ಪ್ಲಾಸ್ಟಿಕ್ ಫ್ಲೆಕ್ಸ್ ಕೈ ಬಿಡಿ, ಬಟ್ಟೆಯ ಬ್ಯಾನರ್ ಬಳಸಿ!!
ಪ್ಲಾಸ್ಟಿಕ್ ನಿಷೇಧದ ವಿಷಯ ಮತ್ತೊಮ್ಮೆ ಮುಂಚೂಣಿಗೆ ಬಂದದ್ದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೆಂಪು ಕೋಟೆಯಲ್ಲಿ ನಿಂತು ಮಾತನಾಡಿದ ಬಳಿಕ. ಸರಿಯಾಗಿ ನೋಡಿದರೆ ಪ್ಲಾಸ್ಟಿಕ್ ನಿಷೇಧ ಆಗಬೇಕು ಎನ್ನುವುದು ಎಲ್ಲರಿಗೂ ಮನಸ್ಸು ಇದೆ. ಆದರೆ ಬೆಕ್ಕಿಗೆ ಮೊದಲು ಗಂಟೆ ಕಟ್ಟುವವರು ಯಾರು ಎನ್ನುವ ಪ್ರಶ್ನೆ ಏಳುತ್ತದೆ. ಸದ್ಯ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮಾದರಿಯಾಗುವಂತಹ ಹೆಜ್ಜೆ ಇಟ್ಟಿದ್ದಾರೆ. ಸಾಮಾನ್ಯವಾಗಿ ಜನಪ್ರತಿನಿಧಿಗಳು ಯಾವುದಾದರೂ ಶಿಲಾನ್ಯಾಸ, ಗುದ್ದಲಿಪೂಜೆ, ಉದ್ಘಾಟನೆಗೆ ಹೋಗುವಾಗ ಆ ಪ್ರದೇಶದ ನಾಗರಿಕರು, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಒಂದು ಫ್ಲೆಕ್ಸ್ ಹಾಕಿ ಶಾಸಕರಿಗೆ ಧನ್ಯವಾದ ಕೋರುತ್ತಾರೆ. ಅದೇ ರೀತಿಯಲ್ಲಿ ಮದುವೆ, ಮುಂಜಿಯಂತಹ ಯಾವುದೇ ಶುಭ ಸಮಾರಂಭ ಇರಲಿ, ತಿಥಿಯಂತಹ ಕಾರ್ಯಕ್ರಮ ಇರಲಿ, ಕ್ಯಾಟರಿಂಗ್ ನವರು ಬಡಿಸುವಾಗ ಟೇಬಲ್ ಮೇಲೆ ಪ್ಲಾಸ್ಟಿಕ್ ಹಾಳೆ, ಪ್ಲಾಸ್ಟಿಕ್ ಗ್ಲಾಸ್, ತಟ್ಟೆ, ಸಿಹಿ ಡಬ್ಬ ಎಂದು ಸಾಕಷ್ಟು ಪ್ಲಾಸ್ಟಿಕ್ ಬಳಸುತ್ತಾರೆ. ಮೊದಲು ನಿಲ್ಲಬೇಕಾಗಿರುವುದು ಇದೆರಡು ಪ್ಲಾಸ್ಟಿಕ್ ಬಳಕೆ. ಮಂಗಳೂರು ಮಹಾನಗರದಲ್ಲಿ ದಿನಕ್ಕೆ 350 ಕಿಲೋ ತ್ಯಾಜ್ಯ ಸಂಗ್ರಹಣೆಯಾಗುತ್ತದೆ. ಅದರಲ್ಲಿ ಸುಮಾರು ನೂರು ಕೆಜಿಯಷ್ಟು ಪ್ಲಾಸ್ಟಿಕ್ ಇರುತ್ತದೆ. ಒಂದು ನಗರದಲ್ಲಿಯೇ ಈ ಪರಿಸ್ಥಿತಿ ಆದರೆ ಇಡೀ ದೇಶದ ಪರಿಸ್ಥಿತಿ ಹೇಗಿರಬೇಡಾ.
