ಜೂನ್ 1ರಿಂದ ಉಡುಪಿ-ಮಂಗಳೂರು ಬಸ್ಸುಗಳ ಟಿಕೆಟ್ ದರ ಕೇಳಿದರೆ ಶಾಕ್ ಆಗುತ್ತದೆ!!
ಖಾಸಗಿ ಬಸ್ಸುಗಳನ್ನು ನಂಬಿದ್ದ ಕರಾವಳಿಯ ಮಧ್ಯಮ ವರ್ಗಕ್ಕೆ ಒಂದು ಸಮಾಧಾನಕರ ಸುದ್ದಿ ಇದೆ. ಅದೇನೆಂದರೆ ಜೂನ್ 1 ರಿಂದ ನೀವು ನಿಮ್ಮ ಊರಿನ ರಸ್ತೆಗಳ ಮೇಲೆ ಬಸ್ಸುಗಳ ಓಡಾಟವನ್ನು ನೋಡಲಿದ್ದೀರಿ. ಅಲ್ಲಿಗೆ ಕರಾವಳಿಯಲ್ಲಿ ಅದರಲ್ಲಿಯೂ ಮಂಗಳೂರಿನವರಿಗೆ ಲಾಕ್ ಡೌನ್ ಅಧಿಕೃತವಾಗಿ ಅಂತ್ಯವಾಗಲಿದೆ. ಯಾವಾಗ ಬಸ್ಸುಗಳು ಓಡಾಡಲು ಶುರುವಾಗುತ್ತದೆಯೋ ಅದರ ಅರ್ಥ ಯಾವ ಬಂದ್, ಲಾಕ್ ಡೌನ್ ಆ ಊರಿನ ಜನರನ್ನು ಮನೆಯಲ್ಲಿ ಬಂಧಿಸಿಡಲು ಆಗುವುದಿಲ್ಲ. ಇಲ್ಲಿಯ ತನಕ ದ್ವಿಚಕ್ರ, ಕಾರುಗಳು ಇದ್ದವರು ಮಾತ್ರ ಹೊರಗೆ ಬರುತ್ತಿದ್ದರು. ಇನ್ನು ಅದಿಲ್ಲದವರೂ ಹೊರಗೆ ಬರಲಿದ್ದಾರೆ. ಸರಿಯಾಗಿ ನೋಡಿದರೆ ನಿಮ್ಮ ಮನೆಯಿಂದ ಕೆಲಸಕ್ಕೆ ಹೋಗುವ ಕಡೆ ಬಸ್ಸುಗಳಿದ್ದರೆ ನೀವು ಆದಷ್ಟು ಅದನ್ನೇ ಬಳಸುವುದು ಉತ್ತಮ. ಈಗ ಪ್ರಸ್ತುತ ಬಸ್ಸಿನ ಟಿಕೇಟ್ ದರವನ್ನು ಹದಿನೈದು ಶೇಕಡಾ ಮಾತ್ರ ಹೆಚ್ಚಿಸಲು ಸರಕಾರದ ಕಡೆಯಿಂದ ಬಸ್ಸು ಮಾಲೀಕರಿಗೆ ಅನುಮತಿ ಸಿಕ್ಕಿದೆ.
ಇವರು 50% ಹೆಚ್ಚು ಮಾಡಲು ಅನುಮತಿ ನೀಡಿ ಎಂದು ಸರಕಾರದ ಬಳಿ ವಿನಂತಿಸಿದ್ದರು. ಆದರೆ ಸರಕಾರ ಒಪ್ಪಲಿಲ್ಲ. ಬಸ್ ಎಸೋಸಿಯೇಶನ್ ನವರು ನಾವು 50% ಕೇಳೋಣ. ಆಗ ಕನಿಷ್ಟ 25% ಹೆಚ್ಚಿಸಲು ಒಕೆ ಅನ್ನುತ್ತದೆ ಸರಕಾರ ಎಂದು ಲೆಕ್ಕ ಹಾಕಿ ಮೀಟಿಂಗ್ ನಲ್ಲಿ ಕುಳಿತಿದ್ದರು. ಆದರೆ ಸಾರಿಗೆ ಸಚಿವರು 15% ಹೆಚ್ಚು ಮಾಡಿ ಸಾಕು ಎಂದು ಹೇಳಿಬಿಟ್ಟರು. ಆದರೆ ವಿಷಯ ಇರುವುದು ಅಲ್ಲಿ 15% ಹೆಚ್ಚಿಸಲು ಮಾತ್ರ ಒಪ್ಪಿಕೊಂಡಿರುವ ಬಸ್ಸು ಮಾಲೀಕರು ಬೆಂಗಳೂರಿನಿಂದ ಮಂಗಳೂರು ತಲುಪುತ್ತಲೇ ಉಲ್ಟಾ ಹೊಡೆಯುವ ಸಿದ್ಧತೆಯಲ್ಲಿದ್ದಾರೆ. ನನಗೆ ಈಗ ಸಿಕ್ಕಿರುವ ಖಚಿತ ಮಾಹಿತಿಯ ಪ್ರಕಾರ ಮಣಿಪಾಲದಿಂದ ಮಂಗಳೂರಿಗೆ ಬರುವ ಪ್ರಯಾಣಿಕರು ಇನ್ನು ಮುಂದೆ 85 ರೂಪಾಯಿಗಳನ್ನು ನೀಡಬೇಕಾಗುತ್ತದೆ. ಆದರೆ ಹಿಂದಿನ ದರ ಇದ್ದದ್ದು 68 ರೂಪಾಯಿಗಳು ಮಾತ್ರ. 15% ಮಾತ್ರ ಹೆಚ್ಚಾಗುವುದಾದರೆ 68 ಇದ್ದದ್ದು 85 ಹೇಗೆ ಆಗುತ್ತದೆ. ಅದು ಕೂಡ 17 ರೂಪಾಯಿ ಹೆಚ್ಚಳ. ನೀವು ಕ್ಯಾಲ್ಕುಲೇಟರ್ ಹಿಡಿದುಕೊಂಡು ಲೆಕ್ಕ ಹಾಕಿದರೆ ಇದು ಬರೋಬ್ಬರಿ 25% ಹೆಚ್ಚು ಮಾಡಿದ ಹಾಗೆ ಆಗುತ್ತದೆ. ಸರಕಾರ ಅನುಮತಿ ನೀಡಿದ 15% ಮಾತ್ರ ಹೆಚ್ಚಳ ಮಾಡುವುದಾದರೆ ಹೆಚ್ಚೆಂದರೆ 10 ರೂಪಾಯಿ ಮಾತ್ರ ಇವರು ಹೆಚ್ಚಳ ಮಾಡಬಹುದಿತ್ತು. ಅಂದರೆ 68 ರೂಪಾಯಿ ಇಂದ 78 ರೂಪಾಯಿ. ಇಲ್ಲಿ 85 ರೂಪಾಯಿ ಮಾಡಿದ ಅರ್ಥ ಏನು? ಹೇಳುವವರು ಕೇಳುವವರು ಯಾರೂ ಇಲ್ಲ ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದಿರಾ, ಬಸ್ಸು ಮಾಲೀಕರೇ?
ನಿಮಗೆ ಇನ್ನೊಂದು ಶಾಕಿಂಗ್ ವಿಷಯ ಹೇಳುತ್ತೇನೆ. ಉಡುಪಿಯಿಂದ ಮಂಗಳೂರಿಗೆ ಬರಲು ಇಲ್ಲಿಯ ತನಕ ಇದ್ದ ಟಿಕೆಟ್ ದರ 57 ರೂಪಾಯಿ. ಟೋಲ್ ಸೇರಿಸಿ 62 ರೂಪಾಯಿ ತೆಗೆದುಕೊಳ್ಳಲಾಗುತ್ತಿತ್ತು. ಇನ್ನು ಮುಂದೆ ಇವರು 80 ರೂಪಾಯಿ ವಿಧಿಸಲಿದ್ದಾರೆ. 62 ರೂಪಾಯಿ ಎಲ್ಲಿ, 80 ಎಲ್ಲಿ ಎಂದು ನೀವು ಕೇಳಬಹುದು. 18 ರೂಪಾಯಿಗಳ ಅಂತರ. ಟೋಲ್ ಹಣ ಲೆಕ್ಕಹಾಕದಿದ್ದರೆ ಅದರ ಅರ್ಥ 40.35% ಇವರು ಹೆಚ್ಚು ಮಾಡಿದ್ದಾರೆ. ಇನ್ನು 5 ರೂಪಾಯಿ ಟೋಲ್ ಗೆ ಕೂಡ ಇವರು ತೆಗೆದುಕೊಂಡರೆ ಪ್ರಯಾಣಿಕನ ಕಥೆ ಏನು? ಸರಕಾರ ಹೆಚ್ಚು ಮಾಡಲು ಹೇಳಿದಷ್ಟೇ ಇವರು ಹೆಚ್ಚು ಮಾಡಿದಿದ್ದರೆ ಹೆಚ್ಚೆಂದರೆ 9 ರೂಪಾಯಿ ಮಾಡಬಹುದಿತ್ತು. ಆದರೆ ಹೆಚ್ಚಾದ ಮೊತ್ತ ನೋಡುವಾಗ ಶಾಕ್ ಆಗಲ್ವಾ?
ಹಾಗೇ ನನ್ನ ಬಳಿ ಇನ್ನು ಕೆಲವು ರೂಟ್ ಗಳಲ್ಲಿ ಇವರು ಬಾಯಿಗೆ ಬಂದಂತೆ ಹೆಚ್ಚಿಸಿದ ಮೊತ್ತಗಳಿವೆ. ಅದನ್ನು ಕೂಡ ನಿಮ್ಮ ಗಮನಕ್ಕೆ ತರುತ್ತೇನೆ. ಕಾರ್ಕಳದಿಂದ ಪಡುಬಿದ್ರೆಯಾಗಿ ಮಂಗಳೂರಿಗೆ ಬರುವವರಿಗೆ ಹೊಸದರ 65. ಹಿಂದೆ ಇದ್ದದ್ದು 55. ಇಲ್ಲಿ ಕೂಡ 18.18% ಹೆಚ್ಚಿಸಿದಂತೆ ಆಗಿದೆ. ಹೆಚ್ಚಿಸಬೇಕಾಗಿದ್ದದ್ದು 8.25 ಮಾತ್ರ. ಇನ್ನು ಕುಂದಾಪುರದಿಂದ ಮಂಗಳೂರಿಗೆ ಬರುವವರಿಗೆ 120 ಕೇಳಲು ತಯಾರಾಗಿದ್ದಾರೆ. ಹಿಂದೆ ಇದ್ದದ್ದು 100 ಮಾತ್ರ. ಕುಂದಾಪುರದಿಂದ ಉಡುಪಿಗೆ ಬರುವವರು ಇಲ್ಲಿಯ ತನಕ ಕೊಡುತ್ತಿದ್ದದ್ದು 45. ಇನ್ನು 55 ಅಂತೆ. ಕಾರ್ಕಳದಿಂದ ಮೂಡಬಿದ್ರೆ ದಾರಿಯಾಗಿ ಮಂಗಳೂರಿಗೆ ಬರುವವರಿಗೆ ಇನ್ನು ಮುಂದೆ 62 ರೂಪಾಯಿ ಚಾರ್ಜ್ ಆಗುತ್ತದೆ. ಇಷ್ಟರವರೆಗೆ ಇದ್ದದ್ದು 52. ಜಾಸ್ತಿ ಎಂದರೆ 8 ರೂಪಾಯಿ ಹೆಚ್ಚಿಸಬಹುದಿತ್ತು. ಹೀಗೆ ಇವರ ದರ ಪಟ್ಟಿ ನಿಗದಿಯಾಗಿದೆ. ಇದೆಲ್ಲ ಜನರ ಗಮನಕ್ಕೆ ಬಂದು ಜನ ಬೊಬ್ಬೆ ಹೊಡೆಯಬಹುದು ಎಂದು ಅವರ ಕೈಗೆ ಚಲೋ ಕಾರ್ಡ್ ಎನ್ನುವಂತದ್ದು ಕೊಡುತ್ತಾರೆ. ಇದರಲ್ಲಿ ಹಣ ಹಾಕಿ. ನೀವು ನಂತರ ಇದನ್ನು ತೋರಿಸಿದ್ರೆ ಸಾಕು. ಹಣ ತನ್ನಿಂದ ತಾನೆ ಕಟ್ ಆಗುತ್ತದೆ ಎನ್ನುವ ಉತ್ತರ. ಅದಕ್ಕಾಗಿ ಕಂಡಕ್ಟರ್ ಬಳಿ ಕೂಡ ಕಾರ್ಡ್ ಖರೀದಿಸಬಹುದು ಎನ್ನುವ ಸಮಜಾಯಿಷಿಕೆ. ಇನ್ನು ಕಾರ್ಡ್ ಪ್ರತಿ ಬಸ್ ಸ್ಟಾಪಿನಲ್ಲಿ ಕುಳಿತುಕೊಂಡಿರುವ ಟೈಮ್ ಕೀಪರ್ ಅವರಲ್ಲಿಯೂ ಖರೀದಿಸಿ. ಕನಿಷ್ಟ ನೂರು ರೂಪಾಯಿ ಕರೆನ್ಸಿ ಹಾಕಿದರೆ ಕಾರ್ಡ್ ಫ್ರೀ ಎನ್ನುವ ಭರವಸೆ. ನೀವು ಡಿಜಿಟಲ್ ಆಗುವ ಬಗ್ಗೆ ನನ್ನ ತಕರಾರಿಲ್ಲ. ಆದರೆ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಿಸಿರುವುದರ ಬಗ್ಗೆ ನನ್ನ ವಿರೋಧವಿದೆ. ನೀವು ಸರಕಾರದ ಬಳಿ ಕೇಳಿದ್ದಷ್ಟು ಸರಕಾರ ಹೆಚ್ಚಳ ಮಾಡಿಲ್ಲ ಎನ್ನುವ ಕಾರಣಕ್ಕೆ ಹೀಗೆ ಜನರಿಗೆ ವಂಚಿಸಲು ತೊಡಗಿದರೆ ಜನಜಾಗೃತಿ ಮಾಡಲೇಬೇಕಾಗುತ್ತದೆ. 15% ಮಾತ್ರ ಹೆಚ್ಚಿಸಿದರೆ ಒಕೆ, ಇಲ್ಲದಿದ್ದರೆ ನಿಮಗೆ ಸುಮ್ಮನೆ ಹಣ ನೀಡಲು ಜನ ತಯಾರಿಲ್ಲ!
Leave A Reply