ಕಾಂಗ್ರೆಸ್ಸಿನ ಲೆಕ್ಕ ಕೊಡಿ ಅಭಿಯಾನ ಖಾದರ್ ಮನೆಯಿಂದಲೇ ಆರಂಭವಾಗಲಿ!!
ಕೊರೊನಾ ಮಹಾಮಾರಿ ಬಂದಾಗ ಖಾಸಗಿ ಆಸ್ಪತ್ರೆಗಳು ಆಡಿದ ಆಟ, ಮಾಡಿದ ತಂತ್ರ ಮತ್ತು ಲೂಟಿದ ಹಣ ನೋಡಿದ ಜನರು ಆದಾಯ ತೆರಿಗೆ ಅಧಿಕಾರಿಗಳು ಅಂತವರ ಮೇಲೆ ಮುಗಿಬಿದ್ದಾಗ ನಿಜಕ್ಕೂ ಹಾಲು ಕುಡಿದಷ್ಟೇ ಸಂತೋಷಪಟ್ಟಿದ್ದಾರೆ. ಜೀವಮಾನವೀಡಿ ಹಣವನ್ನು ದಂಡಿಯಾಗಿ ಮಾಡಿ, ರಸ್ತೆ ಅಗಲಕ್ಕೆ ಸ್ವಲ್ಪ ದೊಡ್ಡ ಮನಸ್ಸು ಮಾಡಿ ಜಾಗ ಬಿಟ್ಟುಕೊಡಿ ಎಂದು ಹೇಳಿದರೂ ದರ್ಪ ಮೆರೆದವರು, ಎಲ್ಲಾ ಪಕ್ಷಗಳು ನಮ್ಮ ಕಿಸೆಯಲ್ಲಿ ಇವೆ ಎಂದು ಅಹಂಕಾರ ಪಟ್ಟುಕೊಳ್ಳುತ್ತಿದ್ದವರು ಈಗ ದಿಢೀರ್ ದಾಳಿಯಿಂದ ಒಂದು ಕ್ಷಣ ಭಯಭೀತರಾಗಿದ್ದಾರೆ.
ಹಿಂದೆ ಇಂತಹುದೇ ದಾಳಿಗಳಾದಾಗ ಅದು ರಾಜಕೀಯ ಪ್ರೇರಿತ, ಪೂರ್ವ ದ್ವೇಷ ಎಂದು ಹೇಳಿ ಆರೋಪ-ಪ್ರತ್ಯಾರೋಪಗಳಾಗುತ್ತಿದ್ದವು. ಆದರೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಬೇಕಾದವರಾಗಿರುವ ಇಂತಹ ಆಸ್ಪತ್ರೆಯ ಮಾಲೀಕರಿಗೂ ತಣ್ಣಗೆ ಬಿಸಿ ಮುಟ್ಟಬಹುದು ಎಂದು ಒಬ್ಬ ಜನಸಾಮಾನ್ಯ ಇಲ್ಲಿಯ ತನಕ ಅಂದುಕೊಂಡಿರಲಿಲ್ಲ. ಕೊರೊನಾ ಬಂದಾಗ ಆರಂಭದಲ್ಲಿ ಸಾಕಷ್ಟು ಗೊಂದಲಗಳಿದ್ದವು. ಜನರಲ್ಲಿ ಹೆದರಿಕೆಯೂ ತುಂಬಾ ಇತ್ತು. ಯಾವುದೇ ಆಸ್ಪತ್ರೆಯಾದರೂ ಪರವಾಗಿಲ್ಲ, ಜೀವ ಉಳಿದರೆ ಸಾಕು ಎನ್ನುವ ಮನೋಭಾವನೆಯಿಂದ ಸಿಕ್ಕಿದ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂತರ ಬಂದಿರುವ ಬಿಲ್ ನೋಡಿ ಪ್ರತಿಯೊಬ್ಬರು ಶಾಕ್ ಗೆ ಒಳಗಾಗಿದ್ದಾರೆ. ಇದು ಬಡವರಿಗೆ ಅಥವಾ ಮಧ್ಯಮ ವರ್ಗದವರಿಗೆ ಮಾತ್ರವಲ್ಲ, ಕೆಲವು ಶ್ರೀಮಂತರು ಕೂಡ ಅಂದಾಜೇ ಇಲ್ಲದೆ ಆಸ್ಪತ್ರೆಯವರು ಹಾಕಿದ ಬಿಲ್ ನೋಡಿ ಹೌಹಾರಿದ್ದಾರೆ. ಆಡಳಿತ, ವಿರೋಧ ಪಕ್ಷದ ಜನಪ್ರತಿನಿಧಿಗಳು ಕೂಡ ಈ ಬಿಲ್ ನೋಡಿ ದಂಗಾಗಿದ್ದರು.
