18-65 ವರ್ಷ ಒಳಗಿನವರಿಗೆ ಮಾತ್ರ ಕೊರೋನಾ ಬರುವುದಾ?
ಕೊರೋನಾ ವಿರುದ್ಧ ಗೆಲ್ಲಬೇಕಾದರೆ ಒಂದು ದೃಢ ಮನಸ್ಸು ಇರಬೇಕು. ಎದೆಯಲ್ಲಿ ಗಟ್ಟಿ ಧೈರ್ಯ ಇರಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಇದರೊಂದಿಗೆ ಕಿಸೆಯಲ್ಲಿ ಸಾಕಷ್ಟು ಹಣ ಇರಬೇಕು ಎಂದು ಯಾರೂ ಹೇಳುವುದಿಲ್ಲ. ಆದರೆ ವಾಸ್ತವ ಅದೇ. ಹಾಗಂತ ಕಿಸೆಯಲ್ಲಿ ಇರುವ ಹಣ ಯಾವ ಮೂಲೆಗೂ ಸಾಕಾಗುವುದಿಲ್ಲ. ಬ್ಯಾಗಿನಲ್ಲಿ ಹಣ ಬೇಕಾಗುತ್ತದೆ ಎನ್ನುವುದು ಅನುಭವಿಸಿದವರ ಮಾತುಗಳು. ಹಾಗಾದರೆ ಮಧ್ಯಮ ವರ್ಗದವರಿಗೆ ಕೊರೋನಾ ಬಂದರೆ ಅವರು ಆಧಾರ್ ಕಾರ್ಡ್ ಇದ್ದರೆ ವೆನಲಾಕ್ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲದಿದ್ದರೆ ವೆನಲಾಕ್ ಆಸ್ಪತ್ರೆಯವರು ಹೇಳಿದ ಆಸ್ಪತ್ರೆಯಲ್ಲಿ ಉಚಿತವಾಗಿ ದಾಖಲಾಗಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಆದರೂ ಇಂತಹ ಸಂದರ್ಭದಲ್ಲಿ ಕೊರೋನಾ ಬಂದು ತಗುಲಿದರೆ ಏನು ಹೆದರಬೇಡಿ, ನಮ್ಮಲ್ಲಿ ಇನ್ಸೂರೆನ್ಸ್ ಮಾಡಿಸಿಕೊಳ್ಳಿ, ನಾವು ನಿಮ್ಮ ಕಾಳಜಿ ವಹಿಸಿಕೊಳ್ಳುತ್ತೇವೆ ಎಂದು ಕೆಲವು ಬ್ಯಾಂಕುಗಳು ಮುಂದೆ ಬಂದಿವೆ. ಅವು ತಮಗೆ ಅನುಕೂಲಕರವಾಗಿರುವ ಇನ್ಸೂರೆನ್ಸ್ ಕಂಪೆನಿಗಳೊಂದಿಗೆ ಟೈ ಅಪ್ ಮಾಡಿಕೊಂಡು ವ್ಯವಹಾರಕ್ಕೆ ಇಳಿದಿವೆ.
