ಪಾಲಿಕೆಯ ಹೊಸ ನಿಯಮದಿಂದ ಉದ್ದಿಮೆದಾರ ಬೀದಿಗೆ??
ಪ್ರತಿ ವರ್ಷ ಸುಮಾರು 25 ಸಾವಿರದಷ್ಟು ಉದ್ದಿಮೆದಾರರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಉದ್ದಿಮೆ ಪರವಾನಿಗೆಯನ್ನು ನವೀಕರಣ ಮಾಡುತ್ತಾರೆ. ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ ಒಂದು ಕೋಟಿ 60 ಲಕ್ಷ ರೂಪಾಯಿಯಷ್ಟು ಹಣ ಸಂಗ್ರಹವಾಗುತ್ತದೆ. ಇದು ನಡೆದುಕೊಂಡು ಬಂದಿರುವ ಕ್ರಮ. ಈ ಬಾರಿ ಭಾರತೀಯ ಜನತಾ ಪಾರ್ಟಿಯ ಆಡಳಿತ ಮಂಗಳೂರು ಮಹಾನಗರ ಪಾಲಿಕೆಯಲ್ಲಿದೆ. ಆದ್ದರಿಂದ ಈ ಬಾರಿ ಒಂದು ಸಾವಿರದಷ್ಟು ಮಾತ್ರ ಉದ್ದಿಮೆ ಪರವಾನಿಗೆಗಳು ನವೀಕರಣವಾಗಿದೆ. ಸಂಗ್ರಹವಾಗಿರುವ ಒಟ್ಟು ಮೊತ್ತ ಅಂದಾಜು 15 ಲಕ್ಷ ರೂಪಾಯಿಗಳು ಮಾತ್ರ. ಇದು ಏನು ಸೂಚಿಸುತ್ತದೆ. ಬಿಜೆಪಿ ಆಡಳಿತ ಬಂದ ಮೇಲೆ ಯಾಕೆ ಹೀಗೆ ತೆರಿಗೆ ಸಂಗ್ರಹ ಕಡಿಮೆಯಾಯಿತು? ಯಾಕೆಂದರೆ ಇವರು ಮಾಡಿರುವ ಹೊಸ ನಿಯಮಗಳು ಉದ್ದಿಮೆದಾರರಿಗೆ ಬಿಸಿತುಪ್ಪವಾಗಿದೆ. ಹೇಗೆ? ವಿವರಿಸುತ್ತೇನೆ.
ಒಬ್ಬ ಉದ್ಯಮಿ ಹೊಸದಾಗಿ ತನ್ನ ಉದ್ದಿಮೆ ಪರವಾನಿಗೆ ಪ್ರಮಾಣಪತ್ರ ಮಾಡಿಸಬೇಕಾದರೆ ಉದ್ದಿಮೆಯ ದಾಖಲೆಗಳು, ತೆರಿಗೆ ಕಟ್ಟಿದ ರಸೀದಿ, ಆಧಾರ್ ಕಾರ್ಡ್, ಎರಡು ಫೋಟೋಗಳನ್ನು ನೀಡಬೇಕು. ಒಂದು ವೇಳೆ ಆತ ಬಾಡಿಗೆದಾರನಾಗಿದ್ದರೆ ಮೊದಲ ಬಾರಿಗೆ ನವೀಕರಣ ಮಾಡುವಾಗ ಮಾಲೀಕರೊಂದಿಗೆ ಮಾಡಿರುವ ಒಪ್ಪಂದದ ನೋಟರಿ ಪ್ರಮಾಣ ಪತ್ರ, ರೆಂಟ್ ಅಗ್ರಿಮೆಂಟ್, ತೆರಿಗೆ ರಸೀದಿ, ಆಧಾರ್ ಕಾರ್ಡ್, 2 ಫೋಟೋಗಳನ್ನು ಕೊಟ್ಟು ನವೀಕರಣ ಮಾಡಿಸಿಕೊಳ್ಳಬೇಕು. ಪ್ರತಿ ವರ್ಷ ಜನವರಿಯಿಂದ ಫೆಬ್ರವರಿ ತಿಂಗಳ ಅಂತ್ಯದೊಳಗೆ ಉದ್ದಿಮೆದಾರರು ಈ ಕೆಲಸವನ್ನು ಮಾಡಿ ಮುಗಿಸುತ್ತಾರೆ. ಅವರು ನಾನು ಮೇಲೆ ಹೇಳಿದ ದಾಖಲೆಗಳನ್ನು ಕೊಟ್ಟ ನಂತರ ಹೆಲ್ತ್ ಇನ್ಸಪೆಕ್ಟರ್ ಒಬ್ಬರು ಸ್ಥಳ ಪರಿಶೀಲನೆಗೆ ಬಂದು ಅಲ್ಲಿ ಉದ್ಯಮಿ ಕಟ್ಟಬೇಕಾದ ಮೊಬಲಗಿಗೆ ಒಂದು ಚಲನ್ ಕೊಟ್ಟು ಹೋಗುತ್ತಾರೆ. ಆ ಚಲನ್ ಅನ್ನು ಬ್ಯಾಂಕಿನಲ್ಲಿ ಕಟ್ಟಿ ಅದರ ಕೌಂಟರ್ ಫೈಲ್ ನ ನಕಲು ತೆಗೆದುಕೊಂಡು ಹೋಗಿ ಪಾಲಿಕೆಯಲ್ಲಿ ನೀಡಿದರೆ ಕೆಲವು ದಿನ ಬಳಿಕ ಪ್ರಮಾಣಪತ್ರ ಸಿಗುತ್ತದೆ. ಈಗ ಬಿಜೆಪಿಯವರು ಬಂದ ನಂತರ ಅಲ್ಲಿ ಮಾಡಿರುವ ಬದಲಾವಣೆಯಿಂದ ವ್ಯಾಪಾರಿಗಳು ಕಂಗಾಲಾಗಿ ಹೋಗಿದ್ದಾರೆ. ಈಗ ಮೇಲೆ ಹೇಳಿದ ದಾಖಲೆಗಳೊಂದಿಗೆ ಬಾಡಿಗೆದಾರರು ತಾವು ಮಾಲೀಕರೊಂದಿಗೆ ಮಾಡಿದ ಬಾಡಿಗೆ ಕರಾರು ಪತ್ರ, ಖಾತಾವನ್ನು ಕೂಡ ಕೊಡಬೇಕಾಗುತ್ತದೆ. ಇಲ್ಲಿ ಇರುವ ಟೆಕ್ನಿಕಲ್ ಪಾಯಿಂಟ್ ಅನ್ನು ನಿಮಗೆ ಹೇಳುತ್ತೇನೆ. ಸಾಮಾನ್ಯವಾಗಿ ಯಾವುದೇ ಒಬ್ಬ ಬಾಡಿಗೆದಾರ ತನ್ನ ಮಾಲೀಕರೊಂದಿಗೆ ಹನ್ನೊಂದು ತಿಂಗಳ ಬಾಡಿಗೆ ಒಪ್ಪಂದವನ್ನು ಮಾಡಿಕೊಂಡಿರುತ್ತಾರೆ. ಆ ಒಪ್ಪಂದದ ಪತ್ರವನ್ನೇ ಈಗ ಪಾಲಿಕೆ ಕೇಳುತ್ತಿರುವುದು. ಒಂದು ವೇಳೆ ಪ್ರತಿ ಹನ್ನೊಂದು ತಿಂಗಳಿಗೆ ಈ ಪತ್ರ ನವೀಕರಣ ಆಗದೇ ಮಾಲೀಕ ಹಾಗೂ ಬಾಡಿಗೆದಾರರ ನಡುವೆ ವೈಮನಸ್ಸು ಉಂಟಾಗಿ ಸಮಸ್ಯೆ ಇದ್ರೆ ಆಗ ಬಾಡಿಗೆ ನವೀಕರಣ ಪತ್ರ ಇರುವುದಿಲ್ಲ. ಅಂತವರು ಉದ್ದಿಮೆ ನವೀಕರಣ ಮಾಡಲು ಆಗುವುದಿಲ್ಲ. ಇದು ನೇರವಾಗಿ ಪಾಲಿಕೆ ಮಾಲೀಕರ ಪರವಾಗಿ ನಿಂತಿದೆ ಎನ್ನುವುದಕ್ಕೆ ಸಾಕ್ಷಿ. ಇದು ಪರೋಕ್ಷವಾಗಿ ಬಾಡಿಗೆದಾರರನ್ನು ಎಬ್ಬಿಸಲು ಹೂಡಿರುವ ತಂತ್ರದ ಭಾಗವಾಗಿದೆ. ಹೀಗೆ ಪಾಲಿಕೆ ಮಾಡಲು ಕಾನೂನಾತ್ಮಕವಾಗಿಯೂ ಸಾಧ್ಯವಿಲ್ಲ. ಈ ಬಗ್ಗೆ 2015 ರಲ್ಲಿ ಸುಧಾಕರನ್ ವರ್ಸಸ್ ತ್ರಿವೇಂದ್ರಂ ಮಹಾನಗರ ಪಾಲಿಕೆ ನಡುವೆ ಆದ ಪ್ರಕರಣ ಮತ್ತು ಅದಕ್ಕೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪೆ ಸಾಕ್ಷಿಯಾಗಿದೆ. ಅದರಲ್ಲಿ ನ್ಯಾಯಾಲಯ ಹೇಳಿರುವಂತೆ ಪಾಲಿಕೆ ಉದ್ದಿಮೆ ನವೀಕರಣ ಪತ್ರ ಮಾಡುವಾಗ ಬಾಡಿಗೆ ನವೀಕರಣ ಪತ್ರ ಕೇಳಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಯಾಕೆಂದರೆ ಪಾಲಿಕೆಗಳು ಬಾಡಿಗೆದಾರ ಮತ್ತು ಮಾಲೀಕರ ನಡುವಿನ ಸೇತುವೆ ಅಥವಾ ಕೊಂಡಿ ಅಲ್ಲ. ಅವರಿಬ್ಬರ ನಡುವೆ ಯಾವುದೇ ವಿವಾದ ಇದ್ದರೆ ಅದನ್ನು ನ್ಯಾಯಾಲಯ ನೋಡಿಕೊಳ್ಳುತ್ತದೆ. ಇಲ್ಲಿ ಪಾಲಿಕೆ ಮೂಗು ತೋರಿಸಬಾರದು.
