ಅಲ್ಲಿರುವ ಎಂಬ್ಯುಲೆನ್ಸ್ ಗೆ ಹಣ ಇಲ್ಲ, ಇಲ್ಲಿರುವ ಎಂಬ್ಯುಲೆನ್ಸ್ ಗೆ ಹೆಣ ಇಲ್ಲ!
ಹಲ್ಲಿದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲಿಲ್ಲ ಎನ್ನುವ ಗಾದೆ ಈ ಮುಕ್ತಿ ವಾಹನದ ವಿಷಯದಲ್ಲಿ ಕರೆಕ್ಟಾಗಿ ಅಳವಡಿಸಬಹುದು. ನಾನು ನಿನ್ನೆ ಹೇಳಿದ ಹಾಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಿಂತಿರುವ ಮುಕ್ತಿ ವಾಹನದ ತಿಂಗಳ ಖರ್ಚು 40500. ಆದರೆ ಹೆಣ ಸಾಗಿಸುವುದು ತಿಂಗಳಿಗೆ ಸರಾಸರಿ ಏಳು ಮಾತ್ರ. ಉಳಿದ ದಿನಗಳಲ್ಲಿ ವಾಹನದಲ್ಲಿ ಏಸಿ ಹಾಕಿ, ಎಫ್ ಎಂ ಇಟ್ಟು ಯಾರಾದರೂ ಮಲಗಿದರೂ ಹೇಳುವವರು ಕೇಳುವವರು ಯಾರೂ ಇಲ್ಲ. ಅಂತಹ ಸೌಲಭ್ಯ ಎಂಬ್ಯುಲೆನ್ಸ್ ನಲ್ಲಿ ಇರುವುದಿಲ್ಲ ಅದು ಬೇರೆ ವಿಷಯ. ಆದರೆ ಅಲ್ಲಿ ವೆನ್ ಲಾಕ್ ನ ಆವರಣದಲ್ಲಿ ಒಂದು ಎಂಬ್ಯುಲೆನ್ಸ್ ನಿಂತಿರುತ್ತದೆ. ಅದನ್ನು ವೆನ್ ಲಾಕ್ ಗೆ ಉದಾರವಾಗಿ ದಾನ ಮಾಡಿದ್ದು ಯುಟಿ ಫರೀದ್ ಚಾರಿಟೇಬಲ್ ಟ್ರಸ್ಟ್ ನವರು. ಅದು ಯಾರದೆಂದು ಮತ್ತೆ ಹೇಳಬೇಕಾಗಿಲ್ಲ. ಹಿಂದೆ ಆರೋಗ್ಯ ಸಚಿವರಾಗಿದ್ದ ಈಗ ಆಹಾರ ಸಚಿವರಾಗಿರುವ ಯು ಟಿ ಖಾದರ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಚಾರಿಟೇಬಲ್ ಟ್ರಸ್ಟ್ ಮೂಲಕ ಒಂದು ಎಂಬ್ಯುಲೆನ್ಸ್ ಅನ್ನು ಅವರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕೊಟ್ಟಿದ್ದಾರೆ. ಕೊಟ್ಟಿದ್ದು ಒಳ್ಳೆಯ ವಿಚಾರವೇ. ಆದರೆ ಅದು ಕೂಡ ಸುಮ್ಮನೆ ಅಲ್ಲಿ ಕೈ ಕಾಲು ಹರಡಿ ಕುಳಿತು ಆಕಳಿಸುತ್ತಿದೆ. ಅಂದರೆ ವೆನ್ ಲಾಕ್ ನಿಂದ ಸಾಗಿಸಲು ಹೆಣ ಇಲ್ಲ ಎಂದಲ್ಲ. ವಿಷಯ ಇರುವುದು ಆ ಎಂಬ್ಯುಲೆನ್ಸ್ ಗೆ ಡ್ರೈವರ್ ಇಲ್ಲ ಮತ್ತು ಇಂಧನ ಹಾಕಲು