ಸಿನೆಮಾ, ಕಿರುತೆರೆಯ ಒಂದು ತೋಳ ಹಳ್ಳಕ್ಕೆ ಬೀಳುತ್ತಿದ್ದಂತೆ…..
Posted On September 28, 2020

ಒಂದಂತೂ ಸಾಬೀತಾಯಿತು. ಅದೇನೆಂದರೆ ನಾವು ಯಾರನ್ನು ಸ್ಟಾರ್ ಎಂದು ಕರೆಯುತ್ತಿದ್ದೆವೊ ಅವರು ಗಟಾರದ ಹುಳುಗಳಿಗಿಂತಲೂ ಫಾಸ್ಟ್ ಎಂದು ಕಳೆದ ಕೆಲವು ವಾರಗಳಿಂದ ಸಾಬೀತಾಗಿದೆ. ಬೆಳ್ಳಿಪರದೆಯ ಮೇಲೆ ಖಳನಾಯಕರನ್ನು ಹೊಡೆಯುತ್ತಾ, ಅಭಿಮಾನಿಗಳಿಂದ ಸಿಳ್ಳೆ, ಚಪ್ಪಾಳೆ ಹೊಡೆಸಿಕೊಳ್ಳುತ್ತಿದ್ದ ನಟರು ಬಣ್ಣ ಕಳಚಿದ ನಂತರ ಪ್ರಾಣಿಗಿಂತಲೂ ಮಿಗಿಲಲ್ಲ ಎಂದು ಅರ್ಥವಾಗುತ್ತಿದೆ. ಹಾಗಂತ ನಾನು ಎಲ್ಲ ಕಲಾವಿದರನ್ನು ಒಂದೇ ತಕ್ಕಡಿಯಲ್ಲಿಟ್ಟು ಈ ಮಾತು ಹೇಳುತ್ತಿಲ್ಲ. ಅನೇಕರು ಒಳ್ಳೆಯ ಕಲಾವಿದರು ಈಗಲೂ ಇದ್ದಾರೆ ಮತ್ತು ಹಿಂದೆನೂ ಇದ್ದರು. ಆದರೆ ತೀರಾ ಇತ್ತೀಚೆಗೆ ಸ್ಟಾರ್ ಡಂ ನೋಡುತ್ತಿರುವ ನಟ, ನಟಿಯರಿಗೆ ಅದ್ಯಾವ ಡ್ರಗ್ಸ್ ಹುಚ್ಚು ಹಿಡಿದಿದೆ ಎಂದು ಅವರಿಗೆ ಮಾತ್ರ ಗೊತ್ತು. ಅವರು ನಟಿಸುವಾಗ ಮಾತ್ರ ನೋಡಲು ಚೆಂದ, ಅವರು ಸಿನೆಮಾ ಸೆಟ್ ನಿಂದ ಈಚೆ ಬಂದ ನಂತರ ಅವರನ್ನು ಯಾರಾದರೂ ನೋಡಿದರೆ ನಿಜಕ್ಕೂ ಭ್ರಮನಿರಸನಗೊಂಡು ಬಿಡುತ್ತಾರೆ. ಇವರ ಬಳಿ ಹಣ ಜಾಸ್ತಿ ಬಂದ ನಂತರ ಇವರು ಅದನ್ನು ಹೀಗೆ ಮಜಾ ಉಡಾಯಿಸಿ ಕಳೆಯುತ್ತಾರಾ ಎಂದು ಆಶ್ಚರ್ಯವಾಗಿ ಅಸಹ್ಯಪಟ್ಟು ಅವರ ಮೇಲಿನ ಅಭಿಮಾನ ಬಿಟ್ಟರೆ ಒಳ್ಳೆಯದು. ಆದರೆ ಕೆಲವು ಅಭಿಮಾನಿಗಳಿಗೆ ತಮ್ಮ ಸ್ಟಾರ್ ಗಳು ಏನು ಮಾಡಿದರೂ ಚೆಂದ. ಅಂತಹ ಸಂದರ್ಭದಲ್ಲಿ ಯುವಕ, ಯುವತಿಯರು ತಮ್ಮ ಆರಾಧ್ಯ ಮೂರ್ತಿಗಳನ್ನು ಫಾಲೋ ಮಾಡಿದರೆ ನಿಜಕ್ಕೂ ದುರಂತ.
