ಕೈಗೆ ವಾಚು ಅಥವಾ ಕಿಸೆಯಲ್ಲಿ ಮೊಬೈಲ್ ಇಲ್ಲದವರಿಗಾಗಿ ಕ್ಲಾಕ್ ಟವರ್ ನಿರ್ಮಾಣ ಮಾಡಿದ ಬುದ್ಧಿವಂತ ಮಂಗಳೂರಿನಲ್ಲಿ ಯಾರು?
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಗೊತ್ತಾದರೆ ಅವರೆಷ್ಟು ಬೇಸರಪಟ್ಟುಕೊಳ್ಳುತ್ತಾರೋ? ಮೋದಿ ಎಷ್ಟೇ ಉತ್ತಮ ಯೋಜನೆ ಮಾಡಿದರೂ ಅದನ್ನು ತಳಮಟ್ಟದಲ್ಲಿ ಅನುಷ್ಟಾನಗೊಳಿಸುವವರಿಗೆ ಕಾಮನ್ ಸೆನ್ಸ್ ಕೊರತೆ ಇದ್ದರೆ ಯಾವ ಯೋಜನೆ ಕೂಡ ಯಶಸ್ವಿಯಾಗುವುದಿಲ್ಲ. ಸದ್ಯ ಅದಕ್ಕೆ ಮಂಗಳೂರು ಉದಾಹರಣೆ.
ನಾನು ಬರೆಯುತ್ತಿರುವುದು ಸ್ಮಾರ್ಟ್ ಸಿಟಿ ಯೋಜನೆ ಹಳ್ಳ ಹಿಡಿಯುತ್ತಿರುವುದರ ಬಗ್ಗೆ. ಭಾರತದ ನೂರು ನಗರಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮೋದಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಜಾರಿಗೆ ತಂದರು. ಮೊದಲ 20 ನಗರಗಳನ್ನು ಈ ಯೋಜನೆಯಲ್ಲಿ ಘೋಷಿಸುವಾಗ ಅದರಲ್ಲಿ ಮಂಗಳೂರಿನ ಹೆಸರು ಇರಲಿಲ್ಲ. ಎರಡನೇ ಪಟ್ಟಿಯಲ್ಲಿ ನಮಗೆ ಅವಕಾಶ ಸಿಕ್ಕಿತು. ಈ ಯೋಜನೆಯಲ್ಲಿ ನಮ್ಮ ನಗರ ಬರಬೇಕಾದರೆ ಅದಕ್ಕೆ ನಾವು ಒಂದಿಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಅದೇನೆಂದರೆ ನಾವು ಯಾವ ರೀತಿಯಲ್ಲಿ ನಮ್ಮ ನಗರವನ್ನು ಅಭಿವೃದ್ಧಿಪಡಿಸುತ್ತೇವೆ, ಏನೆಲ್ಲ ಮಾಡುವ ಮೂಲಕ ನಮ್ಮ ನಗರವನ್ನು ಸ್ಮಾರ್ಟ್ ಮಾಡುತ್ತೇವೆ ಎಂದು ಹೇಳಬೇಕಿತ್ತು. ಅದೆಲ್ಲ ಆಗಿ ಕೇಂದ್ರದಲ್ಲಿ ಕುಳಿತವರಿಗೆ ಅದು ಮನವರಿಕೆ ಆದ ಬಳಿಕ ನಮಗೆ ಸ್ಮಾರ್ಟ್ ಸಿಟಿಯಲ್ಲಿ ಅವಕಾಶ ಸಿಕ್ಕಿದೆ. ಆದರೆ ನಮ್ಮ ನಗರ ಸ್ಮಾರ್ಟ್ ಆಗುತ್ತಿದೆಯಾ?
ಈ ಕಳಕಳಿಯನ್ನು ಹಲವಾರು ಪ್ರಜ್ಞಾವಂತ ನಾಗರಿಕರು ಎತ್ತಿದ ಬಳಿಕ ಸೋಮವಾರ ಮಂಗಳೂರಿನಲ್ಲಿ ಶಾಸಕ ಡಿ ವೇದವ್ಯಾಸ ಕಾಮತ್ ಸಭೆಯೊಂದನ್ನು ಕರೆದಿದ್ದರು. ಅದರಲ್ಲಿ ಸ್ಮಾರ್ಟ್ ಸಿಟಿಯ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು. ಅಲ್ಲಿ ಆದ ಚರ್ಚೆಯಲ್ಲಿ ಬಂದ ಮುಖ್ಯ ಪ್ರಶ್ನೆ ಎಂದರೆ ನೀವು ಸ್ಮಾರ್ಟ್ ಸಿಟಿಯಲ್ಲಿ ಏನೆಲ್ಲ ಅಭಿವೃದ್ಧಿಗೊಳಿಸುತ್ತೇವೆ ಎಂದು ಕೇಂದ್ರಕ್ಕೆ ವರದಿ ಕೊಟ್ಟಿದ್ದಿರಲ್ಲ. ಅದರಲ್ಲಿ ಹೊಸದಾಗಿ ಕ್ಲಾಕ್ ಟವರ್ ನಿರ್ಮಾಣ ಮಾಡುತ್ತೇವೆ ಎನ್ನುವುದು ಇದೆಯಾ? ಇಲ್ಲ.
