ಸ್ಮಾರ್ಟ್ ಸಿಟಿ ಡೆಬ್ರೀಸ್ ಮರುಬಳಕೆಗೆ 25 ಕೋಟಿ ವೆಚ್ಚದ ಯಂತ್ರ ಬರಲಿದೆಯಾ??
ಸ್ಮಾರ್ಟ್ ಸಿಟಿ ವಿಷಯದಲ್ಲಿ ಮಂಗಳೂರು ಒಂದು ಮೈಲಿಗಲ್ಲನ್ನು ಸ್ಥಾಪಿಸಲಿದೆಯಾ ಎನ್ನುವ ಕುತೂಹಲ ನನ್ನಲ್ಲಿದೆ. ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ಆದರೆ 25 ಕೋಟಿ ರೂಪಾಯಿ ವೆಚ್ಚದ ವಾಹನವೊಂದು ಮಂಗಳೂರಿನ ನೆಲದ ಮೇಲೆ ಬಂದು ಲ್ಯಾಂಡ್ ಆಗಲಿದೆ. ಆ ಯಂತ್ರದ ಒಳಗೆ ಈ ಕಾಂಕ್ರೀಟ್, ಡಾಮರಿನ ತ್ಯಾಜ್ಯ (ಡೆಬ್ರೀಸ್) ಹಾಕಿ ಆನ್ ಮಾಡಿದರೆ ಸಾಕು ಅದರ ಬಾಯಿಂದ ಎಂ-ಸ್ಯಾಂಡ್ ಬರುತ್ತದೆ. ಅಂದರೆ ಡೆಬ್ರೀಸ್ ಸಮಸ್ಯೆ ಶಾಶ್ವತವಾಗಿ ಮಂಗಳೂರನ್ನು ಬಿಟ್ಟು ಹೋಗಲಿದೆ. ಇದು ಒಂದು ವೇಳೆ ಆದರೆ 25 ಕೋಟಿ ವೆಚ್ಚದ ಯಂತ್ರವನ್ನು ಸ್ಮಾರ್ಟ್ ಸಿಟಿಯಲ್ಲಿ ಬಳಸಿದ ರಾಜ್ಯದ ಮೊದಲ ನಗರವಾಗಿ ಮಂಗಳೂರು ಇತಿಹಾಸದಲ್ಲಿ ದಾಖಲಾಗಲಿದೆ.
ಆದರೆ ಇದು ಆಗುತ್ತಾ? ಉತ್ತರ ಸಿಗುವ ಮೊದಲು ಮಂಗಳೂರು ಸ್ಮಾರ್ಟ್ ಸಿಟಿಯ ಪ್ರಕರಣ ಹೈಕೋರ್ಟ್ ನಲ್ಲಿದೆಯಲ್ಲ, ಅಲ್ಲಿ ಒಂದು ತಾರ್ಕಿಕ ಅಂತ್ಯವನ್ನು ಪ್ರಕರಣ ಕಾಣಬೇಕು. ಕೋರ್ಟ್ ಅಂತಿಮ ತೀರ್ಪು ನೀಡುವ ಮೊದಲು ಕೋರ್ಟೇ ನಿರ್ದೇಶಿಸಿದ ಹಾಗೆ ನೀರಿಯಿಂದ ಅಂತಿಮ ವರದಿ ಬರಬೇಕು. ನೀರಿ ಎಂದರೆ ಎನ್ ಇಆರ್ ಐ ಎನ್ನುವ ಸ್ವಾಯತ್ತ ಸಂಸ್ಥೆ. ಎನ್ ಎಂದರೆ ನ್ಯಾಶನಲ್ ಇ ಎಂದರೆ ಇಂಗ್ಲೀಷಿನ ಪರಿಸರ, ಆರ್ ಎಂದರೆ ರಿಸರ್ಚ್ ಮತ್ತು ಐ ಎಂದರೆ ಇನ್ಸಿಟ್ಯೂಟ್. ನೀರಿಗೆ ಒಂದು ವಾರದ ಒಳಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ. ಹಾಗಾದರೆ ನಿನ್ನೆ ಕೋರ್ಟಿನಲ್ಲಿ ಏನಾಯಿತು ಎನ್ನುವುದು ಮಂಗಳೂರಿನ ಜವಾಬ್ದಾರಿಯುತ ಪ್ರಜೆಯಾಗಿ ನಿಮಗೆ ಗೊತ್ತಿರಬೇಕು. ಮೊದಲನೇಯದಾಗಿ ಈ ಡಾಮರು ಹಾಗೂ ಕ್ರಾಂಕೀಟ್ ತ್ಯಾಜ್ಯಗಳನ್ನು