ಒಂದರಿಂದ ಹತ್ತು ಲಕ್ಷದ ಒಳಗೆ ಜನಸಂಖ್ಯೆ ಇರುವ ನಗರಗಳ ಸ್ವಚ್ಚತೆಯನ್ನು ಆಧಾರಿಸಿ ಅವುಗಳಿಗೆ ಅಂಕಗಳನ್ನು ಕೊಡುವ ಪದ್ಧತಿಯನ್ನು 2016 ರಲ್ಲಿ ನಮ್ಮ ಕೇಂದ್ರ ಸರಕಾರ ಜಾರಿಗೊಳಿಸಿತ್ತು. ಒಂದು ರೀತಿಯಲ್ಲಿ ಪರೀಕ್ಷೆ ಮಾಡಿ ರ್ಯಾಂಕ್ ಕೊಟ್ಟ ಹಾಗೆ. ಒಳ್ಳೆಯ ರ್ಯಾಂಕ್ ಪಡೆದುಕೊಳ್ಳುವ ಸಿಟಿಗಳ ಕಮೀಷನರಿಗೆ, ಜನಪ್ರತಿನಿಧಿಗಳಿಗೆ ಒಳ್ಳೆಯ ರ್ಯಾಂಕ್ ಬಂದರೆ ಒಂದು ರೀತಿಯಲ್ಲಿ ಕೇಂದ್ರದಲ್ಲಿ ಕುಳಿತ ಹೆಡ್ ಮಾಸ್ಟರ್ ಬೆನ್ನು ತಟ್ಟಿದಂತಹ ಸಂಭ್ರಮ. ಅದೇ ಕಡಿಮೆ ಮಾರ್ಕ್ ಬಂದರೆ ಮುಖ ತೋರಿಸಲಾಗದ ಪರಿಸ್ಥಿತಿ. ಸ್ವಚ್ಚತೆಯ ವಿಷಯದಲ್ಲಿ 2016 ರಲ್ಲಿ 73 ನೇ ಸ್ಥಾನದಲ್ಲಿದ್ದ ನಾವು ಒಂದೇ ವರ್ಷದಲ್ಲಿ ಅದ್ಭುತ ಎನ್ನಿಸುವಂತೆ 63 ನೇ ಸ್ಥಾನಕ್ಕೆ ಬಂದು ತಲುಪಿದೆವು. ಅದರ ನಂತರದ ವರ್ಷದಲ್ಲಿ ಧೀಡಿರನೇ 52 ನೇ ಸ್ಥಾನಕ್ಕೆ ಬಂದೆವು. ಪಾಲಿಕೆಗೆ ಖುಷಿಯೋ ಖುಷಿ. ನಮ್ಮವರು ಎಷ್ಟು ಕ್ಲೀನ್ ಆಗಿ ನಗರವನ್ನು ಇಟ್ಟುಕೊಳ್ಳುತ್ತೇವೆ ಎಂದು ನಮ್ಮಷ್ಟಕ್ಕೆ ನಾವೇ ಸಂಭ್ರಮ ಪಟ್ಟುಕೊಂಡೆವು. ಆದರೆ ಒಂದೇ ವರ್ಷ ಸಾಕು, ನಮ್ಮ ಸ್ವಚ್ಚತೆಯ ಬಂಡವಾಳ ಹೊರಗೆ ಬೀಳಲು. ಈಗ ನಾವು 165 ನೇ ಸ್ಥಾನಕ್ಕೆ ಬಂದು ತಲುಪಿದ್ದೇವೆ. ರಾಯರ ಕುದುರೆ ಕತ್ತೆಯಾಗಿದೆ ಎನ್ನುವುದೇ ಇದಕ್ಕೆ.
ಒಂದು ಕಡೆಯಲ್ಲಿ ಮಂಗಳೂರಿನ ಸ್ವಚ್ಚತೆಯ ಗುತ್ತಿಗೆಯನ್ನು ಪಡೆದುಕೊಂಡಿರುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರಿಗೆ ಪ್ರತಿ ತಿಂಗಳಿಗೆ 2 ಕೋಟಿ ರೂಪಾಯಿ ಪಾವತಿಯಾಗುತ್ತಿದೆ. ಅವರು ಎಷ್ಟು ಕೆಲಸ ಮಾಡುತ್ತಾರೋ ಬಿಡ್ತಾರೋ ಅವರಿಗೆ ಗೊತ್ತು. ಅವರ ಮೂಗು ಹಿಡಿದು ಕೆಲಸ ಮಾಡಿಸುವಂತಹ ಗಂಡಸರು ಇನ್ನು ಪಾಲಿಕೆಯ ಮೇಯರ್ ಹುದ್ದೆಗೆ ಬಂದು ಕುಳಿತಿಲ್ಲ. ಅದರೊಂದಿಗೆ ಆಂಟೋನಿ ವೇಸ್ಟ್ ಅವರ ನಸೀಬಿಗೆ ಮಂಗಳೂರಿನಲ್ಲಿ ರಾಮಕೃಷ್ಣ ಮಿಶನ್ ಇದೆ. ಅವರು ಸ್ವಚ್ಚತೆಯೇ ಗುರಿ ಎನ್ನುವಂತೆ ಪ್ರತಿ ಭಾನುವಾರ ಮಂಗಳೂರಿನ ವಿವಿದೆಡೆ ಸ್ವಚ್ಚತೆಯ ಸೇವೆ ಮಾಡುತ್ತಾ ಈಗಾಗಲೇ ಅರ್ಧ ಮಂಗಳೂರನ್ನು ಸ್ವಚ್ಚ ಮಾಡಿ ಆಗಿದೆ. ಅವರಿದ್ದ ಕಾರಣ ಆಂಟೋನಿ ವೇಸ್ಟ್ ನವರು ಏನು ಮಾಡದಿದ್ದರೂ ಮಂಗಳೂರು ಕನಿಷ್ಟ 165 ನೇ ಸ್ಥಾನದಲ್ಲಿಯಾದರೂ ನಿಂತಿರುವುದು. ಇಲ್ಲದಿದ್ದರೆ ನಮ್ಮ ಮಂಗಳೂರಿಗೆ ದೇವರೇ ಗತಿ.
