ಸರಕಾರಿ ಪದವಿಪೂರ್ವ ಕಾಲೇಜಿನ ಹೆಣ್ಣುಮಕ್ಕಳಿಗೆ ಇದೆಲ್ಲಾ ಗೊತ್ತಾಗಲ್ಲ ಎಂದುಕೊಳ್ಳಬೇಡಿ!!
ಸ್ಮಾರ್ಟ್ ಸಿಟಿ ಯೋಜನೆ ಎನ್ನುವುದು ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎನ್ನುವ ಹಾಗೆ ಆಗಬಾರದು ಎಂದಾದರೆ ಸಂಬಂಧಪಟ್ಟವರು ತಕ್ಷಣ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ನೇರವಾಗಿ ವಿಷಯಕ್ಕೆ ಬರೋಣ. ಮಂಗಳೂರಿನ ರಥಬೀದಿಯಲ್ಲಿ ಮಹಿಳಾ ಸರಕಾರಿ ಪದವಿಪೂರ್ವ ಕಾಲೇಜು ಇದೆ. ಬಹಳ ಹಳೆಯ ಕಾಲೇಜು. ಅದನ್ನು ಸ್ಮಾರ್ಟ್ ಸಿಟಿ ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾಗುತ್ತದೆ ಎನ್ನುವ ವಿಷಯ ತಿಳಿದಾಗ ಸಹಜವಾಗಿ ನನಗೆ ಖುಷಿಯಾಗಿತ್ತು. ಒಂದು ಕೋಟಿ ಎಂಬತ್ತು ಲಕ್ಷ ರೂಪಾಯಿಯ ಯೋಜನೆ. ಇಷ್ಟು ಹಣ ಖರ್ಚು ಮಾಡುವಾಗ ಹೇಗಾಗಬೇಕಿತ್ತು. ಆದರೆ ಹೇಗಾಗಿದೆ ಎನ್ನುವುದನ್ನು ಇವತ್ತಿನ ಫೋಟೋ ಪೋಸ್ಟ್ ಮಾಡಿದ್ದೇನೆ. ನೋಡಿ. ಫೋಟೋದಲ್ಲಿ ನಿಮಗೆ ಬಾಸ್ಕೆಟ್ ಬಾಲ್ ಅಂಗಣ ಕಾಣುತ್ತದೆ. ಈ ಸ್ಮಾರ್ಟ್ ಸಿಟಿಯವರಿಗೆ ಬಾಸ್ಕೆಟ್ ಬಾಲ್ ಅಂಗಣ ಮಾಡಲು ಯಾರು ಕಲಿಸಿದರು ಅಥವಾ ಇವರು ಇಂತಹ ಒಂದು ಬಾಸ್ಕೆಟ್ ಬಾಲ್ ಅಂಗಣವನ್ನು ಎಲ್ಲಿ ನೋಡಿ ಕಲಿತರು ಎನ್ನುವುದನ್ನು ಅವರೇ ಹೇಳಬೇಕು.
