ದಕ ಜಿಲ್ಲೆಯಲ್ಲಿ ನಿತ್ಯ ಸಾಯುತ್ತಿರುವ ಸಂಖ್ಯೆ 15 ಕ್ಕೆ ಫಿಕ್ಸ್ ಆಗಿದೆಯಲ್ಲ?!
ಪ್ರತಿ ದಿನ ನಮ್ಮ ಜಿಲ್ಲೆಯಲ್ಲಿ 15 ಜನರೇ ಕೊರೊನಾದಿಂದ ಸಾಯುತ್ತಿದ್ದಾರಲ್ಲ ಎನ್ನುವುದು ಜನಸಾಮಾನ್ಯರ ಬಾಯಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಕೇಳಿ ಬರುತ್ತಿರುವ ಮಾತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಸಾವಿನ ಸಂಖ್ಯೆ ಮಾತ್ರ ಡಬಲ್ ಡಿಜಿಟ್ ಗಿಂತ ಕೆಳಗೆ ಇಳಿಯುವಂತೆ ಕಾಣುತ್ತಿಲ್ಲ. ಇದಕ್ಕೆ ಏನು ಕಾರಣ ಎಂದು ನೋಡಬೇಕಾದ ಅವಶ್ಯಕತೆ ಇದೆ. ಇದರಲ್ಲಿ ಹೊರಗಿನ ಜಿಲ್ಲೆಯಿಂದ ಬಂದು ಇಲ್ಲಿ ಚಿಕಿತ್ಸೆ ಪಡೆದು ಫಲಕಾರಿಯಾಗದೇ ಸಾಯುತ್ತಿರುವ ಸಂಖ್ಯೆ ಕೂಡ ಸೇರಿದೆ. ನಮ್ಮ ದೇಶದಲ್ಲಿ ನೂರಕ್ಕೆ ತೊಂಭತ್ತು ಶೇಕಡಾ ಜನರು ಕೊರೊನಾ ಕಾಯಿಲೆ ಕೊನೆಯ ಸ್ಟೇಜ್ ನಲ್ಲಿ ಇದ್ದಾಗಲೇ ವೈದ್ಯರ ಬಳಿ ಬರುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ನಿಮಗೆ ಬಂದಿರುವ ಕೊರೊನಾ ಸಾಮಾನ್ಯ ಹಂತ ಮೀರಿ ಮೂರನೇಯದ್ದೋ, ನಾಲ್ಕನೇಯದ್ದೋ ಸ್ಟೇಜಿನಲ್ಲಿ ಇದೆ, ಈಗ ತಡವಾಗಿದೆ, ಆದರೂ ಪ್ರಯತ್ನ ಪಡುತ್ತೇವೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಯಾವುದೇ ಸ್ಟೇಜಿನಲ್ಲಿ ಕಾಯಿಲೆ ಇದ್ದರೂ ಅದನ್ನು ಗುಣಪಡಿಸಬೇಕು ಎನ್ನುವುದು ತೊಂಬತ್ತೊಂಬತ್ತು ಶೇಕಡಾ ರೋಗಿಗಳ ಸಂಬಂಧಿಕರು ಹೇಳುವ ಮಾತು. ಇದರಿಂದ ವೈದ್ಯರು ಉಭಯಸಂಕಟಕ್ಕೆ ಬೀಳುತ್ತಾರೆ. ರೋಗಿಯನ್ನು ಉಳಿಸಬೇಕು ಎನ್ನುವುದು ವೈದ್ಯಕೀಯ ಧರ್ಮ. ಕೊನೆಯ ಹಂತದಲ್ಲಿ ಚಿಕಿತ್ಸೆ ಫಲಕಾರಿಯಾಗುವುದಿಲ್ಲ ಎಂದು ಹೇಳಲಾರದ ಸಂಕಟ. ಹಾಗಂತ ನೇರವಾಗಿ ಹೇಳುವಂತಿಲ್ಲ. ಹೇಳದಿದ್ದರೆ ನಾಳೆ ಹೆಚ್ಚು ಕಡಿಮೆ ಆದರೆ ಏನು ಮಾಡುವುದು ಎನ್ನುವುದು