ರಸ್ತೆ ಬ್ಲಾಕ್ ಆದರೆ ಅನುಭವದ ಕೊರತೆ, ಕುಡ್ಸೆಂಪು ವೈಫಲ್ಯವಾದರೆ ಬುದ್ಧಿವಂತಿಕೆಯಾ?
ಒಂದು ರಸ್ತೆ ಜಾಮ್ ಆಗಲು ಏನು ಕಾರಣ ಎಂದು ಕೇಳಿದರೆ ಅದಕ್ಕೆ ಬೇರೆ ಬೇರೆ ಉತ್ತರಗಳಿರುತ್ತವೆ. ಅದರಲ್ಲಿ ಒಂದು ಅನಧಿಕೃತ ಕಟ್ಟಡಗಳಿಂದ ಅಡ್ಡಾದಿಡ್ಡಿ ಪಾರ್ಕಿಂಗ್ ಆಗಿ ಆಗ ಆ ರಸ್ತೆ ಬ್ಲಾಕ್ ಆಗುತ್ತದೆ. ಹಿಂದೆ ಮಂಗಳೂರು ನಗರದಲ್ಲಿ ರೋಡ್ ಬ್ಲಾಕ್ ಇದೇ ಕಾರಣಕ್ಕೆ ಆಗುತ್ತಿತ್ತು. ಈ ಅನಧಿಕೃತ ಕಟ್ಟಡಗಳಿಗೆ ಯಾರು ಕಾರಣ? ಸಂಶಯವೇ ಇಲ್ಲ, ಪಾಲಿಕೆಯನ್ನು ಅನೇಕ ವರ್ಷಗಳ ತನಕ ಆಳಿದ್ದ ಕಾಂಗ್ರೆಸ್. ಮೊನ್ನೆ ಆದಿತ್ಯವಾರ ಮತ್ತು ಸೋಮವಾರ ಮಂಗಳೂರು ನಗರ ಬ್ಲಾಕ್ ಆಗಿತ್ತು. ಅದಕ್ಕೆ ಮುಖ್ಯ ಕಾರಣ ಅಲ್ಲಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಅಗೆದಿರುವುದು. ಯಾವ ರಸ್ತೆಗಳನ್ನು ಅಗೆದರೋ ಆ ರಸ್ತೆಗಳಲ್ಲಿ ವಾಹನಗಳ ಸಂಚಾರ ಸಾಧ್ಯವಾಗದೇ ಪೊಲೀಸರು ಅಲ್ಲಲ್ಲಿ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿದ ಕಾರಣ ಜನರಿಗೆ ತೊಂದರೆ ಆದದ್ದು ನಿಜ. ಇದು ಅಧಿಕಾರಿಗಳು ತೆಗೆದುಕೊಂಡ ತಪ್ಪು ನಿರ್ಣಯವೇ ವಿನ: ಇದು ಯಾವುದೇ ಜನಪ್ರತಿನಿಧಿಯ ಆದೇಶದಿಂದ ಆದದ್ದು ಅಲ್ಲ. ಅಧಿಕಾರಿಗಳು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ಆ ಪರಿಸ್ಥಿತಿ ಉಂಟಾಗಿತ್ತು. ಆದರೆ ಬಹುತೇಕ ಜನ ಬೈಯ್ದದ್ದು ಶಾಸಕರನ್ನು, ಮೇಯರ್ ಅವರನ್ನು. ಈಗ ತಪ್ಪಾದ ನಂತರ ಯಾರು ಯಾರನ್ನು ಬೈದರು ಎನ್ನುವುದು ಮುಖ್ಯವಲ್ಲ. ಆದರೆ ಜನರಿಗೆ ತೊಂದರೆ ಆಗಿದೆ ಎಂದು ಗೊತ್ತಾದ ತಕ್ಷಣ ಅಧಿಕಾರಿಗಳನ್ನು ಕರೆದು ಶಾಸಕ ವೇದವ್ಯಾಸ ಕಾಮತ್ ಸೂಕ್ತ ಸೂಚನೆಗಳನ್ನು ನೀಡಿ ಸಮಸ್ಯೆಯನ್ನು ಆವತ್ತೇ ರಾತ್ರಿ ಪರಿಹರಿಸಿದ್ದಾರೆ. ಆದರೆ ಮರುದಿನ ಮಾಜಿ ಶಾಸಕರೊಬ್ಬರು ಮತ್ತು ಕಾಂಗ್ರೆಸ್ಸಿನ ಯುವ ಅಧ್ಯಕ್ಷರೊಬ್ಬರು ಸುದ್ದಿಗೋಷ್ಟಿ ಮಾಡಿ ಶಾಸಕ ವೇದವ್ಯಾಸ ಕಾಮತ್ ಅವರಿಗೆ ಅನುಭವದ ಕೊರತೆ ಎಂದು ಟೀಕಿಸಿದ್ದಾರೆ. ಇಲ್ಲಿ ಅನುಭವದ ಕೊರತೆಯ ವಿಷಯ ಬರುವುದೇ ಇಲ್ಲ.
