ವೈನ್ ಶಾಪ್ ತರಹ ಬೇರೆಯವರಿಗೂ ವ್ಯವಹಾರ ಮಾಡಲು ಬಿಡಿ!!
ಒಂದು ವಾರ ಲಾಕ್ಡೌನ್ ಮುಂದಕ್ಕೆ ಹೋಗಿರುವುದು ನಮಗೆಲ್ಲಾ ಗೊತ್ತೆ ಇರುವ ವಿಚಾರ. ಒಂದೇ ವಾರ ಅಲ್ವಾ ಎಂದು ಧೈರ್ಯದಿಂದ ಹೇಳುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಇನ್ನು ಮಾರ್ಗಸೂಚಿಗಳು ಕೂಡ ಬದಲಾಗಿಲ್ಲ. ಅದರೊಂದಿಗೆ ವೈನ್ ಶಾಪ್ ಗಳು ಯಥಾಪ್ರಕಾರ ಬೆಳಿಗ್ಗೆ 6 ರಿಂದ 9 ಗಂಟೆಯ ತನಕ ತೆರೆದಿರುವುದನ್ನು ಯಾವ ಕುಡುಕ ಕೂಡ ಮರೆಯುವುದಿಲ್ಲ. ಸರಕಾರಕ್ಕೆ ಈ ಉದ್ಯಮದಿಂದ ಸಾಕಷ್ಟು ಆದಾಯ ಬರುತ್ತದೆ, ಆದ್ದರಿಂದ ಅದನ್ನು ತೆರೆಯಲೇಬೇಕು ಎನ್ನುವ ವಾದ ಪರೋಕ್ಷವಾಗಿ ಇದ್ದಿರಬಹುದೇ ವಿನ: ಅದೇನೂ ಅಗತ್ಯದ ವಸ್ತುವೇನಲ್ಲ. ಅದು ಇಲ್ಲದೆಯೂ ಮನುಷ್ಯ ಬದುಕುತ್ತಾನೆ. ಆದರೆ ಸರಕಾರ ಬದುಕುವುದಿಲ್ಲ ಎನ್ನುವುದು ಬೇರೆ ವಿಷಯ. ಈಗ ಆಗಬೇಕಾಗಿರುವುದು ಉಳಿದ ಅಂಗಡಿಯವರು ಏನು ತಪ್ಪು ಮಾಡಿದ್ದಾರೆ ಸಿಎಂ ಎಂದು ಕೇಳುವ ಸಮಯ. ಈಗ ಚಾಲ್ತಿಯಲ್ಲಿರುವ ಒಂದು ಜೋಕ್ ವಾಸ್ತವಕ್ಕೆ ತುಂಬಾ ಹತ್ತಿರದಲ್ಲಿದೆ ಎಂದು ಅನಿಸದೆ ಇರದು. ನಮ್ಮ ರಾಜ್ಯದಲ್ಲಿ ಲಿಕ್ಕರ್ ಬೇಕಾದರೆ ಸಿಗುತ್ತದೆ, ಆದರೆ ನಿಕ್ಕರ್ ಸಿಗುವುದಿಲ್ಲ ಎನ್ನುವ ಜೋಕ್ ಅದು. ಅದು ನಿಜ ಕೂಡ. ನೀವು ಲಾಕ್ ಡೌನ್ ಹಿಂದಿನ ನಮ್ಮ ಬದುಕನ್ನು ನೆನಪಿಸಿಕೊಳ್ಳಿ.
