ನಾವು ಡೆಂಜರ್ ಝೋನ್ ನಲ್ಲಿದ್ದೇವೆ ಎಂದು ಡೆಂಗ್ಯೂ ಸೊಳ್ಳೆ ಎಚ್ಚರಿಸಿದೆ!!
ಇವತ್ತಿಗೆ ಡೆಂಗ್ಯೂ ಕಾಯಿಲೆಗೆ ಬಲಿಯಾದವರ ಸಂಖ್ಯೆ ಅಧಿಕೃತವಾಗಿ ಮೂರು ಆಗಿದೆ. ಇಬ್ಬರು ಮಕ್ಕಳು ಮತ್ತು ನಿನ್ನೆ ರಾತ್ರಿ ಬಿಟಿವಿಯ ಛಾಯಾಗ್ರಾಹಕ ಪತ್ರಕರ್ತ ನಾಗೇಶ್ ಪಡು ನಿಧನದೊಂದಿಗೆ ಡೆಂಗ್ಯೂ ಈ ಬಾರಿ ನಿಜಕ್ಕೂ ಡೆಂಜರ್ ಝೋನ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಇಟ್ಟಿದೆ. ಈಗ ಉಳಿದಿರುವ ಪ್ರಶ್ನೆ ಏನೆಂದರೆ ಹಾಗಾದರೆ ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಏನು ಮಾಡುತ್ತಿದೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಮಳೆಗಾಲ ಎಂದ ಕೂಡಲೇ ಇಂತಹ ಕಾಯಿಲೆಗಳು ಬರುತ್ತವೆ ಎನ್ನುವ ಅಂದಾಜು ಇಂತಹ ವಿಭಾಗ, ಇಲಾಖೆಗಳಲ್ಲಿ ಇದ್ದವರಿಗೆ ಗೊತ್ತಿರಲೇಬೇಕು. ಅದರಲ್ಲಿ ಅಧಿಕಾರಿಗಳು ಇರುವವರು ವೈದ್ಯರೇ. ತಿಂಗಳಿಗೆ ಸಂಬಳ ಪಡೆದುಕೊಂಡು ಸರಕಾರ ಕೊಡುವ ಅನುದಾನ ಬಳಸಿ ನಾಲ್ಕು ಪ್ರೋಗ್ರಾಂ ಮಾಡಿದರೆ ಅವರ ಕೆಲಸ ಮುಗಿಯಿತು ಎಂದು ಅಂದುಕೊಂಡಿದ್ದಾರಾ? ಉದಾಹರಣೆಗೆ ಮಲೇರಿಯಾ ಮಾಸಾಚರಣೆ ಎಂದು ಮಾಡುತ್ತಾರೆ. ಮಲೇರಿಯಾ ನಿರ್ಮೂಲನೆ ಮಾಸಾಚರಣೆ ಎಂದು ಮಾಡಬೇಕು. ಆದರೆ ಇವರೆಲ್ಲಿ ನಿರ್ಮೂಲನೆ ಮಾಡಿರುತ್ತಾರೆ, ಆದ್ದರಿಂದ ನಾಲ್ಕು ಕಡೆ ಹೋಗಿ ಭಾಷಣ ಮಾಡಿ ಫೋಟೋ ತೆಗೆಸಿ ಅದೇನೋ ದೊಡ್ಡ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೆವೆ ಎಂದು ಮೇಲಿನವರಿಗೆ ವರದಿ ಕೊಡುತ್ತಾರೆ. ಟಿವಿ, ಪೇಪರ್ ನವರು ಕರೆಯುತ್ತಾರೆ. ಅಲ್ಲಿಗೆ ಹೋಗಿ ಜನರೇ ಈ ಕಾಯಿಲೆ ಹರಡಲು ಕಾರಣ ಎಂದು ಅರ್ಥ ಬರುವಂತೆ ಮಾತನಾಡುತ್ತಾರೆ. ಫ್ರಿಝ್ಡ್ ಕೆಳಗೆ ನೀರು ಉಳಿಯುವಂತೆ ಮಾಡಬೇಡಿ ಎನ್ನುತ್ತಾರೆ. ಮನೆಯ ಹೊರಗೆ ಟಯರ್, ಬೊಂಡದ ಖಾಲಿ ತಿಪ್ಪಿ, ನೀರು ಹರಿದುಹೋಗುವ ಹೆಂಚಿನ ಇಳಿಜಾರಿನ ಪೈಪು ಇಲ್ಲೆಲ್ಲ ನೀರು ನಿಲ್ಲಿಸಬೇಡಿ ಎಂದು ಹೇಳಿ ಸಮಯ ಪಾಸ್ ಮಾಡುತ್ತಾರೆ. ಟಿವಿ, ಪತ್ರಿಕೆಯಲ್ಲಿ ಫೋಟೋ ತೆಗೆಸಿ ಅದನ್ನು ಇಟ್ಟು ತಾವು ಸಿಕ್ಕಾಪಟ್ಟೆ ಜಾಗೃತಿ ಮೂಡಿಸಿದ್ದೇವೆ ಎಂದು ಮೇಲಾಧಿಕಾರಿಗಳಿಂದ ಹೊಗಳಿಸಿಕೊಳ್ಳುತ್ತಾರೆ. ಉನ್ನತ ಅಧಿಕಾರಿಗಳು ಮಂಗಳೂರಿಗೆ ಬಂದಾಗ ಅವರಿಗೆ ದೇವಸ್ಥಾನಗಳಿಗೆ ತಿರುಗಿಸುವುದು, ಚೆನ್ನಾಗಿ ಊಟ ತಿಂಡಿ ಅದು ಇದು ಮಾಡಿಸಿ ಕಳುಹಿಸಿಬಿಡುವುದು ಇಷ್ಟೇ ಮಾಡಿ ತಮ್ಮ ಕೈತೊಳೆದುಕೊಳ್ಳುತ್ತಾರೆ. ಇದರಿಂದ ನಮ್ಮ ಅನುದಾನಗಳು ಕರಗಬಹುದೇ ವಿನ: ಖಾಯಿಲೆ ಪರಿಹಾರವಾಗುವುದಿಲ್ಲ.