ಒಂದು ವೇಳೆ ಅನುಭವದ ಕೊರತೆ ಇದ್ದರೂ ಅದು ಪೊಲೀಸ್ ಇಲಾಖೆ ಮತ್ತು ಈ ನಿರ್ಧಾರ ತೆಗೆದುಕೊಂಡ ಸ್ಮಾರ್ಟ್ ಸಿಟಿ ಅಧಿಕಾರಿಗಳ ನಡುವಿನ ಅನುಭವದ ಕೊರತೆ ಆಗಬಹುದು. ಆದರೆ ಇಲ್ಲಿ ಮಾಜಿ ಶಾಸಕರು ರಾಜಕೀಯ ಕಾರಣಗಳಿಂದಾಗಿ ಹಾಲಿ ಶಾಸಕರನ್ನು ಎಳೆದು ತಂದಿದ್ದಾರೆ. ಈಗ ನಿಜವಾದ ಅರ್ಥದಲ್ಲಿ ಅನುಭವದ ಕೊರತೆ ಎಂದರೆ ಎನು ಎಂದು ವಿವರಿಸುತ್ತೇನೆ. ಮೊದಲನೇಯದಾಗಿ ಮಂಗಳೂರಿನಲ್ಲಿ ಇಡೀ ವರ್ಷ, ಇಡೀ ತಿಂಗಳು, ಇಡೀ ವಾರ, ಇಡೀ ದಿನ, ಇಡೀ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಕೊಡಲಾಗುವುದು ಎಂದು ಎಡಿಬಿ-1 ರಲ್ಲಿ ಬಂದ ಕೋಟ್ಯಾಂತರ ರೂಪಾಯಿ ಹಣವನ್ನು ಬಳಸಲಾಗಿತ್ತು. ಆಗ ಪಾಲಿಕೆಯಲ್ಲಿ, ಕುಡ್ಸೆಂಪುವಿನಲ್ಲಿ ಯಾರು ಅಧಿಕಾರಿಯಾಗಿದ್ದರು ಎನ್ನುವುದನ್ನು ಮಾಜಿ ಶಾಸಕರು ನೆನಪಿಸಿಕೊಳ್ಳಬೇಕು. ಮಂಗಳೂರಿನಲ್ಲಿಯೇ ಕೆಎಎಸ್ ಅಧಿಕಾರಾವಧಿಯ ಬಹುತೇಕ ವರ್ಷಗಳನ್ನು ಮುಗಿಸಿ ಇಲ್ಲಿಯೇ ಝಂಡಾ ಊರಿದ್ದ ಅಧಿಕಾರಿಗೆ ಮಂಗಳೂರಿನ ಹವಾಮಾನ, ರಸ್ತೆಗಳು ಮತ್ತು ಎಡಿಬಿ ಯೋಜನೆಯ ಉದ್ದ ಅಗಲ ಗೊತ್ತಿರಲಿಲ್ಲವೇ? ಅದರ ನಂತರ ಅವರೇ ಇಲ್ಲಿನ ಶಾಸಕರಾಗಿದ್ದವರು. ಹಾಗಾದರೆ ಎಡಿಬಿ-1 ವೈಫಲ್ಯದಿಂದ ನಮ್ಮ ನಿಮ್ಮ ತೆರಿಗೆಯ ಕೋಟ್ಯಾಂತರ ರೂಪಾಯಿ ವ್ಯರ್ಥವಾಯಿತಲ್ಲ. ಅದು ಯಾವ ಅನುಭವದ ಕೊರತೆ ಮಾಜಿ ಶಾಸಕರೇ? ಒಬ್ಬ ಅಧಿಕಾರಿಯಾಗಿ ವೈಫಲ್ಯ, ಒಬ್ಬ ಶಾಸಕನಾಗಿ ವೈಫಲ್ಯ ಕಂಡವರು ನಿನ್ನೆ ಸುದ್ದಿಗೋಷ್ಟಿ ಮಾಡಿ ಈಗಿನ ಶಾಸಕರ ಅನುಭವದ ಕೊರತೆ ಎಂದು ಹೇಳುತ್ತಿರಲ್ಲ? ಪಾಲಿಕೆ ವ್ಯಾಪ್ತಿಯಲ್ಲಿ 24*7 ಕುಡಿಯುವ ನೀರು ಕೊಡದೇ ಇರಲು ಅಧಿಕಾರಿ ಮತ್ತು ಶಾಸಕರು ಎರಡೂ ಆಗಿದ್ದ ಒಬ್ಬ ವ್ಯಕ್ತಿ ಕಾರಣ ಎಂದು ಜನರಿಗೆ ಗೊತ್ತಿದೆ. ಹಾಗಾದರೆ ಇದು ನಿಮ್ಮ ಅನುಭವದ ಕೊರತೆ ಅಲ್ವೇ?
ಇದೆಲ್ಲ ಬಿಡಿ, ಸಾಮಾನ್ಯ ಜನರಿಗೆ ಅರ್ಥವಾಗಲಿಕ್ಕಿಲ್ಲ. ಎಡಿಬಿ, ಕುಡ್ಸೆಂಪು ಎಂದು ದೊಡ್ಡ ವಿಷಯ ಬೇಡಾ, ಇವರು ನಷ್ಟ ಮಾಡಿದ ಕೋಟ್ಯಾಂತರ ರೂಪಾಯಿ ಹಣದ ವಿಷಯ ಬೇಕಾದರೆ ಪಕ್ಕಕ್ಕೆ ಇಡೋಣ. ಮೊನ್ನೆ ವಿಮಾನ ನಿಲ್ದಾಣದ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಅದಾನಿ ಸಂಸ್ಥೆಗೆ ಕೊಡಬಾರದು ಎಂದು ಪ್ರತಿಭಟನೆ ಮಾಡಿದರಲ್ಲ, ಇದೇ ಕಾಂಗ್ರೆಸ್ಸಿಗರು. ಆಗ ಇವರು ಕನಿಷ್ಟ ಮುಖಕ್ಕೆ ಮಾಸ್ಕ್ ಧರಿಸಿದ್ರಾ? ಸಾಮಾಜಿಕ ಅಂತರವನ್ನು ಪಾಲಿಸಿದ್ರಾ? ಎಲ್ಲರೂ ಟಿವಿಯಲ್ಲಿ ಮಿಂಚಬೇಕೆಂದು ಮೈಮೇಲೆ ಬಿದ್ದು ಎದುರಿಗೆ, ಹಿಂದೆ ಕುಳಿತಿದ್ದರಲ್ಲ ಅದು ಅನುಭವದ ಕೊರತೆ ಅಲ್ವಾ? ಹೀಗೆ ನಿರ್ಲಕ್ಷ್ಯ ಮಾಡಿದ ಕಾರಣ ಕೊರೊನಾ ಹೆಚ್ಚಾಗುವುದಿಲ್ಲವೇ? ಅನುಭವ ಸಿಕ್ಕಾಪಟ್ಟೆ ಇದ್ದವರು ಹೀಗೆ ಮಾಡಿದ್ದನ್ನು ಯಾವ ಕೊರತೆ ಎಂದು ಹೇಳುವುದು. ಅದು ಬಿಡಿ, ಡಿಕೆಶಿವಕುಮಾರ್ ಇತ್ತೀಚೆಗೆ ಅಕ್ರಮ ಆಸ್ತಿ ಗಳಿಗೆ ಕಾರಣಕ್ಕೆ ಬಂಧನವಾದಾಗ ಇವರು ಮಾಡಿದ ಪ್ರತಿಭಟನೆಯಿಂದ ರಸ್ತೆ ಕೂಡ ಬ್ಲಾಕ್ ಆಗಿತ್ತಲ್ಲ, ಇದು ಗೊತ್ತಿದ್ದೆ ಮಾಡಿದ ಕಿತಾಪತಿ ಅಲ್ವಾ? ಮಾಜಿ ಶಾಸಕರೇ, ನೀವು ಅನುಭವದ ಕೊರತೆ ಎಂದು ಹೇಳಿ ರಾಜಕೀಯ ಮಾಡಬಹುದು. ಆದರೆ ಮಂಗಳೂರು ನಗರದ ಯಾವ ರಸ್ತೆಗಳ ಬಗ್ಗೆ ಕೇಳಿ ಆ ಬಗ್ಗೆ ಸಮಗ್ರ ಮಾಹಿತಿ ಇರುವ ಈಗಿನ ಶಾಸಕರ ಬಳಿ ಒಂದು ಅರ್ಧ ಗಂಟೆ ಕುಳಿತು ಅಧಿಕಾರಿಗಳು ಸಮಾಲೋಚನೆ ಮಾಡಿ ಹೋಗಿದ್ದರೆ ಈ ಬ್ಲಾಕ್ ಆಗುತ್ತಲೇ ಇರುತ್ತಿರಲಿಲ್ಲ. ಅದಕ್ಕೆ ತಾಜಾ ಉದಾಹರಣೆ ಸಮಸ್ಯೆ ಆದ ಬಳಿಕ ಶಾಸಕ ಕಾಮತ್ ನಿರ್ವಹಿಸಿ ಪರಿಹರಿಸಿದ ರೀತಿ. ನೀವು ಅನುಭವದ ಮೂಟೆ ಆಗಿದ್ದರೂ ಶಕ್ತಿನಗರದಲ್ಲಿ ಜನರಿಗೆ ಮನೆ ಕೊಡುತ್ತೇನೆ ಎಂದು ಅನ್ಯಾಯ ಮಾಡಿದ್ದನ್ನು ಜನರೇ ನೋಡಿದ್ದಾರೆ. ಅದನ್ನು ಈಗ ಹಾಲಿ ಶಾಸಕರು ಪರಿಹರಿಸಬೇಕಿದೆ. ಸೌಮ್ಯ ಸ್ವಭಾವದ, ಜನಸ್ನೇಹಿ ಶಾಸಕರನ್ನು ಯಾರೋ ಅಧಿಕಾರಿಗಳು ಮಾಡಿದ ತಪ್ಪಿಗೆ ಹೊಣೆಗಾರ ಮಾಡುವ ಮೂಲಕ ನೀವು ರಾಜಕೀಯ ಮಾಡಿರಬಹುದು. ಆದರೆ ಮುಂದೆ ಈ ರಸ್ತೆಗಳು ಅಭಿವೃದ್ಧಿಯಾದಾಗ ಇದೇ ಮಾಜಿ ಶಾಸಕರು, ಕಾಂಗ್ರೆಸ್ಸಿಗರು ಇನ್ಯಾವ ರಾಜಕೀಯ ಮಾಡಲಿದ್ದಾರೋ?
Leave A Reply