ಎಡಮನಸ್ಸಿನ ಅಧಿಕಾರಿಗಳು ಬಿಜೆಪಿ ಸರಕಾರ ಇಳಿಸಲು ತಮ್ಮದೇ ಕೊಡುಗೆ ನೀಡಲಿದ್ದಾರೆ!
ಎಲ್ಲಾ ಕಡೆ ದೇವಾಲಯಗಳನ್ನು ಕೆಡವುಹ ವಿಚಾರಗಳೇ ಸುದ್ದಿಯಾಗುತ್ತಿದೆ. ಮೀಡಿಯಾಗಳು ಹೇಗೆ ಇದನ್ನು ಬಿಂಬಿಸುತ್ತಿವೆ ಎಂದರೆ ಕರ್ನಾಟಕದ ಪ್ರತಿಯೊಂದು ದೇವಸ್ಥಾನಗಳನ್ನು ಕರ್ನಾಟಕ ರಾಜ್ಯ ಸರಕಾರ ಹುಡುಕಿ ಹುಡುಕಿ ಕೆಡವುತ್ತಿದೆ ಎನ್ನುವಂತೆ ತೋರಿಸಲಾಗುತ್ತಿದೆ. ಒಂದು ದೇವಸ್ಥಾನ ಕೆಡಹುವುದು ಕೂಡ ತಪ್ಪು. ಯಾಕೆಂದರೆ ಪ್ರತಿ ದೇವಸ್ಥಾನದ ಹಿಂದೆ ಅಸಂಖ್ಯಾತ ಭಕ್ತರ ಶ್ರದ್ಧೆ ಇರುತ್ತದೆ, ಭಕ್ತಿ ಇರುತ್ತದೆ. ಆದರೆ ಕರ್ನಾಟಕದಲ್ಲಿ ಕೆಡವಿರುವ ಒಂದು ದೇವಸ್ಥಾನದ ವಾಸ್ತವಿಕತೆಯನ್ನು ನೋಡದೇ ಇಡೀ ಹಿಂದೂ ಧರ್ಮ ಅಪಾಯದಲ್ಲಿದೆ ಎನ್ನುವ ರೀತಿಯಲ್ಲಿ ಮಾತನಾಡುವುದು ಕೂಡ ತಪ್ಪು. ಮೊದಲನೇಯದಾಗಿ ಈ ವಿಷಯದಲ್ಲಿ ಎಲ್ಲರೂ ಸುಪ್ರೀಂಕೋರ್ಟ್ ಅನ್ನು ಮಧ್ಯದಲ್ಲಿ ಎಳೆದು ತರುತ್ತಿದ್ದಾರೆ. ಅಷ್ಟಕ್ಕೂ ಸುಪ್ರೀಂಕೋರ್ಟ್ ಈ ವಿಷಯದಲ್ಲಿ ಹೇಳಿರುವುದೇನು ಎನ್ನುವುದನ್ನು ನೋಡೋಣ.
2009 ರ ನಂತರ ಸರಕಾರಿ ಸ್ಥಳದಲ್ಲಿ ಅಂದರೆ ಪಾರ್ಕ್, ರಸ್ತೆ ಇತ್ಯಾದಿ ಕಡೆ ದೇವಸ್ಥಾನಗಳನ್ನು ಕಟ್ಟುವುದು ನಿಷಿದ್ಧ. ಅದಕ್ಕಿಂತ ಹಿಂದೆ ಕಟ್ಟಿಸಿದ ದೇವಾಲಯಗಳು ಇದ್ದಲ್ಲಿ ಅಂತಹುಗಳನ್ನು ಏನು ಮಾಡಬೇಕು ಎನ್ನುವುದರ ಕುರಿತು ಒಂದು ಕಾನೂನನ್ನು ರೂಪಿಸಬೇಕು ಎಂದು ಸರಕಾರಕ್ಕೆ ಸೂಚನೆ ನೀಡಿದೆ. ಅಂದರೆ ಸರಕಾರ ಅಂತಹ ದೇವಾಲಯಗಳನ್ನು ಕೆಡವಲೂಬಹುದು, ಒಂದೆಡೆಯಿಂದ ಬೇರೆಡೆ ಸ್ಥಳಾಂತರ ಮಾಡಲೂಬಹುದು ಅಥವಾ ಅದೇ ಜಾಗದಲ್ಲಿ ಅದನ್ನು ಅಧಿಕೃತಗೊಳಿಸಿ ಕಾನೂನಿನ ಮಾನ್ಯತೆಯನ್ನು ನೀಡಬಹುದು. ಈಗ ಇರುವುದು ಭಾರತೀಯ ಜನತಾ ಪಾರ್ಟಿಯ ಸರಕಾರ. ಅದು ಸರಕಾರಿ ಜಾಗಗಳಲ್ಲಿ 2009 ರ ನಂತರ ಅಥವಾ ಮೊದಲು ಯಾವುದೇ ದೇವಾಲಯವನ್ನು ಒಡೆಯಲು ಹೋಗುವ ಚಾನ್ಸೇ ಇಲ್ಲ. ಯಾಕೆಂದರೆ ಹಾಗೇ ನೋಡಿದರೆ ಅಂತಹ ದೇವಾಲಯಗಳು ರಾಜ್ಯದಲ್ಲಿ ಹಲವು ಇವೆ. ಈಗ ಒಂದೆರಡು ಮುಟ್ಟಲು ಹೋಗಿದ್ದಕ್ಕೆ ಬಸ್ಸು ಬೊಮ್ಮಾಯಿ ಸರಕಾರ ಉರಿಯುವ ಸ್ಟೌವ್ ಮೇಲೆ ಕುಳಿತ ಹಾಗೆ ಆಗಿದೆ. ಹಾಗಿರುವಾಗ ಪಟ್ಟಿಯನ್ನು ಅನುಷ್ಟಾನ ಮಾಡುತ್ತಾ ಹೋದರೆ ಮುಂದಿನ ಬಾರಿ ಅಧಿಕಾರ ಬಿಡಿ, ಅಧಿಕೃತ ವಿಪಕ್ಷ ಆಗುವಷ್ಟು ಸೀಟ್ ಕೂಡ ಬರಲಿಕ್ಕಿಲ್ಲ. ಇನ್ನು ಒಂದೆಡೆಯಿಂದ ಬೇರೆಡೆಗೆ ಸ್ಥಳಾಂತರ ಮಾಡುವುದು ಎಂದರೆ ಅನಿವಾರ್ಯ ಆದರೆ ಮಾಡಬಹುದು. ಮಂಗಳೂರಿನ ಕುಳೂರಿನ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಾಡಿದ ಹಾಗೆ. ಹಾಗಂತ ಎಲ್ಲ ದೇವಸ್ಥಾನಗಳನ್ನು ಹಾಗೆ ಮಾಡುವುದು ಸುಲಭವೂ ಅಲ್ಲ, ಅದು ಕಾರ್ಯಸಾಧುವೂ ಅಲ್ಲ. ಆದ್ದರಿಂದ ಬೇಸ್ಟ್ ಎಂದರೆ ಅಂತಹ ಎಲ್ಲಾ ದೇವಸ್ಥಾನಗಳನ್ನು ಕಾನೂನಿನ ಅಡಿಯಲ್ಲಿ ಅಧಿಕೃತ ಮಾಡಿಬಿಡುವುದು.
ಈಗ ನಮ್ಮ ರಾಜ್ಯದಲ್ಲಿ ಇರುವ ಎಲ್ಲಾ ಅಧಿಕಾರಿಗಳು ರಾಜ್ಯ ಸರಕಾರದ ಮನಸ್ಥಿತಿಯನ್ನೇ ಹೊಂದಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಎಡಪಕ್ಷಗಳ ಮನಸ್ಥಿತಿಯನ್ನು ಹೊಂದಿದವರಾಗಿರುತ್ತಾರೆ. ಕೆಲವರು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಯಾವುದೋ ಸಚಿವರ ವಶೀಲಿಬಾಜಿಯಿಂದ ಆಯಕಟ್ಟಿನ ಸ್ಥಾನವನ್ನು ಪಡೆದಿರುತ್ತಾರೆ. ಇನ್ನು ಕೆಲವರು ಜಾತ್ಯಾತೀತರಾಗಿರುತ್ತಾರೆ. ಇನ್ನು ಕೆಲವರು ಕಪಟ ಹಿಂದೂತ್ವವಾದಿಗಳು ಕೂಡ ಇರಬಹುದು. ಆದ್ದರಿಂದ ಒಂದು ದೇವಸ್ಥಾನವನ್ನು ಆ ಜಿಲ್ಲೆಯ ಜಿಲ್ಲಾಧಿಕಾರಿ ತಹಶೀಲ್ದಾರರಿಗೆ ಹೇಳಿ ಕೆಡವಿಬಿಟ್ಟರು ಎಂದರೆ ಅದರ ಅರ್ಥ ಯಡ್ಡಿಯೋ, ಬಸ್ಸು ಬೊಮ್ಮಾಯಿಯೋ ಬೆಳಿಗ್ಗೆ ಎದ್ದವರೇ ಇವತ್ತು ಯಾವ ದೇವಸ್ಥಾನ ಕೆಡವಿದರೆ ಒಳ್ಳೆಯದು ಎಂದು ಸೂಚನೆ ಕೊಟ್ಟರು ಎಂದು ಅರ್ಥ ಅಲ್ಲ. ಇನ್ನು ಈಗ ಕೆಡವಿರುವ ನಂಜನಗೂಡಿನ ಉಚ್ಚಂಗಿ ದೇವಸ್ಥಾನ ರಸ್ತೆಯಿಂದ ನಲ್ವತ್ತು ಅಡಿ ದೂರ ಇತ್ತು. ಅದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುವ ಸಾಧ್ಯತೆ ಇರಲಿಲ್ಲ. ಇನ್ನು ಅದರಲ್ಲಿ ಪ್ರಾಣ ಪ್ರತಿಷ್ಟಾಪನೆ ಮಾಡಿದ ದೇವರ ಮೂರ್ತಿಯನ್ನು ಪೂಜೆ ಮಾಡಲಾಗುತ್ತಿತ್ತು. ಹಗಲು ಹೊತ್ತಿನಲ್ಲಿ ಕೆಡವಲು ಮುಂದಾದರೆ ಭಕ್ತರ, ಸ್ಥಳೀಯರ ವಿರೋಧ ಕಟ್ಟಬೇಕಾಗಬಹುದು ಎಂದು ಹೊತ್ತಲ್ಲದ ಹೊತ್ತಲ್ಲಿ ದೇವಸ್ಥಾನವನ್ನು ಕೆಡವಿಬಿಟ್ಟಿದ್ದಾರೆ. ಇನ್ನು ಪ್ರಾಣ ಪ್ರತಿಷ್ಟಾಪನೆ ಮಾಡಿದ ದೇವರ ಮೂರ್ತಿಯನ್ನು ಅಲ್ಲಿಂದ ತೆಗೆಯಲು ಅವಕಾಶವನ್ನಾದರೂ ಮಾಡಿಕೊಡಬಹುದಾಗಿತ್ತು. ಬೇರೆಡೆಗೆ ಸ್ಥಳಾಂತರ ಮಾಡಿ ಅದನ್ನು ಇಟ್ಟಿದ್ದರೆ ಭಕ್ತರ ನಂಬಿಕೆಗೆ ಒಂದಿಷ್ಟು ನ್ಯಾಯವಾದರೂ ಸಿಗುತ್ತಿತ್ತು. ಇದನ್ನೇನೂ ಮಾಡದೇ ಕೆಡವಿದರ ಬಗ್ಗೆ ಜನರಿಗೆ ಆಕ್ರೋಶ ಬಂದದ್ದು ಸಹಜ. ಈಗ ಆ ಕೆಡವಿದ ದೇವಾಲಯಗಳನ್ನು ಮತ್ತೇ ಕಟ್ಟಿಸಿಕೊಡುವುದಾಗಿ ಬಿಜೆಪಿ ಸರಕಾರ ಹೇಳಿದೆ. ಮುಂದೆ ಯಾವುದೇ ದೇವಸ್ಥಾನವನ್ನು ಕೆಡವುಹ ಮೊದಲು ಸಾಕಷ್ಟು ಪರಿಶೀಲನೆ ನಡೆಸಲಾಗುವುದು ಎಂದು ಬಸ್ಸು ಹೇಳಿದ್ದಾರೆ.
ಇಲ್ಲಿ ಜನರು ಹೇಳುತ್ತಿರುವುದು ಏನೆಂದರೆ ಆ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಿ ಎನ್ನುವುದು. ಇದು ಆಗಲೇಬೇಕು. ಕೆಡವಲು ಅಷ್ಟು ಗಡಿಬಿಡಿ ತೋರಿಸಿದ ಕಾರಣ ತನಿಖೆ ಆಗಲೇಬೇಕು. 2011 ರಲ್ಲಿ ಆಗಿನ ತಹಶೀಲ್ದಾರ್ ಆ ದೇವಾಲಯವನ್ನು ಕಾನೂನಾತ್ಮಕವಾಗಿ ಮಾಡಲು ಅವಕಾಶ ಇದೆ ಎಂದು ಆಗಿನ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರೂ ಆ ಜಿಲ್ಲಾಧಿಕಾರಿ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎನ್ನುವ ಮಾತಿದೆ. ಆದ್ದರಿಂದ ಅಂತಹ ಅಧಿಕಾರಿಗಳ ಮಾರ್ಷಲ್ ನಡೆಯಬೇಕು. ಹಿಂದೆ ನಮ್ಮಲ್ಲಿ ಕೂಡ ಒಬ್ಬರು ಜಿಲ್ಲಾಧಿಕಾರಿ ಇದ್ರು. ಒಂದು ದಿನ ಸಡನ್ನಾಗಿ ಐಎಎಸ್ ಹುದ್ದೆಗೆ ರಾಜೀನಾಮೆ ಕೊಟ್ಟು ಅವರು ಎಡಪಕ್ಷಗಳ ಸಭೆಗಳಲ್ಲಿ, ವೇದಿಕೆಗಳಲ್ಲಿ ಕಾಣಿಸಿಕೊಂಡರು. ನಂತರ ಗೊತ್ತಾಯಿತು, ಅವರಿಗೆ ಮೋದಿ ಸರಕಾರ ಬಂದದ್ದು ಜೀರ್ಣಿಸಿಕೊಳ್ಳಲು ಆಗಿರಲಿಲ್ಲ. ಅಂತವರ ಸಂಖ್ಯೆ ರಾಜ್ಯದಲ್ಲಿ ತುಂಬಾ ಇದೆ. ಅವರು ಬಿಜೆಪಿ ಸರಕಾರಕ್ಕೆ ಮುಜುಗರ ತರಲು ಕಾಯುತ್ತಾ ಇರುತ್ತಾರೆ. ಸರಕಾರ ಮಾತ್ರ ಅಂತವರ ವಿರುದ್ಧ ಏನೂ ಮಾಡದಿದ್ದರೆ ಕಾದಿದೆ ಡೇಂಜರ್!
Leave A Reply