ಬುಧವಾರ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಿತು. ಇದರಲ್ಲಿ ಕಾಂಗ್ರೆಸ್ಸಿನ ವಿನಯರಾಜ್ ಅವರು ಏನು ಹೇಳುವುದೆಂದರೆ ಪಾಲಿಕೆ ಈಗ ಮಾಡಿರುವುದು ಸರಿಯಾದ ಕ್ರಮ. ಯಾಕೆಂದರೆ ಒಬ್ಬ ಬಾಡಿಗೆದಾರ ತಾನು ತೆಗೆದುಕೊಂಡು ಅದನ್ನು ಯಾರಿಗಾದರೂ ಒಳಬಾಡಿಗೆಗೆ ಕೊಟ್ಟರೆ ಆಗ ನಿಯಮಬದ್ಧವಾಗಿ ತಪ್ಪಾಗುತ್ತದೆ ಎನ್ನುತ್ತಾರೆ. ಆದರೆ ಅವರದ್ದೇ ಪಕ್ಷದ ನವೀನ್ ಡಿಸೋಜಾ ಅವರು ಇಲ್ಲ ಇದು ಸರಿಯಲ್ಲ ಎಂದು ಮಾತನಾಡಿದ್ದಾರೆ. ಎಲ್ಲವನ್ನು ಕೇಳಿದ ನಂತರ ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ಹೊಸ ಬಾಡಿಗೆ ಒಪ್ಪಂದ ಇಲ್ಲದಿದ್ದರೂ ಪರವಾಗಿಲ್ಲ, ಕಳೆದ ವರ್ಷದ್ದು ಕೊಡಲಿ ಎಂದು ಹೇಳಿದ್ದಾರೆ. ಇದು ಅಳಿಯ ಅಲ್ಲ ಮಗಳ ಗಂಡ ಎನ್ನುವ ರೀತಿಯಲ್ಲಿಯೇ ಆಗಿದೆ. ಹಿಂದಿನ ವರ್ಷದ್ದು ಇಲ್ಲದಿದ್ದರೆ? ಇಲ್ಲಿ ಪಾಲಿಕೆ ಪ್ರಭಾವಿ ಮಾಲೀಕರೊಂದಿಗೆ ನಿಂತಿರುವುದಕ್ಕೆ ಏನಾದರೂ ಲಾಬಿ ಇದೆಯಾ ಎನ್ನುವ ಸಂಶಯ ಬರುತ್ತಿದೆ. ಒಬ್ಬ ಬಾಡಿಗೆದಾರ ಹತ್ತಿಪ್ಪತ್ತು ವರ್ಷಗಳಿಂದ ಒಂದು ವಾಣಿಜ್ಯ ಮಳಿಗೆಯಲ್ಲಿ ಐದು ಸಾವಿರಕ್ಕೆ ಬಾಡಿಗೆಗೆ ಇದ್ದಾರೆ ಎಂದು ಇಟ್ಟುಕೊಳ್ಳೋಣ. ಈಗ ಮಾಲೀಕನಿಗೆ ಯಾರಾದರೂ ಹತ್ತು ಸಾವಿರ ಕೊಡುತ್ತೇನೆ ಎಂದರೆ ಹಳಬನನ್ನು ದಾರಿ ಮಧ್ಯದಲ್ಲಿ ಬಿಟ್ಟು ಹೊಸಬರೊಂದಿಗೆ ಡೀಲ್ ಮಾಡಬಹುದು. ಇದರಿಂದ ಏನಾಗುತ್ತದೆ ಎಂದರೆ ಅಷ್ಟು ವರ್ಷ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿ ರಸ್ತೆಗೆ ಬೀಳುತ್ತಾನೆ. ಆದ್ದರಿಂದ ಶ್ರೀಮಂತ ಪ್ರಭಾವಿಗಳು ಪಾಲಿಕೆಯನ್ನು ಬಳಸಿ ಈ ಮಾರ್ಗದ ಮೂಲಕ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಬಿಜೆಪಿ ಬೆಂಬಲ ನೀಡುವಂತೆ ತೋರುತ್ತಿದೆ!
Leave A Reply