ಒಟ್ಟಿನಲ್ಲಿ ಬಿಸಿ ನೀರು ಕುಡಿಸಿ ಮೂರ್ನಾಕು ಲಕ್ಷ ರೂಪಾಯಿ ಬಿಲ್ ಹಾಕಿ ಖಾಸಗಿ ಆಸ್ಪತ್ರೆಯವರು ಆಡಿದ ನಾಟಕದಿಂದ ಎಲ್ಲರೊಳಗೆ ಒಂದು ಅಸಮಾಧಾನ ಇದ್ದೇ ಇತ್ತು. ಬೇಕಾದರೆ ನೀವೆ ನೋಡಿ. ಒಬ್ಬ ಕೊರೊನಾ ರೋಗಿ ಆಸ್ಪತ್ರೆಗೆ ಸೇರಿದರೆ ಅವನಿಗೆ/ಅವಳಿಗೆ ಕೊಡುವ ಔಷಧ ಏನು? ಬಿಸಿ ನೀರು. ಒಂದು ವೇಳೆ ಇವರು ಏನೋ ದೊಡ್ಡ ಮದ್ದು ಕೊಟ್ಟರು ಎಂದೇ ಇಟ್ಟುಕೊಳ್ಳೋಣ. ಆಗ ಹೆಚ್ಚೆಂದರೆ 3-4 ಸಾವಿರ ರೂಪಾಯಿ ಆಗಬಹುದು. ಇನ್ನು ಪಿಪಿಇ ಕಿಟ್ ಹಾಕಿ ಚಿಕಿತ್ಸೆ ಕೊಟ್ಟೆವು ಎಂದು ಅವರು ಹೇಳಬಹುದು. ಒಬ್ಬ ವೈದ್ಯ ಒಂದು ಪಿಪಿಇ ಕಿಟ್ ಹಾಕಿ ಒಂದೇ ರೋಗಿಯನ್ನು ಪರೀಕ್ಷಿಸುವುದಿಲ್ಲ. ಒಂದು ಸಲ ಪಿಪಿಇ ಕಿಟ್ ಹಾಕಿದರೆ ದಿನವೀಡಿ ಅನೇಕ ರೋಗಿಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಆದರೆ ಬಿಲ್ ನಲ್ಲಿ ಮಾತ್ರ ಪ್ರತಿ ರೋಗಿಗೆ ಒಂದು ದಿನಕ್ಕೆ ಮೂರ್ನಾಕು ಪಿಪಿಇ ಕಿಟ್ ರೇಟ್ ಹಾಕಿ ಬಿಲ್ ಉದ್ದ ಮಾಡುತ್ತಾರೆ. ಅನೇಕ ಬಾರಿ ವೈದ್ಯರ ಬದಲಿಗೆ ದಾದಿಯಂದಿರು ಪರೀಕ್ಷೆ ಮಾಡುತ್ತಾರೆ. ಅವರು ಕೂಡ ಧರಿಸುವುದು ಒಂದೇ ಕಿಟ್. ಆದರೆ ಮೂವತ್ತು ರೋಗಿಗಳು ಇದ್ರೆ ಒಂದು ಸಲ ಪರೀಕ್ಷೆ ಮಾಡಿದರೆ ಮೂವತ್ತು ಕಿಟ್ ರೇಟ್. ದಿನಕ್ಕೆ ಮೂರು ಸಲ ಪರೀಕ್ಷೆ ಮಾಡಿದರೆ ತೊಂಭತ್ತು ಕಿಟ್ ಹಣ ಆಸ್ಪತ್ರೆಯವರ ತೀಜೋರಿಗೆ. ಇದೆಲ್ಲವೂ ನೋಡಿ ಜನರು ಬೇಸತ್ತಿದ್ದರು. ಇವರಿಗೆ ದೇವರು ಕ್ಷಮಿಸಲ್ಲ ಎಂದು ಜನ ಹಿಡಿಶಾಪ ಹಾಕಿದ್ದರು. ಈ ಸಲ ಪಕ್ಷಾತೀತವಾಗಿ, ಧರ್ಮಾತೀತವಾಗಿ, ಪ್ರಭಾವಿಗಳಾಗಿದ್ದರೂ ಮೆಡಿಕಲ್ ಕಾಲೇಜುಗಳು ಇರುವ ಎಜೆ ಶೆಟ್ಟಿ ಆಸ್ಪತ್ರೆ, ಶ್ರೀನಿವಾಸ ಆಸ್ಪತ್ರೆ, ಕಣಚೂರು, ಯೆನಪೋಯಾ ಆಸ್ಪತ್ರೆಗಳಿಗೆ ಒಂದೇ ರೀತಿಯ ಪಾಠ ಕಲಿಸಲಾಗಿದೆ.
ಇನ್ನು ಮಾಜಿ ಸಚಿವರೂ, ಸಿದ್ಧರಾಮಯ್ಯನವರ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ, ಪ್ರಸ್ತುತ ಶಾಸಕರೂ ಆಗಿರುವ ಯುಟಿ ಖಾದರ್ ಅವರ ಒಡಹುಟ್ಟಿದ ತಮ್ಮ ಇಫ್ತೀಕಾರ್ ಅವರ ಬಗ್ಗೆ ಈ ಹಿಂದೆನೂ ಗುಸುಗುಸು ಇತ್ತು. ತಮ್ಮ ಸಹೋದರನನ್ನು ಪೂರ್ತಿಯಾಗಿ ಬಳಸಿ ಎಷ್ಟು ಸಾಧ್ಯವೋ ಅಷ್ಟು “ಪ್ರಯೋಜನ” ಪಡೆಯುವುದರಲ್ಲಿ ಇಫ್ತೀಕಾರ್ ಯಾವಾಗಲೂ ಮುಂದು ಎಂದು ಅವರ ಒಟ್ಟಿಗಿರುವ ಗೆಳೆಯರಿಗೆ ಗೊತ್ತು. ಈಗ ಇಫ್ತೀಕಾರ್ ಅವರ ಮನೆಯ ಮೇಲೆ ಐಟಿ ದಾಳಿ ಮತ್ತು ಎಷ್ಟೇ ಮುಚ್ಚಿಟ್ಟರೂ ಸಿಕ್ಕಿದ ದಾಖಲೆಗಳನ್ನು ನೋಡುವಾಗ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ ಅದೇನೋ ಸೆನೆಟೋ, ಸಿಂಡಿಕೇಟೋ ಸದಸ್ಯರಾಗಿ ಎರಡೂ ಕೈಯಿಂದ “ಪೇಮೆಂಟ್” ಸೇವೆ ಮಾಡಿದ್ದು ಬಯಲಿಗೆ ಬಂದಿದೆ. ಇದನ್ನು ಕೂಡ ರಾಜಕೀಯ ಪ್ರೇರಿತ ಎಂದು ಖಾದರ್ ಸುದ್ದಿಗೋಷ್ಟಿ ಕರೆದು ಹೇಳಿದ್ದೇ ಆದರೆ ಅವರು ತಮ್ಮ ಆತ್ಮಸಾಕ್ಷಿಯನ್ನು ಕೂಡ ಮಂಗ ಮಾಡದೇ ಬಿಡುವುದಿಲ್ಲ ಎಂದು