800 ಕೋಟಿ ಬಂದರೆ ಪಚ್ಚನಾಡಿ ಡಂಪಿಂಗ್ ಯಾರ್ಡ್ ಉದ್ಧಾರ ಮಾಡಿ!!
ಬುದ್ಧಿವಂತರು ಯಾವಾಗಲೂ ದೂರದ್ದು ಯೋಚಿಸುತ್ತಾರೆ. ಶತಮೂರ್ಖರು ಹತ್ತಿರದ್ದು ಮಾತ್ರ ಯೋಚಿಸುತ್ತಾರೆ. ಮಂಗಳೂರು ಮಹಾನಗರ ಪಾಲಿಕೆ ತಾನು ಯಾವ ವರ್ಗಕ್ಕೆ ಸೇರಿದ್ದು ಎಂದು ಯೋಚಿಸಿ ನಂತರ ಆ ಪ್ರಕಾರ ನಡೆದರೆ ಸಾಕು. ನಾನು ನಿನ್ನೆ ಬರೆದ ಜಾಗೃತಿ ಅಂಕಣವನ್ನು ಅಲ್ಲಿಂದಲೇ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನವರ ಗುತ್ತಿಗೆ ಈಗ ಮುಗಿಯುವ ಹಂತಕ್ಕೆ ಬಂದಿದೆ. ಅವರಿಗೆ ಪ್ರತಿ ತಿಂಗಳು ಎರಡು ಕೋಟಿ ರೂಪಾಯಿಯನ್ನು ನೀಡುವುದು ವೇಸ್ಟ್ ಎಂದು ಪಾಲಿಕೆಯ ಪ್ರತಿ ಕಂಬಕ್ಕೂ ಗೊತ್ತು. ಹಾಗಿರುವಾಗ ಅವರಿಗೆ ಮತ್ತೊಮ್ಮೆ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಕೊಡುವುದು ಎಂದರೆ ಜನಸಾಮಾನ್ಯರ ತೆರಿಗೆ ಹಣವನ್ನು ಯಾರದ್ದೋ ತಿಜೋರಿಗೆ ತುಂಬಿಸುವುದು ಎಂದು ಅರ್ಥ. ಆದ್ದರಿಂದ ಅವರಿಗೆ ಕೊಡುವುದು ಬೇಡಾ. ಆದರೆ ಈಗ ಪಾಲಿಕೆಯ ಬಳಿ ಇರುವ ಡಿಪಿಆರ್ ನೋಡಿದರೆ ಇದೇ ಕಂಪೆನಿಗೆ ಅಥವಾ ಇಂತಹುದೇ ಕಂಪೆನಿಗೆ ಕೊಡಬೇಕಾಗಿ ಬರಬಹುದು. ಆಗ ಮತ್ತೆ ನಾವು ಆರೇಳು ವರ್ಷ ಇಂತಹ ಕಂಪೆನಿಗಳು ಮಾಡಿದ್ದೇ ಸ್ವಚ್ಚತೆ, ಆಡಿದ್ದೇ ಕ್ಲೀನಿಂಗ್ ಎಂದು ಅಂದುಕೊಳ್ಳಬೇಕಾಗುತ್ತದೆ. ಅದಕ್ಕೆ ಪಾಲಿಕೆ ಏನು ಮಾಡಲು ಹೊರಟಿದೆ ಎಂದರೆ ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ಹೇಗೂ 800 ಕೋಟಿ ರೂಪಾಯಿಗಳು ಬರುತ್ತದೆಯಲ್ಲ, ಅದರಲ್ಲಿ ಪಾಲಿಕೆಗೆ ತ್ಯಾಜ್ಯ ಸಂಗ್ರಹಕ್ಕೆ ಟಿಪ್ಪರ್, ಡಂಪರ್, ಲಾರಿಗಳನ್ನು ತಾನೇ ಖರೀದಿಸಿ ಅದನ್ನು ಗುತ್ತಿಗೆದಾರರಿಗೆ ಕೊಟ್ಟು ಅವರಿಂದ ತ್ಯಾಜ್ಯವನ್ನು ಸಂಗ್ರಹಿಸುವುದು ಎಂದು ಯೋಚಿಸುತ್ತಿದೆ. ಆದರೆ ಆ ಅನುದಾನವನ್ನು ಏನು ಮಾಡಿದರೆ ಅದು ಮಂಗಳೂರಿನ ಭವಿಷ್ಯಕ್ಕೆ ಯೋಗ್ಯ ತಳಪಾಯವಾಗುತ್ತೆ ಎನ್ನುವುದನ್ನು ನಾನು ಹೇಳುತ್ತೇನೆ.
ಮಂಗಳೂರಿನ ಪಚ್ಚನಾಡಿಯಲ್ಲಿರುವ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಕೇಂದ್ರದಲ್ಲಿ ಈಗ ಇರುವುದು ಹಳೆ ಕಸ ವಿಂಗಡನೆ ಮತ್ತು ಗೊಬ್ಬರ ಮಾಡುವ ಯಂತ್ರ. ಅದನ್ನು ಗುಜರಿಗೆ ತೂಕಕ್ಕೆ ಹಾಕಿದರೆ ಚಿಕ್ಕಾಸು ಸಿಗಲಿಕ್ಕಿಲ್ಲ. ಗುಜರಿಯವರು ಅದನ್ನು ಯಾವತ್ತೋ ತೂಕಕ್ಕೆ ಕೇಳಿದ್ದಾರೆ ಎನ್ನುವುದು ಪಾಲಿಕೆಯಲ್ಲಿರುವ ಹಳೆ ಜೋಕು. ಅದಕ್ಕೆ ಈಗ ಏನು ಮಾಡಬೇಕು ಎಂದರೆ ಅದನ್ನು ಮಾರಿ ಈಗಿನ ಕಾಲಕ್ಕೆ ತಂತ್ರಜ್ಞಾನದಲ್ಲಿ ಬಹಳ ವೇಗವಾಗಿ ಅಭಿವೃದ್ಧಿಯಾಗಿರುವ ಕಸ ವಿಂಗಡನಾ ಯಂತ್ರೋಪಕರಣ ಮತ್ತು ಗೊಬ್ಬರ ಮಾಡುವ ನೂತನ ತಂತ್ರಜ್ಞಾನವನ್ನು ಖರೀದಿಸಬೇಕು. ದಿನಕ್ಕೆ ಅಂದಾಜು 400 ಟನ್ ತ್ಯಾಜ್ಯವನ್ನು ವಿಂಗಡಿಸಿ ಗೊಬ್ಬರ ಮಾಡುವ ಆಧುನಿಕ ಯಂತ್ರವನ್ನು ಖರೀದಿಸಿದರೆ ಮಂಗಳೂರಿನ ಭವಿಷ್ಯಕ್ಕೂ ಇದು ಉತ್ತಮ. ಈಗ 400 ಟನ್ ಯಂತ್ರ ಯಾಕೆ ಎಂದು ಯಾರಾದರೂ ಕೇಳಬಹುದು. ಮಂಗಳೂರು ವೇಗವಾಗಿ ಬೆಳೆಯುತ್ತಿದೆ. ನಿತ್ಯ ತ್ಯಾಜ್ಯ ಜಾಸ್ತಿಯಾಗುತ್ತಿದೆ ಬಿಟ್ಟರೆ ಕಡಿಮೆಯಾಗುತ್ತಿಲ್ಲ. ಹಾಗಿರುವಾಗ ಈಗ ಬರುವ ತ್ಯಾಜ್ಯ ಮತ್ತು ಪಚ್ಚನಾಡಿಯಲ್ಲಿ ಈಗಾಗಲೇ ಬಂದು ಬಿದ್ದಿರುವ ಹೆಚ್ಚುವರಿ ತ್ಯಾಜ್ಯವನ್ನು ಕೂಡ ಈ ಯಂತ್ರದಲ್ಲಿ ಹಾಕಿದರೆ ಆಗ ಈಗ ನಿತ್ಯ ಬರುತ್ತಿರುವ ತ್ಯಾಜ್ಯವೂ ಯೋಗ್ಯ ಪ್ರಮಾಣದಲ್ಲಿ ವಿಲೇವಾರಿಯಾಗುತ್ತದೆ ಮತ್ತು ಮುಂದಿನ ಹಲವು ವರ್ಷ ಏನೂ ಟೆನ್ಷನ್ ಇಲ್ಲದೆ ಕಳೆಯುತ್ತದೆ ಮತ್ತು ಈಗಾಗಲೇ ಬಂದು ಬಿದ್ದು ದಾರಿಕಾಣದೇ ಒದ್ದಾಡುತ್ತಿರುವ ತ್ಯಾಜ್ಯಕ್ಕೂ ದಾರಿಯಾಗುತ್ತದೆ. ಇದು ಒಂದು ರೀತಿಯಲ್ಲಿ ಒಳ್ಳೆಯ ಇನ್ವೆಸ್ಟ್ ಮೆಂಟ್ ಕೂಡ ಆಗುತ್ತದೆ. ಈ ಕುರಿತು ಮಂಗಳೂರು ಮಹಾನಗರ ಪಾಲಿಕೆಯಿಂದ ಸಮಗ್ರ ವರದಿಯೊಂದನ್ನು