ಕೋವಿಡ್ ಕವಚ ಎಂದು ಕರೆಯಲ್ಪಡುವ ಯೋಜನೆಯನ್ನು ಕೇಂದ್ರ ಸರಕಾರ ಕೊಟ್ಟ ಮಾರ್ಗಸೂಚಿಯಂತೆ ಕನಿಷ್ಟ ಮೂರು ತಿಂಗಳಿನಿಂದ ಗರಿಷ್ಟ ಒಂದು ವರ್ಷದ ಒಳಗೆ ಇರಬೇಕಿದೆ. ಓಕೆ. ಅದರ ಬಗ್ಗೆ ಸಮಸ್ಯೆಯಿಲ್ಲ. ಆದರೆ ವಿಷಯ ಇರುವುದು ಇವರು ಮಾಡಿಸುತ್ತಿರುವ ಇನ್ಸೂರೆನ್ಸ್ 18 ವರ್ಷದಿಂದ 65 ವರ್ಷದವರಿಗೆ ಮಾತ್ರವಾಗಿದೆ. ಹಾಗಾದರೆ ಅರವತ್ತೈದು ವರ್ಷ ದಾಟಿದವರಿಗೆ ಕೊರೋನಾ ಬರುವುದಿಲ್ಲ ಎಂದು ಇವರೇ ನಿರ್ಧರಿಸಿಬಿಟ್ಟಿದ್ದಾರಾ ಅಥವಾ ನಮಗೆ ಅಂತವರಿಗೆಲ್ಲ ಕೊಟ್ಟರೆ ಪೂರೈಸುವುದಿಲ್ಲ ಎಂದು ಅಂದುಕೊಂಡು ಬಿಟ್ಟಿದ್ದಾರಾ? ಬೇಕಾದರೆ ಮಾಜಿ ಕೇಂದ್ರ ಸಚಿವರಾದ ಸನ್ಮಾನ್ಯ ಜನಾರ್ಧನ ಪೂಜಾರಿಯವರನ್ನೇ ತೆಗೆದುಕೊಳ್ಳಿ. ಅವರು ಮನೆ ಬಿಟ್ಟು ಹೊರಗೆ ಬರದೇ ಯಾವುದೋ ಕಾಲವಾಯಿತು. ಅವರಿಗೂ ಕೊರೋನಾ ಬಂದಿತ್ತು. ದೇವರ ದಯೆಯಿಂದ ಅವರು ಗುಣಮುಖರಾಗಿದ್ದಾರೆ. ಆದರೆ ಹೀಗೆ ಮನೆಯೊಳಗೆ ಇರುವ ಎಷ್ಟೋ ಹಿರಿಯ ವಯಸ್ಸಿನ ಜೀವಗಳಿಗೆ ಕೊರೋನಾ ಬರುತ್ತಿದೆ. ಅವರಿಗೆ ಇನ್ಸೂರೆನ್ಸ್ ಮಾಡಿಸೋಣ ಎಂದರೆ ಯಾವ ಬ್ಯಾಂಕುಗಳಿಗೂ ಮನಸ್ಸಿಲ್ಲ. ಯಾಕೆಂದರೆ ಲಾಭದ ಮುಖ ನೋಡಲು ಕಷ್ಟ ಎನ್ನುವುದು ನಂಬಿಕೆ.
ಇನ್ನು ಹದಿನೆಂಟು ದಾಟಿದವರಿಗೆ ಮಾತ್ರ ಇವರು ಇನ್ಸೂರೆನ್ಸ್ ಮಾಡುತ್ತಾರೆ. ಹಾಗಾದ್ರೆ 18 ದಾಟಿದವರಿಗೆ ಮಾತ್ರ ಕೊರೋನಾ ಬರುತ್ತದೆಯಾ? ಚುನಾವಣೆಗೆ ಮತ ಹಾಕಲು 18 ಆಗಬೇಕು ಎನ್ನುವುದು ನಿಜ. ಆದರೆ ಕೊರೋನಾ ವಯಸ್ಸು ನೋಡಿ ಬರುತ್ತದೆಯಾ? ಹುಟ್ಟಿದ ಎರಡು ದಿನಗಳ ಮಗುವಿಗೂ ಇದು ಬರುತ್ತದೆ. ಎರಡು ತಿಂಗಳ ಮಗುವಿಗೂ ಬರುತ್ತದೆ. ಹತ್ತನೇ ತರಗತಿಯ ಮಕ್ಕಳಿಗೂ ಈ ರೋಗ ಬರುತ್ತಿರುವುದನ್ನು ನಾವು ಕಂಡಿದ್ದೇವೆ. ಹಾಗಿರುವಾಗ ಇಲ್ಲಿ ಮತ್ತೊಮ್ಮೆ ಇನ್ಸೂರೆನ್ಸ್ ಕಂಪೆನಿಗಳು ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿವೆ. ಇವರ ಗುರಿ ಒಂದೇ. ಹಣ ಮಾಡುವುದು. ಚಿಕ್ಕ ಮಕ್ಕಳಿಗೆ ಮತ್ತು ಹಿರಿಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇದು ಬರುತ್ತದೆ ಎಂದು ಆರಂಭದಲ್ಲಿ ವೈದ್ಯರೆಲ್ಲ ಹೇಳಿದರಲ್ಲ. ತಕ್ಷಣ ಈ ಕಂಪೆನಿಗಳು ಏನು ಯೋಚನೆ ಮಾಡಿದವು ಎಂದರೆ ಅಂತವರನ್ನು ಹೊರಗೆ ಇಡೋಣ. ಇಲ್ಲದೇ ಹೋದರೆ ನಾವು ದುಡಿದದ್ದನ್ನು ಇವರಿಗೆ ಖರ್ಚು ಮಾಡಬೇಕಾದಿತು ಎನ್ನುವ ದುರಾಲೋಚನೆಯನ್ನು ಮಾಡಿದವು. ಅದಕ್ಕೆ ಸರಿಯಾಗಿ ಬ್ಯಾಂಕುಗಳು ಕೂಡ ನಾವು ಏನೋ ಮಾಡಲು ಹೋಗಿ ಇನ್ನೇನೋ ಆಗುವ ಸಾಧ್ಯತೆ ಇದೆ. ಆದ್ದರಿಂದ 18-65 ಮಾತ್ರ ಸೇಫ್ ಎನ್ನುವ ಯೋಚನೆ ಮಾಡಿದವು. ಆದ್ದರಿಂದ ಈಗ ಪರಿಸ್ಥಿತಿ ಇಲ್ಲಿಗೆ ಬಂದು ತಲುಪಿದೆ.
ಇಲ್ಲಿ ಸರಕಾರ ಮಧ್ಯ ಪ್ರವೇಶಿಸಿ ಹೀಗೆ ಕಾನೂನುಬಾಹಿರವಾಗಿ ವಯಸ್ಸಿನ ಲೆಕ್ಕಾಚಾರ ಮಾಡಿರುವ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನವನ್ನು ನೀಡಬೇಕು. ನೀವು ಯಾವುದೇ ವಯಸ್ಸಿನ ನಾಗರಿಕರು ಇನ್ಯೂರೆನ್ಸ್ ಮಾಡಲು ಬಯಸಿದರೂ ಅವರಿಗೆ ಇನ್ಸೂರೆನ್ಸ್ ಮಾಡಿಸಬೇಕು ಎಂದು ಸೂಚನೆ ನೀಡಬೇಕು. ಯಾಕೆಂದರೆ ಇಂತಹ ಹೊತ್ತಿನಲ್ಲಿ ಯಾರೂ ಕೂಡ ಲಾಭದ ಮುಖ ನೋಡಬಾರದು. ಕೆಲವು ಖಾಸಗಿ ಆಸ್ಪತ್ರೆಗಳು ಇಂತಹ ಸಮಯದಲ್ಲಿಯೂ ರೋಗಿಗಳಿಂದ ಲಕ್ಷ ಪೀಕಲು ಹೋಗಿ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿವೆ. ಇಲ್ಲಿಯೂ ಅಂತಹ ದಕ್ಷ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಯವರು ಒಟ್ಟು ಸೇರಿ ರೋಗಿಗಳನ್ನು ಉಳಿಸುವ ಕೆಲಸ ಮಾಡಬೇಕು. ಲಕ್ಷಗಟ್ಟಲೆ ಜಾಹೀರಾತು ನೀಡಿ ನಮ್ಮಲ್ಲಿ ಇನ್ಸೂರೆನ್ಸ್ ಮಾಡಿಸಿಕೊಳ್ಳಿ ಎಂದು ರಂಗುರಂಗಾಗಿ ಹೇಳುವ ಕಂಪೆನಿಗಳು ಮತ್ತು ಬ್ಯಾಂಕುಗಳು ಅದನ್ನು 18 ರಿಂದ 65 ವರ್ಷ ವಯಸ್ಸಿನವರಿಗೆ ಮಾತ್ರ ಮಾಡಿಸಿ ತಮ್ಮ ಖಜಾನೆ ತುಂಬುವುದಕ್ಕಿಂತ ಎಲ್ಲರಿಗೂ ಮಾಡಿಸಿದರೆ ಪುಣ್ಯವಾದರೂ ಸಿಗುತ್ತದೆ. ನಾವು ಪುಣ್ಯ ಸಂಪಾದಿಸಲು ಕೂತಿರುವುದಲ್ಲ ಎಂದು ನೀವು ಹೇಳಬಹುದು. ಆದರೆ ಜೀವನದಲ್ಲಿ ಹಣ ಮಾತ್ರ ಸಂಪಾದಿಸಲು ಹೊರಟ ಎಷ್ಟೋ ಮಂದಿಯ ಅಹಂಕಾರವನ್ನು ಕೊರೋನಾ ಇಳಿಸಿದೆ ಎನ್ನುವುದು ನೆನಪಿರಲಿ!
Leave A Reply