ಭ್ರಷ್ಟಾಚಾರ ಮುಕ್ತ ಪಾಲಿಕೆ ಕೊಡುತ್ತೇವೆ ಎನ್ನುವ ಭರವಸೆ ಕದ್ರಿ ಮೈದಾನಕ್ಕೆ ಮಾತ್ರ ಸೀಮಿತವಾಗಬಾರದು!!
ಏನೇ ಆಗಲಿ ನರೇಂದ್ರ ಮೋದಿ ಹೆಸರಲ್ಲಿಯೇ ಮತ್ತೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಗತ್ಯಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಅಧಿಕಾರದ ಏಣಿ ಹತ್ತಿ ಕುಳಿತಿದೆ. ಇವರು ಹತ್ತಿದ ಏಣಿಯಿಂದ ಕೆಳಗೆ ನೋಡಿದರೆ ಇವರು ಕೊಟ್ಟ ಭರವಸೆಗಳೇ ಎದ್ದು ಕಾಣುತ್ತಿವೆ. ಶನಿವಾರ ಕದ್ರಿ ಮೈದಾನದಲ್ಲಿ ವಿಜೇತರನ್ನು ಅಭಿನಂದಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಶ್ರೀನಿವಾಸ್ ಪೂಜಾರಿ ಭ್ರಷ್ಟಾಚಾರ ಮುಕ್ತ ಪಾಲಿಕೆ ಆಡಳಿತ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕೇಂದ್ರ ಸರಕಾರದಲ್ಲಿ ನರೇಂದ್ರ ಮೋದಿ ಇರುವ ತನಕ ಸೋಲುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಮತದಾರರು ಇಲ್ಲಿಯೂ ನಿರೂಪಿಸಿದ್ದಾರೆ. ಆದ್ದರಿಂದ ಪಾಲಿಕೆಯ ವಿಜಯದ ರೂವಾರಿ ಮೋದಿ ವಿನ: ಬೇರೆ ಯಾರೂ ಅಲ್ಲ ಎನ್ನುವುದು ಮೊದಲಿಗೆ ನಾವು ಅರ್ಥ ಮಾಡಿಕೊಳ್ಳಬಹುದು. ಎರಡನೇಯದಾಗಿ ಮತದಾನಕ್ಕೆ ಸರಿಯಾಗಿ ಸುಪ್ರೀಂ ಕೋರ್ಟ್ ಕೊಟ್ಟ ಅಯೋಧ್ಯೆಯ ತೀರ್ಪು ಬಿಜೆಪಿಯೆಡೆಗೆ ಮತದಾರರು ಸಂಶಯವೇ ಇಲ್ಲದಂತೆ ವಾಲುವಂತೆ ಮಾಡಿದೆ. ಅದು ಕೂಡ ಬಿಜೆಪಿಗೆ ಪ್ಲಸ್ ಆಗಿದೆ. ಮೂರನೇಯದಾಗಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ಅವಧಿಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಗಳ ದುರಾಡಳಿತ, ಭ್ರಷ್ಟಾಚಾರ ಜನರು ಅನುಭವಿಸಿದ ಸಂಕಟಗಳೆಲ್ಲವೂ ಸೇರಿ ಜನ ಈ ಬಾರಿ ಕಾಂಗ್ರೆಸ್ಸಿನ ವಿರುದ್ಧ ಚಲಾಯಿಸಿದ ಮತಗಳು ಬಿಜೆಪಿಗೆ ವರವಾಗಿ ಪರಿಣಮಿಸಿದವು. ಇಲ್ಲದೇ ಹೋದರೆ ಬಿಜೆಪಿ ಗೆದ್ದಿರುವ 44 ಸೀಟುಗಳಲ್ಲಿ ಬೆರಳೆಣಿಕೆಯ ಸೀಟುಗಳನ್ನು ಬಿಟ್ಟರೆ ಉಳಿದವುಗಳ ಮುಖ ಜನರು ನೋಡಿದ್ದೇ ಗೆದ್ದ ಬಳಿಕ ಹೊರಬರುತ್ತಿರುವ ಪೋಸ್ಟರ್, ಫ್ಲೆಕ್ಸ್, ಹೋರ್ಡಿಂಗ್ ಗಳಲ್ಲಿ ಮಾತ್ರ.