ಹಾಗಾದರೆ ಕೋಟಿ ಖರ್ಚು ಮಾಡಿ ಕ್ಲಾಕ್ ಟವರ್ ನಿರ್ಮಾಣ ಮಾಡಿದ್ದು ಯಾಕೆ? ಒಂದು ಕಾಲದಲ್ಲಿ ಕೈಗೆ ವಾಚು ಎಲ್ಲರ ಬಳಿ ಇರಲಿಲ್ಲ. ಮೊಬೈಲ್ ಅಂತೂ ಕನಸಿನ ಮಾತಾಗಿತ್ತು. ಆಗ ಕ್ಲಾಕ್ ಟವರ್ ಬೇಕಿತ್ತು. ಆದರೆ ಈಗ? ಗಂಟೆಯನ್ನು ನೋಡಲು ಆಕಾಶಕ್ಕೆ ಕುತ್ತಿಗೆ ತಿರುಗಿಸುವಷ್ಟು ಪುರುಸೋತ್ತು ಯಾರಿಗೂ ಇಲ್ಲ. ನಿಜವಾದ ಪ್ರಾಬ್ಲಂ ಇರುವುದೇ ಇಲ್ಲಿ. ಏನು ಸ್ಮಾರ್ಟ್ ಮಾಡುತ್ತೇವೆ ಎಂದು ಇವರು ಹೇಳಿದ್ದಾರೋ ಅದನ್ನು ಬಿಟ್ಟು ಬೇರೆ ಎಲ್ಲ ಇವರು ಮಾಡುತ್ತಿದ್ದಾರೆ. ಇನ್ನು ಚೆನ್ನಾಗಿರುವ ಆರ್ ಟಿಒ ಕಚೇರಿ ರಸ್ತೆಯನ್ನು ಸ್ಮಾರ್ಟ್ ಮಾಡಲು ಕೋಟಿ ಸುರಿಯುತ್ತಿರುವುದು ಯಾಕೆ? ಈ ಎರಡು ಕಾಮಗಾರಿಗಳಿಗೆ ಐದು ಮುಕ್ಕಾಲು ಕೋಟಿ ರೂಪಾಯಿಯನ್ನು ಇಲ್ಲಿಯ ತನಕ ವ್ಯಯಿಸಲಾಗಿದೆ. ಆದರೆ ಯಾವುದು ಆಗಬೇಕೋ ಅದರ ಬಗ್ಗೆ ಇವರಿಗೆ ಚಿಂತೆಯೇ ಇಲ್ಲ. ಮೈದಾನ 2 ಮತ್ತು 3 ನೇ ಅಡ್ಡರಸ್ತೆ, ರಾವ್ ಅಂಡ್ ರಾವ್ ಸರ್ಕಲ್ ನಿಂದ ಬಂದರು ಪೊಲೀಸ್ ಠಾಣೆಗೆ ಹೋಗುವ ರಸ್ತೆ ಹೀಗೆ ಅದೇ ಪ್ರದೇಶದಲ್ಲಿ ಅನೇಕ ರಸ್ತೆಗಳು ಅಬಿವೃದ್ಧಿಗೊಳ್ಳಬೇಕಿದೆ. ಆದರೆ ಇವರು ಅದನ್ನು ಮಾಡುತ್ತಿಲ್ಲ. ರಾವ್ ಅಂಡ್ ರಾವ್ ಸರ್ಕಲ್ ನಿಂದ ಬಂದರು ಪೊಲೀಸ್ ಠಾಣೆಯ ರಸ್ತೆಯಲ್ಲಿ ಡ್ರೈನೇಜ್ ಕೆಲಸ ಆಗಿದೆ. ಆದರೆ ರಸ್ತೆ ಕಾಂಕ್ರೀಟಿಕರಣ ಆಗಿಲ್ಲ. ಕಾಂಕ್ರೀಟ್ ಬಿಡಿ ಇವರು ಸರಿಯಾಗಿ ಪ್ಯಾಚ್ ವರ್ಕ್ ಗಳನ್ನೇ ಮಾಡಿಲ್ಲ. ಇನ್ನು ಇವರು ಮಾಡುವ ಕಾಮಗಾರಿಗಳು ಹೇಗಿವೆ ಎಂದರೆ ಮನೆಮನೆಯಿಂದ ಡ್ರೈನೇಜ್ ಸಂಪರ್ಕವನ್ನು ಚೆಂಬರ್ ಗೆ ಮಾಡಲಾಗುತ್ತದೆ. ಚೆಂಬರ್ ನಿಂದ ಮ್ಯಾನ್ ಹೋಲ್ ಗೆ ಲಿಂಕ್ ಕೊಡಲಾಗುತ್ತದೆ. ಸರಿಯಾಗಿ ನೋಡಿದರೆ ಇದು ಒಳ್ಳೆಯ ಯೋಜನೆ. ಆದರೆ ಮನೆಮನೆಯಿಂದ ಡ್ರೈನೇಜ್ ಸಂಪರ್ಕವನ್ನು ಚೆಂಬರ್ ಗೆ ಕೊಡುವಾಗ ಸ್ಲೋಪ್ ಸಿಗುತ್ತಿಲ್ಲ. ಯಾವಾಗಲೂ ಮನೆಮನೆಯಿಂದ ಡ್ರೈನೇಜ್ ಸಂಪರ್ಕ್ ಬರುವಾಗ ಚೇಂಬರ್ ತುಂಬಾ ತಳಮಟ್ಟದಲ್ಲಿ ಇರಬೇಕು. ಇನ್ನು ಚೇಂಬರ್ ನಿರ್ಮಾಣ ಮಾಡುವಾಗ ರಸ್ತೆಯ ಬದಿಯಲ್ಲಿ ಅದನ್ನು ಅಳವಡಿಸುವಾಗ ಜಾಗವನ್ನು ಸರ್ವೆ ಮಾಡಬೇಕಾಗುತ್ತದೆ. ಯಾವುದೂ ಮಾಡದೇ ಇವರು ಡ್ರೈನೇಜ್ ನಿರ್ಮಾಣ ಮಾಡಿದರೆ ಮುಂದಿನ ದಿನಗಳಲ್ಲಿ ಹಿಂದಿನ ಶಾಸಕರು ಮಾಡಿದ ಹಾಗೆ ಕಾಂಕ್ರೀಟ್ ರಸ್ತೆಯನ್ನು ಭರ್ತಡೇ ಕೇಕ್ ನಂತೆ ಕಟ್ ಮಾಡಬೇಕಾಗುತ್ತದೆ. ಆಗ ಪೋಲಾಗುವುದು ಯಾರ ತೆರಿಗೆ ಹಣ. ಹೀಗೆ ಚರ್ಚೆಯಾಗುತ್ತಿದ್ದಂತೆ ನನಗೆ ಮಾತನಾಡುವ ಅವಕಾಶ ಸಿಕ್ಕಿತು. ಮಂಗಳೂರಿನ ಕಾಂಕ್ರೀಟ್ ರಸ್ತೆಗಳ ಮೇಲೆ ಬಂಗಾರ ಮತ್ತು ಬೆಳ್ಳಿಯ ಲೇಪನ ಮಾಡುವ ಐಡಿಯಾ ಏನಾದರೂ ಇದೆಯಾ ಎಂದು ಕೇಳಿದೆ? ನಿಜಕ್ಕೂ ನಿಮಗೆ ಆಶ್ಚರ್ಯವಾಗಬಹುದು. ಕಾಂಕ್ರಿಟ್ ರಸ್ತೆಗಳಿಗೂ ಬಂಗಾರ ಮತ್ತು ಬೆಳ್ಳಿಗೆ ಏನು ಸಂಬಂಧ? ಆದರೆ ನನ್ನ ಬಳಿ ದಾಖಲೆ ಇತ್ತು. ಅದರೊಂದಿಗೆ 12 ಮುಕ್ಕಾಲು ಲಕ್ಷದಲ್ಲಿ ನಿರ್ಮಾಣವಾಗುತ್ತಿರುವ ಬಸ್ ಸ್ಟಾಪ್ ಗೆ ಇವರು ಖರ್ಚು ಮಾಡಿರುವ ಹಣದಲ್ಲಿ ಒಂದು ಚಿಕ್ಕ ಮನೆ ನಿರ್ಮಾಣವಾಗುತ್ತಿದೆ. ಆ ಬಗ್ಗೆ ಪ್ರಶ್ನೆ ಕೇಳಲೇಬೇಕಿತ್ತು. ಕೇಳಿದ್ದೇನೆ. ಆ ವಿಷಯಗಳನ್ನು ನಾಳೆ ಮಾತನಾಡೋಣ. ತಪ್ಪು ಯಾರೇ ಮಾಡಲಿ, ಅವರ ಮುಖಕ್ಕೆ ಕನ್ನಡಿ ಹಿಡಿಯುವುದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಬಿಟ್ಟರೆ ಮೋದಿಯ ಮುಖಕ್ಕೆ ಶಾಲು ಅಡ್ಡಹಾಕಿ ಸ್ಮಾರ್ಟ್ ಸಿಟಿ ಹಣವನ್ನು ಯಾರ್ಯಾರೋ ನುಂಗಿ ಬಿಡುತ್ತಾರೆ!
Leave A Reply