ಶಂಖದಿಂದ ಬಂದ್ರೆ ತೀರ್ಥ, ಮೋಹನ್ ಭಾಗವತ್ ಹೇಳಿದ ಮೇಲೆ ಆದೇಶ ಪಾಲನೆಯಾಗಲೇಬೇಕು!!
ಹಿಂದೂ ದೇವಾಲಯಗಳ ನಿರ್ವಹಣೆಯನ್ನು ಹಿಂದೂ ಭಕ್ತರಿಗೆ ವಹಿಸಬೇಕು ಎನ್ನುವ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅದ್ಭುತ ಸಂದೇಶವನ್ನು ರಾಷ್ಟ್ರಕ್ಕೆ ನೀಡಿದ್ದಾರೆ. ತಮಿಳುನಾಡು ಚುನಾವಣೆಯ ಸಂದರ್ಭದಲ್ಲಿಯೂ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಒಂದು ಮಾತನ್ನು ಹೇಳಿದ್ದರು. “ಒಂದು ವೇಳೆ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದೂ ದೇವಾಲಯಗಳನ್ನು ಹಿಂದೂಗಳಿಗೆ ಒಪ್ಪಿಸುತ್ತೇವೆ” ಅಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಸರಕಾರ ಬರಲಿಲ್ಲ. ಬಿಜೆಪಿಯ ಘೋಷಣೆ ಅನುಷ್ಟಾನಕ್ಕೆ ಬರುವ ಸಾಧ್ಯತೆ ಇರಲಿಲ್ಲ. ಆದರೆ ಆರ್ಎಸ್ಎಸ್ ಮುಖ್ಯಸ್ಥರು ಹೇಳಿದ ಮೇಲೆ ಮುಗಿಯಿತು. ಅಲ್ಲಿ ದೂಸರಾ ಮಾತೇ ಇಲ್ಲ. ಈಗ ದೇವಸ್ಥಾನಗಳನ್ನು ಹಿಂದೂಗಳಿಗೆ ಒಪ್ಪಿಸುವ ಕಾರ್ಯ ಮಾಡಲೇಬೇಕು. ಅದನ್ನು ಮುಜುರಾಯಿ ಅಥವಾ ಈಗ ಧಾರ್ಮಿಕ ದತ್ತಿ ಇಲಾಖೆ ಎಂದು ಕರೆಯಲ್ಪಡುವ ಇಲಾಖೆಯ ಸಚಿವರು ಮಾಡಿಬಿಡಲಿ.
ಅಷ್ಟಕ್ಕೂ ಸಜ್ಜನ ಸಚಿವರಾಗಿರುವ, ಪ್ರಾಮಾಣಿಕ, ನಿಷ್ಕಲಂಕ ವ್ಯಕ್ತಿಯಾಗಿರುವ ಕೋಟಾ ಶ್ರೀನಿವಾಸ ಪೂಜಾರಿಯವರು ಇದನ್ನು ಅನುಷ್ಟಾನಕ್ಕೆ ತರಲು ಮುಂದಾದರೆ ಒಳ್ಳೆಯದು. ಅವರ ಮೇಲೆ ವಿಶ್ವಾಸ ಇದೆ. ಈಗ ಏನಾಗುತ್ತಿದೆ ಎಂದರೆ ಉತ್ತಮ ಆದಾಯ ಬರುವ ದೇವಾಲಯಗಳನ್ನು ಸರಕಾರ ವಶಪಡಿಸಿಕೊಂಡು ಅದನ್ನು ನಿಯಂತ್ರಿಸುತ್ತದೆ. ಇಲ್ಲಿ ದೇವಸ್ಥಾನಗಳಲ್ಲಿ ಏನಾದರೂ ಚಿಕ್ಕ ಅಭಿವೃದ್ಧಿಯಾಗಬೇಕಾದರೂ ಸರಕಾರದ ಅನುಮತಿ ಅಗತ್ಯ. ಅದು ಕೂಡ ತಕ್ಷಣಕ್ಕೆ ಆಗುವುದಿಲ್ಲ. ವರ್ಷಗಟ್ಟಲೆ ಕಾಯಬೇಕು. ಈಗ ನೋಡಿ, ಎಷ್ಟೋ ಮುಜುರಾಯಿ ದೇವಸ್ಥಾನಗಳು ಹೇಗಿವೆ. ಸರಿಯಾದ ವ್ಯವಸ್ಥೆ ಇಲ್ಲ. ಅಲ್ಲಿನ ಹಣ ಮಾತ್ರ ಸರಕಾರಕ್ಕೆ ಬೇಕು. ಅದರ ಬದಲು ಪ್ರತಿ ದೇವಸ್ಥಾನಗಳನ್ನು ನೈಜ ಭಕ್ತರ, ದೇವಸ್ಥಾನದ ಅಭಿವೃದ್ಧಿಯ ಕಳಕಳಿ ಉಳ್ಳವರ, ದೇವಸ್ಥಾನದ ಆಸ್ತಿಯನ್ನು ಸ್ವಹಿತಾಸಕ್ತಿಗೆ ಬಳಸಲು ಹೋಗದಂತಹ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿಗೆ ನೀಡಬೇಕು. ಇದರಿಂದ ಏನಾಗುತ್ತದೆ. ಅತೀ ಹೆಚ್ಚು ಆದಾಯ ಇರುವ ದೇವಾಲಯಗಳ ಆದಾಯ ಬೇರೆ ಆದಾಯ ಕಡಿಮೆ ಇರುವ ದೇವಾಲಯಗಳ ಅಭಿವೃದ್ಧಿಗೆ ವಿನಿಯೋಗಿಸಲು ಸಹಕಾರಿಯಾಗುತ್ತದೆ. ಸಣ್ಣಪುಟ್ಟ, ಆದಾಯ ಮೂಲ ಕಡಿಮೆ ಇರುವ ದೇವಾಲಯಗಳ ಪುರೋಹಿತರಿಗೆ ಉತ್ತಮ ಸಂಬಳವನ್ನಾದರೂ ಕೊಡಲು ಇದು ಅನುಕೂಲವಾಗುತ್ತದೆ.