ಬಿಜೆಪಿ ಗೆದ್ದಿರುವ ಅನೇಕ ಕಡೆಗಳಲ್ಲಿ ಅದೇ ಪಕ್ಷದ ಬಂಡಾಯ ಅಭ್ಯರ್ಥಿಗಳೇ ಕಮಲ ಪಕ್ಷಕ್ಕೆ ತಲೆನೋವಾಗಿ ಮಾರ್ಪಾಡಾಗಿದ್ದರು. ವಿವಿಧ ವಾರ್ಡುಗಳಲ್ಲಿ ಸಕ್ರಿಯ ಕಾರ್ಯಕರ್ತರು ತಟಸ್ಥರಾಗಿದ್ದರು. ಅನೇಕ ಕಡೆ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳು ಬದಲಾಗಿ ಟಿಕೆಟ್ ಸಿಗುತ್ತೆ ಎಂದುಕೊಂಡಿದ್ದವರು ಸಿಗದೇ ಇದ್ದ ಕಾರಣ ಉಲ್ಟಾ ಆಡಿಬಿಟ್ಟರೆ ಸೋಲು ಪಕ್ಕಾ ಎನ್ನುವ ವಾತಾವರಣ ಇತ್ತು. ಇಷ್ಟೆಲ್ಲಾ ಆಗಿಯೂ ಬಿಜೆಪಿ ಐತಿಹಾಸಿಕ ಜಯ ಸಾಧಿಸಿದೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್ ವಿರುದ್ಧದ ವಾತಾವರಣ. ಇದರಿಂದಾಗಿ ಏನಾಗಿದೆ ಎಂದರೆ ಜನರ ನಿರೀಕ್ಷೆಗಳನ್ನು ಈಡೇರಿಸುವ ಅಗತ್ಯ ಬಿಜೆಪಿಗೆ ಹಿಂದಿಗಿಂತ ಜಾಸ್ತಿ ಇದೆ. ಯಾಕೆಂದರೆ ಚುನಾವಣೆ ನಡೆದದ್ದು ಅಪ್ಪಟ ನಗರವಾಸಿಗಳ ಮಧ್ಯೆ. ಇಲ್ಲಿಯ ಮತದಾರರು ಹೇಗೆ ಎಂದರೆ ಇವತ್ತು ವೋಟ್ ಹಾಕಿಸಿಕೊಂಡವ ಸರಿಯಾಗಿ ಕೆಲಸ ಮಾಡದಿದ್ದರೆ ನಾಳೆ ಚುನಾವಣೆ ನಡೆದಾಗ ಅದೇ ನ್ಯೂಟ್ರಲ್ ಮತದಾರ ಬೇರೆ ಪಕ್ಷಕ್ಕೆ ಮತ ಹಾಕಬಹುದು. ನಗರದ ಮತದಾರನನ್ನು ನಂಬುವ ಹಾಗಿಲ್ಲ. ಆತ ಒಂದೇ ಪಕ್ಷಕ್ಕೆ ನಿಷ್ಟನಾಗಿಯೂ ಇರುವ ಸಾಧ್ಯತೆಗಳಿಲ್ಲ. ಒಂದು ಬಾರಿ ವಾಕರಿಕೆ ಬರುವಷ್ಟು ಬಹುಮತ ಕೊಟ್ಟು, ಶಾಸಕರುಗಳನ್ನು ಕೊಟ್ಟು, ಸಂಸದರಿಗೂ ಉತ್ತಮ ಲೀಡ್ ಕೊಡುವ ಇಲ್ಲಿನ ಮತದಾರ ನಾಳೆ ತನ್ನ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲದಿದ್ದರೆ ಹೆಗಲ ಮೇಲೆ ಕುಳ್ಳಿರಿಸಿದ ಜನಪ್ರತಿನಿಧಿಯನ್ನು ಹಾಗೇ ನೆಲಕ್ಕೆ ಒಗೆದು ಮತ್ತೊಬ್ಬನನ್ನು ತಂದು ಕೂರಿಸಬಲ್ಲ. ಆದ್ದರಿಂದ ಗೆದ್ದಿರುವ ಜನಪ್ರತಿನಿಧಿಗಳು ತಾವೇ ಜಯದ ರೂವಾರಿಗಳು ಎಂದುಕೊಂಡರೆ ಅದು ಪೋಸ್ಟರ್ ಗೆ ಮಾತ್ರ ಸೀಮಿತ ಆಗಬೇಕಾಗಬಹುದು.
