ಶುದ್ಧ ಕುಡಿಯುವ ನೀರು ಬೇಕೆ? ಎಷ್ಟು ಅಗೆದಿದ್ದಾರೆ ಎಂದು ನೋಡಿ!!
Posted On August 25, 2021
700 ಕೋಟಿ ರೂಪಾಯಿ ವೆಚ್ಚದ ಎಡಿಬಿ-2 ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಅರವತ್ತು ವಾರ್ಡ್ ಗಳಲ್ಲಿ 24*7 ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಜಲಸಿರಿಗೆ ಇತ್ತೀಚೆಗೆ ಮಂಗಳೂರು ನಗರಕ್ಕೆ ಭೇಟಿ ಕೊಟ್ಟ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಚಾಲನೆ ನೀಡಿದ್ದಾರೆ. ಅದು ಓಕೆ, ಒಳ್ಳೆಯ ಯೋಜನೆ. ಆದರೆ ಅದು ಹೇಗೆ ಅನುಷ್ಟಾನಗೊಳ್ಳುತ್ತಿದೆ ಎನ್ನುವುದನ್ನು ಇವತ್ತಿನ ಜಾಗೃತ ಅಂಕಣದಲ್ಲಿ ನಿಮ್ಮ ಗಮನಕ್ಕೆ ತರುವ ಪ್ರಯತ್ನ ಮಾಡಬೇಕಿದೆ. ಈಗ ನೀರಿನ ಪೈಪುಗಳನ್ನು ನೆಲದ ಅಡಿಯಲ್ಲಿ ಅಂದರೆ ಭೂಗತವಾಗಿ ಹಾಕುವ ಕೆಲಸ ನಡೆಯುತ್ತಿದೆ. ನೀರಿನ ಪೈಪುಗಳನ್ನು ಹಾಕುವ ಮೊದಲು ನೆಲವನ್ನು ಅಗೆದು ಅದರ ಕೆಳಗೆ ಪೈಪು ಹಾಕಬೇಕು. ಪೈಪು ಹಾಕಬೇಕು ಅಂತ ನಮಗೆ ಇಷ್ಟವಾದಷ್ಟು ಅಡಿಯಲ್ಲಿ ಹಾಕಲು ಆಗಲ್ಲ. ಅದಕ್ಕೂ ಒಂದು ಸಮರ್ಪಕವಾದ ಮಾಪನವಿದೆ. ಈ ಪೈಪುಗಳನ್ನು ಹಾಕುವಾಗ ಒಂದು ಮೀಟರ್ ಮತ್ತು ಒಂದು ಅಡಿ ಆಳಕ್ಕೆ ಹಾಕಬೇಕು. ಇಷ್ಟೇ ಆಳ ಯಾಕೆಂದರೆ ಯಾವುದಾದರೂ ಘನ ವಾಹನಗಳು ರಸ್ತೆಯ ಮೇಲೆ ವೇಗವಾಗಿ ಸಂಚರಿಸಿದರೆ ಮತ್ತು ಕೆಳಗೆ ಪೈಪಿನಲ್ಲಿ ನೀರು ಪೂರೈಕೆಯಾಗುತ್ತಿದ್ದರೆ ಒಂದು ಮೀಟರ್ ಮತ್ತು ಅದರೊಂದಿಗೆ ಒಂದು ಅಡಿ ಆಳದ ಕೆಳಗೆ ಪೈಪು ಇಲ್ಲದಿದ್ದರೆ ಪೈಪು ಒಡೆದು ಹೋಗುವ ಎಲ್ಲಾ ಲಕ್ಷಣಗಳು ಇರುತ್ತವೆ. ಆಗ ಪೈಪು ಒಡೆದು ನೀರು ವೇಸ್ಟ್ ಆಗುವ ಬದಲು ಮತ್ತು ಅನಗತ್ಯವಾಗಿ ನಮ್ಮ ತೆರಿಗೆಯ ಹಣ ಪೋಲಾಗುವ ಬದಲು ಮೊದಲೇ ವೈಜ್ಞಾನಿಕವಾಗಿ ಇಷ್ಟೇ ಆಳದಲ್ಲಿ ಅಗೆದರೆ ಆಗ ಯಾವುದೇ ನಷ್ಟ ಆಗುವ ಸಾಧ್ಯತೆ ಇರುವುದಿಲ್ಲ. ಆದರೆ ಈಗ ಆಗುತ್ತಿರುವುದು ಏನು?