ಸಿದ್ಧಪಡಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಬೇಕು. ಅಲ್ಲಿ ಇದನ್ನು ವಿವರಿಸಿ ಮಂಜೂರಾತಿ ಪಡೆಯಲು ಅಧಿಕಾರಿಗಳು ನಮ್ಮ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾಗಿರುವ ಸನ್ಮಾನ್ಯ ನಳಿನ್ ಕುಮಾರ್ ಕಟೀಲ್ ಅವರ ನೆರವನ್ನು ಮತ್ತು ಸಹಕಾರವನ್ನು ಪಡೆಯಬೇಕು. ಅವರು ಈಗಾಗಲೇ ತಮ್ಮ ಪರಿಶ್ರಮದಿಂದ ಮಂಗಳೂರಿಗೆ ಪ್ಲಾಸ್ಟಿಕ್ ಪಾರ್ಕ್ ತಂದಿದ್ದಾರೆ. ಅದು ಕೂಡ ತುಂಬಾ “ದೂರ”ದೃಷ್ಟಿಯ ಯೋಜನೆ. ಹಾಗೆ ಪಚ್ಚನಾಡಿಗೆ ಹೊಸ ತಂತ್ರಜ್ಞಾನವನ್ನು ತಂದುಕೊಡುವಲ್ಲಿ ನೆರವಾದರೆ ಮಂಗಳೂರು ನಗರ ಅವರಿಗೆ ಅಭಾರಿಯಾಗಿರುತ್ತದೆ.
ಇನ್ನು ಸುಪ್ರೀಂಕೋರ್ಟ್ ಎಲ್ಲಾ ರಾಜ್ಯಗಳಿಗೆ ಮೀಸಲಾತಿಯ ವಿಷಯದಲ್ಲಿ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದು ಸೂಚನೆ ನೀಡಿದೆ. ಕರ್ನಾಟಕ ರಾಜ್ಯದ ನಿಲುವು ಏನು ಎನ್ನುವುದನ್ನು ರಾಜ್ಯ ಸರಕಾರ ಹೇಳಬೇಕು. ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದ ಹಿಂದಿನ ತೀರ್ಪಿನ ಪ್ರಕಾರ 50 ಶೇಕಡಾಗಿಂತ ಹೆಚ್ಚು ಮೀಸಲಾತಿ ಕೊಡುವಂತಿಲ್ಲ. ಕೆಲವು ರಾಜ್ಯಗಳು ತಮ್ಮನ್ನು ಆಳುವ ರಾಜಕೀಯ ಪಕ್ಷಗಳ ಸ್ವಾರ್ಥಕ್ಕೆ ಆ ಐವತ್ತು ಶೇಕಡಾ ಗಡಿಯನ್ನು ಯಾವಾಗಲೂ ದಾಟಿವೆ. ಒಂದು ರೀತಿಯಲ್ಲಿ ಲಕ್ಷ್ಮಣ ರೇಖೆಯನ್ನು ದಾಟಿದಂತೆ ಅಲ್ಲಿನ ರಾಜ್ಯ ಸರಕಾರದ ಪರಿಸ್ಥಿತಿ. ಆ ಕುರಿತು ಪ್ರಕರಣಗಳು ನ್ಯಾಯಾಲಯದ ಅಂಗಳದಲ್ಲಿವೆ. ಒಂದು ವೇಳೆ ಮೀಸಲಾತಿಯನ್ನು ಜಾತಿ ಆಧಾರದಲ್ಲಿ ಕೊಡುವುದನ್ನು ರದ್ದು ಮಾಡುವಲ್ಲಿ ನಿಮ್ಮ ಅಭಿಪ್ರಾಯಗಳೇನು ಎಂದು ಸುಪ್ರೀಂಕೋರ್ಟ್ ಕೇಳಿದರೆ, ಆಗ ಏನಾಗುತ್ತದೆ? ಆ ಕುರಿತು ಚಿಂತಿಸುವ ಕಾಲ ಬಂದಿದೆ. ಅದನ್ನು ಯೋಚಿಸೋಣ!!
Leave A Reply