ಹಿಂದೆ ಜನ ಯಾಕೆ ಸುಮ್ಮನೆ ಡೈಲಿ ತರಕಾರಿ, ಜಿನಸಿ ಅಂಗಡಿಗೆ ಹೋಗುವುದು. ಒಂದು ವಾರಕ್ಕೆ ಬೇಕಾದಷ್ಟು ಐಟಂ ತಂದು ಇಟ್ಟರೆ ಸಾಕಾಗಲ್ವಾ ಎಂದು ಮಾತನಾಡಿಕೊಳ್ಳುತ್ತಿದ್ದರು. ಈಗ ಅದೇ ಜನ ಸಾಸಿವೆಗೆ ಒಂದು ದಿನ, ಕೊತ್ತಂಬರಿ ಸೊಪ್ಪಿಗೆ ಒಂದು ದಿನ, ಹಸಿಮೆಣಸಿಗೆ ಒಂದು ದಿನ ಹೊರಗೆ ಬರುತ್ತಾರೆ. ಪ್ರತಿ ಅಂಗಡಿಗಳಲ್ಲಿ ಸಾಕಷ್ಟು ಜನ ಇದ್ದೇ ಇರುತ್ತಾರೆ. ಹೀಗಿರುವಾಗ ಜಿನಸಿ ಅಂಗಡಿ ಡೈಲಿ ಬೆಳಿಗ್ಗೆ 3 ಗಂಟೆಯಷ್ಟು ತೆರೆಯಬಹುದು ಎಂದಾದರೆ ಉಳಿದ ವಸ್ತುಗಳನ್ನು ಕೂಡ ಖರೀದಿಸಲು ವಾರದಲ್ಲಿ ಇಂತಿಷ್ಟು ದಿನ ಅವಕಾಶ ಕೊಡಿ. ಬಟ್ಟೆ ಅಂಗಡಿಯವರಿಗೆ ವಾರದಲ್ಲಿ ಮೂರು ದಿನ, ಬಂಗಾರದ ಅಂಗಡಿಯವರಿಗೆ ಮೂರು ದಿನ ಹೀಗೆ ಬೇರೆ ಬೇರೆ ಉತ್ಪನ್ನಗಳ ಅಂಗಡಿಯವರಿಗೆ ಇಂತಿಷ್ಟು ದಿನ, ಇಂತಿಷ್ಟು ಗಂಟೆ ವ್ಯಾಪಾರಕ್ಕೆ ಅವಕಾಶ ಕೊಡಿ. ಈಗ ಯಾರು ಬಟ್ಟೆ, ಬಂಗಾರ ತೆಗೆದುಕೊಳ್ಳುತ್ತಾರೆ, ಕೈಯಲ್ಲಿ ಹಣ ಇಲ್ಲ ಎಂದು ಉಡಾಫೆಯಿಂದ ಯಾರಾದರೂ ಮಾತನಾಡಬಹುದು. ಹಾಗಾದರೆ ಅಂಗಡಿಗಳಲ್ಲಿ ಜನ ರಶ್ ಸೇರುವುದಿಲ್ಲ ಎಂದಾಯಿತು. ಹೀಗಿರುವಾಗ ಸರಕಾರಕ್ಕೆ ಯಾಕೆ ಹೆದರಿಕೆ. ಒಂದು ವೇಳೆ ಇಂತಹ ಅಂಗಡಿಗಳಲ್ಲಿ ರಶ್ ಆಗುತ್ತೆ ಎಂದು ಜಿಲ್ಲಾಡಳಿತಕ್ಕೆ ಅನಿಸಿದರೆ ಹಾಗೆ ಆಗಬಹುದಾದ ಅಂಗಡಿಯವರಿಗೆ ಕೊರೊನಾ ನಿಯಮಗಳನ್ನು ಪಾಲಿಸಿಯೇ ವ್ಯಾಪಾರ ಮಾಡಬೇಕು ಎಂದು ತಿಳಿಸಿ. ಕೇಳದಿದ್ದರೆ ನಂತರ ಬಂದ್ ಮಾಡಿ. ಅದು ಬಿಟ್ಟು ತರಕಾರಿ, ಚಿಕನ್, ಮದ್ಯದ ಅಂಗಡಿ ಬಿಟ್ಟು ಬೇರೆ ಎಲ್ಲಾ ಕಡೆ ಕೊರೊನಾ ಮನುಷ್ಯರ ಮೇಲೆ ದಾಳಿ ಮಾಡಲು ಕಾಯುತ್ತಾ ಇರುತ್ತದೆ ಎಂದು ಅಂದುಕೊಳ್ಳುವುದು ನಿಜಕ್ಕೂ ದುರಂತ. ಇನ್ನು ಬೀದಿಬದಿ ವ್ಯಾಪಾರಿಗಳಿಗೆ ಸರಕಾರ ವಿಶೇಷ ಪ್ಯಾಕೇಜಿನಲ್ಲಿ ಸಹಾಯಧನ ಘೋಷಿಸಿದೆ. ಅದರ ನಂತರವೂ ಬೀದಿಬದಿ ವ್ಯಾಪಾರಿಗಳಿಗೆ ವ್ಯವಹಾರ ಮಾಡಲು ಅವಕಾಶ ನೀಡಲಾಗಿದೆ. ಖಾಸಗಿ ಬಸ್ಸಿನವರಿಗೆ ಬಸ್ ಹೊರಗೆ ತೆಗೆಯುವಂತಿಲ್ಲ. ಆದರೆ ಅದರಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಒಂದು ಪೈಸೆ ಸಹಾಯಧನ ಇಲ್ಲ. ಅನೇಕ ಕಡೆ ಲಾಕ್ ಡೌನ್ ಎನ್ನುವುದು ಹೆಸರಿಗೆ ಮಾತ್ರ ಇದೆ. ಆದರೆ ವಾಹನಗಳು ಬೇಕಾಬಿಟ್ಟಿ ತಿರುಗುತ್ತಾ ಇರುತ್ತವೆ. ಕೇಳಿದರೆ ಆಸ್ಪತ್ರೆ, ಫ್ಯಾಕ್ಟರಿ, ಸರಕಾರಿ ಉದ್ದಿಮೆ, ಸರಕಾರಿ ಕಚೇರಿ, ಬ್ಯಾಂಕ್, ಪಾರ್ಸೆಲ್ ಕೊಡುವ ಹೋಟೇಲುಗಳು, ಆನ್ ಲೈನ್ ಡೆಲಿವರಿ, ಆನ್ ಲೈನ್ ಫುಡ್ ಸಪ್ಲೈ, ಗ್ಯಾಸ್ ಸಿಲೆಂಡರ್, ಪಡಿತರ ಚೀಟಿ ಮತ್ತು ಮಾಧ್ಯಮ. ಹೀಗೆ ಆದರೆ ಇನ್ನು ಉಳಿದಿರುವುದು ಬಟ್ಟೆ, ಬಂಗಾರ, ಫ್ಯಾನ್ಸಿ ಸ್ಟೋರ್ಸ್, ಚಪ್ಪಲಿ ಅಂಗಡಿ ಮತ್ತು ಇನ್ನಿತರ ಚಿಕ್ಕಪುಟ್ಟ ಸ್ಟೇಶನರಿ ಮತ್ತು ಜೆರಾಕ್ಸ್. ಅವರಿಗೂ ಅವಕಾಶ ಕೊಟ್ಟು ಬಿಡಿ. ಟೈಲರ್ ಗಳು ಅಂಗಡಿಗೆ ಬಂದು ಬಟ್ಟೆ ಹೊಲಿದರೆ ಏನು ತೊಂದರೆ ಆಗುತ್ತದೆ. ಬಸ್ಸಿನವರಿಗೆ ಸಾಮಾಜಿಕ ಅಂತರ ಇಟ್ಟುಕೊಂಡು ಹೋಗಲು ಆಗುತ್ತಾ ಕೇಳಿ. ಆಗುವುದಾದರೆ ಬಿಡಿ. ಅಸಲು ಆಗುವುದಿಲ್ಲ ಎನ್ನುವವರು ಬೇಡಾ ಬಿಡಿ. ಸರಿಯಾಗಿ ನೋಡಿದರೆ ಈಗ ವೈನ್ ಶಾಪ್ ಗಳೇ ಬಂದಾಗಬೇಕಿತ್ತು. ಯಾಕೆಂದರೆ ಮೊದಲೇ ಮಧ್ಯಮ ವರ್ಗದವರ ಬಳಿ ಹಣ ಇಲ್ಲ. ಹೀಗಿರುವಾಗ ಅವರು ಬಾರ್ ಒಪನ್ ಇದೆ ಎನ್ನುವ ಕಾರಣಕ್ಕೆ ಸಾಲಸೋಲ ಮಾಡಿ ಕುಡಿದುಬಿಡುತ್ತಾರೆ. ನಂತರ ಮನೆಯ ಗತಿ ಯಾರು? ಈ ಬಗ್ಗೆ ಯೋಚನೆ ಮಾಡಬೇಕಾದ ಸರಕಾರ ತನ್ನ ಸ್ವಾರ್ಥ ಮಾತ್ರ ನೋಡುವುದಾದರೆ ಜನಸಾಮಾನ್ಯರು ಯಾಕೆ ತಮ್ಮ ಸ್ವಾರ್ಥ ನೋಡಬಾರದು. ಸರಕಾರ ಕೊಡುವ ಎರಡ್ಮೂರು ಸಾವಿರದಿಂದ ಯಾರ ಜೀವನವೂ ಹೋಗುವುದಿಲ್ಲ. ಆದರೆ ಸರಕಾರ ನಮ್ಮನ್ನು ಗುರುತಿಸಿದೆ ಎನ್ನುವ ಸಮಾಧಾನ ಇರುತ್ತದೆ. ಮೂರು ಸಾವಿರ ಸಿಕ್ಕಿದರೆ ಅದರೊಂದಿಗೆ ಪಡಿತರ ಅಕ್ಕಿ, ಬೇಳೆ ಸಿಕ್ಕಿದರೆ ಬಿಪಿಎಲ್ ಕಾರ್ಡಿನವರು ಬದುಕಬಹುದು. ಅದರೊಂದಿಗೆ ಪಡಿತರ ಚೀಟಿ ಇದ್ದ ಎಪಿಎಲ್ ನವರು ಒಂದಿಷ್ಟು ದಿನ ದೂಡಬಹುದು. ಇನ್ನು ಅನೇಕ ಸಂಘಸಂಸ್ಥೆಗಳು ಕೊಡುವ ಕಿಟ್ ಗಳು ಕೂಡ ಸಹಾಯ ಮಾಡುತ್ತವೆ. ಆದರೆ ಈ ಯಾವುದರಲ್ಲಿಯೂ ಇಲ್ಲದ ಮನುಷ್ಯ ಅತ್ತ ಬದುಕಲು ಆಗದೇ ಇತ್ತ ಸಾಯಲು ಆಗದೇ ಒದ್ದಾಡುತ್ತಾನೆ. ಅಂತವರಿಗಾಗಿ ಮೂರು ದಿನ ಆರು ಗಂಟೆ ತೆರೆಯಲು ಅವಕಾಶ ನೀಡಬೇಕಾಗಿರುವುದು ಸರಕಾರದ ಧರ್ಮ. ಅದರೊಂದಿಗೆ ಕೊರೊನಾ ಸದ್ಯ ನಮಗೆ ಟಾಟಾ ಮಾಡಿ ಹೋಗುವ ಮೂಡಿನಲ್ಲಿಲ್ಲ. ಆದರೆ ನಾವು ಅದು ಹೋಗುವ ತನಕ ಕಾಯುತ್ತಾ ಕೂತರೆ ಈ ಪ್ರಪಂಚದಿಂದ ಟಾಟಾ ಮಾಡಿ ಹೋಗಬೇಕಾದ ದಿನಗಳು ಬರಬಹುದು!
Leave A Reply