ಪಾಕ್ ಜೊತೆ ಯುದ್ಧವಾದರೆ ರಾಜಕೀಯ ಬೇಡಾ, ರಾಜಮರ್ಯಾದೆ ಇರಲಿ!!
ಎಲ್ಲಾ ಆತ್ಮೀಯ ಜಾಗೃತ ಅಂಕಣದ ಓದುಗರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಅದೇ ರೀತಿಯಲ್ಲಿ ನಮ್ಮ ಎಲ್ಲಾ ವೀರ ಯೋಧರಿಗೂ ದೀಪಗಳ ಹಬ್ಬದ ಶುಭ ಹಾರೈಕೆಗಳು. ದೀಪಾವಳಿಯ ಹೊಸ್ತಿಲಲ್ಲಿಯೇ ನಾವು ನಮ್ಮ ಯೋಧರ ಬಲಿದಾನದ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಬೇಕಾಗಿದೆ. ಅಲ್ಲಿ ಪಾಕಿಸ್ತಾನದಲ್ಲಿ ಕುಳಿತಿರುವ ಮೃಗಗಳಿಗೆ ದೀಪಾವಳಿ, ನವರಾತ್ರಿ ಎನ್ನುವುದು ಇಲ್ಲವೇ ಇಲ್ಲ ಎನ್ನುವುದು ನಮಗೆ ಗೊತ್ತಿದೆ. ಒಂದು ನಾಯಿಗಾದರೂ ಬುದ್ಧಿ ಇದೆ. ಆದರೆ ಪಾಕಿಸ್ತಾನದಲ್ಲಿ ಹೊಲಸು ತಿನ್ನುವವರಿಗೆ ಅದು ಕೂಡ ಇಲ್ಲ. ನಮ್ಮ ದೇಶವೀಡಿ ದೀಪಾವಳಿಯ ಸಂಭ್ರಮದಲ್ಲಿರುವಾಗ ಪಾಕ್ ಪುಂಡರ ಹೇಡಿತನದ ದಾಳಿಯಿಂದ ನಮ್ಮ ನಾಲ್ಕು ಯೋಧರು ಹುತಾತ್ಮರಾಗಿರುವುದರ ಜೊತೆಗೆ ಆರು ಜನ ನಾಗರಿಕರು ಕೂಡ ಹತರಾಗುವಂತಾಗಿದೆ. ಈ ಮೂಲಕ ಈ ವರ್ಷದಲ್ಲಿ ಈ ಕದನ ವಿರಾಮ ಉಲ್ಲಂಘನೆಯನ್ನು ಕೂಡ ಸೇರಿಸಿ ಒಟ್ಟು 4,052 ಬಾರಿ ಕದನ ವಿರಾಮ ಉಲ್ಲಂಘನೆಯನ್ನು ಪಾಕ್ ಎನ್ನುವ ನಿರ್ಲಜ್ಜ ದೇಶ ಮಾಡುತ್ತಿದೆ. ಹಾಗಂತ ನಮ್ಮ ಸೈನಿಕರು ಸುಮ್ಮನೆ ಕುಳಿತಿಲ್ಲ. ಯಾಕೆಂದರೆ ಕೇಂದ್ರದಲ್ಲಿ ಹಿಂದಿನ ಸರಕಾರ ಇಲ್ಲ. ಅವರು ಕದನ ವಿರಾಮ ಉಲ್ಲಂಘನೆ ಮಾಡಿದರೆ ಅವರಿಗೆ ಮುಟ್ಟಿ ನೋಡುವಷ್ಟು ಹೊಡೆದು ಬನ್ನಿ ಎನ್ನುವ ಸೂಚನೆ ಸಿಕ್ಕಿರುವುದರಿಂದ ಭಾರತೀಯ ಸೇನೆ ಮಿಂಚಿನ ದಾಳಿ ನಡೆಸಿ ಪಾಕ್ ನ ಬಂಕರ್ ಗಳನ್ನು ಹಾಗೂ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ಮರುದಾಳಿಯಲ್ಲಿ ಪಾಕಿಸ್ತಾನದ ಸ್ಪೆಶಲ್ ಸರ್ವಿಸ್ ಗ್ರೂಪ್ ನ ಮೂವರು ಕಮಾಂಡರ್ ಗಳು ಸೇರಿ ಎಂಟು ಸೈನಿಕರು ಹತರಾಗಿದ್ದಾರೆ. ಸರಿಯಾಗಿ ನೋಡಿದರೆ ಪಾಕಿಸ್ತಾನದಲ್ಲಿ ಸರಿಯಾಗಿ ತಿನ್ನಲು ಆಹಾರವಿಲ್ಲದೇ ಜನಸಾಮಾನ್ಯರು ಹಾಹಾಕಾರ ಎಬ್ಬಿಸುವ ಪರಿಸ್ಥಿತಿ ಇದೆ. ಅಲ್ಲಿನ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಇಳಿದಿದೆ. ಅಲ್ಲಿ ದಿನಸಿ ವಸ್ತುಗಳ ಬೆಲೆ, ಹಾಲಿನ ದರ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಜನರು ಸರಕಾರದ ವಿರುದ್ಧ ದಂಗೆ ಎದ್ದರೆ ಆ ದೇಶವನ್ನು ಯಾರೂ ರಕ್ಷಿಸಲಾರರು. ಆದರೆ ಅದ್ಯಾವುದನ್ನೂ ಸರಿ ಮಾಡಲು ಹೋಗದ ಇಮ್ರಾನ್ ಖಾನ್ ತನ್ನ ಉಗ್ರಗಾಮಿಗಳಿಂದ ಇಲ್ಲಿಯ ತನಕ ಭಾರತದ ಶಾಂತಿಗೆ ಭಂಗ ತರುತ್ತಲೇ ಇದ್ದ. ಕಳೆದ ಬಾರಿ ಸರ್ಜಿಕಲ್ ಸ್ಟ್ರೈಕ್ ಬಳಿಕ ಉಗ್ರರು ಕೂಡ ಇತನ ಜೊತೆ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತಾದರೋ ಏನೋ? ಈಗ ಸ್ವತ: ಸೈನಿಕರನ್ನೇ ಬಳಸುತ್ತಿದ್ದಾನೆ. ಈ ಮೂಲಕ ಇತ್ತೀಚೆಗೆ ಪಾಕ್ ಸೈನಿಕರು ಹೆಚ್ಚೆಚ್ಚು ಅಧಿಕ ಪ್ರಸಂಗ ಮಾಡುತ್ತಿರುವುದು ಪತ್ತೆಯಾಗಿದೆ ಮತ್ತು ಪಾಕ್ ಸೈನಿಕರ ಹೆಣಗಳು ನೆಲಕ್ಕೆ ಉರುಳುತ್ತಿವೆ. ಈ ಹಂತದಲ್ಲಿ ಭಾರತ ಪಾಕಿಗೆ ಶಾಶ್ವತ ಬುದ್ಧಿ ಕಲಿಸಬೇಕು ಎಂದು ದೇಶದ ನಾಗರಿಕರ ಒತ್ತಾಯ ಕೂಡ ಕೇಳಿಬರುತ್ತಿದೆ.
ಆದರೆ ಹೇಗೆ? ನಿನ್ನೆ ಪಾಕಿನ ಲಾಂಚ್ ಪ್ಯಾಡ್, ಡಿಸೀಲ್ ಡಂಪಿಂಗ್ ಪ್ರದೇಶಗಳನ್ನು ಭಾರತ ಚಿಂದಿ ಉಡಾಯಿಸಿದೆ. ಈ ಮೂಲಕ ಪಾಕಿಗೆ ಸ್ವಲ್ಪ ಬಿಸಿ ಮುಟ್ಟಿದೆ. ಆದರೆ ಕೆಲವು ದಿನಗಳ ಬಳಿಕ ಮತ್ತೆ ಪಾಪಿ ಪಾಕ್ ಕಾಲುಕೆರೆದು ಜಗಳಕ್ಕೆ ಬರುತ್ತದೆ. ಅದಕ್ಕೆ ಮತ್ತೆ ಬುದ್ಧಿ ಕಲಿಸಲು ಹೊರಡಬೇಕು. ಅದರ ಬದಲಿಗೆ ಶಾಶ್ವತ ಬುದ್ಧಿ ಎಂದರೆ ಮತ್ತೊಮ್ಮೆ ನುಗ್ಗಿ ಹೊಡೆಯುವುದು. ಆದರೆ ಇದಕ್ಕೆ ಇಡೀ ದೇಶಕ್ಕೆ ದೇಶವೇ ಸರಕಾರದ ಜೊತೆ ನಿಲ್ಲಬೇಕು. ನೀವು ಏನು ಬೇಕಾದರೂ ಮಾಡಿ, ನಾವು ನಿಮ್ಮ ಜೊತೆ ಇದ್ದೇವೆ ಎಂದು ಎಲ್ಲಾ ಪಕ್ಷಗಳು ಒಕ್ಕೊರೊಳಿನಿಂದ ಘೋಷಿಸಬೇಕು. ಆಗುತ್ತಾ? ನಮ್ಮಲ್ಲಿ ಕೆಲವು ರಾಜಕೀಯ ಪಕ್ಷಗಳಿಗೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದರೆ ಅದರಿಂದ ಮೋದಿಗೆ ಲಾಭವಾಗುತ್ತಾ ಎನ್ನುವ ಟೆನ್ಷನ್ ಇದೆ. ನಾವು ಮೆಡಿಕಲ್ ಸ್ಟೋರಿಗೆ ಹೋಗಿ ನಮಗೆ ಯಾವ ಮದ್ದು ಬೇಕು ಎಂದು ಹೇಳಿ ಪಡೆದುಕೊಂಡು ನಮ್ಮ ಕಾಯಿಲೆ ಗುಣಮುಖ ಮಾಡಬೇಕೆ ವಿನ: ನಾವು ಮದ್ದು ತೆಗೆದುಕೊಳ್ಳುವುದರಿಂದ ಅಂಗಡಿಯವನಿಗೆ ಎರಡು ರೂಪಾಯಿ ಲಾಭವಾಗುತ್ತೆ ಎಂದು ನೋವು ನುಂಗಿ ಕುಳಿತರೆ ಇದರಿಂದ ತೊಂದರೆ ಯಾರಿಗೆ? ಇಲ್ಲಿ ಕೂಡ ಹಾಗೆ. ಪಾಕಿಸ್ತಾನ ನಮ್ಮ ಪಾಲಿಗೆ ಒಂದು ವೈರಸ್ ನಂತಹುದು. ಅದನ್ನು ನಾಶಮಾಡಬೇಕಾದರೆ ಸೈನ್ಯ ಎನ್ನುವ ಮದ್ದು ಬೇಕು. ಅದನ್ನು ಪ್ರಯೋಗಿಸಿದರೆ ವೈರಸ್ ನಾಶವಾಗುತ್ತದೆ. ಆದರೆ ಇದರಿಂದ ಕಾಯಿಲೆ ಗುಣಮುಖವಾಗುತ್ತದೆ. ದೇಹಕ್ಕೆ ನೆಮ್ಮದಿಯಾಗುತ್ತದೆ. ದೇಹಕ್ಕೆ ನೆಮ್ಮದಿ ಎಂದರೆ ಜನರಿಗೆ ಖುಷಿ. ಇದರ ಲಾಭ ಕೇಂದ್ರ ಸರಕಾರಕ್ಕೆ ಬಂದರೂ ಬರಬಹುದು. ಬರದೇನೂ ಇರಬಹುದು. ಆದರೆ ವಿಪಕ್ಷಗಳಿಗೆ ಪಾಕ್ ಎನ್ನುವ ವೈರಸ್ ನಾಶವಾಗುತ್ತೆ ಎನ್ನುವುದಕ್ಕಿಂತ ಜನ ಮೋದಿಗೆ ಜೈ ಎನ್ನುತ್ತಾರಾ ಎನ್ನುವ ಆತಂಕ. ಆದ್ದರಿಂದ ಒಂದು ವೇಳೆ ಅಪ್ಪಿತಪ್ಪಿ ಯುದ್ಧ ಆಗಿ ನಮ್ಮ ವೀರ ಯೋಧರು ಪಾಕ್ ಅನ್ನು ಚಿಂದಿಉಡಾಯಿಸಿ ಬಂದರೂ ಮೊದಲಿಗೆ ಇಲ್ಲಿ ವಿಪಕ್ಷಗಳ ಅಪಸ್ವರ ಇದ್ದೇ ಇರುತ್ತದೆ. ಸರ್ಜಿಕಲ್ ಸ್ಟ್ರೈಕ್ ಆದಾಗಲೇ ಸಾಕ್ಷಿ ಕೇಳಿದ ವಿಪಕ್ಷಗಳನ್ನು ಹೊಂದಿರುವ ಭಾರತದಂತ ದೇಶದಲ್ಲಿ ಏನು ಮಾಡಿದರೂ ಕೇಂದ್ರ ಸರಕಾರ ಸಾಕಷ್ಟು ಯೋಚಿಸಬೇಕು.
ದೀಪಾವಳಿಯ ಸಮಯದಲ್ಲಿ ಹುತಾತ್ಮರಾದ ಆ ವೀರ ಯೋಧರ ಮನೆಯಲ್ಲಿ ಮಾತ್ರವಲ್ಲ, ನಮ್ಮಂತಹ ಸಾಮಾನ್ಯ ಜನರಿಗೂ ಏನೋ ಸಂಕಟವಾಗುತ್ತಿರುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಇವತ್ತು ನಾವು ನೆಮ್ಮದಿಯಿಂದ ಹಬ್ಬ ಆಚರಿಸುತ್ತಾ, ಪಟಾಕಿ ಹೊಡೆಯುತ್ತಾ, ಊಟದ ಗಮ್ಮತ್ತು ಸವಿಯುತ್ತಾ ಇದ್ದರೆ ನಮ್ಮ ಸೈನಿಕರು ಆ ಪಾಪಿ ಪಾಕ್ ಯಾವಾಗ ದೇಶದೊಳಗೆ ನುಗ್ಗಲು ಹರಸಾಹಸ ಪಡುತ್ತಿರುವುದನ್ನು ಹೊಸಕಿ ಹಾಕಲು ಕಾಯುತ್ತಾ ನಿಂತಿದ್ದಾರೆ. ನಾವು ಮೈಗೆ ಎಣ್ಣೆ ಹಚ್ಚಿ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಊಟಕ್ಕೆ ಅಣಿಯಾಗುತ್ತಿದ್ದರೆ ಅತ್ತ ಸೈನಿಕರು ಮರಗಟ್ಟುವ ಚಳಿಯಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟು ದೇಶ ಕಾಯುತ್ತಿದ್ದಾರೆ. ಅವರ ಪರವಾಗಿ ನಿಲ್ಲುವ ಎದೆಗಾರಿಕೆ ನಮ್ಮ ವಿಪಕ್ಷಗಳಿಗೆ ಯಾವಾಗ ಬರುತ್ತೋ ಎನ್ನುತ್ತಾ ಕನಿಷ್ಟ ನಾವಾದರೂ ನಮ್ಮ ಸೈನಿಕರಿಗೆ ಒಳ್ಳೆಯದಾಗಲಿ ಎಂದು ದೇವರಿಗೆ ಬೇಡುತ್ತಾ ದೀಪ ಹಚ್ಚೋಣ!!
Leave A Reply