ಮಿಲ್ಕ್ ಬೂತ್ ಗಳು ಅರ್ಹ ವಿಕಲಚೇತನರ ಕೈಲಿ ಇದೆಯಾ?
ಬೀದಿಬದಿ ವ್ಯಾಪಾರಿಗಳನ್ನು ಎಬ್ಬಿಸಲು ಅಷ್ಟೊಂದು ಉತ್ಸಾಹ ತೋರಿಸುತ್ತಿರುವ ಮಂಗಳೂರು ನಗರ ಪಾಲಿಕೆಯವರೇ, ಅದೇ ಹುಮ್ಮಸ್ಸನ್ನು ನೀವು ಇನ್ನೊಂದರಲ್ಲಿ ತೋರಿಸಿದರೆ ನಿಮ್ಮನ್ನು ಮೆಚ್ಚಬಹುದಿತ್ತು. ಆದರೆ ಆ ವಿಷಯದಲ್ಲಿ ನೀವು ಕಣ್ಣು ಮುಚ್ಚಿ ಕುಳಿತಿರುವುದರಿಂದ ಪಾಲಿಕೆಯ ಆದಾಯ ಸೋರಿ ಹೋಗುತ್ತಿದೆ. ಅಷ್ಟೇ ಅಲ್ಲದೆ, ಪಾಲಿಕೆಯ ಸೌಲಭ್ಯವನ್ನು ಯಾರ್ಯಾರೋ ತಿಂದು ಅವರು ದುಂಡಗಾಗುತ್ತಿದ್ದಾರೆ. ನೈಜ ಫಲಾನುಭವಿಗಳು ಏನೂ ಸಿಗದೇ ಆಕಾಶ ನೋಡುವಂತಾಗಿದೆ. ಅದೇನಿದು? ಈಗ ವಿವರಿಸುತ್ತೇನೆ.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 440 ಹಾಲಿನ ಬೂತ್ ಮತ್ತು ಟೆಲಿಫೋನ್ ಬೂತ್ ಗಳಿಗೆ ಅನುಮತಿ ಅಂದರೆ ಲೈಸೆನ್ಸ್ ನೀಡಲಾಗಿದೆ. ಅದು ಯಾರಿಗೆ ಅಂದರೆ ಈ ವಿಕಲಚೇತನ ಬಂಧುಗಳಿಗೆ ಸ್ವ ಉದ್ಯೋಗ ಮಾಡಿ ಸ್ವಾವಲಂಬಿಯಾಗಿ ಬದುಕಲಿ ಎನ್ನುವ ಕಾರಣದಿಂದ ಎಷ್ಟೋ ವರ್ಷಗಳ ಹಿಂದೆ ಈ ಸಂಪ್ರದಾಯ ಶುರುವಾಗಿತ್ತು. ನಿಜಕ್ಕೂ ಒಳ್ಳೆಯ ಯೋಜನೆ. ಆದರೆ ಕಳೆದ ಹತ್ತು ವರ್ಷಗಳಿಂದ ಯಾವ ಪಕ್ಷ ಪಾಲಿಕೆಯಲ್ಲಿ ಆಡಳಿತದಲ್ಲಿ ಇರುತ್ತೋ ಆ ಪಕ್ಷದ ಬೆಂಬಲಿಗರಿಗೆ ಈ ಲೈಸೆನ್ಸ್ ಕೊಡುವ ಸಿಸ್ಟಮ್ ಶುರುವಾಗಿದೆ, ನಂತರ ಅದು ಇನ್ನಷ್ಟು ಬದಲಾಗಿ ಎಲ್ಲಿಗೆ ಬಂದು ಮುಟ್ಟಿದೆ ಎಂದರೆ ಯಾರಿಗೋ ಕೊಟ್ಟಿರುವ ಲೈಸೆನ್ಸ್ ಅವರು ಇನ್ಯಾರಿಗೋ ಲಕ್ಷಗಟ್ಟಲೆ ಹಣಕ್ಕೆ ಮಾರಿ ಅವರು ಇನ್ಯಾರಿಗೋ ನಡೆಸಲು ಕೊಟ್ಟು ಇದರ ಮೂಲ ಉದ್ದೇಶವೇ ಹಾಳಾಗಿ ಹೋಗಿದೆ. ಈಗ ಯಾರದ್ದೋ ತಂದೆಗೆ ಲೈಸೆನ್ಸ್ ಕೊಟ್ಟರೆ ಈಗ ಅವರು ನಿಧನರಾಗಿದ್ದರೆ ಈಗ ಅವರ ಮಗ ಚಲಾಯಿಸುತ್ತಿದ್ದಾನೆ. ಕೆಲವು ಕಡೆ ತಂದೆಯ ನಂತರ ಮಕ್ಕಳು ಅದನ್ನು ಯಾರಿಗೋ ಮಾರಿ ಅವರು ನಡೆಸುತ್ತಿದ್ದಾರೆ. ಕೆಲವು ಕಡೆ ವಿಕಲಚೇತನರ ಹೆಸರಿನಲ್ಲಿ ಇನ್ಯಾರೋ ನಡೆಸುತ್ತಿದ್ದಾರೆ. ಇನ್ನು ಕೆಲವು ಕಡೆ ವಿಕಲಚೇತನರೇ ಬೇರೆಯವರಿಗೆ ಮಾರಿದ್ದಾರೆ. ಇನ್ನು ಕೆಲವು ಕಡೆ ಐದು ವರ್ಷಗಳಿಂದ ಕೆಲವರು ಪಾಲಿಕೆಗೆ ಬಾಡಿಗೆಯನ್ನೇ ಕಟ್ಟದೆ ಆರಾಮವಾಗಿ ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ಇದನ್ನು ಅನುಭವಿಸುತ್ತಿದ್ದಾರೆ. ಒಟ್ಟಿನಲ್ಲಿ ಏನಾಗುತ್ತಿದೆ ಎಂದು ಪಾಲಿಕೆಗೂ ಗೊತ್ತಿಲ್ಲ.
ಈಗ ವಿಕಲಚೇತನರಿಗೆ ಎಂದು ಇರುವ ಯೋಜನೆಯನ್ನು ಯಾರೋ ಬಳಸುತ್ತಿದ್ದರೆ ಅದು ಪಾಲಿಕೆಗೆ ಹೇಗೆ ಗೊತ್ತಾಗಬೇಕು? ಪಾಲಿಕೆಯವರು ಹೋಗಿ ನಿತ್ಯ ನೋಡಲು ಆಗುತ್ತಾ ಎಂದು ನೀವು ಕೇಳಬಹುದು. ನೀವೆ ಕಾರ್ಡು ಕೊಟ್ಟು ಬೀದಿಬದಿ ವ್ಯಾಪಾರಿಗಳು ಎಂದು ಅಧಿಕೃತವಾಗಿ ಗುರುತಿಸಿದವರನ್ನು ಎಬ್ಬಿಸಿ, ಓಡಿಸಲು ಆಗುತ್ತದೆ ಎಂದಾದರೆ ಈ ಅಂಗಡಿಗಳ ಮೇಲೆ ರೇಡ್ ಮಾಡಿ ನೋಡಲು ಆಗಲ್ವಾ? ಅದಕ್ಕೆ ಅಲ್ಲಲ್ಲಿ ನಿಮ್ಮ ಅಧಿಕಾರಿಗಳು, ಸಿಬ್ಬಂದಿಗಳು ಇಲ್ವಾ? ಅಷ್ಟಕ್ಕೂ ಏನು ಮಾಡಬೇಕು? ಸಿಂಪಲ್, ಎಲ್ಲಾ ಅಂಗಡಿಯವರಿಗೆ ನೋಟಿಸು ನೀಡಿ ದಾಖಲೆಗಳನ್ನು ಹಿಡಿದು ಪಾಲಿಕೆಗೆ ಬರಲು ಹೇಳಿ. ನಿಮ್ಮಲ್ಲಿ ಯಾವ ಮಿಲ್ಕ್ ಬೂತ್ ಅಥವಾ ಟೆಲಿಫೋನ್ ಬೂತ್ ಯಾರ ಹೆಸರಲ್ಲಿ ಕೊಡಲಾಗಿದೆ ಎನ್ನುವ ಪಟ್ಟಿ ಇರುತ್ತದೆ. ಬಂದವರು ಯಾವ ದಾಖಲೆ ತಂದಿದ್ದಾರೆ ಎಂದು ತಾಳೆ ಹಾಕಿ ನೋಡಿ. ಕೆಲವು ವಿಕಲಚೇತನರು ಬೇರೆಯವರಿಗೆ ಕೊಟ್ಟಿರಬಹುದು. ಅದನ್ನು ಮಾನವೀಯತೆಯ ದೃಷ್ಟಿಯಲ್ಲಿಯೂ ನೋಡಿ. ಕೆಲವರು ಸ್ವಾರ್ಥ, ದುರಾಸೆಗೆ ಲೈಸೆನ್ಸ್ ಮಾರಿರಬಹುದು. ಅವರ ಲೈಸೆನ್ಸ್ ರದ್ದು ಮಾಡಿ ನೈಜ ಫಲಾನುಭವಿಗಳಿಗೆ ನೀಡಿ. ಪಾಲಿಕೆ ವ್ಯಾಪ್ತಿಯಲ್ಲಿ ನೈಜ ವಿಕಲಚೇತನರಿಗೆ ಕೊರತೆ ಇಲ್ಲ. ಅವರನ್ನು ಗುರುತಿಸಿ ಶಾಸಕರ ಅಥವಾ ಪಾಲಿಕೆ ಸದಸ್ಯರ ಕೈಯಿಂದ ಅಂಗಡಿ ಚಲಾಯಿಸಲು ಅನುಮತಿ ಪತ್ರ ನೀಡಿ. ಸ್ವಲ್ಪ ಒಳ್ಳೆಯ ಹೆಸರಾದರೂ ಬರುತ್ತದೆ. ಅದು ಬಿಟ್ಟು ಕಣ್ಣು ಮುಚ್ಚಿ ಕುಳಿತರೆ ಯಾರ್ಯಾರೋ ಹಣ ಜೇಬಿಗೆ ಇಳಿಸುತ್ತಾರೆ. ನೈಜ ವಿಕಲಚೇತನರು ಕಣ್ಣೀರು ಸುರಿಸುತ್ತಲೇ ಇರುತ್ತಾರೆ. ಅಷ್ಟಕ್ಕೂ ಈಗ ಮಿಲ್ಕ್ ಬೂತ್ ಅಥವಾ ಟೆಲಿಫೋನ್ ಬೂತ್ ಎನ್ನುವುದು ಕೇವಲ ಹಾಲು, ಮೊಸರು ಮಾರುವ ಅಂಗಡಿಗಳಾಗಿ ಉಳಿದಿಲ್ಲ. ಇನ್ನು ಮೊಬೈಲ್ ದುನಿಯಾ ಆರಂಭವಾದ ನಂತರ ಯಾರು ತಾನೆ ಕಾಯಿನ್ ಬೂತ್ ಅಥವಾ ಲ್ಯಾಂಡ್ ಲೈನ್ ಬಳಸುತ್ತಾರೆ. ಅದು ಕೂಡ ರಸ್ತೆಯ ಕೊನೆಯಲ್ಲಿರುವ ಅಂಗಡಿಯನ್ನು ಹುಡುಕಿ ಹೋಗಿ ಫೋನ್ ಮಾಡುವಷ್ಟು ನಮ್ಮ ಕಾಲ ಹಿಂದುಳಿದಿಲ್ಲ. ಆದ್ದರಿಂದ ಪ್ರತಿ ಮಿಲ್ಕ್ ಬೂತ್ ಮತ್ತು ಟೆಲಿಫೋನ್ ಬೂತ್ ಎಲ್ಲಾ ಸಿಗುವ ಅಂಗಡಿಗಳಾಗಿ ಮಾರ್ಪಟ್ಟಿವೆ. ಅಲ್ಲಿ ಮೊಟ್ಟೆಯಿಂದ ಹಿಡಿದು ಚಿಪ್ಸ್ ತನಕ ಎಲ್ಲವೂ ಸಿಗುತ್ತದೆ. ಇನ್ನು ವರ್ಷಗಳಿಂದ ಬಾಡಿಗೆ ಬಾಕಿ ಇರುವವರಿಂದ ಹಣ ವಸೂಲಿ ಮಾಡಿ.
