ಹೊರಗೆ ಶೃಂಗಾರ, ಒಳಗೆ ಗೋಳಿಸೊಪ್ಪು ಎನ್ನುವ ಮಂಗಳೂರು ಮಿನಿವಿಧಾನಸೌಧ.!
ಮಂಗಳೂರಿನಲ್ಲಿ ಮಿನಿ ವಿಧಾನಸೌಧ ಎನ್ನುವ ಕಟ್ಟಡ ಇದೆ. ಇದನ್ನು ಕಟ್ಟಲು ಸ್ಕೆಚ್ ಹಾಕಿದ ಇಂಜಿನಿಯರ್, ಕಟ್ಟಿದ ಗುತ್ತಿಗೆದಾರರನ್ನು ಕರೆದು ಸನ್ಮಾನ ಮಾಡಬೇಕು. ಯಾಕೆಂದರೆ ತಲೆಯ ಒಳಗೆ ಮೆದುಳು ಇಲ್ಲದೆ ಹೋದರೂ ಪಾಪ ಅಷ್ಟಾದ್ರೂ ಕಟ್ಟಿದರಲ್ಲ ಎನ್ನುವ ಕಾರಣಕ್ಕೆ. ತಲೆಯ ಒಳಗೆ ಮೆದುಳು ಯಾಕೆ ಇಲ್ಲ ಎಂದು ಹೇಳುತ್ತಿದ್ದೇನೆ ಎಂದರೆ ಮಿನಿ ವಿಧಾನಸೌಧದ ಹೃದಯದಂತೆ ಇರಬೇಕಾಗಿದ್ದ ರೆಕಾರ್ಡ್ ರೂಂ ಅನ್ನೇ ಮಹಾನುಭಾವರು ಇಟ್ಟಿಲ್ಲ. ರೆಕಾರ್ಡ್ ರೂಂ ಇಲ್ಲದ ತಾಲೂಕು ಕಚೇರಿ ಎಂದರೆ ಮುಖ್ಯಮಂತ್ರಿಯೇ ಇಲ್ಲದ ರಾಜ್ಯದಂತೆ. ಮಿನಿ ವಿಧಾನಸೌಧ ಉದ್ಘಾಟನೆಗೊಳ್ಳುವಾಗ ರೆಕಾರ್ಡ್ ರೂಂ ಎಲ್ಲಿ ಎಂದು ಹುಡುಕಿದರೆ ಅದು ಇರಲೇ ಇಲ್ಲ. ಹಾಗಾದರೆ ಕಡತಗಳನ್ನು ಎಲ್ಲಿ ಇಡುವುದು ಎನ್ನುವ ವಿಷಯಕ್ಕೆ ಬಂದಾಗ ಆಗಿನ ಜಿಲ್ಲಾಧಿಕಾರಿಯಾಗಿದ್ದ ಎಬಿ ಇಬ್ರಾಹಿಂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಹಳೆಯ ತಾಲೂಕು ಕಚೇರಿಯ ರೆಕಾರ್ಡ್ ರೂಂನಲ್ಲಿ ಕಡತಗಳನ್ನು ಇಡಿಸಿದ್ದರು. ಮಿನಿ ವಿಧಾನಸೌಧದಲ್ಲಿ ಏನಾದರೂ ಕೆಲಸ ಆಗಬೇಕು ಎಂದು ಬರುವ ಸಾರ್ವಜನಿಕರ ಯಾವುದಾದರೂ ಕಡತ ಬೇಕಾದರೆ ಅಲ್ಲಿಂದ ಹಳೆಯ ತಾಲೂಕು ಕಚೇರಿಗೆ ಬರಬೇಕಿತ್ತು. ಅಲ್ಲಿಂದ ಬಂದು ಕಡತ ಹುಡುಕಿ ತೆಗೆದುಕೊಂಡು ಮತ್ತೆ ಮಿನಿ ವಿಧಾನಸೌಧಕ್ಕೆ ಹೋಗುವುದು ಎಂದರೆ ಅದೊಂದು ಹರಸಾಹಸ. ಈ ವಿಷಯ ಹೊರಗಿನ ಪ್ರಪಂಚಕ್ಕೆ ಗೊತ್ತಾಗಲು ತುಂಬಾ ದಿನ ಹಿಡಿಯಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಮರ್ಯಾದೆ ಉಳಿಸುವ ಅಗತ್ಯ ಜಿಲ್ಲಾಧಿಕಾರಿಯವರಿಗೆ ಇತ್ತು. ಅವರು ಏನು ಮಾಡಿದ್ದರು ಎಂದು ಮಿನಿ ವಿಧಾನಸೌಧದ ಬೆಸ್ ಮೆಂಟ್ ಅಂದರೆ ಪಾರ್ಕಿಂಗ್ ಗಾಗಿ ಇಟ್ಟಂತಹ ಜಾಗ ಇದೆಯಲ್ಲ, ಅಲ್ಲಿ ರೆಕಾರ್ಡ್ ರೂಂ ಶೈಲಿಯಲ್ಲಿ ಸೆಲ್ಫ್ ಗಳನ್ನು ಇಟ್ಟು ಸೆಲ್ಫ್ ನ ಒಂದೊಂದು ಪ್ಲೇಟ್ ನಲ್ಲಿಯೂ ಕಡತಗಳನ್ನು ಇಟ್ಟು ಸದ್ಯ ಅಡ್ಜೆಸ್ಟ್ ಮಾಡಲು ಸೂಚಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅದಕ್ಕೆ ಯಾವುದೇ ಶಾಶ್ವತ ವ್ಯವಸ್ಥೆ ಆಗಿಲ್ಲ. ಅದರಿಂದ ಏನು ತೊಂದರೆಯಾಗಿದೆ ಎನ್ನುವುದನ್ನು ಕೊನೆಯಲ್ಲಿ ಹೇಳುತ್ತೇನೆ.