ದುಡ್ಡಿಲ್ಲ. ಇಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹಣ ಇದೆ, ಅದಕ್ಕಾಗಿ ತಿಂಗಳಿಗೆ 40500 ರೂಪಾಯಿ ವ್ಯಯಿಸಿ ಗಾಡಿ, ಡ್ರೈವರ್ ಅವರನ್ನು ಸಾಕಲಾಗುತ್ತಿದೆ. ಆದರೆ ಹೆಣಗಳು ಇಲ್ಲ, ಅಂದರೆ ಯಾರಿಗೂ ಗೊತ್ತಿಲ್ಲ. ಆದ್ದರಿಂದ ಈ ಎಂಬ್ಯುಲೆನ್ಸ್ ಫುಲ್ ಫ್ರೀ. ಅಲ್ಲಿ ವೆನ್ ಲಾಕ್ ನಲ್ಲಿ ಹೆಣಗಳು ಸಾಗಿಸಲು ಎಂಬ್ಯುಲೆನ್ಸ್ ಬೇಕು, ಅದು ಇದೆ, ಆದರೆ ಡ್ರೈವರ್ ಇಲ್ಲ, ಟ್ಯಾಂಕಿಗೆ ಸುರಿಯಲು ಹಣ ಇಲ್ಲ. ಅದಕ್ಕೆ ನಾನು ಪ್ರಾರಂಭದಲ್ಲಿ ಹೇಳಿದ್ದು, ಹಲ್ಲಿದ್ದ ಕಡೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲಿಲ್ಲ. ಇಲ್ಲಿ ಹೇಗೆಂದರೆ ಎಂಬ್ಯುಲೆನ್ಸ್ ಇದ್ದ ಕಡೆ ಹಣ ಇಲ್ಲ, ಹಣ, ಎಂಬ್ಯುಲೆನ್ಸ್ ಎರಡೂ ಇದ್ದ ಕಡೆ ಹೆಣ ಇಲ್ಲ. ಇದೆರಡನ್ನು ಒಟ್ಟು ಮಾಡಿದರೆ ಹೇಗೆ ಎನ್ನುವ ಯೋಚನೆ ನನಗೆ ಬಂತು.
ನಾನು ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳಲ್ಲಿ ಈ ಬಗ್ಗೆ ಮಾತನಾಡಿದ್ದೇನೆ. ಆದರೆ ಇಲ್ಲೊಂದು ತಾಂತ್ರಿಕ ಸಮಸ್ಯೆ ಇದ್ದಂತೆ ಕಾಣುತ್ತಿದೆ. ಅದೇನೆಂದರೆ ವೆನ್ ಲಾಕ್ ನಲ್ಲಿರುವ ಎಂಬ್ಯುಲೆನ್ಸ್ ಇಡೀ ಜಿಲ್ಲೆಯ ಸೇವೆಗೆ ಸಂಬಂಧಪಟ್ಟಿದ್ದು. ಅದರಲ್ಲಿ ಸುಳ್ಯದ ನಾಗರಿಕನಿಗೂ ಸೇವೆ ಸಿಗಬೇಕು, ಉಳ್ಳಾಲದ ವ್ಯಕ್ತಿಗೂ ಸೇವೆ ಕೊಡಬೇಕು. ಆದರೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಎಂಬ್ಯುಲೆನ್ಸ್ ಮತ್ತು ಅದಕ್ಕೆ ಇಟ್ಟ ಬಜೆಟ್ ಪಾಲಿಕೆಯ ವ್ಯಾಪ್ತಿಗೆ ಮಾತ್ರ ಹೊಂದಿಕೊಳ್ಳುವಂತದ್ದು. ಆದ್ದರಿಂದ ಮನಪಾದ ಬಜೆಟಿನಲ್ಲಿ ವೆನಲಾಕ್ ಎಂಬ್ಯುಲೆನ್ಸ್ ಓಡಿಸಲು ಆಗುವುದಿಲ್ಲ. ಒಟ್ಟಿನಲ್ಲಿ ಎರಡೂ ಕಡೆ ಹಣ ಪರೋಕ್ಷವಾಗಿ ಪೋಲಾಗುತ್ತಿದೆ.