ಇನ್ನು ದೇವಾಲಯಗಳು ಎಂದರೆ ಅದು ನಮ್ಮ ಸಾಮಾಜಿಕ, ಸಾಂಸ್ಕೃತಿಕ, ಜೀವನದ ಕೇಂದ್ರಬಿಂದುವಾಗಿ ರೂಪಿಸಬೇಕು ಎನ್ನುವ ಮಾತನ್ನು ಭಾಗವತ್ ಹೇಳಿದ್ದಾರೆ. ಇದು ಕೂಡ ಆಗಬೇಕಾಗಿರುವುದು. ಏನೆಂದರೆ ಇಂದಿನ ಕಾಲದಲ್ಲಿ ನಾವು ಗುರುಕುಲ ಪದ್ಧತಿಗೆ ಹೋಗಲು ಕಷ್ಟಸಾಧ್ಯವಾದರೂ ಕನಿಷ್ಟ ನಮ್ಮ ಸನಾತನ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯವನ್ನು ನಮ್ಮ ಮುಂದಿನ ತಲೆಮಾರಿಗೆ ತಿಳಿಸುವ ಕೆಲಸವಾದರೂ ಆಗಲೇಬೇಕಿದೆ. ಅದನ್ನು ಮಾಡಬೇಕಾದ ಗುರುತರ ಜವಾಬ್ದಾರಿ ನಮ್ಮ ಹಿಂದೂ ದೇವಾಲಯಗಳ ಮೇಲಿದೆ. ಅದನ್ನು ಮೋಹನ್ ಭಾಗವತ್ ಸೃಷ್ಟಪಡಿಸಿದ್ದಾರೆ. ಅವರೇ ಹೇಳಿರುವ ಪ್ರಕಾರ ದಕ್ಷಿಣ ಭಾರತದ ದೇವಸ್ಥಾನಗಳನ್ನು ರಾಜ್ಯ ಸರಕಾರಗಳೇ ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ. ಇದನ್ನು ಈಗ ಸರಿ ಮಾಡಬೇಕಿದೆ. ಅಷ್ಟಕ್ಕೂ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಇವರ ಪರಿವಾರ ಭಾರತೀಯ ಜನತಾ ಪಾರ್ಟಿಯ ಸರಕಾರ ಇಲ್ಲ. ಕರ್ನಾಟಕದಲ್ಲಿ ಮೊದಲಿಗೆ ಇವರ “ಆದೇಶ” ಅನುಷ್ಟಾನಕ್ಕೆ ಬರಲಿ. ಬಹುಶ: ಈಗ ಶುರು ಮಾಡಿದರೆ ಅದು ಅನುಷ್ಟಾನಕ್ಕೆ ಬರಲು ಇನ್ನು ಎಷ್ಟು ವರ್ಷಗಳು ಬೇಕಾಗಬಹುದು ಎಂದು ಯಾರಿಗೆ ಗೊತ್ತು. ಮೊದಲಿಗೆ ನೈಜ ಭಕ್ತರನ್ನು ಹುಡುಕಬೇಕು. ಅವರ ಕಳಕಳಿ ಗಮನಿಸಬೇಕು. ಶ್ರೀಮಂತ ದೇವಸ್ಥಾನಗಳನ್ನು ನಿರ್ವಹಿಸಲು ಎಲ್ಲರೂ ಬರುತ್ತಾರೆ. ಆದರೆ ಮಧ್ಯಮ ಮತ್ತು ಆದಾಯ ಕಡಿಮೆ ಇರುವ ದೇವಾಲಯಗಳನ್ನು ಕೂಡ ನೋಡಬೇಕಲ್ಲ. ಶ್ರೀಮಂತ ದೇವಾಲಯಗಳನ್ನು ಅಭಿವೃದ್ಧಿ ಮಾಡುವುದು ಸುಲಭ. ಆದರೆ ಒಟ್ಟು ರಾಜ್ಯದ ದೇವಾಲಯಗಳ ಅಭಿವೃದ್ಧಿಯಲ್ಲಿ ಸಮತೋಲನವನ್ನು