ಮರಳು ಹಾಕುವ ಬದಲು ನಮ್ಮ ಕಣ್ಣಿಗೆ ಮಣ್ಣು ಹಾಕಿದ್ದರು!!
ಕೇವಲ ಲಂಚದ ಆಸೆಗಾಗಿ ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರಿಂಗ್ ವಿಭಾಗ ಹಾಗೂ ದುರಾಸೆಯಿಂದ ಗುತ್ತಿಗೆದಾರರು ಮಾಡುವ ಅಪವಿತ್ರ ಮೈತ್ರಿಯಿಂದ ಮಂಗಳೂರು ನಗರದ ಅಭಿವೃದ್ಧಿ ಕಾಮಗಾರಿಗಳು ಹೇಗೆ ಹಳ್ಳ ಹಿಡಿಯುತ್ತಿವೆ, ಎಷ್ಟು ಕಳಪೆಯಾಗುತ್ತಿದೆ ಎನ್ನುವುದನ್ನು ಇವತ್ತು ಮತ್ತೊಂದು ಉದಾಹರಣೆಯೊಂದಿಗೆ ವಿವರಿಸುತ್ತೇನೆ. ನಾನು ಇವತ್ತು ಪೋಸ್ಟ್ ಮಾಡಿರುವ ಫೋಟೋ ಬಂಟ್ಸ್ ಹಾಸ್ಟೆಲ್ ನಿಂದ ಮಲ್ಲಿಕಟ್ಟೆಗೆ ಹೋಗುವ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಸಿವಿ ನಾಯಕ್ ಹೆಸರಿನ ಸಭಾಂಗಣ ಅಥವಾ ಹಾಲ್ ಬರುತ್ತದೆ. ಅದರ ಎದುರಿಗೆ ಇರುವ ಕಾಂಕ್ರೀಟ್ ರಸ್ತೆಯ ಫೋಟೋ ಇದು. ಇಲ್ಲಿ ಅಂಡರ್ ಗ್ರೌಂಡ್ ಡ್ರೈನೇಜ್ (ಯುಜಿಡಿ) ಕಾಮಗಾರಿಗಾಗಿ ರಸ್ತೆಯ ಸೆರಗನ್ನು ಕಟ್ ಮಾಡಿದ್ರು. ಲೆಕ್ಕ ಪ್ರಕಾರ ಕಟ್ ಮಾಡಿದ ಒಂದು ವಾರದ ಒಳಗೆ ಕಾಮಗಾರಿ ಮುಗಿಯಬೇಕು. ಈ ಕಾಂಕ್ರೀಟ್ ರಸ್ತೆ ಕಟ್ ಮಾಡುವುದು ಮತ್ತು ಯುಜಿಡಿ ಕಾಮಗಾರಿ ಎಲ್ಲವೂ ಮಂಗಳೂರು ಮಹಾನಗರ ಪಾಲಿಕೆ ಅಧೀನದಲ್ಲಿ ಬರುವಂತಹ ಕಾಮಗಾರಿಯಾಗಿದೆ. ಪಾಲಿಕೆಯ ಕಡೆಯಿಂದ ಗುತ್ತಿಗೆಯನ್ನು ಪಡೆದುಕೊಂಡ ಗುತ್ತಿಗೆದಾರರು ತಾಂತ್ರಿಕವಾಗಿ ಏನು ಮಾಡಬೇಕು ಎಂದರೆ ಹೊಸ ರಸ್ತೆ ಕಟ್ ಮಾಡಿ ಅಡಿಯಲ್ಲಿ ಯುಜಿಡಿ ಪೈಪ್ ಹಾಕಿದ ನಂತರ ಅದರ ಮೇಲೆ ಮರಳನ್ನೇ ತುಂಬಬೇಕು. ಮರಳಿನ ಬದಲು ಮಣ್ಣು ತುಂಬಿದರೆ ಅದು ಸಿಂಕ್ ಆಗುತ್ತದೆ. ಮರಳು ತುಂಬಿದರೆ ಮಾತ್ರ ಸಿಂಕ್ ಆಗುವುದಿಲ್ಲ. ಏಳು ದಿನಗಳೊಳಗೆ ಕಾಂಕ್ರೀಟ್ ಕಟ್ ಮಾಡಿ ಪೈಪ್ ಲೈನ್ ಹಾಕಿ ಮರಳು ಪೂರ್ತಿಯಾಗಿ ತುಂಬುವ ಬದಲಿಗೆ ಗುತ್ತಿಗೆದಾರರು ಅಡಿಯಲ್ಲಿ ಸ್ವಲ್ಪ ಮರಳು ಹಾಕಿ ನಂತರ ಮಣ್ಣನ್ನು ತುಂಬಿದ್ದಾರೆ. ಮೇಲೆ ನಮ್ಮ ಕಣ್ಣಿಗೆ ಮಣ್ಣು ಹಾಕಲು ಒಂದಿಷ್ಟು ಮರಳನ್ನು ಸಿಂಪಡಿಸಿದಂತೆ ಮಾಡಿಬಿಟ್ಟಿದ್ದಾರೆ. ಇದು ಅಕ್ಷರಶ: ನಿಯಮ ಉಲ್ಲಂಘನೆ ಮತ್ತು ಅಪ್ಪಟ ಕಳಪೆ ಕಾಮಗಾರಿ. ಇದನ್ನು ಪಾಲಿಕೆಯ ತಾಂತ್ರಿಕ ಸಲಹೆಗಾರರಾಗಿರುವ ಇಂಜಿನಿಯರ್ ಧರ್ಮರಾಜ್ ನೋಡಿದ್ದಾರೆ. ಮರಳು ತುಂಬಿ ನೀಟ್ ಆಗಿ ಕೆಲಸವಾಗಬೇಕಿದ್ದ ಕಡೆಯಲ್ಲಿ ಗುತ್ತಿಗೆದಾರರು ಮಣ್ಣು ತುಂಬಿರುವ ಕಾರಣ ಜೋರು ಮಳೆಗೆ ಅಲ್ಲಿ ನೆಲ ಸಿಂಕ್ ಆಗಿದೆ. ಹಾಗಿದ್ದರೆ ಗುತ್ತಿಗೆದಾರರ ತಪ್ಪನ್ನು ಸುಮ್ಮನೆ ನೋಡಿಬಿಡಲು ಆಗುತ್ತಾ?
ಮೊನ್ನೆ ಆದಿತ್ಯವಾರ ಮೇಯರ್ ಪ್ರೇಮಾನಂದ ಶೆಟ್ಟಿ, ಇಂಜಿನಿಯರ್ ಗಣೇಶ್, ಧರ್ಮರಾಜ್ ಹಾಗೂ ನಾನು ಆ ಜಾಗಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇವೆ. ನಂತರ ಗುತ್ತಿಗೆದಾರರಿಗೆ ಆ ಮಣ್ಣನ್ನು ತೆಗೆಯಲು ಹೇಳಿ ಆ ಕೆಲಸವನ್ನು ಸ್ಮಾರ್ಟ್ ಸಿಟಿಯವರಿಗೆ ಹೇಳಿ ಅವರಿಂದ ಮಾಡಿಸಲಾಗಿದೆ. ಸದ್ಯ ಕೆಲಸ ಮುಗಿದಿದೆ. ಕ್ಯೂರಿಂಗ್ ಮಾತ್ರ ಬಾಕಿ ಇದೆ. ಕಳಪೆ ಕಾಮಗಾರಿಗಳಿಗೆ ಇದೊಂದು ಉದಾಹರಣೆ ಅಷ್ಟೇ. ತಮ್ಮ ಅಧೀನದಲ್ಲಿ ಬರುವ ಕಾಮಗಾರಿಗಳ ಗುಣಮಟ್ಟವನ್ನು ನೋಡಬೇಕಾಗಿರುವುದು ಪಾಲಿಕೆಯ ಇಂಜಿನಿಯರಿಂಗ್ ವಿಭಾಗದವರ ಜವಾಬ್ದಾರಿ. ಜನರ ತೆರಿಗೆಯ ಹಣದಲ್ಲಿ ಅಭಿವೃದ್ಧಿ ಯೋಜನೆ ನಡೆಯುವುದರಿಂದ ಕಳಪೆ ಕಾಮಗಾರಿ ಆಗದಂತೆ ನೋಡಬೇಕು. ಅವರು ನೋಡಲು ಹೋಗುವುದೇ ಇಲ್ಲ. ಅವರು ನೋಡದೇ ಇರುವುದರಿಂದ ಕಾಮಗಾರಿಗಳು ಕಳಪೆಯಾಗುತ್ತಾ ಹೋಗುತ್ತದೆ. ಕೊನೆಗೆ ಕೆಟ್ಟ ಹೆಸರು ಬರುವುದು ಯಾರಿಗೆ ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೇವಲ ಶೇಕಡಾ ಕಮೀಷನ್ ಆಸೆಗೆ ಅಧಿಕಾರಿಗಳು, ಇಂಜಿನಿಯರಿಂಗ್ ವಿಭಾಗದವರು ಪಾಲಿಕೆಯಲ್ಲಿ ಇರುವುದಾದರೆ ಅವರಿಂದ ಮತ್ತು ಅದರಿಂದ ನಗರಕ್ಕೆ ಯಾವುದೇ ಉಪಯೋಗವಿಲ್ಲ. ಇಂತಹ ಅಧಿಕಾರಿಗಳ ಮತ್ತು ಪಾಲಿಕೆಯ ಇಂಜಿನಿಯರ್ ಯಾರು ತಪ್ಪು ಮಾಡಿದರೆ ಅವರ ವಿರುದ್ಧ ಪಾಲಿಕೆ ಕಮೀಷನರ್, ಮೇಯರ್ ಮತ್ತು ಶಾಸಕರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಅವರಿಗೆ ಬೇಸರವಾಗುತ್ತದೆ, ಇವರಿಗೆ ನೋವಾಗುತ್ತದೆ, ಮತ್ತೊಬ್ಬರ ಮುಖ ಚಿಕ್ಕದಾಗುತ್ತದೆ ಎಂದು ಯಾರೂ ಕ್ರಮ ತೆಗೆದುಕೊಳ್ಳಲು ಮುಂದಾಗದಿದ್ದರೆ ಇದರಿಂದ ಪಾಲಿಕೆ ಮುಂದೊಂದು ದಿನ ತಕ್ಕಪಾಠ ಕಲಿಯಬೇಕಾಗುತ್ತದೆ. ಇನ್ನು ಗುತ್ತಿಗೆದಾರರ ವಿರುದ್ಧ ಕೂಡ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವರನ್ನು ಬ್ಲ್ಯಾಕ್ ಲಿಸ್ಟಿಗೆ ಸೇರಿಸಬೇಕು. ಅದು ಬಿಟ್ಟು ಮೇಯರ್, ಶಾಸಕರು ತಪ್ಪು ಮಾಡುವ ಇಂತವರ ಮೇಲೆ ಕರುಣೆ ತೋರಿಸಿದರೆ ಇವರಂತೂ ಸರಿದಾರಿಗೆ ಬರುವುದಿಲ್ಲ, ಅದರೊಂದಿಗೆ ಕಳಪೆ ಮಾಡುವ ಬೇರೆಯವರಿಗೂ ನಮಗೆ ಏನೂ ಆಗುವುದಿಲ್ಲ ಎನ್ನುವ ಧೈರ್ಯ ಬರುತ್ತದೆ. ಅದರೊಂದಿಗೆ ಜನಪ್ರತಿನಿಧಿಗಳ ಬಗ್ಗೆ ಹಗುರವಾದ ಭಾವನೆ ಬರುತ್ತದೆ. ಯಾವಾಗ ತಪ್ಪು ಮಾಡುವ, ಕಳಪೆ ಕಾಮಗಾರಿ ಮಾಡುವ ಒಬ್ಬಿಬ್ಬರು ಗುತ್ತಿಗೆದಾರರ ವಿರುದ್ಧ ಶಾಸಕರು, ಮೇಯರ್ ಸೇರಿ ಸೂಕ್ತ ಕ್ರಮ ಕೈಗೊಂಡು ಬಿಸಿ ಮುಟ್ಟಿಸಿದರೆ ಆಗ ಎಲ್ಲವೂ ತನ್ನಿಂದತಾನೆ ಹತೋಟಿಗೆ ಬರುತ್ತದೆ. ಯಾವಾಗ ಭ್ರಷ್ಟರಿಗೆ ಏನೂ ಆಗಲ್ಲ ಎನ್ನುವ ಭಾವನೆ ಬರುತ್ತದೋ ಆಗಲೇ ನೀವು ಎಷ್ಟೇ ಕೆಲಸ ಮಾಡಿದರೂ ಅದು ಅನುಷ್ಟಾನಕ್ಕೆ ಬರುವಾಗ ಯಾರದ್ದೋ ನಿರ್ಲಕ್ಷ್ಯದಿಂದ ಕಳಪೆಯಾದರೆ ಅದರ ಕ್ರೆಡಿಟ್ ಹೋಗುವುದು ಮೇಯರ್ ಹಾಗೂ ಶಾಸಕರಿಗೆ. ಹೀಗೆ ಆಗದಂತೆ ನೋಡಿಕೊಳ್ಳಿ ಎನ್ನುವುದು ನನ್ನ ಸಲಹೆ.!
Leave A Reply