ಸ್ವಯಂಘೋಷಿತ ತೆರಿಗೆ ಕಟ್ಟಲು ಆನ್ ಲೈನ್ ಹೆಸರಿನಲ್ಲಿ!!
ನೀವು ಮಂಗಳೂರಿನ ಲಾಲ್ ಭಾಗ್ ನಲ್ಲಿರುವ ಮಹಾನಗರ ಪಾಲಿಕೆಯ ಕಟ್ಟಡದ ನೆಲ ಅಂತಸ್ತಿಗೆ ಯಾವತ್ತಾದರೂ ಹೋಗಿದ್ದರೆ ಅಲ್ಲಿ ಕಾರಿಡಾರ್ ನಲ್ಲಿ ಸುಮಾರು ಇಪ್ಪತ್ತೈದು ಮಂದಿ ಟೇಬಲ್, ಚೇರ್ ಇಟ್ಟು ಕುಳಿತುಕೊಂಡಿರುತ್ತಿದ್ದನ್ನು ನೋಡಿರುತ್ತಿರಿ. ನೀವು ನಿಮ್ಮ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಕಟ್ಟುವಾಗ ಒಂದು ಕಿರುಪುಸ್ತಕದಲ್ಲಿ ಮಾಹಿತಿಗಳನ್ನು ಬರೆಯಬೇಕಾದರೆ ಇವರ ಬಳಿ ಹೋಗಿರುತ್ತೀರಿ. ಗರಿಷ್ಟ ಹತ್ತು ಪೇಜ್ ಗಳಿರುವ ಎರಡು ಬಣ್ಣದಲ್ಲಿ ಇರುವ ಆ ಪುಸ್ತಕದಲ್ಲಿ ನೀವು ಕಟ್ಟಡ ತೆರಿಗೆ, ಕಸ ತೆರಿಗೆ ಹೀಗೆ ಬೇರೆ ಕಾಲಂಗಳನ್ನು ಈ ಪರಿಣಿತರು ತುಂಬಿ ಕೊಡುತ್ತಿದ್ದರು. ಆ ಪುಸ್ತಕವನ್ನು ನಿಮಗೆ ಉಚಿತವಾಗಿ ಪಾಲಿಕೆ ಕೊಡುತ್ತಿತ್ತು. ಅದಕ್ಕಾಗಿ ಪ್ರತಿ ವರ್ಷ ಲಕ್ಷಗಟ್ಟಲೆ ಹಣ ಬುಕ್ ಪ್ರಿಂಟ್ ಮಾಡಲು ಖರ್ಚಾಗುತ್ತಿತ್ತು ಎನ್ನುವ ಕಾರಣಕ್ಕೆ ಮತ್ತು ಡಿಜಿಟಲೀಕರಣದ ಹೆಸರಿನಲ್ಲಿ ಪಾಲಿಕೆ ಈಗ ಹೊಸ ವ್ಯವಸ್ಥೆಯನ್ನು ಶುರು ಮಾಡಿದೆ.
ಇಲ್ಲಿ ತನಕ ಮ್ಯಾನ್ಯುವೆಲ್ ಆಗಿ ನಡೆಯುತ್ತಿದ್ದ ಈ ಕೆಲಸ ಮೊನ್ನೆ ನವೆಂಬರ್ 1 ರಿಂದ ಕಂಪ್ಯೂಟರ್ ಮೂಲಕ ನಡೆಯುತ್ತಿದೆ. ಇದನ್ನು ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಚಾಲನೆ ನೀಡಿದ್ದಾರೆ. ಈಗ ವಿಷಯ ಏನೆಂದರೆ ಈ ಹೊಸ ಬದಲಾವಣೆಯಿಂದ ಜನರಿಗೆ ಆಗಲಿರುವ ಪ್ರಯೋಜನಗಳೇನು? ಮೊದಲನೇಯದಾಗಿ ಇಲ್ಲಿಯ ತನಕ ಇದ್ದ ಇಪ್ಪತ್ತೈದು ಜನರಿಗೆ ಕೆಲಸ ಹೋಯಿತು. ಅವರ ಜಾಗದಲ್ಲಿ ಐದು ಜನ ಹೊರಗುತ್ತಿಗೆಯವರು ಬಂದರು. ಅವರು ಒಂದು ಕಂಪ್ಯೂಟರ್ ಮತ್ತು ಪ್ರಿಂಟರ್ ಹಾಕಿ ಕುಳಿತುಕೊಂಡಿದ್ದಾರೆ. ನೀವು ಅವರ ಬಳಿ ಹೋದರೆ ಅವರು ಕಂಪ್ಯೂಟರ್ ನಲ್ಲಿ ದಾಖಲೆ ನಮೂದಿಸಿ ಚಲನ್ ಕೊಡುತ್ತಾರೆ. ನೀವು ಅದನ್ನು ಬ್ಯಾಂಕಿನಲ್ಲಿ ಕಟ್ಟಿ ರಸೀದಿ ಪಡೆದುಕೊಳ್ಳುತ್ತೀರಿ. ಇದರಲ್ಲಿ ಜನರಿಗೆ ಸಮಯ, ಶ್ರಮ, ಹಣ ಏನಾದರೂ ಉಳಿಯಿತಾ? ಇಲ್ಲ. ಬರುವವರು ಅಲ್ಲಿ ಬರಲೇ ಬೇಕು. ಹಿಂದೆ ಅಲ್ಲಿ ಇಪ್ಪತ್ತೈದು ಜನರಿದ್ದರು. ಈಗ ಐದು ಜನ. ಅವರ ಕಂಪ್ಯೂಟರಿಗೆ ನೆಟ್ ವರ್ಕ್ ಸಮಸ್ಯೆ. ಅದರಿಂದ ನೀವು ಸರದಿಯಲ್ಲಿ ಕೆಲಸ ಆಗುವ ತನಕ ಕಾಯಬೇಕು. ಈಗ ಚಲನ್ ಕೊಡುತ್ತಾರೆ. ಬ್ಯಾಂಕಿಗೆ ಹೋಗಿ ಕಟ್ಟಬೇಕು. ಇದರಲ್ಲಿ ಆನ್ ಲೈನ್ ಎಷ್ಟು? ಆಫ್ ಲೈನ್ ಎಷ್ಟು? ನಿಜವಾಗಿ ಆನ್ ಲೈನ್ ವ್ಯವಸ್ಥೆ ಹೇಗಿರಬೇಕು ಎಂದರೆ ನೀವು ಕೆಲವು ವಸ್ತುಗಳನ್ನು ಖರೀದಿಸಲು ಆನ್ ಲೈನ್ ಬುಕ್ ಮಾಡುವಾಗ ಅದರಲ್ಲಿಯೇ ಆನ್ ಲೈನ್ ಮೂಲಕ ಹಣ ಕಟ್ಟುವುದಿಲ್ಲವೇ? ಹಾಗಿರಬೇಕು. ಈಗ ಅಮೆಜಾನ್, ಫ್ಲೀಪ್ ಕಾರ್ಟ್, ಫೋನ್ ಪೇ, ಎಟಿಎಂ ಹೇಗೆ ಕೆಲಸ ಮಾಡುತ್ತವೆಯೋ ಹಾಗೆ ಕೂಡ ಇದನ್ನು ಮಾಡಬಹುದು. ನೀವು ಲಿಂಕ್ ಒಳಗೆ ಹೋಗಿ ನಿಮ್ಮ ಡೋರ್ ನಂಬರ್ ಹಾಕಿದರೆ ಆಗ ಎಲ್ಲ ಮಾಹಿತಿಗಳು ಅಲ್ಲಿ ಲಭ್ಯವಿರಬೇಕು. ನೀವು ಎಷ್ಟು ತೆರಿಗೆ ಕಟ್ಟಬೇಕು ಎನ್ನುವುದು ಗೊತ್ತಾದ ಕೂಡಲೇ ನೀವು ಅಲ್ಲಿಯೇ ನಿಮ್ಮ ಬ್ಯಾಂಕ್ ಖಾತೆಯಿಂದ ಅಲ್ಲಿ ಹಣ ಹೋಗುವಂತೆ ಮಾಡಬೇಕು. ಇದರಿಂದ ಏನಾಗುತ್ತದೆ ಎಂದರೆ ಆಗ ನೀವು ಅಲ್ಲಿ ಹೋಗುವುದು ತಪ್ಪುತ್ತದೆ. ಕಾಯುವುದು ತಪ್ಪುತ್ತದೆ. ಬ್ಯಾಂಕಿಗೆ ಹೋಗುವುದು ತಪ್ಪುತ್ತದೆ. ಕೆಲಸ ಕೂಡ ಸಲೀಸಾಗಿ ಆಗುತ್ತದೆ. ಇದನ್ನು ನಿಜವಾದ ಆನ್ ಲೈನ್ ಅನ್ನುವುದು. ಇದೆಲ್ಲ ಏನಿಲ್ಲ, ಇಪ್ಪತ್ತೈದು ಜನರ ಕೆಲಸ ಕಿತ್ತು ಹಾಕಿ ಐದು ಜನರಿಗೆ ಕೊಟ್ಟರೆ ಅದು ಡಿಜಿಟಲೀಕರಣ ಆಗುತ್ತದಾ. ಪೂರ್ಣ ಪ್ರಮಾಣದಲ್ಲಿ ಆನ್ ಲೈನ್ ಮಾಡಲು ಆಗದೇ ಇದ್ದರೆ ಇದರಿಂದ ಸಾಧಿಸಿದ್ದಾದರೂ ಏನು?
