ಇರಲಿ ರಾತ್ರಿ ಕಣ್ತುಂಬ ನಿದ್ದೆ ,ಜೀವನದಲ್ಲಿ ನೀನು ಗೆದ್ದೆ
ನಿದ್ರೆ ಮನುಷ್ಯನಿಗೆ ದೇವರು ನೀಡಿದ ವರ.ಬೆಳಗ್ಗೆಯಿಂದ ಸಂಜೆಯ ತನಕ ದಣಿದು ಬಸವಳಿದ ಜೀವಕ್ಕೆ ನಿದ್ರೆ ತಂಪನ್ನೀಯುತ್ತದೆ.ಹಲವೊಂದು ವಿಚಾರಗಳನ್ನು ಮರೆಯುವುದಕ್ಕೆ ,ನೋವನ್ನು ಮರೆಸುವುದಕ್ಕೆ ನಿದ್ರೆ ಸಹಕಾರಿ .ರಾತ್ರಿ ಕಣ್ಣು ತುಂಬಾ ನಿದ್ರೆ ಮಾಡಿ ಬೆಳಗ್ಗೆ ಆಹ್ಲಾದಕರವಾಗಿ ಏಳುವುದು ಸುಖೀ ಜೀವನದ ಮೊದಲ ಹಂತ .ಆದರೆ ಇತ್ತೀಚೆಗೆ ಹೆಚ್ಚುತ್ತಿರುವ ನಿದ್ರಾಹೀನತೆ ಸಂತಸದ ಜೀವನವನ್ನು ಹಾಳುಗೆಡವುತ್ತಿದೆ .ಇದಕ್ಕೆ ಹಲವಾರು ಕಾರಣಗಳಿವೆ .ರಾತ್ರಿ ಮಲಗುವಾಗ ಮೊಬೈಲ್ ಫೋನ್ ನ್ನು ನೋಡುತ್ತಿರುವುದು ,ಸಂದೇಶಗಳನ್ನು ರವಾನಿಸುತ್ತ ಇರುವುದು ,ರಾತ್ರಿ ಪಾಳಿಯಲಿ ಕೆಲಸ ,ತುಂಬಾ ರಾತ್ರಿ ಆದ ಮೇಲೆ ಊಟ ,ದುರ್ವ್ಯಸನಗಳು ,ತಡ ರಾತ್ರಿವರೆಗೆ ಟಿವಿ ವೀಕ್ಷಣೆ ಹೀಗೆ ಹಲವಾರು ಕಾರಣಗಳಿವೆ .
ಉತ್ತಮ ನಿದ್ರೆಯನ್ನು ಪಡೆಯುವುದರಿಂದ ಹಲವಾರು ಆರೋಗ್ಯಕಾರಿ ಉಪಯೋಗಗಳಿವೆ .ಇದರ ಬಗ್ಗೆ ಅವಲೋಕನ ಮಾಡೋಣ
ನಿದ್ರಾ ಸಮಯ
ಮೊದಲನೆಯದಾಗಿ ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ ನಿದ್ರೆಯ ಸಮಯವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ .ಕೆಲವರಿಗೆ ಕೆಲ ಘಂಟೆಗಳ ನಿದ್ರೆ ಸಾಕಾಗಿದ್ದರೆ ಹಲವರಿಗೆ ಜಾಸ್ತಿ ಹೊತ್ತು ನಿದ್ರೆ ಬೇಕು .ಕೆಲವರು ಬೆಳಗ್ಗೆ ನಿಧಾನವಾಗಿ ಏಳುವ ರಾತ್ರಿ ತಡವಾಗಿ ಮಲಗುವ ಜಾಯಮಾನ ಹೊಂದಿದ್ದರೆ ಇನ್ನೂ ಕೆಲವರು ರಾತ್ರಿ ಬೇಗ ಮಲಗಿದ್ದು ಬೆಳಗ್ಗೆ ಬೇಗ ಏಳುವ ಜಾಯಮಾನ ಹೊಂದಿದ್ದಾರೆ.ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು .ಆದಾಗ್ಯೂ ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ೭ ರಿಂದ ೮ ಗಂಟೆಗಳ ಕಾಲ ನಿದ್ರೆ ಬೇಕೆಂದು ಅವಲೋಕಿಸಿದ್ದಾರೆ .ಶಿಶುಗಳಿಗೆ ೧೮ ಗಂಟೆಗಳ ಕಾಲ ನಿದ್ರೆ ಬೇಕೆಂದು ,ಮಕ್ಕಳಿಗೆ ೮ ರಿಂದ ೧೦ ಗಂಟೆಗಳ ಅವಧಿಯ ನಿದ್ರೆ ಬೇಕೆಂದು ಪರಿಗಣಿಸಲಾಗಿದೆ .