ಈಗ ಅನುಶ್ರೀ ವಿಷಯವನ್ನೇ ತೆಗೆದುಕೊಳ್ಳೋಣ. ಅಗಾಧ ಬುದ್ಧಿವಂತೆ ಎನ್ನುವಷ್ಟು ಜ್ಞಾನ ಇಲ್ಲದಿದ್ದರೂ ಅವಳ ಪಟಪಟ ಮಾತನಾಡುವ ಶೈಲಿ, ನಿರೂಪಕಿಯಾಗಿ ಜನರನ್ನು ಸೆಳೆಯುವ ರೀತಿಯೊಂದಿಗೆ ಸೌಂದರ್ಯವೂ ಬೆರೆತಿರುವುದರಿಂದ ಅವಳು ಕರ್ನಾಟಕದ ಮನೆಮಾತಾದಳು. ಅವಳ ನಿರೂಪಣೆ ಇರುವ ಕಾರ್ಯಕ್ರಮವನ್ನೇ ನೋಡುವ ವರ್ಗ ಹುಟ್ಟಿಕೊಂಡಿತು. ಅಬಾಲವೃದ್ಧರು ಕಿರುತೆರೆಯಲ್ಲಿ ಅವಳ ಫ್ಯಾನ್ ಗಳಾದರು. ಹಣ, ಹೆಸರು ಹರಿದುಬಂತು. ನಿರೂಪಣೆಯೊಂದಿಗೆ ಅನುಶ್ರೀ ಬೇರೆ ಕಲಾಪ್ರಕಾರಗಳಿಗೆ ಕೈ ಹಾಕಿದಳು. ಸಿನೆಮಾ ಮಾಡಿದಳು. ಅದು ಕೈ ಹಿಡಿಯಲಿಲ್ಲ. ನಿತ್ಯ ಟಿವಿಯಲ್ಲಿ ಕಾಣಲು ಸಿಗುವವರು ಸಿನೆಮಾದಲ್ಲಿ ನಾಯಕ, ನಾಯಕಿಯಾದಾಗ ಅದನ್ನು ಸ್ವೀಕರಿಸುವ ಜನರು ಕಡಿಮೆ. ಬಳಿಕ ನೃತ್ಯ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಕುಣಿದಳು. ಟಿವಿಯಲ್ಲಿ ಇವಳು ಕೇವಲ ಮಾತನಾಡುತ್ತಿದ್ದದ್ದನ್ನು ನೋಡಿದ ಜನ ನಮ್ಮ ಅನುಶ್ರೀ ಸಕತ್ ಡ್ಯಾನ್ಸ್ ಕೂಡ ಮಾಡ್ತಾಳೆ ಎಂದು ಹೇಳಿಕೊಂಡು ನೋಡಿದಾಗ ಟಿಆರ್ ಪಿ ಆಧಾರದ ಮೇಲೆ ಫೈನಲ್ ತನಕ ಬಂದಳು. ಕೊನೆಗೆ ಗೆದ್ದು ಬಿಟ್ಟಳು. ಅಲ್ಲಿ ಸಹಜವಾಗಿ ಡ್ಯಾನ್ಸ್ ತರುಣರ ಪರಿಚಯ ಆಯಿತು. ಇಂತದ್ದು ತೆಗೆದುಕೊಂಡರೆ ಸೂಪರ್ ಆಗಿ ಡ್ಯಾನ್ಸ್ ಮಾಡಬಹುದು, ಬಿಂದಾಸ್ ಆಗಿ ಸ್ಟೆಪ್ ಹಾಕಬಹುದು ಎಂದು ಯಾರಾದರೂ ಹೇಳಿರಬಹುದಾ? ಒಟ್ಟಿನಲ್ಲಿ ಕಿರುತೆರೆಯಲ್ಲಿ ಮಿಂಚುತ್ತಿದ್ದ ಅನುಶ್ರೀ ಊರಿಗೆ ಹೆಮ್ಮೆ ತಂದಿದ್ದಳು. ಆದರೆ ಈಗ ಊರಿನ ಸಿಸಿಬಿ ಪೊಲೀಸರ ಮುಂದೆ ನಿಂತು ಡ್ರಗ್ಸ್ ತೆಗೆದುಕೊಂಡಿದ್ರಾ ಎನ್ನುವ ಪ್ರಶ್ನೆಗೆ ಉತ್ತರಿಸಬೇಕಾದ ಪರಿಸ್ಥಿತಿ ಬಂದುಬಿಡ್ತು. ಅವಳು ಡ್ರಗ್ಸ್ ತೆಗೆದುಕೊಂಡಿದ್ದಾಳೆ ಎಂದು ನಾನು ಹೇಳುತ್ತಿಲ್ಲ. ಆದರೆ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ. ಅದರಲ್ಲಿಯೂ ಸಿಸಿಬಿ ಪೊಲೀಸರು ಇಂತಹ ಸಂದರ್ಭದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹೋಗಿ ಅವಳ ಮನೆಯ ತನಕ ತೆರಳಿ ಅಲ್ಲಿ ನೋಟಿಸು ಕೊಡುವಷ್ಟು ಕಷ್ಟ ತೆಗೆದುಕೊಂಡಿದ್ದಾರೆ ಎಂದರೆ ಅವರ ಬಳಿ ಪ್ರಬಲ ಸಾಕ್ಷ್ಯ ಇದೆ. ಆದರೆ ಸಿಸಿಬಿ, ಎನ್ ಸಿಬಿ ವಿಚಾರಣೆಗೆ ಕರೆಯುತ್ತಿರುವ ಪ್ರತಿಯೊಬ್ಬರೂ ಹೇಳುವುದು ಒಂದೇ ಮಾತು ” ನಮ್ಮ ಬಳಿ ಏನಾದರೂ ಮಾಹಿತಿ ಸಿಗುತ್ತಾ ಎಂದು ಕೇಳಲು ಕರೆದಿದ್ದಾರೆ”.