ಗುಜ್ಜರಕೆರೆ, ಅರಕೆರೆಬೈಲು ಪ್ರದೇಶಗಳಲ್ಲಿ ಒಂದು ತಿಂಗಳ ಹಿಂದಿನಿಂದ ಡೆಂಗ್ಯೂ ಕಾಯಿಲೆ ಜೋರಾಗಿತ್ತು. ವಿವಿಧ ಅಧಿಕಾರಿಗಳು ಬಂದು ನೋಡಿ ಹೋದ್ರು. ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಜನರಿಗೆ ಪುಕ್ಕಟೆ ಉಪದೇಶ ಕೊಟ್ಟು ಹೋದ್ರು. ಆದರೆ ದಿನದಿಂದ ದಿನಕ್ಕೆ ಆ ಪ್ರದೇಶಗಳಲ್ಲಿ ಡೆಂಗ್ಯೂ ಕಾಯಿಲೆ ಹೆಚ್ಚಾಗುತ್ತಿದೆ ವಿನ: ಕಡಿಮೆಯಾಗುತ್ತಿಲ್ಲ. ಕೆಲವು ಮಕ್ಕಳು ಪರೀಕ್ಷೆ ಬರೆಯಲಾಗದೇ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಅನೇಕ ಮನೆಗಳಲ್ಲಿ ದುಡಿಯುವ ಗಂಡಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ವೈದ್ಯಾಧಿಕಾರಿಗಳು ಸುದ್ದಿಗೋಷ್ಟಿ, ಎನ್ ಜಿಒಗಳೊಂದಿಗೆ ಸಭೆ ಮಾಡುತ್ತಾ ಸಮಯ ದೂಡುತ್ತಿದ್ದಾರೆ. ಒಂದು ಮಾಹಿತಿಯ ಪ್ರಕಾರ ನಿರ್ಮಾಣ ಹಂತದಲ್ಲಿರುವ ಅನೇಕ ಕಟ್ಟಡಗಳ ಮಾಲೀಕರಿಂದ “ನೀರು ನಿಂತರೂ ಏನೂ ಕ್ರಮ ಕೈಗೊಂಡಿಲ್ಲ” ಎನ್ನುವ ಕಾರಣಕ್ಕೆ ದಂಡ ವಿಧಿಸಲಾಗಿದೆ. ಅದರಿಂದ ಸುಮಾರು ಇಲ್ಲಿಯ ತನಕ 85 ಸಾವಿರ ರೂಪಾಯಿಯಷ್ಟು ಸಂಗ್ರಹವಾಗಿದೆ. ಸರಿ, ದಂಡ ವಿಧಿಸುವುದು ತಪ್ಪಲ್ಲ. ಹಾಕಲಿ. ಆದರೆ ಅದರೊಂದಿಗೆ ಪಾಲಿಕೆ ಅಥವಾ ಜಿಲ್ಲಾಡಳಿತ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕಲ್ಲವೇ?
ಉದಾಹರಣೆಗೆ ಮಂಗಳೂರಿನ ಪಾಸ್ ಪೋರ್ಟ್ ಕಚೇರಿಯ ಬಳಿ ರಾಮಭವನ ಕಾಂಪ್ಲೆಕ್ಸ್ ಬಳಿ ಚರಂಡಿಯೊಂದರ ಕಾಮಗಾರಿ ಅರ್ಧಕ್ಕೆ ನಿಂತು ಎಂಟು ವರ್ಷಗಳಾಗಿವೆ. ಅಲ್ಲಿ ನೀರು ಯಾವಾಗಲೂ ನಿಂತಿರುತ್ತದೆ. ಅದು ರಿಸ್ಕ್ ಅಲ್ಲವೇ. ಅದೇ ಚರಂಡಿ ಮುಂದೆ ಇನ್ ಲ್ಯಾಂಡ್ ಬಿಲ್ಡಿಂಗ್ ಕಟ್ಟಡದ ಬಳಿ ಮುಂದುವರೆಯುತ್ತದೆ. ಹಾಗೆ ಎಸ್ ಡಿಸಿಸಿ ಬ್ಯಾಂಕಿನ ಬಳಿ ನ್ಯಾಯಾಲಯದ ಕಟ್ಟಡಕ್ಕೆ ಹೋಗುವ ದಾರಿಯಲ್ಲಿ ಕೂಡ ಹೀಗೆ ಅರ್ಧಬಂರ್ಧ ಚರಂಡಿ ಕಾಮಗಾರಿಗಳಿಂದ ಮಳೆಯ ನೀರು ನಿಲ್ಲುತ್ತಿದೆ. ಇದೆಲ್ಲ ಡೆಂಗ್ಯೂ ಉತ್ಪಾದನಾ ಸ್ಥಳಗಳಲ್ಲವೇ? ಹಾಗಿದ್ದರೆ ಅಧಿಕಾರಿಗಳೂ ತಾವು ಕೇವಲ ಭೋದನೆ ಮಾತ್ರ ಮಾಡಿ ಅದನ್ನು ಪಾಲಿಸುವುದು ಕಾಣುವುದಿಲ್ಲ!
Leave A Reply