ಮುಖ್ಯ ಗುತ್ತಿಗೆದಾರರು ಯಾರೋ ಇರುತ್ತಾರೆ. ಅವರು ಯಾವುದೋ ಉಪ ಗುತ್ತಿಗೆದಾರರಿಗೆ ಕೆಲಸ ಕೊಟ್ಟಿರುತ್ತಾರೆ. ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಉಪ ಗುತ್ತಿಗೆದಾರರು ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಆದರೆ ಎಷ್ಟೋ ಕಡೆ ಅರ್ಧ ಮೀಟರ್ ಆಳ ಮಾತ್ರ ಅಗೆದು ಪೈಪು ಹಾಕುವ ಕೆಲಸ ನಡೆಯುತ್ತಿದೆ. ಇದು ನಿಜಕ್ಕೂ ಘೋರ ತಪ್ಪು. ಇದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ರಿಪೇರಿಯ ಹೆಸರಿನಲ್ಲಿ ಗೋಲ್ ಮಾಲ್ ನಡೆಯುತ್ತದೆ. ಇನ್ನು ಇವತ್ತು ನಾನು ಒಂದು ಫೋಟೋ ಈ ಅಂಕಣದೊಂದಿಗೆ ಪೋಸ್ಟ್ ಮಾಡುತ್ತಿದ್ದೇನೆ. ಅದರಲ್ಲಿ ನೀವು ಸ್ಪಷ್ಟವಾಗಿ ನೋಡಬಹುದು. ಮೊದಲೇ ಇರುವ ಒಂದು ಪೈಪಿನ ಮೇಲೆ ಇನ್ನೊಂದು ಜಲಸಿರಿಯ ಪೈಪ್ ಲೈನ್ ಹಾಕಲಾಗಿದೆ. ಮುಂದೆ ಯಾವತ್ತಾದರೂ ಜಲಸಿರಿಯ ಪೈಪು ಲೀಕ್ ಆದರೆ ಆಗ ಅದನ್ನು ರಿಪೇರಿ ಮಾಡುವುದು ಕಷ್ಟಸಾಧ್ಯವೆನಿಸುತ್ತದೆ. ಇದನ್ನೆಲ್ಲ ನೋಡಬೇಕಾದವರು ಯಾರು? ಯಾವುದೇ ಕೆಲಸ ಮಾಡಿದ ಗುತ್ತಿಗೆದಾರ ನೋಡುವುದಿಲ್ಲ. ಅವನು ತನ್ನ ಕೆಲಸ ಮುಗಿಸಿ ನಿರ್ದಿಷ್ಟ ಸಮಯದ ತನಕ ಏನು ಒಪ್ಪಂದವಾಗಿದೆ ಅಲ್ಲಿಯ ತನಕ ನೋಡಿ ನಂತರ ಪಾಲಿಕೆಗೆ ಹಸ್ತಾಂತರಿಸಿ ಹೊರಟು ಹೋಗಿರುತ್ತಾನೆ. ಅವನಿಗೆ ಏನೂ ಬಿದ್ದು ಹೋಗಿಲ್ಲ. ಆದರೆ ಕಾರ್ಪೋರೇಟರ್ ಆದವರು, ಮುಂದಿನ ಸಲ ನಿಲ್ಲುತ್ತಾರೋ, ಇಲ್ವೋ ಆದರೆ ಈಗ ಜವಾಬ್ದಾರಿ ತೆಗೆದುಕೊಂಡಿದ್ದಿರಲ್ಲ, ಆದ್ದರಿಂದ ಸಂಶಯವೇ ಇಲ್ಲ. ಆಯಾ ವಾರ್ಡಿನ ಕಾರ್ಪೋರೇಟರ್ ಗಳು ನೋಡಲೇಬೇಕು. ಅವರ ತಮ್ಮ ವಾರ್ಡಿನಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿ ಗೆದ್ದು ಬಂದಿದ್ದಾರೆ. ಶುದ್ಧ ಕುಡಿಯುವ ನೀರು ಅಂತಹ ಭರವಸೆಗಳಲ್ಲಿ ಒಂದು. ಇವರೇನು ತಮ್ಮ ನಿಧಿಯಿಂದ ತಮ್ಮ ವಾರ್ಡಿಗೆ ಹೊಸ ನೀರಿನ ಪೈಪು ಹಾಕಲು ಅಥವಾ ಜಲಸಿರಿ ಯೋಜನೆಯನ್ನು ತಮ್ಮ ನಿಧಿಯಲ್ಲಿ ಮಾಡಲು