ಅದಕ್ಕಾಗಿ ಏನು ಮಾಡಬೇಕು ಎಂದರೆ ಯಾವುದೇ ಟ್ರಸ್ಟಿನವರು ಎಲ್ಲಿಯಾದರೂ ದಾನ ಅಥವಾ ಉದಾರ ಕೊಡುಗೆ ಎಂದು ಮಾಡುವಾಗ ಅದು ಎಷ್ಟರಮಟ್ಟಿಗೆ ಉಪಯೋಗಕ್ಕೆ ಬೀಳುತ್ತದೆ ಎನ್ನುವುದನ್ನು ಕೂಡ ಆಗಾಗ ಪರೀಕ್ಷಿಸಿದರೆ ಉತ್ತಮ. ಅದರೊಂದಿಗೆ ತಾವು ಕೊಟ್ಟ ಕೊಡುಗೆಯನ್ನು ಜನ ಬಳಸುತ್ತಿದ್ದಾರಾ ಎನ್ನುವುದರ ಕಡೆಗೆ ಚಿಕ್ಕ ಗಮನ ಇಟ್ಟರೆ ಒಳ್ಳೆಯದು. ಹಾಗಂತ ದಿನನಿತ್ಯ ಬಂದು ಯುಟಿ ಫರೀದ್ ಟ್ರಸ್ಟಿನವರು ನೋಡಿ ಹೋಗಬೇಕು ಎಂದು ಯಾರೂ ಬಯಸುವುದಿಲ್ಲ. ಆದರೆ ಯಾವತ್ತಾದರೂ ಒಂದು ಸಲ ತಮ್ಮ ಟ್ರಸ್ಟಿನ ಸವಲತ್ತು ಅರ್ವರಿಗೆ ಸಿಗುತ್ತಿದೆಯಾ ಎನ್ನುವುದನ್ನು ನೋಡಿದರೆ ಉತ್ತಮ. ಇಲ್ಲದಿದ್ದರೆ ಲಕ್ಷಗಟ್ಟಲೆ ಖರ್ಚು ಮಾಡಿ ಅದು ವೇಸ್ಟ್ ಆದರೆ ಅದರಿಂದ ಸಾಧಿಸುವಂತದ್ದು ಏನೂ ಇಲ್ಲ. ಈಗ ಸಾಧ್ಯವಾದರೆ ಸಚಿವ ಯುಟಿ ಖಾದರ್ ಅವರು ಏನು ಮಾಡಬಹುದು ಎಂದರೆ ತಮ್ಮ ಟ್ರಸ್ಟಿನ ವಾಹನ ಓಡಾಡುವಂತಾಗಲು ಏನಾದರೂ ಒಂದಿಷ್ಟು ಫಂಡಿನ ವ್ಯವಸ್ಥೆ ಮಾಡುವುದು ಸೂಕ್ತ. ಹಾಗೆ ಮಂಗಳೂರು ಮಹಾನಗರ ಪಾಲಿಕೆ ತಮ್ಮ ಉಚಿತ ಎಂಬ್ಯುಲೆನ್ಸ್ ಬಗ್ಗೆ ಪ್ರಚಾರ ಮಾಡುವುದು ಸೂಕ್ತ. ಹಣ ಇದೆ ಎಂದು ವ್ಯರ್ಥವಾಗಿ ಖರ್ಚು ಮಾಡಲು ಅದೇನೂ ಪಾಲಿಕೆ ಸದಸ್ಯರು ತಮ್ಮ ಕೈಯಿಂದ ಹಾಕಿ ನಡೆಸುವ ಸಂಸ್ಥೆ ಅಲ್ಲ. ನಮ್ಮ ನಾಗರಿಕರ ತೆರಿಗೆ ಹಣ. ಒಟ್ಟಿನಲ್ಲಿ ಎರಡೂ ಕಡೆಯ ಎಂಬ್ಯುಲೆನ್ಸ್ ಅಗತ್ಯ ಇದ್ದವರಿಗೆ ಸಕಾಲಕ್ಕೆ ಉಪಯೋಗಕ್ಕೆ ಬೀಳಲಿ ಎನ್ನುವುದು ನನ್ನ ಹಾರೈಕೆ.
Leave A Reply