ಬಾಸ್ಕೆಟ್ ಬಾಲ್ ಅಂಗಣ ಎಂದರೆ ಎರಡೂ ಕಡೆ ಕಂಬ ನಿಲ್ಲಿಸಿ ತೂತಾಗಿರುವ ಬುಟ್ಟಿಯನ್ನು ನೇತಾಡಿಸಿ ಅದರ ಒಳಗೆ ಬಾಲ್ ಹಾಕುವುದೇ ಬಾಸ್ಕೆಟ್ ಬಾಲ್ ಕ್ರೀಡೆ ಎಂದಾದರೆ ಅದನ್ನು ಎಲ್ಲಿ ಬೇಕಾದರೂ ಆಡಬಹುದು. ಒಂದು ಗಲ್ಲಿಯಲ್ಲಿ ಕೂಡ ಎರಡು ಕಂಬ ನಿಲ್ಲಿಸಿ ಮೇಲೆ ಅತ್ತ ಇತ್ತ ಎರಡು ಬಾಸ್ಕೆಟ್ ಕೊರೆದು ತೂಗು ಹಾಕಿದರೆ ಅಲ್ಲಿ ಕೂಡ ಆಡಬಹುದಲ್ಲ. ಆದರೆ ಆಗುವುದಿಲ್ಲ. ಫುಟ್ ಬಾಲ್ ಆಡಿದ ಹಾಗೆ ಬಾಸ್ಕೆಟ್ ಬಾಲ್ ಆಡಲು ಆಗುವುದಿಲ್ಲ. ಬಾಸ್ಕೆಟ್ ಬಾಲ್ ಅಂಗಣ ನಿರ್ಮಿಸುವಾಗ ಅಲ್ಲಿ ಮುಖ್ಯವಾಗಿ ಸಮತಟ್ಟಾದ ಒಂದೇ ಲೆವೆಲ್ಲಿನ ಅಂಗಣ ಬೇಕು. ಅಂಗಣದಲ್ಲಿ ಒಂದೇ ಮಟ್ಟ ಕಾಪಾಡಿಕೊಳ್ಳಬೇಕು. ಅದನ್ನು ವಾಟರ್ ಲೆವೆಲ್ ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ನೀರಿನ ಮಟ್ಟ ಹೇಗಿರುತ್ತದೆಯೋ ಹಾಗೆ ಬಾಸ್ಕೆಟ್ ಬಾಲ್ ಅಂಗಣ ಇರಬೇಕು ಎನ್ನಲಾಗುತ್ತದೆ. ನೀವು ಬೇಕಾದರೆ ಗಮನಿಸಿ. ಒಂದು ಬಕೆಟಿನಲ್ಲಿ ನೀರು ತುಂಬಿಸಿಟ್ಟರೆ ಅದು ಸಮಾನಾಂತರವಾಗಿ ಹೇಗೆ ಇರುತ್ತದೆಯೋ ಹಾಗೆ ಬಾಸ್ಕೆಟ್ ಬಾಲ್ ಗ್ರೌಂಡ್ ಕೂಡ ಇರಬೇಕು. ಇಲ್ಲದಿದ್ದರೆ ಆಡುವಾಗ ಕಾಲು ಮುರುಟಿ ಹೋದರೆ ಕ್ರೀಡಾಪಟು ಹಾಸಿಗೆಯಲ್ಲಿ ಮಲಗಬೇಕಾಗುತ್ತದೆ. ಹಾಗೆ ಆದರೆ ಯಾರು ಜವಾಬ್ದಾರಿ? ಒಂದು ತುದಿಯಿಂದ ಮತ್ತೊಂದು ತುದಿಯ ತನಕ ಏಕಪ್ರಕಾರವಾಗಿರುವ ಅಂಗಣವನ್ನು ನಿರ್ಮಿಸಲು ಸಾಧ್ಯವಾಗದೇ ಹೋದರೆ ಅಂತಹುದನ್ನು ನಿರ್ಮಿಸಲು ಮುಂದಾಗುವುದಾದರೂ ಏಕೆ? ಮಹಿಳಾ ಸರಕಾರಿ ಪದವಿಪೂರ್ವ ಕಾಲೇಜಿನ ಹೆಣ್ಣುಮಕ್ಕಳಿಗೆ ಏನೂ ಗೊತ್ತಾಗುವುದಿಲ್ಲ ಎಂದು ಏನು ಮಾಡಿದರೂ ನಡೆಯುತ್ತಾ? ಅವರು ಅಮಾಯಕರು ಇರಬಹುದು ಆದರೆ ಅವಿವೇಕಿಗಳಲ್ಲ. ಆದರೆ ಸರಕಾರಿ ಮತ್ತು ಹೆಣ್ಣುಮಕ್ಕಳ ಕಾಲೇಜು ಎಂದ ಕೂಡಲೇ ಹಣ ಹೊಡೆಯುವ ಸ್ಕೆಚ್ ಯಾರಿಗೋ ತಲೆಗೆ ಹೊಳೆದಿದೆ.
