ನೀರಿನ ದರ ಇಳಿಸುವ ರೀತಿ ಹೇಳಿದ್ದೇನೆ, ಮಾಡುವ ಜವಾಬ್ದಾರಿ ಪಾಲಿಕೆ ಮತ್ತು ಶಾಸಕರ ಮೇಲಿದೆ!!
ನೀರಿನ ದರವನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಪ್ಪತ್ತು ವರ್ಷಗಳ ಬಳಿಕ ಹೆಚ್ಚಿಸಲಾಗಿದೆ. ಆದ್ದರಿಂದ ದರ ಹೆಚ್ಚಿಸಿರುವ ಬಗ್ಗೆ ಜನಸಾಮಾನ್ಯರ ಪರವಾಗಿ ನಾನು ಆಕ್ಷೇಪ ಎತ್ತುತ್ತಿಲ್ಲ. ಆದರೆ ಹೆಚ್ಚಿಸಿರುವ ರೀತಿಯ ಬಗ್ಗೆ ನನಗೆ ಅಸಮಾಧಾನವಿದೆ. ಯಾಕೆಂದರೆ ಅವೈಜ್ಞಾನಿಕವಾಗಿ ದರವನ್ನು ಹೆಚ್ಚಿಸಿರುವುದರಿಂದ ಜನರಿಗೆ ಅನ್ಯಾಯವಾಗಿದೆ. ಹೇಗೆ ಎನ್ನುವುದನ್ನು ನೋಡೋಣ. ಹಿಂದೆ 26 ಸಾವಿರ ಲೀಟರ್ ಒಳಗೆ ನೀರನ್ನು ಮಿನಿಮಮ್ ಬಳಸಿದರೆ ಆಗ ಕನಿಷ್ಟ ದರ 65 ರೂಪಾಯಿ ಮಾತ್ರ ಬರುತ್ತಿತ್ತು. ಆದರೆ ಹಿಂದಿನ ರಾಜ್ಯ ಸರಕಾರ ಅತೀ ಬುದ್ಧಿವಂತಿಕೆಯಿಂದ ಮೆಸ್ಕಾಂ ರೀತಿಯಲ್ಲಿ ಸ್ಲ್ಯಾಬ್ ದರವನ್ನು ನೀರಿನ ವಿಷಯದಲ್ಲಿ ಅಳವಡಿಸಿತು. ಇದರಿಂದ ಏನಾಯಿತು ಎಂದರೆ ಎಂಟು ಸಾವಿರದವರೆಗೆ ನೀರನ್ನು ಬಳಸಿದರೆ ಈಗ 56 ರೂಪಾಯಿ ಮಿನಿಮಮ್ ದರ ಬರುತ್ತದೆ. ಅದಕ್ಕಿಂತ ಹೆಚ್ಚು ನೀರು ಬಳಸಿದಾಗ ಅದು “ಒಟ್ರಾಶಿ ಹೆಚ್ಚುತ್ತಾ ಹೋಗುತ್ತಿದೆ” ಎನ್ನುವುದು ಇಲ್ಲಿನ ಜನರ ಆಡುಮಾತಿನ ಅನುಭವ. ಹೀಗೆ ನೀರಿನ ದರ ಪಾಲಿಕೆಯಲ್ಲಿ ಏರಿಸುವಾಗ ಇಲ್ಲಿ ಜನಪ್ರತಿನಿಧಿಗಳ ಆಡಳಿತ ಇರಲಿಲ್ಲ. ಹಾಗಂತ ಇನ್ನು ಕೆಲವು ದಿನಗಳ ನಂತರ ಪಾಲಿಕೆಯಲ್ಲಿ ಬಿಜೆಪಿ ಮೇಯರ್ ಅಧಿಕಾರ ವಹಿಸಿಕೊಂಡರೂ ಏಕಾಏಕಿ ಏರಿರುವ ದರವನ್ನು ಇಳಿಸಲು ಸಾಧ್ಯವಿಲ್ಲ. ಹಾಗಾದರೆ ಏನು ಮಾಡಬಹುದು. ಪಾಲಿಕೆಯ ಮೊದಲ ಪರಿಷತ್ ಸಭೆಯಲ್ಲಿ ಈ ಪ್ರಸ್ತಾವವನ್ನು ಇಟ್ಟು ವಿಷಯವನ್ನು ಚರ್ಚೆ ಮಾಡಬೇಕು. ಪರಿಷತ್ ಸಭೆಯಲ್ಲಿ ನೀರಿನ ದರವನ್ನು ಮತ್ತೆ ಪರಿಷ್ಕರಣೆ ಮಾಡಬೇಕು ಎನ್ನುವ ನಿರ್ಣಯವನ್ನು ಪಾಸು ಮಾಡಬೇಕು. ಅದನ್ನು ರಾಜ್ಯ ಸರಕಾರದ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಡಬೇಕು. ಅದರ ನಂತರ ಕಡಿಮೆ ಮಾಡಲು ರಾಜ್ಯ ಸರಕಾರ ಒಪ್ಪಿದರೆ ಕಡಿಮೆ ಆಗಬಹುದು. ರಾಜ್ಯದಲ್ಲಿಯೂ, ಪಾಲಿಕೆಯಲ್ಲಿಯೂ ಒಂದೇ ಪಕ್ಷದ ಸರಕಾರ ಇರುವುದರಿಂದ ಇದೇನೂ ದೊಡ್ಡ ಸವಾಲಾಗಿ ಉಳಿಯುವುದಿಲ್ಲ. ಅದನ್ನು ಬಿಜೆಪಿ ಮಾಡುತ್ತದಾ ಎನ್ನುವುದು ಈಗ ನಮ್ಮ ಮುಂದಿರುವ ಪ್ರಶ್ನೆ.