ಹಾಗಂತ ಇಡೀ ಇಂಡಸ್ಟ್ರಿಯೇ ಹಾಳಾಗಿದೆಯಾ? ಇಲ್ಲ, ಖಂಡಿತ ಇಲ್ಲ. ಸೋನು ಸೂದ್ ಅಂತಹ ನಿಜವಾದ ಸ್ಟಾರ್ ಗಳು ಹಗಲು ರಾತ್ರಿ ಶ್ರಮಪಟ್ಟು ಲಾಕ್ ಡೌನ್ ಸಮಯದಲ್ಲಿ ಜನರಿಗಾಗಿ ಕೆಲಸ ಮಾಡಿದ್ದಾರೆ. ಅಕ್ಷಯ್ ಕುಮಾರ್ ಅವರಂತಹ ಕಲಾವಿದರು ದೊಡ್ಡ ಸಹಾಯ ಮಾಡುತ್ತಿದ್ದಾರೆ. ಅನೇಕ ನಟ, ನಟಿಯರು ಮಾಡಿರಬಹುದು, ಪ್ರಚಾರಕ್ಕೆ ಬಂದಿರಲಿಕ್ಕಿಲ್ಲ. ಆದರೆ ತೆರೆಯ ಮೇಲೆ ಪದ್ಮಾವತಿಯಂತಹ ಪಾತ್ರ ಮಾಡುತ್ತಾ ದೃಶ್ಯ ಮುಗಿದ ನಂತರ “ಮಾಲ್ ಇದೆಯಾ?” ಎಂದು ಕೇಳುವ ಗ್ರೂಪ್ ಗಳ ಅಡ್ಮಿನ್ ಎನಿಸಿಕೊಂಡವರು ಹೇಗೆ ಯುವಪೀಳಿಗೆಗೆ ಮಾದರಿಯಾಗುತ್ತಾರೆ. ಹಿಂದೆ ರಾಜಕುಮಾರ್ ಅವರಿಗೆ ಮದ್ಯದ ಅಂಗಡಿಯ ಉದ್ಘಾಟನೆಗೆ ಬರಬೇಕು ಎಂದು ಯಾರೋ ದೊಡ್ಡ ಉದ್ಯಮಿ ಆಹ್ವಾನಿಸಿದಾಗ “ನಾನು ಅಂತಹ ಅಂಗಡಿಗೆ ಉದ್ಘಾಟನೆಗೆ ಬಂದರೆ ಅದರಿಂದ ಅಭಿಮಾನಿಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ಹೇಳಿ ನಯವಾಗಿ ನಿರಾಕರಿಸಿದ್ದರಂತೆ ರಾಜಕುಮಾರ್. ಅದು ನಿಜವಾದ ಕಮಿಟ್ ಮೆಂಟ್. ನಮ್ಮ ಸಿನೆಮಾಗಳಿಗೆ ಹಣ ಕೊಟ್ಟು ಬರುವ ಸಾಮಾನ್ಯ ಜನರು ನಮ್ಮ ಬದುಕು ಕೂಡ ಸಚ್ಚಾರಿತ್ರ್ಯ ಹೊಂದಿದೆ ಎಂದು ಅಂದುಕೊಂಡಿರುತ್ತಾರೆ ಎನ್ನುವ ಅಂದಾಜು ನಟ, ನಟಿಯರಿಗೆ ಇರಬೇಕು. ಯಾಕೆಂದರೆ ಅವರು ಸ್ಟಾರ್ ಆಗಿದ್ದೇ ಜನರಿಂದ, ಕಲಾಸರಸ್ವತಿಯ ಆರ್ಶೀವಾದದಿಂದ. ಬಣ್ಣ ಕಳಚಿದ ನಂತರ ಕೊಳಚೆಯಲ್ಲಿ ಹೊರಳಾಡುವವರ ಸಿನೆಮಾವನ್ನು ನಾವು ನೋಡಲ್ಲ ಎಂದು ಜನ ತೀರ್ಮಾನಿಸಿದರೆ ಮುಗಿಯಿತು, ನಂತರ ಡ್ರಗ್ಸ್ ಗೆ ಬಿಡಿ, ಗಂಜಿಗೂ ಗತಿ ಇಲ್ಲದೆ ಮಾಡುವ ಸಾಮರ್ತ್ಯ ಜನರಲ್ಲಿದೆ. ಆ ಭಯ ಸ್ಟಾರ್ ಎನಿಸಿಕೊಂಡವರಿಗೆ ಬರಬೇಕಾಗಿದೆ!
- Advertisement -
Leave A Reply