ಇನ್ನು ಪರಿಷತ್ ಸಭೆ ಆಗಿ ಪ್ರಮಾಣವಚನ ಸ್ವೀಕರಿಸುವ ತನಕ ಇರುವ ಸಮಯದಲ್ಲಿ ತಮ್ಮನ್ನು ಗೆಲ್ಲಿಸಿದ ಮತದಾರನಿಗೆ ಥ್ಯಾಂಕ್ಸ್ ಹೇಳಲು ಹೊಸ ಕಾರ್ಪೋರೇಟರ್ ಗಳು ಹೊರಡುವುದಾದರೆ ಹೋಗುವಾಗಲೇ ಪೆನ್ನು, ಪೇಪರ್ ಹಿಡಿದು ಹೊರಡಿ. ಎಲ್ಲೆ ಹಸಿರು ಪೊದೆ, ಗಿಡಗಂಟಿಗಳು ಬೆಳೆದಿವೆಯೋ ಅಲ್ಲಿ ಕ್ಲೀನ್ ಮಾಡಿಸಿ. ಕೆಲಸ ಮಾಡದ ಬೀದಿದೀಪಗಳನ್ನು ಬದಲಾಯಿಸಿ. ಹಸಿರು ವಾರ್ಡ್ ಮಾಡಲು ಸಸಿಗಳನ್ನು ವಿತರಿಸುವ ಕಾರ್ಯ ಮಾಡಿ. ಒಂದು ವೇಳೆ ನೀವು ಇದನ್ನು ಈಗಲೇ ಪ್ರಾರಂಭಿಸಿದ್ದಿರಿ ಎಂದರೆ ವೆರಿಗುಡ್. ಇನ್ನು ಎದ್ದಿಲ್ಲದಿದ್ದರೆ ಈಗಲೇ ಎದ್ದು ಮುಖ ತೊಳೆದು ಹೊರಟು ಬಿಡಿ. ನಿಮ್ಮ ಮುಖವನ್ನು ನಿಮ್ಮ ವಾರ್ಡಿನ ಮತದಾರ ನೋಡಲಿ. ಯಾರಿಗೆ ನಿಮ್ಮ ವಿಸಿಟಿಂಗ್ ಕಾರ್ಡ್ ಚುನಾವಣೆಯ ಮೊದಲು ಕೊಟ್ಟಿಲ್ಲವೋ ಅವರಿಗೆ ಕೊಟ್ಟು ನೀವು ಯಾವತ್ತೂ ರೆಡಿ ಎಂದು ಹೇಳಿ ಬನ್ನಿ. ಅದು ಬಿಟ್ಟು ನಿಮ್ಮನ್ನು ಯಾರೋ ಮುಂದಿನ ಬಾರಿಯೂ ಗೆಲ್ಲಿಸಿಕೊಂಡು ಹೋಗುತ್ತಾರೆ ಎನ್ನುವ ಭ್ರಮೆ ಇದ್ದರೆ ಅದು ಭ್ರಮೆ ಎಂದು ಗೊತ್ತಿರಲಿ. ಒಟ್ಟಿನಲ್ಲಿ ಬಿಜೆಪಿ ಜನಪ್ರತಿನಿಧಿಗಳಿಗೆ ಒಂದು ವಿಷಯ ಗೊತ್ತಿರಲಿ. ಏನೆಂದರೆ ಎಲ್ಲಾ ವಿಧಾನಸಭಾ ಕ್ಷೇತ್ರಗಳೂ ಸುಳ್ಯವಲ್ಲ ಮತ್ತು ಎಲ್ಲಾ ವಾರ್ಡುಗಳು ಸೆಂಟ್ರಲ್ ಮಾರ್ಕೆಟ್ ಅಥವಾ ಮಂಗಳಾದೇವಿ ವಾರ್ಡುಗಳಲ್ಲ!
Leave A Reply