ಇನ್ನು ಪಾಲಿಕೆ ಮೊಬೈಲ್ ಕ್ಯಾಂಟೀನ್ ಎಂದು ಹಲವರಿಗೆ ಲೈಸೆನ್ಸ್ ನೀಡಿದೆ.
ಮೊಬೈಲ್ ಕ್ಯಾಂಟೀನ್ ಎಂದರೆ ಒಂದೇ ಕಡೆ ಶಾಶ್ವತವಾಗಿ ಝಂಡಾ ಊರಿ ಕುಳಿತುಕೊಳ್ಳುವುದಲ್ಲ. ಮೊಬೈಲ್ ಶಬ್ದದ ಅರ್ಥವೇ ಚಲಿಸುವುದು. ಬೆಳಿಗ್ಗೆ ಒಂದು ಮೊಬೈಲ್ ಕ್ಯಾಂಟಿನ್ ರಥಬೀದಿಯಲ್ಲಿ ಇದ್ದರೆ ಸಂಜೆ ಅದು ಮಣ್ಣಗುಡ್ಡೆಯಲ್ಲಿ ಇರಬೇಕು. ಅದು ಕೂಡ ಪಾಲಿಕೆಯಲ್ಲಿ ಅವರು ಒಪ್ಪಿಕೊಂಡ ರೂಟಿನಲ್ಲಿ ಸಂಚರಿಸುತ್ತಾ ಹೋಗಬೇಕು. ಆದರೆ ಯಾವ ಮೊಬೈಲ್ ಕ್ಯಾಂಟೀನ್ ನವರು ಹೋಗುತ್ತಾರೆ. ಎಲ್ಲಾ ಮೊಬೈಲ್ ಕ್ಯಾಂಟೀನ್ ನವರ ಗಾಡಿಗಳಿಗೆ ಹೆಸರಿಗೆ ಮಾತ್ರ ಚಕ್ರಗಳಿವೆ. ಆದರೆ ಒಮ್ಮೆ ನಿಲ್ಲಿಸಿದ ಕಡೆಯಿಂದ ಶಾಶ್ವತವಾಗಿ ಅವರು ಅಲುಗಾಡುವುದಿಲ್ಲ. ಇದೆಲ್ಲವನ್ನು ನೋಡಿ ಅವರಿಗೆ ಪಾಠ ಹೇಳಿ, ದಂಡ ಹಾಕಿ, ಬಾಡಿಗೆ ವಸೂಲಿ ಮಾಡಿ, ಅರ್ಹರಿಗೆ ನೀಡಿ ಮಾರ್ಗದರ್ಶಕರಾಗಬೇಕಿದ್ದ ಪಾಲಿಕೆ ಏನು ಮಾಡುತ್ತಿದೆ. ಇವರೇ ಕೈಲಾಗದವರಂತೆ ಬೀದಿಬದಿ ವ್ಯಾಪಾರಿಗಳಿಗೆ ಶಾಶ್ವತ ವ್ಯವಸ್ಥೆ ಮಾಡದೇ ಅವರ ಮೇಲೆ ಹುಣ್ಣಿಮೆಗೆ ಒಮ್ಮೆ, ಅಮಾವಾಸ್ಯೆಗೆ ಒಮ್ಮೆ ರೇಡ್ ಮಾಡಿ ಸುದ್ದಿಯಾಗುತ್ತಿದ್ದಾರೆ. ತುಂಬಾ ಗೊತ್ತಿದ್ದರೆ ಸಾಕಾಗುವುದಿಲ್ಲ, ಅದನ್ನು ಕಾರ್ಯದಲ್ಲಿ ತೋರಿಸಬೇಕು. ಇಲ್ಲದಿದ್ದರೆ ಐದು ಸಲ ಗೆಲ್ಲಲಿ, ಹತ್ತು ಸಲ ಗೆಲ್ಲಲಿ. ಅದು ಒಂದೇ!!
Leave A Reply