ಒತ್ತಡ. ಕೊನೆಗೆ ದೇವರ ಮೇಲೆ ಭಾರ ಹಾಕಿ ಚಿಕಿತ್ಸೆ ಶುರುಮಾಡುತ್ತಾರೆ. ರೋಗಿ ತಾನು ಉಳಿದರೆ ಆಯುಷ್ಯ ಗಟ್ಟಿ ಇತ್ತು ಎಂದುಕೊಳ್ಳುತ್ತಾನೆ. ಅದೇ ಸತ್ತರೆ ವೈದ್ಯರೇ ನಿರ್ಲಕ್ಷ್ಯ ಮಾಡಿದರು ಎಂದು ಅವನ ಸಂಬಂಧಿಕರು ಹಲ್ಲೆ ಮಾಡಲು ಮುಂದಾಗುತ್ತಾರೆ. ಇದು ಯಾಕೆ ಯಾರಿಗೂ ಅರ್ಥವಾಗುವುದಿಲ್ಲ. ಇನ್ನೊಂದು ಘಟನೆಯನ್ನು ವಿವರಿಸುತ್ತೇನೆ. ರೋಗಿ ವೈದ್ಯರ ಹತ್ತಿರ ಬಂದು ತುಂಬಾ ದಿನದಿಂದ ಬೆನ್ನು ನೋವು ಡಾಕ್ಟರ್. ನೀವು ಏನು ಬೇಕು ಅದು ಟ್ರಿಟ್ ಮೆಂಟ್ ಕೊಡಿ. ಒಟ್ಟಿನಲ್ಲಿ ಗುಣವಾಗಬೇಕು ಎಂದು ಹೇಳುತ್ತಾನೆ. ಅವನನ್ನು ಪರೀಕ್ಷಿಸಿದ ವೈದ್ಯರಿಗೆ ಅವನಿಗೆ ಸಿಂಪಲ್ ಬೆಡ್ ರೆಸ್ಟ್ ಅವಶ್ಯಕತೆ ಇದೆ ಎಂದು ಗೊತ್ತಾಗುತ್ತದೆ. ಆದರೆ ಅದನ್ನೇ ಹೇಳಿದರೆ ಆ ರೋಗಿ ಈ ವೈದ್ಯರಿಗೆ ಅಷ್ಟು ನಾಲೆಡ್ಜ್ ಇಲ್ಲ ಎಂದು ಎಲ್ಲರ ಬಳಿ ಹೇಳಿಬರುತ್ತಾನೆ ನಂತರ ಬೇರೆ ವೈದ್ಯರ ಹತ್ತಿರ ಹೋಗುತ್ತಾನೆ. ಅಲ್ಲಿ ತನಗೆ ಹಿಂದಿನ ವೈದ್ಯರು ಸರಿಯಾಗಿ ನೋಡಿಲ್ಲ ಎಂದು ದೂರು ಒಪ್ಪಿಸುತ್ತಾನೆ. ಇಲ್ಲಿಯಾದರೂ ಎಲ್ಲಾ ರೀತಿಯ ಚಿಕಿತ್ಸೆ ನೀಡಿ ಅನ್ನುತ್ತಾನೆ. ಇದು ನಮ್ಮ ಇನ್ನೊಂದು ವಾಸ್ತವ. ಅಗತ್ಯ ಇದೆಯೋ ಇಲ್ಲವೋ ರೋಗಿಯ ಮನಸ್ಸಿನ ಸಮಾಧಾನಕ್ಕೆ ವೈದ್ಯರು ನಾನಾ ಚಿಕಿತ್ಸೆ ಕೊಡುವುದು ಇದೆ. ಕೊನೆಗೆ ಬಿಲ್ ಜಾಸ್ತಿಯಾದರೆ ಆಸ್ಪತ್ರೆಯನ್ನು ಬೈಯುವುದು ಅದೇ ರೋಗಿಗಳು. ಹಾಗಂತ ಇವತ್ತಿನ ದಿನಗಳಲ್ಲಿ ಒಳ್ಳೆಯ ಚಿಕಿತ್ಸೆ ಎಂದರೆ ದುಬಾರಿಯ ಯಂತ್ರಗಳನ್ನೇ ಆಮದು ಮಾಡಿ ತಂದು ಆಸ್ಪತ್ರೆಯಲ್ಲಿ ಇಡಬೇಕಾಗುತ್ತದೆ. ಅಂತಹ ಯಂತ್ರೋಪಕರಣಗಳು ಇಲ್ಲದ ಆಸ್ಪತ್ರೆ ಕಳಪೆ ಆಸ್ಪತ್ರೆ ಎಂದು ಜನರೇ ಹೇಳುತ್ತಾರೆ. ಕೋಟಿ ಬೆಲೆಬಾಳುವ ಯಂತ್ರದಿಂದ ಚಿಕಿತ್ಸೆ ಕೊಟ್ಟ ಬಳಿಕ ಬಿಲ್ ಜಾಸ್ತಿಯಾದರೆ ಬೈಯುವುದು ಅದೇ ಜನರು.