ಕಾಪಾಡುವುದು ಕೂಡ ಪ್ರಮುಖವಾಗಿದೆ. ಇನ್ನು ಹಿಂದೂ ದೇವಾಲಯಗಳ ಆಸ್ತಿಯು ದೇವರ ಪೂಜೆ, ಹಿಂದೂ ಸಮಾಜದ ಸೇವೆ ಮತ್ತು ಕಲ್ಯಾಣಕ್ಕೆ ಮಾತ್ರ ಬಳಕೆಯಾಗಬೇಕು ಎಂದು ಅವರು ಹೇಳಿದ್ದಾರೆ. ಅದು ಆಗಬೇಕು. ಒಬ್ಬ ಭಕ್ತ ತನ್ನ ಕಾಣಿಕೆಯನ್ನು ದೇವರಿಗೆ ಸಮರ್ಪಿಸುವುದು ಏಕೆ ಎಂದು ಸರಕಾರಗಳು ಮೊದಲು ಅರ್ಥ ಮಾಡಿಕೊಳ್ಳಬೇಕು. ಎಷ್ಟೋ ದೇವಸ್ಥಾನಗಳಿಗೆ ಹೋಗಲು ಉತ್ತಮ ರಸ್ತೆ ಸೌಕರ್ಯಗಳು ಇಲ್ಲ. ವಸತಿ ವ್ಯವಸ್ಥೆ ಇಲ್ಲ. ಬಸ್ಸುಗಳಿಗೆ, ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಅದೆಲ್ಲ ಆಗುವುದು ಯಾವಾಗ? ನಾವು ವೇದ, ಉಪನಿಷತ್, ಪಾರಾಯಣ ಕಲಿಯುತ್ತೇವೆ ಎಂದು ಒಂದು ಊರಿನ ಮಕ್ಕಳು ಬಯಸಿದರೆ ಅವರಿಗೆ ಕಲಿಸಲು ಸೂಕ್ತ ವ್ಯವಸ್ಥೆ ಮಾಡಲು ಆಗುತ್ತದೆಯಾ?
ಇನ್ನು ತಿರುಪತಿಯಂತಹ ದೇವಸ್ಥಾನಗಳಲ್ಲಿ ಅನ್ಯಧರ್ಮಿಯರ ಹಸ್ತಕ್ಷೇಪದ ಮಾತುಗಳು ಕೇಳಿಬರುತ್ತಿವೆ. ಅಲ್ಲಿ ಮುಖ್ಯಮಂತ್ರಿ ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿರುವುದರಿಂದ ಅವರ ಬೆಂಬಲಿಗರ ಕಾಟದ ಬಗ್ಗೆ ಕಥೆಗಳಿವೆ. ಅಲ್ಲಿ ವಿವಿಧ ಅಭಿವೃದ್ಧಿ ಕಾರ್ಯ, ಸೇವೆ, ಪ್ರಸಾದದ ತಯಾರಿಕೆ, ಗುತ್ತಿಗೆಯಲ್ಲಿ ಸಾಕಷ್ಟು ಅನ್ಯಮತೀಯ ಜನರ ಹಸ್ತಕ್ಷೇಪ ಇರುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೆಲ್ಲ ನೋಡಿಯೇ ಭಾಗವತ್ ಅದನ್ನು ಹೇಳಿರುವುದು. ಸರಿಯಾಗಬೇಕಾದರೆ ಮೊದಲು ಕರ್ನಾಟಕದಿಂದಲೇ ಆಗಲಿ. ಆಗ ಬೇರೆ ರಾಜ್ಯದಲ್ಲಿಯೂ ಮಾಡುವ ನಿಯಮವನ್ನು ಕೇಂದ್ರ ಜಾರಿಗೆ ತರಲಿ. ತರಲಿಲ್ಲವಾ, ರಾಜ್ಯ ಸರಕಾರಗಳು ಸಹಕರಿಸಲಿಲ್ಲವಾದರೆ ಆಗ ಭಕ್ತರು ನ್ಯಾಯಾಲಯಕ್ಕೆ ಹೋಗಲಿ!
Leave A Reply