ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ ಉತ್ತಮ ಮಾದರಿ ಕಾರ್ಯವನ್ನು ಪ್ರತಿ ದೀಪಾವಳಿಗೆ ತಪ್ಪದೆ ಆಚರಿಸಿಕೊಂಡು ಬರುತ್ತಿದ್ದಾರೆ. ಅದೇನೆಂದರೆ ಸೈನಿಕರೊಂದಿಗೆ ದೀಪಾವಳಿ ಆಚರಿಸುವುದು. ದೀಪಾವಳಿ ಬಂತೆಂದರೆ ನಾವು ಜನಸಾಮಾನ್ಯರು ಯಾವ ಪಟಾಕಿ ಹೊಡೆಯುವುದು, ಯಾವಾಗ ಹೊಸ ಬಟ್ಟೆ ಖರೀದಿಸುವುದು, ಯಾವ ಸಿಹಿ ತಿಂಡಿ ಮಾಡುವುದು, ತಿನ್ನುವುದು ಇದನ್ನೇ ಯೋಚಿಸಿ ಆಚರಿಸಲು ತಯಾರಾಗುತ್ತೇವೆ. ಆದರೆ ನಾವು ಇಲ್ಲಿ ನಿಶ್ಚಿಂತೆಯಿಂದ ದೀಪಾವಳಿ ಆಚರಿಸಬೇಕಾದರೆ ಗಡಿಯಲ್ಲಿ ನಮ್ಮ ವೀರ ಸೇನಾನಿಗಳು ತಮ್ಮ ಸೇವಾಪರತೆಯನ್ನು ತೋರಿಸಿದರೆ ಮಾತ್ರ ಸಾಧ್ಯ. ಯಾವುದೇ ಸೈನಿಕ ಗಡಿಯಲ್ಲಿ ಜೀವವನ್ನು ಪಣಕ್ಕೊಡ್ಡಿ ಸೇವೆ ಸಲ್ಲಿಸುವಾಗ ಇಲ್ಲಿ ನಮ್ಮ ಭಾರತೀಯರ ಕರ್ತವ್ಯ ಏನು ಎನ್ನುವುದು ನಮಗೆ ಗೊತ್ತಿದೆಯಾ. ಆ ಯೋಧರ ಬಗ್ಗೆ ಪ್ರಾರ್ಥನೆ ಸಲ್ಲಿಸುವುದು. ನಾವು ಪ್ರತಿಯೊಬ್ಬರು ಅಲ್ಲಿಗೆ ಹೋಗಿ ಯೋಧರಿಗೆ ಸಿಹಿ ತಿನ್ನಿಸಿ ಬರಲು ಆಗುವುದಿಲ್ಲ. ಆದರೆ ನಮ್ಮೆಲ್ಲರ ಪರವಾಗಿ ನಮ್ಮ ಪ್ರಧಾನಿ ದೀಪಾವಳಿಯ ಸಮಯದಲ್ಲಿ ಗಡಿಗೆ ತೆರಳಿ ಸೈನಿಕರ ಬೆನ್ನು ತಟ್ಟಿ ಅವರಿಗೆ ಸಿಹಿ ನೀಡಿ ದೀಪಗಳ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇದರಿಂದ ಯೋಧರಲ್ಲಿ ಇನ್ನಷ್ಟು ಹುಮ್ಮಸ್ಸು ಹೆಚ್ಚುತ್ತದೆ. ಇದನ್ನು ಮೋದಿ ಕಳೆದ ಏಳು ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ಯೋಧರಿಗೆ ದೀಪಾವಳಿಯ ಸಂಭ್ರಮದಲ್ಲಿ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಈ ಬಾರಿ ಮೋದಿ ಕೇವಲ ಯೋಧರಿಗೆ ಸಿಹಿ ಮಾತ್ರ ತಿನ್ನಿಸಿದ್ದಲ್ಲ, ಗಡಿಯಲ್ಲಿ ನಿಂತು ಶತ್ರುರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆಯನ್ನು ಕೂಡ ಕೊಟ್ಟು ಬಂದಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ತಮ್ಮ ಪಾಡಿಗೆ ತಾವು ಇದ್ದರೆ ಪರವಾಗಿಲ್ಲ, ಅದು ಬಿಟ್ಟು ಗಡಿಯಲ್ಲಿ ಕಿರಿಕ್ ಮಾಡಿದರೆ ಸೂಕ್ತವಾಗಿರುವ ಬುದ್ಧಿ ಕಲಿಸಲಾಗುವುದು ಎನ್ನುವ ಸಂದೇಶ ನೀಡಿದ್ದಾರೆ. ಈ ಮೂಲಕ ನಮ್ಮ ಹಬ್ಬದ ನಡುವೆಯೂ ಕದನ ವಿರಾಮ ಉಲ್ಲಂಘಿಸಿ ಮೋಸದ ಯುದ್ಧಕ್ಕೆ ಕೈ ಹಾಕುವ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ. ನಮ್ಮ ವೀರ ಯೋಧರನ್ನು ನಾವು ಹೇಗೆ ಗೌರವಿಸಬೇಕು ಎನ್ನುವುದನ್ನು ನಾವು ಮೋದಿಯವರನ್ನು ನೋಡಿ ಕಲಿಯಬೇಕು. ಪ್ರಧಾನಿಯವರ ಇಂತಹ ನಡೆಯಿಂದ ಮುಂದಿನ ಪೀಳಿಗೆಗೆ ಏನು ಸಂದೇಶ ಹೋಗುತ್ತದೆ ಎಂದರೆ ಸೈನಿಕರು ಇದ್ದರೆ ಮಾತ್ರ ನಾವು ಎನ್ನುವುದು ಮಕ್ಕಳಿಗೆ ಗೊತ್ತಾಗುತ್ತದೆ. ಇದನ್ನು ನಮ್ಮ ಮಕ್ಕಳಿಗೆ ನಾವು ಕಲಿಸಿಕೊಡಬೇಕು. ವಿದೇಶಗಳಲ್ಲಿ ಸೈನಿಕರು ರಜೆಯ ಮೇಲೆ ಊರಿಗೆ ಬಂದರೆ ಅವರಿಗೆ ವಿಶೇಷ ರೀತಿಯಲ್ಲಿ ಆ ಪರಿಸರದ ನಾಗರಿಕರು ಸ್ವಾಗತ ಕೋರುತ್ತಾರೆ. ಒಬ್ಬ ರಾಜಕಾರಣಿಗಿಂತ ಹೆಚ್ಚಿನ ಗೌರವ ಸೈನಿಕರಿಗೆ ಅಲ್ಲಿದೆ. ನಮ್ಮಲ್ಲಿ ಒಬ್ಬ ಶಾಸಕ, ಸಂಸದ, ಮಂತ್ರಿಗಳು ಎಲ್ಲಿಯಾದರೂ ಬಂದರೆ ಅವರ ಬೆಂಬಲಿಗರು ಒಟ್ಟು ಸೇರಿ ಅಲ್ಲೊಂದು ಜಾತ್ರೆಯ ವಾತಾವರಣ ಸೃಷ್ಟಿಸುತ್ತಾರೆ. ಆದರೆ ಒಬ್ಬ ಯೋಧ ಊರಿಗೆ ಬಂದರೆ ಯಾರಿಗೂ ಗೊತ್ತಾಗುವುದಿಲ್ಲ. ಈ ವಾತಾವರಣ ಹೋಗಬೇಕು. ನೀವು ರಜೆಯಲ್ಲಿ ಊರಿಗೆ ಬರುವ ಯೋಧರೊಂದಿಗೆ ಮಾತನಾಡಿ ನೋಡಿ, ಅವರಿಂದ ಒಂದು ಪಾಸಿಟಿವ್ ವೈಬ್ಸ್ ನಮ್ಮತ್ತ ಬರುತ್ತದೆ. ಒಂದು ಜೀವನೋತ್ಸಾಹ ನಮಗೆ ಸಿಗುತ್ತದೆ. ನಾವು ಊರಿನಲ್ಲಿ ಕುಳಿತು ಏನೋ ಒಂದು ಬಯಸಿದ್ದು ಸಿಗಲಿಲ್ಲ ಎಂದು ಆಕಾಶವೇ ಕಳಚಿ ಬಿದ್ದವರ ಹಾಗೆ ವರ್ತಿಸುತ್ತೇವೆ. ಆಲಸ್ಯದಿಂದ ವರ್ತಿಸಿ ಕೈಗೆ ಬಂದ ಅವಕಾಶವನ್ನು ನಿರಾಕರಿಸಿ ಬಿಡುತ್ತೇವೆ. ಒಂದು ಸೋಲು ಎಲ್ಲವೂ ಮುಗಿಯಿತು ಎಂದು ಅಂದುಕೊಳ್ಳುತ್ತೇವೆ. ಆದರೆ ಸೈನಿಕರನ್ನು ನೋಡಿ. ಅವರು ನಿತ್ಯವೂ ಸಾವಿನೊಂದಿಗೆ ಸೆಣಸಾಡುತ್ತಾರೆ. ಅನೇಕ ಬಾರಿ ಸಾವು ಅವರ ಹತ್ತಿರದಿಂದ ಹಾದು ಹೋಗಿರುತ್ತದೆ. ಆದರೂ ಈ ಬದುಕು ಮುಗಿಯಿತು ಎಂದು ಅಂದುಕೊಳ್ಳುವುದಿಲ್ಲ. ಎದುರಿಗಿರುವ ಶತ್ರುವಿಗೆ ಗತಿ ಕಾಣಿಸಿಯೇ ಶುದ್ಧ ಎಂದು ನಿರ್ಧರಿಸಿರುತ್ತಾರೆ. ಅದನ್ನು ನಾವು ಅವರಿಂದ ಕಲಿತುಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅವರು ನಮಗಾಗಿ ಬದುಕಿರುತ್ತಾರೆ. ಅವರದ್ದು ನಿಜವಾದ ಅರ್ಥದಲ್ಲಿ ನಿಸ್ವಾರ್ತ ಸೇವೆ. ಅವರು ಒಂದು ವೇಳೆ ನಿಮಗೆ ಎಲ್ಲಿಯಾದರೂ ಕಾಣ ಸಿಕ್ಕಿದರೆ ದಯಮಾಡಿ ಅವರಿಗೆ ಒಂದು ಸಲ್ಯೂಟ್ ನಿಮ್ಮ ಕಡೆಯಿಂದ ಬರಲಿ. ಒಂದು ಮೆಚ್ಚುಗೆಯ ಮಾತು ನಿಮ್ಮ ಹೃದಯದಿಂದ ಹೊರಹೊಮ್ಮಲಿ. ಎಲ್ಲಿಯಾದರೂ ಹೋಟೇಲಿನಲ್ಲಿ ನಿಮ್ಮ ಎದುರು ಯೋಧರೊಬ್ಬರು ಕುಳಿತಿದ್ದಾರೆ ಎಂದು ಗೊತ್ತಾದರೆ ಅವರ ಯೋಗಕ್ಷೇಮ ವಿಚಾರಿಸಿ. ಬಸ್ಸಿನಲ್ಲಿ ಸಿಕ್ಕಿದರೆ ಸೀಟ್ ಬಿಟ್ಟುಕೊಡಿ. ಇದೆಲ್ಲವೂ ನೀವು ಮಾಡುವ ಸಣ್ಣ ಸಣ್ಣ ಕಾರ್ಯ. ಆದರೆ ಇದರಿಂದ ಬಹಳ ಉತ್ತಮ ಸಂದೇಶ ನಿಮ್ಮ ಜೊತೆಯಲ್ಲಿ ಇದ್ದವರಿಗೆ ಆಗುತ್ತೆ.
Leave A Reply