100ಕ್ಕೂ ಹೆಚ್ಚು ಜನ ಸೇರುವ ಮದುವೆ ಮನೆಯವರು ಪೊಲೀಸರಿಗೆ ಹಣ ಕೊಡಬೇಕಿಲ್ಲ!!
ಕರೋನಾ ಹೇಗೆ ಬರುತ್ತದೆ ಎನ್ನುವ ಪ್ರಶ್ನೆ ಈ ಬಾರಿ ಹತ್ತನೆ ತರಗತಿಯ ಮಕ್ಕಳಿಗೆ ಪರೀಕ್ಷೆಯಲ್ಲಿ ಕೇಳಿದರೆ ಹೆಚ್ಚಿನ ಎಲ್ಲಾ ಮಕ್ಕಳು ಸರಿಯಾದ ಉತ್ತರ ಕೊಟ್ಟು ಐದಕ್ಕೆ ಐದು ಅಂಕಗಳನ್ನು ಪಡೆಯುವ ಸಾಧ್ಯತೆ ಇದೆ. ಯಾಕೆಂದರೆ ಅಷ್ಟರಮಟ್ಟಿಗೆ ಅದು ವೈರಲ್ ಆಗಿದೆ. ಕರೋನಾವನ್ನು ತಡೆಗಟ್ಟುವುದು ಹೇಗೆ ಎನ್ನುವುದಕ್ಕೆ ಆಯುರ್ವೇದದಿಂದ ಹಿಡಿದು ಭಜನೆ ಮಾಡುವ ಮೂಲಕ ವಿವಿಧ ವರ್ಗದ ಜನರು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಜಿಲ್ಲಾಡಳಿತ ಜನರು ಹೇಗೆ ಸಹಕರಿಸಬೇಕು ಎಂದು ಜಾಗೃತಿ ಮೂಡಿಸುತ್ತಿದೆ. ರಸ್ತೆ ಬದಿಯ ಆಹಾರಗಳನ್ನು ತಿನ್ನುವುದರಿಂದ ಈ ರೋಗಕ್ಕೆ ಆಹ್ವಾನ ಕೊಟ್ಟ ಹಾಗೆ ಎನ್ನುವುದು ಸದ್ಯಕ್ಕೆ ನಂಬಿರುವ ವಿಚಾರ. ಆದ್ದರಿಂದ ರಸ್ತೆ ಬದಿ ಆಹಾರ ಮಾರಾಟ ಮಾಡುವ ತಳ್ಳುಗಾಡಿಯವರಿಗೆ ನಿರ್ಬಂಧನೆ ವಿಧಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ನಾನು ಹೇಳುವುದಾದರೆ ಇದನ್ನು ಆದಷ್ಟು ಬೇಗ ಅನುಷ್ಟಾನಕ್ಕೆ ತರಬೇಕು. ಕನಿಷ್ಟ ಒಂದು ವಾರ ಈ ತಳ್ಳುಗಾಡಿಯವರು ಮನೆಯಲ್ಲಿ ರೆಸ್ಟ್ ಮಾಡುವುದು ಒಳ್ಳೆಯದು. ಒಂದು ವೇಳೆ ಈ ಅಂಗಡಿಯವರು ಜಿಲ್ಲಾಡಳಿತದ ಸೂಚನೆಯ ಹೊರತಾಗಿಯೂ ವ್ಯಾಪಾರ ಮಾಡುತ್ತಿದ್ದರೆ ಆಗ ಅಂತಹ ಅಂಗಡಿಗಳ ಮೇಲೆ ದಾಳಿ ಮಾಡಿ ವಸ್ತುಗಳನ್ನು ಎತ್ತಾಕಿಕೊಂಡು ಹೋದರೂ ತೊಂದರೆ ಇಲ್ಲ. ಹಾಗಂತ ರೇಡ್ ಮಾಡುವವರು ಬೆಳಿಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆಯ ಒಳಗೆ ರೇಡ್ ಮಾಡಲು ಹೋದರೆ ಅದರಿಂದ ಏನೂ ಪ್ರಯೋಜನವಿಲ್ಲ. ಯಾಕೆಂದರೆ ತಳ್ಳುಗಾಡಿಯಲ್ಲಿ ಮಾರಾಟ ಮಾಡುವವರು ತಮ್ಮ ವ್ಯಾಪಾರ ಶುರು ಮಾಡುವುದೇ ಸಂಜೆ ಐದು ಗಂಟೆಯ ನಂತರ. ವಿವಿಧ ಹಣ್ಣುಹಂಪಲುಗಳನ್ನು ತುಂಡರಿಸಿ ಅದಕ್ಕೆ ಒಂದು ಕಡ್ಡಿ ಸಿಕ್ಕಿಸಿ ಮಾರಾಟ ಮಾಡುವುದು, ಚರುಂಬುರಿ, ಮಾವಿನ ಕಾಯಿ, ಕೋಸುಂಬರಿ ಸಹಿತ ವಿವಿಧ ಆಹಾರ ಮಾರಾಟ, ಬೇಲ್ ಪುರಿ, ಪಾನಿಪುರಿ ಅಂಗಡಿಗಳು, ಆಮ್ಲೇಟ್, ಬುರ್ಜಿ ಸ್ಟಾಲ್ ಗಳು ಸಂಜೆಯ ನಂತರ ರಸ್ತೆ ಬದಿ ತೆರೆದುಕೊಳ್ಳುತ್ತವೆ. ಹಾಗಿರುವಾಗ ಸಂಜೆ 7 ಗಂಟೆಯ ನಂತರವೇ ಅಲ್ಲಿ ತೆರಳಿ ಅಂತಹ ಅಂಗಡಿಗಳನ್ನು ಮುಚ್ಚುವಂತೆ ಅಂಗಡಿಗಳ ಮಾಲೀಕರಲ್ಲಿ ಜಾಗೃತಿ ಮೂಡಿಸಬೇಕು. ಒಂದು ವೇಳೆ ಕೇಳದೇ ಮರುದಿನವೂ ವ್ಯಾಪಾರ ಶುರುಹಚ್ಚಿಕೊಂಡರೆ ಆಗ ರೇಡ್ ಮಾಡಿ ಬಂದ್ ಮಾಡುವುದು ಒಳ್ಳೆಯದು.
ಇನ್ನು ಪಾಲಿಕೆಯ ಆಯುಕ್ತರು ಜಾಗೃತಿ ಕಾರ್ಯಕ್ರಮದ ಬಗ್ಗೆ ಏನೆಲ್ಲಾ ಕ್ರಮ ತೆಗೆದುಕೊಂಡಿದ್ದೇವೆ ಎನ್ನುವುದನ್ನು ಪ್ರಚಾರ ಮಾಡಬೇಕು. ಇನ್ನು ಪ್ರತಿ ಹೋಟೇಲಿನಲ್ಲಿಯೂ ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯವಾಗಿ ಮಾಡಬೇಕು. ಯಾಕೆಂದರೆ ಇದು ಹೋಟೇಲಿನವರ ಜವಾಬ್ದಾರಿ. ವರ್ಷವೀಡಿ ವ್ಯಾಪಾರ ಮಾಡಿ ಸಾಕಷ್ಟು ಲಾಭ ಗಳಿಸುವವರು ಇಂತಹ ಸಂದರ್ಭದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಟ್ಟು ಗ್ರಾಹಕರ ಆರೋಗ್ಯದ ಬಗ್ಗೆ ಕೂಡ ಗಮನ ಹರಿಸಬೇಕು. ಇನ್ನು ದೊಡ್ಡ ದೊಡ್ಡ ಮದುವೆಗಳು ನಿರಾಂತಕವಾಗಿ ನಡೆಯುತ್ತಿವೆ. ಅಂತಹ ಒಂದು ದೊಡ್ಡ ಮದುವೆಯಲ್ಲಿ ಭಾನುವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಪಾಲ್ಗೊಂಡಿದ್ದಾರೆ. ಒಂದು ವೇಳೆ ಅಲ್ಲಿ ಯಾರಾದರೂ ಕರೋನಾ ವೈರಸ್ ಮೆಟ್ಟಿಕೊಂಡವ ಒಳಗೆ ನುಸುಳಿದರೆ ಆಗ ಏನಾಗುತ್ತದೆ ಎನ್ನುವ ಮುಂಜಾಗ್ರತೆ ಎಲ್ಲರಿಗೂ ಬೇಕು. ಇನ್ನು ಕೆಲವೆಡೆ ನೂರಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳುವ ಮದುವೆಗಳಲ್ಲಿ ಪೊಲೀಸರು ಅಂತಹ ಮದುವೆಗಳ ವಧು-ವರರ ಪೋಷಕರಿಗೆ ಹೆದರಿಸಿ ತಲಾ 25 ಸಾವಿರ ರೂಪಾಯಿಗಳನ್ನು ಪೀಕಿಸಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬರುತ್ತಿವೆ. ಹಣ ಕೊಡದಿದ್ದರೆ ಪೊಲೀಸರು ಮದುವೆಗೆ ಅಡ್ಡಿ ಪಡಿಸುತ್ತಾರೆ ಎಂದು ಹೆದರಿಸಿ ಬಡ ಪೋಷಕರು ಹಣ ನೀಡಿದ್ದಾರೆ ಎಂದು ಮಂಡ್ಯ ಕಡೆಯಿಂದ ಕೇಳಿ ಬರುತ್ತಿದೆ. ಇತ್ತ ಬೆಳಗಾವಿಯಲ್ಲಿ ಶಾಸಕರೊಬ್ಬರ ಮಗಳ ಮದುವೆ ಅದ್ದೂರಿಯಾಗಿ ನಡೆದರೆ ಮಂಡ್ಯದ ಹಳ್ಳಿಗಳಲ್ಲಿ ಸರಕಾರದ ನಿಯಮಗಳು ಗೊತ್ತಿಲ್ಲದ ರೈತರಿಂದ ಪೊಲೀಸರು ಹೆದರಿಸಿ ಹಣ ವಸೂಲಿ ಮಾಡಿರುವುದು ಅಮಾನವೀಯವಾಗಿದೆ. ಇನ್ನು ಕರೋನಾ ವಿಷಯದಲ್ಲಿ ರಾಜಕೀಯವನ್ನು ಯಾರೂ ಕೂಡ ಮಾಡಬಾರದು. ಇಲ್ಲಿ ಆಡಳಿತ ಮತ್ತು ವಿಪಕ್ಷ ಎರಡೂ ಸೇರಿ ಜನರೊಂದಿಗೆ ಸ್ಪಂದಿಸಬೇಕು. ಕೇವಲ ಟ್ವೀಟ್ ಮಾಡಿ ತಮ್ಮ ಬೇಳೆ ಬೇಯಿಸುವುದಕ್ಕಿಂತ ರಾಜಕೀಯ ನಾಯಕರು, ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇನ್ನು ಜನರು ಒಂದು ವಾರ ರಜೆ ಸಿಕ್ಕಿದೆ ಎಂದು ಪ್ರವಾಸಿ ತಾಣಗಳಿಗೆ, ದೇವಸ್ಥಾನಗಳಿಗೆ ಭೇಟಿ ಕೊಡುವುದು ಸರಿಯಲ್ಲ. ಇಂತಹ ಸಂದರ್ಭದಲ್ಲಿ ಮನೆಯಲ್ಲಿಯೇ ಕುಳಿತು ಕೆಲವರು ಹೇಳಿದಂತೆ ಪುಸ್ತಕಗಳನ್ನು ಓದುವ ಮೂಲಕ, ಗಾರ್ಡನಿಂಗ್ ಮಾಡುವ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಒಳ್ಳೆಯದು!
Leave A Reply