ಇನ್ನು ಮದುವೆ ಹಾಲ್ ಗೆ ಸ್ಕೆಚ್ ಹಾಕುವ ಇಂಜಿನಿಯರ್, ಗುತ್ತಿಗೆದಾರರು ಮಿನಿ ವಿಧಾನಸೌಧಕ್ಕೆ ಕೈ ಹಾಕಿದರೆ ಏನು ಆಗಬಹುದು ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಕೊಡುತ್ತೇನೆ. ಅದೇನೆಂದರೆ ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳಿಗೆ ಕುಳಿತುಕೊಳ್ಳಲು ಸರಿಯಾದ ಚೇಂಬರ್ ಗಳಿಲ್ಲ. ಸರ್ವೆಯರ್ ಗಳು ಕುಳಿತುಕೊಳ್ಳುವುದು ಕಾರಿಡಾರ್ ನಲ್ಲಿ. ಇನ್ನು ತಾಲೂಕು ಕಚೇರಿಯಲ್ಲಿ ಅಗತ್ಯವಾಗಿ ಇರಬೇಕಾದಂತಹ ಪಡಸಾಲೆಯೇ ಇಲ್ಲಿ ಇಲ್ಲ. ಹಳೆಯ ತಾಲೂಕು ಕಚೇರಿಯಲ್ಲಿ ಪಡಸಾಲೆ ಎನ್ನುವುದು ಇತ್ತು. ಆದರೆ ಇಲ್ಲಿ ಅದನ್ನು ಎಷ್ಟು ಅವ್ಯವಸ್ಥಿತವಾಗಿ ಮಾಡಲಾಗಿದೆ ಎಂದರೆ ಮಿನಿ ವಿಧಾನಸೌಧದ ಎಂಟ್ರೆನ್ಸ್ ನಲ್ಲಿ ಅಲ್ಯೂಮಿನಿಯಂ ಕೌಂಟರ್ ಒಂದನ್ನು ಮಾಡಲಾಗಿದೆ. ಅಲ್ಲಿ ಅರ್ಜಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಇನ್ನು ರೆಕಾರ್ಡ್ ರೂಂ ಕಥೆ ಹೇಗಿದೆ ಎಂದರೆ ಅದು ಪಾರ್ಕಿಂಗ್ ಗಾಗಿ ಮೀಸಲಿಟ್ಟ ಜಾಗದಲ್ಲಿ ಕಡತಗಳನ್ನು ಇಟ್ಟಿರುವುದರಿಂದ ಮೊನ್ನೆ ಬಂದ ಮಳೆಗೆ ನೀರು ರೆಕಾರ್ಡ್ ರೂಂಗೆ ನುಗ್ಗಿತ್ತು. ಏನೋ ಅದೃಷ್ಟ ಮಧ್ಯರಾತ್ರಿ 12 ಗಂಟೆಗೆ ನೀರು ರೆಕಾರ್ಡ್ ರೂಂಗೆ ನುಗ್ಗುತ್ತಿರುವುದು ಯಾರದ್ದೋ ಪುಣ್ಯಾತ್ಮರ ಗಮನಕ್ಕೆ ಬಂದಿದೆ. ಅವರು ತಕ್ಷಣ ತಹಶೀಲ್ದಾರಿಗೆ ಹೇಳಿದ್ದಿರಬೇಕು. ರಾತ್ರೋರಾತ್ರಿ ಸೆಲ್ಫಿನ ಕೆಳಗೆ ಕೊನೆಯ ಫ್ಲೇಟ್ ನ ಮೇಲೆ ಇಟ್ಟಂತಹ ಕಡತಗಳನ್ನು ತೆಗೆದು ಮೇಲೆ ಶಿಫ್ಟ್ ಮಾಡಲಾಗಿತ್ತು. ಇದರಿಂದ ಕೆಲವು ದಾಖಲೆಗಳು ಉಳಿದಿವೆ. ಆದರೆ ಮುಂದೇನು?
ತಾಲೂಕು ಕಚೇರಿಯಲ್ಲಿ ಅತ್ಯಂತ ಹಳೆಯ ದಾಖಲೆಗಳು ಇರುತ್ತವೆ. ಬ್ರಿಟಿಷರ ಕಾಲದ ದಾಖಲೆಗಳು ಇರುತ್ತವೆ. ಹೀಗೆ ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಅವು ನೀರಿಗೆ ಒದ್ದೆಯಾದರೆ ದೇವರೇ ಗತಿ. ಮೊನ್ನೆಯ ರೆಕಾರ್ಡ್ ರೂಂ ಫೋಟೋಗಳನ್ನು ಇವತ್ತು ಪೋಸ್ಟ್ ಮಾಡಿದ್ದೇನೆ. ಅವೇ ಕಥೆ ಹೇಳುತ್ತೇವೆ. ಮಿನಿ ವಿಧಾನಸೌಧ ಕಟ್ಟಿಸಿಕೊಟ್ಟಿದ್ದೇವೆ ಎಂದು ತಮ್ಮ ಬೆನ್ನು ತಟ್ಟಿಕೊಳ್ಳುವ ಸಚಿವರು, ಆಗಿನ ಶಾಸಕರು ಇದನ್ನೆಲ್ಲಾ ಯೋಚಿಸಿಯೇ ಇರಲ್ವಾ!
Leave A Reply