ಇದನ್ನು ಗಮನಿಸಿದ ಶಾಸಕ ವೇದವ್ಯಾಸ ಕಾಮತ್ ಅವರು ಪ್ಲಾಸ್ಟಿಕ್ ನಿಷೇಧವನ್ನು ಒಂದು ಅಭಿಯಾನವನ್ನಾಗಿ ಸ್ವೀಕರಿಸಿದರು. ತಮಗೆ ಶುಭ ಕೋರಿ ಪ್ಲೇಕ್ಸ್ ಹಾಕುವ ಅಭಿಮಾನಿಗಳಿಗೆ ಅಂತಹ ನಿಷೇಧಿತ ಫ್ಲಾಸ್ಟಿಕ್ ಇರುವ ಫ್ಲೆಕ್ಸ್ ಹಾಕದಂತೆ ಮನವಿ ಮಾಡಿಕೊಂಡರು. ಅದಕ್ಕೆ ಮಾದರಿಯಾಗಿ ಮೊದಲು ತಾವೇ ಒಂದು ಹೆಜ್ಜೆ ಇಟ್ಟರು. ಈ ಬಾರಿಯ ಶ್ರೀ ಕೃಷ್ಣಾಷ್ಟಮಿ ದಿನದಂದು ಜನರಿಗೆ ಶುಭ ಕೋರಲು ಹಾಕುವ ಫ್ಲೆಕ್ಸ್ ಪ್ಲಾಸ್ಟಿಕ್ ನಿಂದ ತಯಾರಿಸಿದ್ದು ಆಗಬಾರದು ಎಂದು ಅದನ್ನು ತಯಾರಿಸುವವರಿಗೆ ಸೂಚನೆ ನೀಡಿದರು. ಶಾಸಕರ ಸೂಚನೆಯನ್ನು ಶಿರವಹಿಸಿ ಪಾಲಿಸಿದ ಆಕೃತಿ ಡಿಜಿಟಲ್ ಇದರ ಪಾಲುದಾರ ನರೇಶ್ ಪ್ರಭು ಅವರು ಬಟ್ಟೆಯನ್ನೇ ಬಳಸಿ ಬ್ಯಾನರ್ ತಯಾರಿಸಿ ಅದನ್ನು ಅಳವಡಿಸಿದ್ದಾರೆ. ಇದು ಶಾಸಕರ ಮೆಚ್ಚಿಗೆಗೆ ಪಾತ್ರವಾಗಿದೆ. ನರೇಶ್ ಪ್ರಭು ಅವರು ಇಕೋ ಫ್ಯಾಬ್ರಿಕ್ ಎನ್ನುವ ಮೆಟರಿಯಲ್ ಉತ್ಪನ್ನವನ್ನು ಬಳಸಿದ್ದಾರೆ. ಇದನ್ನು ರೀ ಸೈಕಲಿಂಗ್ ಕೂಡ ಮಾಡಬಹುದು. ಸಾಮಾನ್ಯ ಲೆಕ್ಕಾಚಾರದ ಪ್ರಕಾರ ಪ್ಲಾಸ್ಟಿಕ್ ಬಳಸಿ ಮಾಡುವ ಪ್ಲೆಕ್ಸ್ ಗೆ ಎರಡು ಸಾವಿರ ರೂಪಾಯಿ ಗ್ರಾಹಕನಿಗೆ ಖರ್ಚು ಬಿದ್ದರೆ ಬಟ್ಟೆಯ ಬ್ಯಾನರ್ ಗೆ 3500 ಖರ್ಚು ಬೀಳುತ್ತದೆ. ಆದರೆ ಇದರಿಂದ ಪ್ರಕೃತಿ ಉಳಿಯುತ್ತದೆ. ಆದ್ದರಿಂದ ಹಣದ ಮುಖ ನೋಡುವ ಬದಲು ಪ್ರಕೃತಿಯ ಮೇಲೆ ನಿಮಗಿರುವ ಕಾಳಜಿ ಇಲ್ಲಿ ನೀವು ತೋರಿಸಬೇಕಾದರೆ ಬಟ್ಟೆಯ ಬ್ಯಾನರ್ ಬಳಸುವುದು ಉತ್ತಮ. ಅಷ್ಟಕ್ಕೂ ನಿಮಗೆ ನರೇಶ್ ಪ್ರಭು ಅವರ ಬಳಿ ಈ ಬಗ್ಗೆ ವಿಚಾರಿಸಲು ಇದ್ದರೆ ಅವರ ದೂರವಾಣಿ ಸಂಖ್ಯೆ 9964586017 ಇದಕ್ಕೆ ಕರೆ ಮಾಡಿ ಕೇಳಬಹುದು. ಇದನ್ನು ಅವರಿಗೆ ಪ್ರಚಾರ ಕೊಡುವ ದೃಷ್ಟಿಯಿಂದ ಹಾಕಿದ್ದಲ್ಲ. ನಿಮಗೆ ಸರಿಯಾದ ಮಾಹಿತಿ ಸಿಗಲಿ ಎನ್ನುವ ಕಾರಣಕ್ಕೆ ಬರೆದಿದ್ದೇನೆ.
ಇನ್ನು ಮನಸ್ಸು ಮಾಡಿದರೆ ಕ್ಯಾಟರಿಂಗ್ ನವರು ಕೂಡ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಆದಷ್ಟು ಕೈ ಬಿಡಬೇಕು. ಅದರ ಬದಲು ಅಡಿಕೆ ಉತ್ಪನ್ನಗಳನ್ನು ಬಳಸಬಹುದು. ಒಂದಿಷ್ಟು ಹೆಚ್ಚು ಖರ್ಚು ಬೀಳಬಹುದು. ಆದರೆ ಲಕ್ಷಗಟ್ಟಲೆ ಬಿಲ್ ಆಗುವಾಗ ಹತ್ತು ಸಾವಿರದಷ್ಟು ರೂಪಾಯಿ ಹೆಚ್ಚಾದರೆ ಯಾರೂ ತಲೆಬಿಸಿ ಮಾಡಿಕೊಳ್ಳುವುದಿಲ್ಲ. ಆದರೆ ಕ್ಯಾಟರಿಂಗ್ ನವರ ಇಚ್ಚಾಶಕ್ತಿಯ ಕೊರತೆಯಿಂದ ಹೀಗೆ ಅಗುತ್ತಿದೆ. ಬೇಕಾದಷ್ಟು ಸಿಗುವುದಿಲ್ಲ ಎನ್ನುವುದು ಸುಳ್ಳು. ಎಲ್ಲಾ ಕ್ಯಾಟರಿಂಗ್ ನವರು ಬೇಡಿಕೆ ಇಟ್ಟರೆ ಅಡಿಕೆ ಉತ್ಪನ್ನಗಳ ಫ್ಯಾಕ್ಟರಿಗಳೇ ತಯಾರಾಗುತ್ತವೆ. ಒಂದಿಷ್ಟು ಉದ್ಯೋಗಾವಕಾಶಗಳು ಸಿದ್ಧವಾಗುತ್ತದೆ.
Leave A Reply