ಎಲ್ಲಿ ವಿಲೇವಾರಿ ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಪಾಲಿಕೆ ಕಮೀಷನರ್ ಉತ್ತರ ಕೊಟ್ಟಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಂಜತ್ತಬೈಲ್ ಎನ್ನುವ ಪ್ರದೇಶ ಬರುತ್ತದೆ. ಅಲ್ಲಿ ಸರಕಾರದ ಐದು ಎಕರೆಯಷ್ಟು ಜಾಗ ಇದೆ. ಪ್ರದೇಶ ತುಂಬಾ ಆಳದಲ್ಲಿರುವುದರಿಂದ ಅಲ್ಲಿ ಇಂತಹ ಎಷ್ಟು ರಸ್ತೆ ನಿರ್ಮಾಣ ತ್ಯಾಜ್ಯವನ್ನು ಸುರಿದರೂ ಹಿಡಿಸುವಷ್ಟು ಜಾಗ ಇದೆ. ನಾವು ಅಲ್ಲಿ ತೆಗೆದುಕೊಂಡು ಹಾಕುತ್ತೇವೆ ಎಂದು ಕಮೀಷನರ್ ಅಕ್ಷಯ್ ಶ್ರೀಧರ್ ಅವರು ಈ ಮೊದಲೇ ಕೋರ್ಟ್ ಕೇಳಿದಾಗ ಹೇಳಿದಿದ್ದರೆ ಆವತ್ತೆ ಕೆಲಸ ಮುಂದುವರೆಯಲು ಅವಕಾಶ ಸಿಗುತ್ತಿತ್ತೇನೊ. ಆದರೆ ಪಾಲಿಕೆಯ ಅಧಿಕಾರಿಗಳು ಹೊಸದಾಗಿ ಬಂದ ಕಮೀಷನರ್ ಅವರಿಗೆ ಸೂಕ್ತ ಮಾಹಿತಿಯನ್ನೇ ಕೊಟ್ಟಿರಲಿಲ್ಲ. ಇದರಿಂದ ಮೂರು ವಾರಗಳಿಂದ ಕಾಮಗಾರಿಗಳು ನಿಂತು ಹೊಗಿವೆ. ಈಗ ಸರಕಾರ, ಪಾಲಿಕೆ, ಸ್ಮಾರ್ಟ್ ಸಿಟಿ ಮಂಡಳಿಯವರು ಕೋರ್ಟ್ ಕೇಳಿದ ಆ ಪ್ರಶ್ನೆಗೆ ಸೂಕ್ತ ಉತ್ತರ ನೀಡಿದ ಕಾರಣ ನ್ಯಾಯಾಲಯ ಈ ವಿಷಯದಲ್ಲಿ ನೀರಿಯನ್ನು ಈ ಬಗ್ಗೆ ನೋಡಿ ಬಂದು ಲಿಖಿತ ವರದಿ ನೀಡುವಂತೆ ಸೂಚಿಸಿದೆ.
ಇಲ್ಲಿ ನಮ್ಮ ನಾಗರಿಕರು ಒಂದು ವಿಷಯವನ್ನು ತಿಳಿದುಕೊಂಡಿರುವುದು ಉತ್ತಮ. ಅದೇನೆಂದರೆ ಪಾಲಿಕೆಯ ಕಡೆಯಿಂದ ಯಾವುದೇ ಕಾಮಗಾರಿ ಆಗುವಾಗ ಉದಾಹರಣೆ ಒಂದು ಕಾಂಕ್ರೀಟ್ ರಸ್ತೆ ಆಗುತ್ತೆ ಎಂದು ಇಟ್ಟುಕೊಳ್ಳಿ. ಆಗ ಅಲ್ಲಿ ಡೆಬ್ರೀಸ್ ಉತ್ಪತ್ತಿಯಾಗುವ ಸಾಧ್ಯತೆ ಬಹಳಷ್ಟು ಕಡಿಮೆ. ಯಾಕೆಂದರೆ ಪಾಲಿಕೆಯ ಗುತ್ತಿಗೆದಾರರು ಹಳೆ ಡಾಮರು ಮೇಲೆ ಕಾಂಕ್ರೀಟ್ ಹಾಕಿಬಿಡುವುದರಿಂದ ಆ ಮಟ್ಟಿಗೆ ಕೆತ್ತುವ ಕೆಲಸ ಇರುವುದಿಲ್ಲ. ಆದರೆ ಸ್ಮಾರ್ಟ್ ಸಿಟಿಯ ಕಾಮಗಾರಿಗಳು ನಡೆಯುವಾಗ ಅದಕ್ಕೆ ಬೇರೆಯದ್ದೇ ನೀತಿ ನಿಯಮಾವಳಿಗಳು ಇರುತ್ತವೆ. ಅದೇನೆಂದರೆ ಅವರು ಡಾಮರು ರಸ್ತೆಯನ್ನು ಕಾಂಕ್ರೀಟಿಕರಣ ಮಾಡಬೇಕಾದರೆ ಹಳೆ ಡಾಮರನ್ನು ಕೆತ್ತಿ ತೆಗೆಯುತ್ತಾರೆ. ಅದರ ಬಳಿಕ ರೋಲರ್ ಆ ರಸ್ತೆಯ ಮೇಲೆ ಹರಿದಾಡುತ್ತದೆ. ನಂತರ ಡಿಎಲ್ ಎಲ್ ಬೆಡ್ ತರಹದ್ದು ಮಾಡಿ ನಂತರ ಕಾಂಕ್ರೀಟಿಕರಣ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿಯೇ ರಸ್ತೆ ನಿರ್ಮಾಣ ತ್ಯಾಜ್ಯ ಹೆಚ್ಚಾಗುವುದು. ಈ ಎಲ್ಲಾ ವಿಷಯಗಳು, ಡೆಬ್ರೀಸ್ ಹಾಕಲಾಗುತ್ತದೆ ಎಂದು ಹೇಳುವ ಕುಂಜತ್ತಬೈಲ್ ಜಾಗ, ಕಾಮಗಾರಿಗಳ ಪ್ರದೇಶ ಎಲ್ಲವನ್ನು ಪರಿಶೀಲಿಸಿ ನೀರಿ ಸಂಸ್ಥೆಯವರು ವರದಿ ಸಿದ್ಧಪಡಿಸಿಕೊಡಲಿದ್ದಾರೆ. ಅದನ್ನು ಅಧ್ಯಯನ ಮಾಡುವ ಕೋರ್ಟ್ ನಂತರ ಕುಂಜತ್ತಬೈಲ್ ಜಾಗ ಓಕೆ ಮಾಡುತ್ತೋ ಅಥವಾ 25 ಕೋಟಿ ವೆಚ್ಚದ ಮೇಶಿನ್ ತಂದು ಅದರ ಬಾಯಿಯೊಳಗೆ ಡೆಬ್ರೀಸ್ ಹಾಕಿ ಹಿಂದಿನಿಂದ ಈ-ಸ್ಯಾಂಡ್ ಹೊರಗೆ ಬರುವಂತೆ ಮಾಡಿ ಕಾಂಕ್ರೀಟ್ ಮರುಬಳಕೆಗೆ ಅಸ್ತು ಎನ್ನುತ್ತದೆಯೋ ಗೊತ್ತಿಲ್ಲ. ಒಂದು ವೇಳೆ ಕೋರ್ಟ್ ಮೇಶಿನ್ ತನ್ನಿ, ಹೇಗಾದರೂ ಅದಕ್ಕೆ ಬೇಕಾದಷ್ಟು ಅನುದಾನದ ವ್ಯವಸ್ಥೆ ಮಾಡಿ ಎಂದು ಸೂಚಿಸಿದರೆ ನಂತರ ಒಂದೋ ರಾಜ್ಯ ಸರಕಾರ ತನ್ನ ಅನುದಾನ ನೀಡಿ ಮೇಶಿನ್ ಖರೀದಿಸಲು ಓಕೆ ಅನ್ನಬೇಕು. ಇಲ್ಲದೇ ಹೋದರೆ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಹೇಗೂ ಹಣ ಇದ್ದೇ ಇದೆ. ಅದನ್ನು ಬಳಸಿ ಮೇಶಿನ್ ಖರೀದಿ ಮಾಡಬಹುದು. ಎಲ್ಲದಕ್ಕೂ ನೀರಿ ಕೊಡುವ ವರದಿಯ ಮೇಲೆ ಅವಲಂಬಿತವಾಗಿದೆ. ಒಟ್ಟಿನಲ್ಲಿ ಹೇಗಾದರೂ ಆಗಲಿ, ಮಂಗಳೂರಿನ ಸ್ಮಾರ್ಟ್ ಸಿಟಿಯ ಕಾಮಗಾರಿ ಬೇಗ ಶುರುವಾಗಿ ಮಂಗಳೂರು ಶೀಘ್ರದಲ್ಲಿ ಸ್ಮಾರ್ಟ್ ಸಿಟಿ ಆಗಲಿ ಎನ್ನುವುದು ಇಲ್ಲಿನ ನಾಗರಿಕರ ಬಯಕೆ!
Leave A Reply