ಇನ್ನು ಈ ಕಾಲೇಜಿನಲ್ಲಿ ಒಂದು ಕಲಾಮಂಟಪ ಇದೆ. ಅದೇನು ತುಂಬಾ ಹಾಳಾಗಿರಲಿಲ್ಲ. ತಕ್ಕಮಟ್ಟಿಗೆ ಗಟ್ಟಿಮುಟ್ಟಾಗಿ ಚೆನ್ನಾಗಿತ್ತು. ಅದರ ಮೇಲೆ ಸ್ಮಾರ್ಟ್ ಸಿಟಿಯವರ ಕಣ್ಣು ಬಿದ್ದಿದೆ. ಇದನ್ನು ಏನಾದರೂ ಮಾಡಿ ರಿಪೇರಿ ಮಾಡದಿದ್ದರೆ ನಾವು ಹಣ ಎಲ್ಲಿ ಎಂದು ಖರ್ಚು ತೋರಿಸುವುದು ಎಂದು ಅಂದುಕೊಂಡಿರುವಂತಿದೆ. ಈ ಕಲಾಮಂಟಪವನ್ನು ನವೀಕರಿಸುವ ಹೆಸರಿನಲ್ಲಿ ಅದರ ಹಿಂದಿನ ಸಾರಣೆಯನ್ನು ತೆಗೆದು ಗೋಡೆಗೆ ಪ್ಲಾಸ್ಟರ್ ತರಹದ್ದನ್ನು ಸಾರಿಸಿ ರೀ ಸಾರಣೆ ಮಾಡಿದ್ದಾರೆ. ಅದರ ಅಗತ್ಯವೇ ಇರಲಿಲ್ಲ. ಇನ್ನು ಕಾಲೇಜಿನ ಅಂಗಣದಲ್ಲಿ ಒಂದಿಷ್ಟು ಟೈಲ್ಸ್ ಹಾಕಲಾಗಿದೆ. ಇದೆಲ್ಲ ಸೇರಿಸಿ ಒಂದು ಕೋಟಿ ಎಂಬತ್ತು ಲಕ್ಷ ಖರ್ಚಾಗುವಂತದ್ದು ಏನು ಎಂದು ಯಾರಿಗೂ ಗೊತ್ತಾಗುವುದಿಲ್ಲ. ಹೀಗೆ ಆಗಬಾರದು ಎಂದು ಮೋದಿಯವರು ಪ್ರತಿ ಹಂತದಲ್ಲಿ ಎಚ್ಚರಿಕೆಯನ್ನು ತೆಗೆದುಕೊಂಡು ಸ್ಮಾರ್ಟ್ ಸಿಟಿ ಸ್ಪೆಶಲ್ ಪರ್ಪಸ್ ವೆಹಿಕಲ್ ಎನ್ನುವ ಕಾನ್ಸೆಪ್ಟ್ ಮಾಡಿ ರಾಜಕಾರಣಿಗಳ ಶಾಮೀಲಾತಿ ಕಡಿಮೆ ಇದ್ದು ಅಧಿಕಾರಿಗಳ ಕೈಯಲ್ಲಿ ಇದರ ಜವಾಬ್ದಾರಿ ಕೊಟ್ಟಿರುವುದು. ಆದರೆ ಇಲ್ಲಿ ಆಗುತ್ತಿರುವುದೇನು? ಹಾಗಾದರೆ ಹೀಗೆ ಆಗದ ರೀತಿಯಲ್ಲಿ ನಮ್ಮ ತೆರಿಗೆಯ ಹಣ ಸಮರ್ಪಕವಾಗಿ ಅನುಷ್ಟಾನವಾಗುವಂತೆ ನೋಡಿಕೊಳ್ಳಲು ಸಾಧ್ಯವಿಲ್ಲವೇ? ಇದೆ. ಸಾಧ್ಯವಿದೆ. ಹೇಗೆ? ಹೇಗೆಂದರೆ ಇಂತಹ ಕಾಮಗಾರಿಗಳು ಆಗುವಾಗ ಜನಪ್ರತಿನಿಧಿಗಳು ಇದರ ಮೇಲೆ ಒಂದು ಹದ್ದಿನ ಕಣ್ಣು ಇಡಬೇಕು. ಇಷ್ಟು ದೊಡ್ಡ ಮೊತ್ತದ ಒಂದೊಂದು ರೂಪಾಯಿ ಕೂಡ ಯಾವ ಕೆಲಸಕ್ಕೆ ನಿಗದಿಪಡಿಸಲಾಗಿದೆಯೋ ಅದಕ್ಕೆ ಬಳಕೆಯಾಗುತ್ತಿದೆಯಾ ಎಂದು ನೋಡಬೇಕು. ಅದು ಬಿಟ್ಟು ಈ ಲಾಟ್ ಪುಟ್ ಬಾಸ್ಕೆಟ್ ಬಾಲ್ ಅಂಗಣ, ಸ್ವಲ್ಪ ಟೈಲ್ಸ್ ಮತ್ತು ಕಲಾಮಂಟಪಕ್ಕೆ ಸ್ಪಲ್ಪ ಪೌಡರ್ ಹಾಕಿದ ಮಾತ್ರಕ್ಕೆ ಒಂದು ಕೋಟಿ ಇಪ್ಪತ್ತು ಲಕ್ಷ ಖರ್ಚಾಗುತ್ತದೆ ಎಂದಾದರೆ ಯಾವ ಕುರುಡ ತಾನೆ ಇದನ್ನು ನಂಬುತ್ತಾನೆ.
ಯೋಜನೆಗಳನ್ನು ಮಾಡುವುದು ಮುಖ್ಯವಲ್ಲ. ಈಗ ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಸಿಕ್ಕಿದೆ. ಕೋಟ್ಯಾಂತರ ಹಣ ಹರಿದು ಬರುತ್ತಿದೆ. ಏನೋ ನಡೆಯುತ್ತಿದೆ. ರಾಜಕಾರಣಿಗಳಿಗೆ ಉದ್ಘಾಟನೆ, ಶಿಲಾನ್ಯಾಸ ಮತ್ತೇ ಉದ್ಘಾಟನೆ ಹೀಗೆ ನಿತ್ಯ ನಿರಂತರ ಮಾಡಿ ಫೋಟೋಗೆ, ವಿಡಿಯೋಗೆ ನಿಲ್ಲಲು ಮೋದಿ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಂತ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಾಟಾಚಾರಕ್ಕೆ ಏನು ಮಾಡಿದರೂ ಅದು ಅಭಿವೃದ್ಧಿ ಎಂದು ಆಗುವುದಿಲ್ಲ. ಅವರು ತಲೆಬುಡವಿಲ್ಲದ ಕಾಮಗಾರಿ ಮಾಡಿ ಹೋದರೆ ಅದರಿಂದ ಏನೂ ಉಪಯೋಗವಿಲ್ಲದೆ ಹೋದರೆ ಹಾಳಾಗುವುದು ನಮ್ಮ ತೆರಿಗೆಯ ಹಣ. ಒಂದು ಕೋಟಿ ಎಂಬತ್ತು ಲಕ್ಷ ಎಂದರೆ ಸುಮ್ಮನೆಯಾ? ಒಟ್ಟಿನಲ್ಲಿ ಯಾರೋ ಮೇಯಲು ನಮ್ಮ ಮನೆಯ ಅಂಗಳವೇ ಬೇಕಾ ಎಂದು ಕೇಳುವ ಪರಿಸ್ಥಿತಿ ನಮ್ಮದು!!
Leave A Reply