹೋಗ್ತಾ ಇತ್ತಲ್ಲ, ಅದನ್ನು ತಂದು ಕೊಡುವವರು ಯಾರು? ಒಂದು ವೇಳೆ ತಂದು ಕೊಡಲು ಆಗದಿದ್ದರೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ದಂಡ ಕೊಡಲು ತಯಾರಿದ್ದಾರಾ? ಈ ಪ್ರಶ್ನೆಗೆ ಉತ್ತರ ಬೇಕು. ಮಂಗಳೂರಿನಲ್ಲಿ ಎರಡೂ ಕ್ಷೇತ್ರಗಳ ಶಾಸಕರು ನೀರಿನ ಸಮಸ್ಯೆಯ ಬಗ್ಗೆ ಸಾಕಷ್ಟು ಟೆನ್ಷನ್ ಮಾಡುತ್ತಿರುವಾಗ ಇಷ್ಟು ತಿಂಗಳು ನೀರು ಪೋಲು ಆಗ್ತಾ ಇರಲು ಕಾರಣ ಯಾರು?
ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಲೈಸೆನ್ಸ್ ಕೊಡುವಾಗ ಮಳೆಕೊಯ್ಲು ಪ್ರಾಜೆಕ್ಟ್ ಅಳವಡಿಸಲೇಬೇಕು ಎನ್ನುವ ನಿಯಮ ಇದೆ. ಅದು ಲೈಸೆನ್ಸ್ ಪಡೆದುಕೊಂಡ ಎಷ್ಟು ಕಟ್ಟಡಗಳಲ್ಲಿ ಅಳವಡಿಕೆಯಾಗಿದೆ ಎನ್ನುವುದನ್ನು ಪಾಲಿಕೆಯ ಅಧಿಕಾರಿಗಳು ನೋಡಿದ್ದಾರಾ? ಇನ್ನು ಮಂಗಳೂರು ಮಹಾನಗರದಲ್ಲಿ ವರ್ಷಕ್ಕೆ ಎಷ್ಟೋ ಹೊಸ ಕಟ್ಟಡಗಳಿಗೆ ಗುದ್ದಲಿಪೂಜೆ ನಡೆಯುತ್ತಾ ಇರುತ್ತದೆ. ಪ್ರತಿ ಕಟ್ಟಡ ನಿರ್ಮಾಣವಾಗುವಾಗ ಆ ಜಾಗದಲ್ಲಿರುವ ಅಸಂಖ್ಯಾತ ಮರಗಳು ಧರೆಗೆ ಉರುಳುತ್ತವೆ. ನಿಯಮ ಏನೆಂದರೆ ಪ್ರತಿ ಕಟ್ಟಡ ನಿರ್ಮಾಣವಾಗುವಾಗ ಅಲ್ಲಿ ಕನಿಷ್ಟ ಎರಡು ಗಿಡಗಳನ್ನು ನೆಟ್ಟು ಅದು ಮರಗಳಾಗುವ ಹಾಗೆ ಕಟ್ಟಡಗಳ ಮಾಲೀಕರು ನೋಡಬೇಕು ಎನ್ನುವ ನಿಯಮ ಇದೆ. ಇವತ್ತಿನ ದಿನಗಳಲ್ಲಿ ಎಷ್ಟು ಕಟ್ಟಡಗಳ ಮಾಲೀಕರು ಗಿಡ ನೆಡುವ ಬಗ್ಗೆ ಆಸಕ್ತಿ ತೋರಿಸಿದ್ದಾರೆ ಎನ್ನುವುದನ್ನು ಪಾಲಿಕೆಯ ನಗರ ಯೋಜನಾ ಅಧಿಕಾರಿಗಳು ನೋಡಿದ್ದಾರಾ? ಇಲ್ಲ, ಯಾವ ಅಧಿಕಾರಿಯೂ ನೋಡುವುದಿಲ್ಲ. ಯಾಕೆಂದರೆ ಎಲ್ಲಾ ಅಧಿಕಾರಿಗಳು ಬಿಲ್ಡರ್ ಗಳ ಜೇಬಿನಲ್ಲಿ ಬೆಚ್ಚಗೆ ಮಲಗಿದ್ದಾರೆ. ಇನ್ನು ಅಧಿಕಾರಿಗಳ ಇನ್ನೊಂದು ನಿರ್ಲಕ್ಷ್ಯ. ಹೇಳಿ ಇವತ್ತಿನ ಜಾಗೃತ ಅಂಕಣವನ್ನು ಮುಗಿಸುತ್ತಿದ್ದೇನೆ. ಅದೇನೆಂದರೆ ಮಂಗಳೂರಿನಲ್ಲಿ ಒಂದು ಕಾಲದಲ್ಲಿ ಸಾಕಷ್ಟು ಮರಗಳಿದ್ದವು. ಅದರಿಂದ ಸಾಕಷ್ಟು ನೆರಳು ನಮಗೆಲ್ಲಾ ಸಿಗುತ್ತಿತ್ತು. ನಂತರ ಏನಾಯಿತು ಎಂದರೆ ರಸ್ತೆಗಳು ಅಗಲವಾಗುವ ಅನಿವಾರ್ಯತೆ ಉಂಟಾಯಿತು. ಅದರಿಂದ ಆಕಾಶದೆತ್ತರಕ್ಕೆ ಬೆಳೆದು ನಿಂತ ಮರಗಳನ್ನು ಕಡಿಯಲೇಬೇಕಾಯಿತು. ಯಾವಾಗ ಮರಗಳನ್ನು ಕಡಿಯುವಾಗ ಅರಣ್ಯ ಇಲಾಖೆ ಅನುಮತಿ ಕೊಟ್ಟಿತ್ತೋ ಆಗಲೇ ಒಂದು ಷರತ್ತು ಹಾಕಿತ್ತು. ಅದೇನೆಂದರೆ ಒಂದು ಮರ ಕಡಿದರೆ ಎರಡು ಗಿಡಗಳನ್ನು ನೆಡಬೇಕು. ಆದರೆ ಎಷ್ಟು ಗಿಡಗಳನ್ನು ಇಲ್ಲಿಯ ಪಾಲಿಕೆ ಅಧಿಕಾರಿಗಳು ನೆಟ್ಟಿದ್ದಾರೆ. ಒಟ್ಟಿನಲ್ಲಿ ಬಿಸಿಲು ಮಂಗಳೂರನ್ನು ಕಾದ ಕಾವಲಿ ಮಾಡಿದೆ. ನಮ್ಮ ಪಾಲಿಕೆ ಅಧಿಕಾರಿಗಳು ಕಾವಲಿಗೆ ಎಣ್ಣೆ ಸುರಿಯುತ್ತಿದ್ದಾರೆ.
Leave A Reply