ಆದರೆ ಅದೇ ಇಂದೋರ್ ಎನ್ನುವ ನಗರವನ್ನೇ ತೆಗೆದುಕೊಳ್ಳಿ. ಅವರು ಕೇವಲ ಸ್ವಚ್ಚತೆಗೆ ತಿಂಗಳಿಗೆ 2 ಕೋಟಿ ಖರ್ಚು ಮಾಡುತ್ತಾರೋ ಇಲ್ವೋ ಅವರ ನಗರ ಕಳೆದ ಮೂರು ವರ್ಷಗಳಿಂದ ಮೊದಲ ಸ್ಥಾನದಲ್ಲಿದೆ. ಹಾಗಾದರೆ ಮಂಗಳೂರಿಗೆ ಬಡಿದಿರುವ ಗ್ರಹಣ ಯಾವುದು?
ನಾವು ಮಾತನಾಡಿದರೆ ಡೆಂಗ್ಯೂ, ಮಲೇರಿಯಾದಲ್ಲಿ ನಂಬರ್ 1 ನೇ ಸ್ಥಾನವನ್ನು ರಾಜ್ಯದಲ್ಲಿ ಯಾರಿಗೂ ಬಿಟ್ಟುಕೊಟ್ಟಿಲ್ಲ. ಅದೇ ಸ್ವಚ್ಚತೆಯ ವಿಷಯ ಬಂದಾಗ ಸೆಂಚುರಿಯ ಮೇಲೆ 65 ಹೊಡೆದಿದ್ದೇವೆ. ಇದು ಯಾಕೆ ಎಂದು ಅಧಿಕಾರಿಗಳಲ್ಲಿ ಕೇಳಿ ನೋಡಿ. ಅವರ ಬಳಿ ರೆಡಿಮೆಡ್ ಉತ್ತರ ಇದೆ. ಇದಕ್ಕೆ ಕಾರಣ ಪಚ್ಚನಾಡಿಯ ಮಂದಾರದ ಪರಿಸ್ಥಿತಿಯಂತೆ. ಪಚ್ಚನಾಡಿಯ ಪರಿಸ್ಥಿತಿಗೆ ಪಾಲಿಕೆಯ ಅಧಿಕಾರಿಗಳೇ ಕಾರಣ. ಪಾಲಿಕೆಯ ಹಿಂದಿನ ಕಾಂಗ್ರೆಸ್ ಆಡಳಿತ ಮತ್ತು ಹಿಂದಿನ ರಾಜ್ಯ ಸರಕಾರ ಆವತ್ತೆ ಎಚ್ಚೆತ್ತಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ಪರಿತಪಿಸುವಂತಹ ಪರಿಸ್ಥಿತಿ ಇದೆ. ಈಗ ಬಂದಿರುವ ಬಿಜೆಪಿಯ ರಾಜ್ಯ ಸರಕಾರ ಮತ್ತು ಪಾಲಿಕೆ ಆದಷ್ಟು ಬೇಗ ಪಚ್ಚನಾಡಿಯನ್ನು ಚೆನ್ನಾಗಿಟ್ಟುಕೊಂಡರೆ ನಾವು 165 ನೇ ಸ್ಥಾನದಿಂದ ಕನಿಷ್ಟ 60 ರ ಒಳಗೆ ಹೋಗಬಹುದು. ಪಚ್ಚನಾಡಿ ಸರಿ ಮಾಡುತ್ತೇವೆ ಎಂದು ಇಬ್ಬರೂ ಶಾಸಕರು ಪಾಲಿಕೆ ಚುನಾವಣೆ ಮೊದಲು ಭರವಸೆ ಕೊಟ್ಟಿದ್ದಾರೆ. ಆರೋಗ್ಯ ಮಂತ್ರಿಗಳು ಬಂದು ನೋಡಿ ಹೋಗಿದ್ದಾರೆ. ಡಿಸಿ, ಪಾಲಿಕೆ ಕಮೀಷನರ್ ಏನೋ ರೂಪುರೇಶೆ ಹಾಕಿರುವಂತಿದೆ. ಅವರೇನೆ ಮಾಡಲಿ ಮುಂದಿನ ಸ್ವಚ್ಚ ಸರ್ವೇಕ್ಷಣ್ ಆಗಿ ಫಲಿತಾಂಶ ಬರುವಾಗ ಮಂಗಳೂರು 50 ರ ಒಳಗೆ ಬರಬೇಕು. ಇಲ್ಲದಿದ್ದರೆ ಸ್ವಚ್ಚ ಮಾಡಲು ಬಳಸುವ ಪೊರಕೆಯನ್ನೇ ಜನ ಕೈಯಲ್ಲಿ ಹಿಡಿದುಕೊಂಡು ಒಂದೋ ಆಂಟೋನಿ ವೇಸ್ಟ್ ನವರು ಮಂಗಳೂರಿನಲ್ಲಿರಬೇಕು ಅಥವಾ ನಾವು ಇರಬೇಕು. ಎರಡರಲ್ಲಿ ಒಂದು ಡಿಸೈಡ್ ಮಾಡಿ ಎಂದು ಹೋರಾಟಕ್ಕೆ ಇಳಿಯಬಹುದು!
Leave A Reply