ನೆನಪಿನ ಶಕ್ತಿಯ ಅಭಿವೃದ್ಧಿ
ನಿದ್ರೆ ನೆನಪಿನ ಶಕ್ತಿಯ ಅಭಿವೃದ್ಧಿಗೆ ಸಹಾಯಕ .ಬೆಳಗಿನಿಂದ ಸಂಜೆವರೆಗೆ ನಡೆದ ಘಟನೆಗಳನ್ನು ಮೆದುಳು ಮೆಲುಕು ಹಾಕುತ್ತಿರುತ್ತದೆ ,ಮೆದುಳಿಗೆ ಯಾವಾಗಲು ಆರಾಮವಿರೋದಿಲ್ಲ.ನಿದ್ರೆಯಲ್ಲಿ ಅದು ತನ್ನ ಕೆಲಸ ತಾನು ಮಾಡುತ್ತದೆ .ನಿದ್ರೆಯಲ್ಲಿ ಮನಸ್ಸು ಹೆಚ್ಚು ಶಾಂತಿಯುತವಾದ ಸ್ವಭಾವವನ್ನು ಹೊಂದಿದಾಗೆ ನೆನಪು ಅಭಿವೃದ್ಧಿ ಹೊಂದುತ್ತದೆ .ಇದರಿಂದ ಮೆಲುಕು ಹಾಕುವುದು ಸುಲಭ .
ಕೌಶಲ್ಯಾಭಿವೃದ್ಧಿ
ನಿದ್ರೆಯು ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ಮತ್ತು ಸೃಜನಶೀಲತೆಯನ್ನು ಅರಳಿಸಲು ಸಹಾಯ ಮಾಡುತ್ತದೆ .ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಇದನ್ನು ಖಚಿತಪಡಿಸಿದ್ದಾರೆ .ನಿದ್ರೆಯಲ್ಲಿ ಸೃಜನಶೀಲ ಕಾರ್ಯದಲ್ಲಿ ತೊಡಗುವ ವ್ಯಕ್ತಿಗಳು ತಮ್ಮ ಮುಂದಿನ ಪುಸ್ತಕ ರಚನೆ ಇಲ್ಲವೇ ಚಿತ್ರ ,ಸಿನೆಮಾ ಹೀಗೆ ಹಲವಾರು ವಿಚಾರಗಳ ಬಗ್ಗೆ ಯೋಚನೆ ಮಾಡುತ್ತಾರೆ ಮತ್ತು ಸುಪ್ತಾವಧಿಯಲ್ಲಿ ಇದು ಕಾರ್ಯರೂಪಕ್ಕೆ ಬರುತ್ತದೆ ಎಂದು ಬೋಸ್ಟನ್ ಕಾಲೇಜು ಸಹ ಅಭಿಪ್ರಾಯಪಟ್ಟಿದೆ .
ಒತ್ತಡ ನಿವಾರಣೆ
ಒತ್ತಡ ನಿವಾರಣೆಗಂತೂ ನಿದ್ರೆಯು ರಾಮಬಾಣವಾಗಿದೆ .”ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ “ಎಂಬ ಮಾತಿದೆ ಮತ್ತು ಇದು ಅಕ್ಷರಶ ಸತ್ಯ .ಇದು ರಕ್ತದ ಒತ್ತಡವನ್ನು ಸಹ ನಿವಾರಣೆ ಮಾಡುತ್ತದೆ .ಕೆಲಸ ,ಕುಟುಂಬ ,ಸಾಮಾಜಿಕ ಬೆಳವಣಿಗೆಗಳು ಹೀಗೆ ಹಲವು ರೀತಿಯಲ್ಲಿ ಜನರು ಮಾನಸಿಕ ಒತ್ತಡಕ್ಕೆ ಒಳಪಡುತ್ತಾರೆ ,ಉತ್ತಮ ನಿದ್ರೆಯೇ ಇದೆಲ್ಲಕ್ಕೂ ಪರಿಹಾರ
ಆದ್ದರಿಂದ ಚಿಂತೆಯನ್ನು ಬದಿಗೊತ್ತಿ ,ಕಣ್ಣು ತುಂಬಾ ನಿದ್ರಿಸಿ ನಿಮ್ಮ ಬೆಳಗನ್ನು ಶಾಂತವಾಗಿ ಆತ್ಮವಿಶ್ವಾಸದಿಂದ ಶುರು ಮಾಡಿ .ಹಾಂ , ಇನ್ನೊಂದು ವಿಷಯ ,ನಿದ್ರೆ ಒಳ್ಳೆಯದು ಅಂತ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ ಮಾತ್ರ ನಿದ್ರಿಸದಿರಿ ……
Leave A Reply