ಸಾಬೀತಾಗುತ್ತದೆ. ಮೆಡಿಕಲ್ ಸೀಟುಗಳ ದಂಧೆ ಚಿಕ್ಕದೇನಲ್ಲ. ಅಲ್ಲಿ ಎರಡೂ ಕೈ ಸಾಕಾಗುವುದಿಲ್ಲ. ರೇಡ್ ಆಗುವಾಗ ಇಫ್ತೀ ವಿದೇಶದಲ್ಲಿದ್ದರು. ಅವರಿಗೆ ನೋಟಿಸ್ ಕೊಟ್ಟು ಕರೆ ತರಲಾಗಿತ್ತು. ಈಗ ಅವರು ಸತ್ಯ ಹೇಳಬೇಕಾಗಿದೆ. ಅಷ್ಟು ಹಣಕ್ಕೆ ಅವರು ಲೆಕ್ಕ ಕೊಡಬೇಕಾಗಿದೆ. ಕಾಂಗ್ರೆಸ್ಸಿನ ಲೆಕ್ಕ ಕೊಡಿ ಅಭಿಯಾನ ಖಾದರ್ ಮನೆಯಿಂದಲೇ ಶುರು ಮಾಡಬೇಕಾಗಿದೆ.
ಇನ್ನು ಮೂರನೇಯದಾಗಿ ನಮ್ಮ ಮಾಧ್ಯಮಗಳ ನಡೆ. ಬೆರಳೆಣಿಕೆಯ ಮಾಧ್ಯಮ ಬಿಟ್ಟರೆ ಬಹುತೇಕ ಎಲ್ಲ ಮಾಧ್ಯಮಗಳು ಈ ರೇಡ್ ಅನ್ನು ತಮ್ಮದೇ ಮರ್ಯಾದೆ ಪ್ರಶ್ನೆ ಎನ್ನುವಂತೆ ವರ್ತಿಸಿದವು. ಹೆಸರು ಹಾಕದೇ ತಮ್ಮ ಜಾಹೀರಾತುದಾರರ ಋಣ ತೀರಿಸಿದವು. ಇನ್ನು ಕೆಲವರು ಧೈರ್ಯ ಮಾಡಿ ಹೆಸರು ಹಾಕಿರುವುದರಿಂದ ಅವರನ್ನು ಮೆಚ್ಚಲೇಬೇಕು. ಹಿಂದೆ ಬೆಂಗಳೂರಿನಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳ ಮೇಲೆ ಐಪಿಎಸ್ ಅಧಿಕಾರಿ ರೂಪಾ ಅವರು ದಾಳಿ ಮಾಡಿದಾಗಲೂ ಹೀಗೆ ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ಎಂದೇ ಬಿಂಬಿತವಾಗಿತ್ತು. ಆಗ ನಾನೇ ಈ ಜಾಗೃತ ಅಂಕಣದಲ್ಲಿ ಧ್ವನಿ ಎತ್ತಿದ್ದೆ. ಅದರ ನಂತರ ಬೆಂಗಳೂರಿನ ಮಾಧ್ಯಮಗಳು ಸ್ವಲ್ಪ ಮಟ್ಟಿಗೆ ತೆರೆದುಕೊಂಡವು. ಈಗ ಮಂಗಳೂರಿನ ಮಾಧ್ಯಮಗಳ ಸರದಿ. ಆಗುತ್ತಾ? ಮುಂದಿನ ರೇಡ್ ಸಮಯದಲ್ಲಿ ನೋಡಬೇಕು!!
Leave A Reply