ಹಾಗಾದರೆ ಇಪ್ಪತ್ತು ವರ್ಷಗಳ ಹಿಂದಿನ ದರವನ್ನೇ ನಾವು ಮುಂದುವರೆಸಿಕೊಂಡು ಹೋದರೆ ಆದಾಯ ಎಲ್ಲಿಂದ ಬರುತ್ತದೆ ಎನ್ನುವುದನ್ನು ನೀವು ಕೇಳಬಹುದು. ಮೊದಲನೇಯದಾಗಿ ಹಿಂದೆ ಇದ್ದ 26 ಸಾವಿರ ಲೀಟರ್ ಮೀನಿಮಮ್ ಸ್ಲ್ಯಾಬ್ ಅನ್ನೇ ಮುಂದುವರೆಸಿಕೊಂಡು ಹೋಗೋಣ. 65 ರೂಪಾಯಿ ಇದ್ದ ಕಡೆ ನೂರು ರೂಪಾಯಿ ಮಾಡಲಿ. ಈಗ ಒಬ್ಬೊಬ್ಬರಿಗೆ ಇನ್ನೂರರಿಂದ ಇನ್ನೂರೈವತ್ತು ರೂಪಾಯಿ ಬರುತ್ತಿದೆ. ಒಂದು ವೇಳೆ ಇದು ಪಾಲಿಕೆಗೆ ಸರಿ ಕಾಣಿಸುವುದಿಲ್ಲವಾದರೆ ಗೃಹಯೇತರ, ವಾಣೀಜ್ಯ ನೀರು ಬಳಕೆಗೆ ಈಗ ಮಾಡಿರುವ ಹೊಸ ದರವನ್ನೇ ವಿಧಿಸಲಿ. ನಾನು ಹೋಟೇಲ್, ಹಾಸ್ಟೆಲ್, ಕೈಗಾರಿಕೆ, ಫ್ಯಾಕ್ಟರಿ ಪರವಾಗಿ ಮಾತನಾಡುವುದಿಲ್ಲ. ಅವರು ವ್ಯಾಪಾರಕ್ಕೆ ಕುಳಿತುಕೊಂಡಿರುವುದರಿಂದ ಅವರು ಬೇಕಾದರೆ ಸ್ವಲ್ಪ ಜಾಸ್ತಿ ಕೊಟ್ಟರೆ ಅವರದ್ದೇನೂ ಕರಗುವುದಿಲ್ಲ. ಅದೇ ಜನಸಾಮಾನ್ಯರಿಗೆ ಹೊಸ ಸ್ಲ್ಯಾಬ್ ವಿಧಿಸಿರುವುದರಿಂದ ಅವರ ಮೇಲೆ ಏಕಾಏಕಿ 175% ತನಕ ಹೊರೆ ಬೀಳುತ್ತಿದೆ.
ಇನ್ನು ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದೇ ಇದ್ದಾಗ ಪಾಲಿಕೆ ಅಧಿಕಾರಿಗಳು ರಾಜ್ಯ ಸರಕಾರದ ಮೂಲಕ ಮಾಡಿಸಿರುವ ಈ ದರ ಹೆಚ್ಚಳ ನೀರಿನ ವಿಷಯಕ್ಕೆ ಮಾತ್ರ ಅಧಿಕಾರಿಗಳು ಯಾಕೆ ಇಷ್ಟು ಆಸಕ್ತಿ ತೆಗೆದುಕೊಂಡರು ಎಂದು ಅನಿಸುತ್ತದೆ. ಇವರು ಹೆಚ್ಚಳ ಮಾಡುವುದಾದರೆ ಹೋರ್ಡಿಂಗ್ಸ್ ಶುಲ್ಕ ಹೆಚ್ಚಳ ಮಾಡಬಹುದಿತ್ತು. ಬಿಲ್ಡಿಂಗ್ ಲೈಸೆನ್ಸ್ ಹೆಚ್ಚಳ ಮಾಡಬಹುದಿತ್ತು, ಜನನ-ಮರಣ ಪತ್ರ ಶುಲ್ಕ ಜಾಸ್ತಿ ಮಾಡಬಹುದಿತ್ತು. ಬೇಕಾದರೆ ಮಧ್ಯಮ ವರ್ಗದವರು ಮನೆ ಕಟ್ಟಲು ಹೊರಟರೆ ಅದೇ ಹಿಂದಿನ ದರ ಇದ್ದರೂ ಪರವಾಗಿಲ್ಲ. ಆದರೆ ಶ್ರೀಮಂತ ಬಿಲ್ಡರ್ಸ್ ವ್ಯಾಪಾರಕ್ಕೆ ಇಳಿಯುವಾಗ ಅವರ ಮೇಲೆ ಸ್ವಲ್ಪ ಒತ್ತಡ ಬಿದ್ದರೆ ಏನೂ ಆಗುತ್ತಿರಲಿಲ್ಲ. ಯಾಕೋ, ಅಧಿಕಾರಿಗಳು ಜನರ ವಿರುದ್ಧ, ಬಿಲ್ಡರ್ಸ್ ಪರ ಎಂದು ಮತ್ತೆ ಸಾಬೀತಾಯಿತು. ಅದು ಸರಿ ಮಾಡಿ ನಾವು ಜನರ ಪರ ಇದ್ದೇವೆ ಎಂದು ತೋರಿಸುವ ಹೊಣೆಗಾರಿಕೆ ಹೊಸ ಪಾಲಿಕೆ ಪರಿಷತ್ ಮತ್ತು ಇಬ್ಬರು ಶಾಸಕರ ಮೇಲಿದೆ. ಮಾಡುತ್ತಾರಾ, ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತೆ!
Leave A Reply