ಆಗುವುದಿಲ್ಲ. ಆದರೆ ಕೇಂದ್ರ, ರಾಜ್ಯ ಸರಕಾರಗಳು ನೀಡುವ ಇಂತಹ ಬೃಹತ್ ಯೋಜನೆಗಳು ತಮ್ಮ ವಾರ್ಡಿನಲ್ಲಿ ಸಮಪರ್ಕವಾಗಿ ಅನುಷ್ಟಾನಕ್ಕೆ ಬರುತ್ತೇವೆಯಾ ಎಂದು ನೋಡಬಹುದಲ್ಲವೇ? ಅವರು ಪ್ರಾಜೆಕ್ಟ್ ಮೇಲು ಉಸ್ತುವಾರಿ ನೋಡಲೇಬೇಕು. ಗುತ್ತಿಗೆ ಯಾರಿಗೆ ಸಿಕ್ಕಿದೆ. ಅವರು ಉಪಗುತ್ತಿಗೆ ಯಾರಿಗೆ ಕೊಟ್ಟಿದ್ದಾರೆ. ಅವರು ಅಗೆದಿರುವುದು ಎಲ್ಲಿ? ಎಷ್ಟು ಅಗೆದಿದ್ದಾರೆ? ಸರಿಯಾಗಿ ಆಳದಲ್ಲಿ ಅಗೆದಿದ್ದಾರಾ? ನಂತರ ಅದನ್ನು ಸರಿಯಾಗಿ ಮುಚ್ಚಿದ್ದಾರಾ ಎಂದು ಮನಪಾ ಸದಸ್ಯರು ತಮ್ಮ ವಾರ್ಡುಗಳಲ್ಲಿ ನೋಡಬೇಕು. ಯಾಕೆಂದರೆ ಈಗ ಪಾಲಿಕೆ ಸದಸ್ಯರಾಗಿರುವ ಬಹುತೇಕರಿಗೆ ಎಡಿಬಿ-1 ರಲ್ಲಿ ಆದ ಗೋಲ್ಮಾಲ್ ಗೊತ್ತೆ ಇಲ್ಲ. ಆಗ ಬಂದ ಕೋಟ್ಯಾಂತರ ರೂಪಾಯಿ ಹಣ ಎಲ್ಲಿಗೆ ಹೋಯಿತು? ಪಾಲಿಕೆಯ ವ್ಯಾಪ್ತಿಯಲ್ಲಿ ನೀರು ಎಲ್ಲಾ ವಾರ್ಡುಗಳಲ್ಲಿ 24*7 ಕೊಡಲು ಯಾಕೆ ಆಗಲಿಲ್ಲ ಎಂದು ಗೊತ್ತೆ ಇಲ್ಲ. ಅದೇ ಅಧ್ಯಯನಕ್ಕೆ ಯೋಗ್ಯವಾದ ವಿಷಯ. ಕಾರ್ಪೋರೇಟರ್ ಆದವರು ತಮ್ಮ ಹಿಂದಿನ ಮನಪಾ ಅವಧಿಗಳಲ್ಲಿ ಆಗಿರುವ ವಿಫಲ ಯೋಜನೆಗಳನ್ನು ಹಿರಿಯರಿಂದ ಕೇಳಿ ತಿಳಿದುಕೊಳ್ಳಬೇಕು. ಆಗ ಅವರಿಗೆ ತಾವು ಎಷ್ಟರಮಟ್ಟಿಗೆ ಹುಶಾರಾಗಿ ಇರಬೇಕು ಎನ್ನುವುದು ಗೊತ್ತಾಗುತ್ತದೆ. ಇದೆಲ್ಲ ಅವರವರ ಇಚ್ಚಾಶಕ್ತಿಗೆ ಬಿಟ್ಟಿದ್ದು ಎಂದೇ ಇಟ್ಟುಕೊಳ್ಳೋಣ. ಅವರು ನೋಡಲಿಲ್ಲದಿದ್ದರೆ ನಾವು ಜವಾಬ್ದಾರಿಯುತ ನಾಗರಿಕರಾಗಿ ನಾವು ನೋಡಬೇಕು. ಪಾಲಿಕೆಯ ಸದಸ್ಯರು ನೋಡಲಿ ಎಂದು ಬಿಡಬೇಡಿ. ವಾರ್ಡು ಎಲ್ಲರದ್ದು. ಎಲ್ಲಿಯಾದರೂ ನೀರಿನ ಪೈಪು ಒಂದು ಮೀಟರ್ ಮತ್ತು ಒಂದು ಅಡಿ ಆಳದಲ್ಲಿ ಇಲ್ಲದಿದ್ದರೆ ಪಾಲಿಕೆಯ ಸದಸ್ಯರ ಗಮನಕ್ಕೆ ತನ್ನಿ. ಆಗಲಿಲ್ಲವೇ ಮೇಯರ್, ಆಯುಕ್ತರ ಗಮನಕ್ಕೆ ತನ್ನಿ. ಎಲ್ಲಿಯೂ ಆಗಲಿಲ್ಲದಿದ್ದರೆ ನನ್ನ ಗಮನಕ್ಕೆ ತನ್ನಿ. ಒಟ್ಟಾಗಿ ಕೆಲಸ ಮಾಡೋಣ. ಎಡಿಬಿ-2 ಯೋಜನೆ ಹಿಂದಿನ ಯೋಜನೆಯಂತೆ ಆಗಲು ಬಿಡಬಾರದು!
- Advertisement -
Leave A Reply