ಹೆಚ್ಚಿನ ಜನರು ಈಗೀಗ ಏನು ಮಾಡುತ್ತಾರೆ ಎಂದರೆ ತಮಗೆ ಕೊರೊನಾದಿಂದ ಏನಾದರೂ ದೈಹಿಕ ತೊಂದರೆ ಶುರುವಾದರೆ ಅದು ಹೇಗೆ ಬರುತ್ತದೆ, ಅದಕ್ಕೆ ಏನು ಚಿಕಿತ್ಸೆ ಎಂದೆಲ್ಲ ಆಸ್ಪತ್ರೆಗೆ ಬರುವ ಮೊದಲೇ ಗೂಗಲ್ ಗೆ ಹೋಗಿ ಸರ್ಚ್ ಮಾಡಿ ಬಂದಿರುತ್ತಾರೆ. ಅಲ್ಲಿ ಲಿಖಿತವಾಗಿ ಇದ್ದದ್ದನ್ನು ಓದಿ ವೈದ್ಯರ ಎದುರು ಕೂರುತ್ತಾರೆ. ಇನ್ನು ವೈದ್ಯರು ಚಿಕಿತ್ಸೆ ಶುರು ಮಾಡುವ ಮೊದಲೇ ತಾವು ಓದಿ ಬಂದ ಜ್ಞಾನವನ್ನು ಪ್ರದರ್ಶಿಸುತ್ತಾರೆ. ವೈದ್ಯರಿಗೆನೆ ಗೈಡ್ ಮಾಡಲು ಬರುತ್ತಾರೆ. ನೀವು ಓದಿದ್ದು ಸರಿಯಾಗಿಲ್ಲ ಎಂದು ವೈದ್ಯರು ಬಿಡಿಸಿ ಹೇಳಿದರೂ ಗೂಗಲ್ ಅನ್ನು ಹೆಚ್ಚು ನಂಬುವವರು ವೈದ್ಯರೇ ಸರಿಯಿಲ್ಲ ಎಂದು ಹೊರಗೆ ವಾದಿಸುತ್ತಾರೆ. ಇನ್ನು ಇಂಟರ್ ನೆಟ್ ನಲ್ಲಿ ಸೂಚಿಸಿದ ಔಷಧವನ್ನೇ ಸೇವಿಸುತ್ತಾರೆ ನಂತರ ಕಾಯಿಲೆಯನ್ನು ತೀವ್ರಗೊಳಿಸಿ ಇನ್ನೊಂದು ವೈದ್ಯರ ಬಳಿ ಹೋಗುತ್ತಾರೆ ಮತ್ತು ತಮಗೆ ಕಾಯಿಲೆ ತೀವ್ರವಾಗಲು ಏನು ಕಾರಣ ಎನ್ನುವುದನ್ನು ಮುಚ್ಚಿಡುತ್ತಾರೆ. ಮೊದಲು ಗೂಗಲ್ ನೋಡದೆ ಬಂದಿದ್ದರೆ ಕಾಯಿಲೆ ಗುಣವಾಗುತ್ತಿತ್ತು ಎನ್ನುವುದು ನಮ್ಮ ಈಗಿನ ಜನರಿಗೆ ಯಾಕೆ ಅರ್ಥವಾಗುವುದಿಲ್ಲ.
ಇನ್ನೊಂದು ಟೈಪಿನ ರೋಗಿಗಳಿದ್ದಾರೆ. ಅವರು ಸಣ್ಣ ರೋಗಕ್ಕೂ ಎಂಆರ್ ಐ ಸಹಿತ ದೊಡ್ಡ ದೊಡ್ಡ ಚಿಕಿತ್ಸೆಗಳನ್ನು ಕೊಡಿ ಎಂದು ಅವರೇ ವೈದ್ಯರಿಗೆ ಸಲಹೆ ನೀಡುತ್ತಾರೆ. “ಡಾಕ್ಟರ್ ಅವರೇ, ನನ್ನ ಚಿಕ್ಕಪ್ಪನ ಹೆಂಡತಿಯ ತಮ್ಮನಿಗೂ ಹೀಗೆ ಆಗಿತ್ತು. ಅವರು ಎಂಆರ್ ಐ ಮಾಡಿದ ನಂತರ ಗೊತ್ತಾಯ್ತು, ನನಗೂ ಅದನ್ನೇ ಮಾಡಿಬಿಡಿ” ಎನ್ನುತ್ತಾರೆ. ಅವರನ್ನು ಪರೀಕ್ಷಿಸಿದ ವೈದ್ಯರಿಗೆ ಅದರ ಅಗತ್ಯ ಇಲ್ಲ ಎಂದು ಗೊತ್ತಾಗುತ್ತದೆ. ಆದರೆ ನೂರು ಜನರಿಗೆ ಒಬ್ಬರಿಗೆ ಬರುವಂತೆ ಟ್ಯೂಮರ್ ಒಂದು ವೇಳೆ ತಾವು ಬೇಡಾ ಎಂದ ರೋಗಿಗೆ ಇದ್ದು ಅದು ಈ ರೋಗಿ ಬೇರೆ ಕಡೆ ಹೋಗಿ ಪರೀಕ್ಷಿಸಿ ಪತ್ತೆಯಾಗಿ ಹೆಚ್ಚು ಕಡಿಮೆ ಆದರೆ ಎಂದು ಹೆದರಿ ನೂರಕ್ಕೆ ನೂರು ಜನರಿಗೂ ಅದೇ ದುಬಾರಿ ಚಿಕಿತ್ಸೆ ಸೂಚಿಸುತ್ತಾರೆ ಮತ್ತು ತಾವು ಸೇಫ್ ಆಗುತ್ತಾರೆ. ಯಾಕೆಂದರೆ ಮೆಡಿಕಲ್ ನೆಗ್ಲಿಜೆನ್ಸಿ ಅಡಿಯಲ್ಲಿ ಯಾರಾದರೂ ರೋಗಿ ದೂರು ನೀಡಿದರೆ ಕೆಲವು ಬಾರಿ ಐದಾರು ಕೋಟಿಯ ತನಕ ಗ್ರಾಹಕ ನ್ಯಾಯಾಲಯ ವೈದ್ಯರ ಮೇಲೆ ದಂಡ ಹೇರಲೂ ಬಹುದು. ಆದ್ದರಿಂದ ನಮ್ಮ ಜನಪ್ರತಿನಿಧಿಗಳಲ್ಲಿ ಅನೇಕರು ಅನೇಕ ಬಾರಿ ಜನರಿಗೆ ಮನವಿ ಮಾಡಿದ್ದಾರೆ. ಕೊರೊನಾದ ಯಾವುದೇ ಲಕ್ಷಣ ಕಂಡು ಬಂದರೂ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ. ಕೊನೆಯ ಕ್ಷಣದಲ್ಲಿ ವೈದ್ಯರ ಬಳಿ ಬರಬೇಡಿ. ನೀವು ಮೊದಲೇ ಬಂದರೆ ನಿಮ್ಮನ್ನು ಉಳಿಸಬಹುದಿತ್ತು ಎಂದು ವೈದ್ಯರಿಗೆ ಅನಿಸುವಂತೆ ಮಾಡಬೇಡಿ. ಹೀಗೆ ಜನರು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಸಾವಿನ ಸಂಖ್ಯೆ ನಿತ್ಯ 15 ಕ್ಕೆ ಫಿಕ್ಸ್ ಆಗಿಬಿಟ್ಟಿದೆ.!!
Leave A Reply