ಹಿಂದೆ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ಈ ಬುಕ್ ಬರೆದು ಅದೇ ಕಟ್ಟಡದಲ್ಲಿರುವ ಇರುವ ಮಂಗಳೂರು ಒನ್ ಗೆ ಹೋಗಿ ಅಲ್ಲಿ ಹಣ ಕಟ್ಟುವ ವ್ಯವಸ್ಥೆ ಇತ್ತು. ಅಲ್ಲಿ ನಡೆದ ಅವ್ಯವಹಾರದಿಂದ ಪಾಲಿಕೆಗೆ ಅಂದಾಜು ಎರಡೂವರೆ ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿರುವ ಕಹಿ ನೆನಪು ಪಾಲಿಕೆಯ ಅಂಗಳದಲ್ಲಿ ಇನ್ನೂ ಕೂಡ ಹಸಿಹಸಿಯಾಗಿದೆ. ಆಗ ಕಾಂಗ್ರೆಸ್ಸಿನ ಮಹಾಬಲ ಮಾರ್ಲ ಅವರು ಮೇಯರ್ ಆಗಿದ್ದರು. ಒಂದು ಸಮಿತಿಯನ್ನು ರಚಿಸಿ ಅದರಲ್ಲಿ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿಯ ಪಾಲಿಕೆಯ ಸದಸ್ಯರನ್ನು ಹಾಕಿ ತನಿಖೆ ನಡೆದಿತ್ತು. ಅದರಿಂದ ಕಾಫಿ, ಅಂಬಡೆಗೆ ಖರ್ಚಾದದ್ದು ಬಿಟ್ಟರೆ ತನಿಖೆಯಿಂದ ಒಂದು ಪೈಸೆಯ ಲಾಭ ಕೂಡ ಆಗಲಿಲ್ಲ. ಅದರ ನಂತರ ಅದನ್ನು ನೋಡಲು ಲೆಕ್ಕ ಪರಿಶೋಧಕರಿಗೆ ವಹಿಸಲಾಗಿತ್ತು. ಅವರಿಗೆ ಈ ಹಗರಣದ ತಲೆಬುಡವೇ ಅರ್ಥವಾಗಲಿಲ್ಲ. ಒಟ್ಟಿನಲ್ಲಿ ಯಾರಿಂದಲೂ ವರದಿ ಬರಲಿಲ್ಲ. ಸುಮಾರು ಎರಡೂವರೆ ಕೋಟಿಯಷ್ಟು ಹಣ ಯಾರ ಜೇಬಿಗೆ ಹೋಯಿತು. ಯಾಕೆ ಮತ್ತು ಹೇಗೆ ಹೋಯಿತು. ಅದು ಯಾರೆಂದು ಯಾಕೆ ಇವತ್ತಿಗೂ ಗೊತ್ತಾಗಿಲ್ಲ. ಅದನ್ನು ಪತ್ತೆ ಹಚ್ಚುವುದು ಅಷ್ಟು ಕಷ್ಟವೇ? ಎನ್ನುವ ಪ್ರಶ್ನೆಗೆ ಇವತ್ತಿಗೂ ಯಾರ ಬಳಿಯಲ್ಲಿಯೂ ಉತ್ತರವಿಲ್ಲ. ಇಚ್ಚಾಶಕ್ತಿಯ ಕೊರತೆಯಿಂದ ಹೀಗೆ ಆಗಿರುವುದೇ ವಿನ: ಬೇರೆ ಏನೂ ಅಲ್ಲ. ಇನ್ನು ಹಣ ಸಾರ್ವಜನಿಕರದ್ದು ಆಗಿರುವುದರಿಂದ ವಸೂಲಿಯಾಗಬೇಕೆಂಬ ಗುರಿ ಯಾರಿಗೂ ಇಲ್ಲ. 2007-08 ರಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ನಿಯಮ ಜಾರಿಗೆ ಬಂದಿದೆ. ಆವಾಗಿನಿಂದ ಈ ಆಸ್ತಿ ತೆರಿಗೆ ಪುಸ್ತಕದಲ್ಲಿ ಯಾರದ್ದು ಎಂಟ್ರಿ ಆಗಿದೆ, ಯಾರ ಬಳಿ ರಸೀದಿ ಇರುತ್ತದೆ ಎನ್ನುವುದನ್ನು ಪರಿಶೀಲಿಸಬೇಕಾಗುತ್ತದೆ. ಅದನ್ನು ತಂದರೆ ಎಲ್ಲವೂ ಕ್ಲಿಯರ್ ಆಗುತ್ತದೆ. ಮಂಗಳೂರಿನಲ್ಲಿ ಇರುವ ಖಾಸಗಿ ಆಸ್ತಿಪಾಸ್ತಿ ನೋಡಿದರೆ ಇದೇನು ಅಸಾಧ್ಯವಲ್ಲ. ಆದರೆ ಇವರಿಗೆ ಅದು ಮುಖ್ಯವಾಗಿಲ್ಲ. ಯಾಕೆಂದರೆ ಹೋದದ್ದು ಜನರ ಹಣ. ಜನ ಏನೂ ಕೇಳುವುದಿಲ್ಲ. ನಾವು ಡಿಜಿಟಲ್ ಎಂದು ಏನಾದರೂ ಮಾಡಿ ತೋರಿಸಿದರೆ ಏನೋ ಅದ್ಭುತವಾಗಿ ಪಾಲಿಕೆಯಲ್ಲಿ ಆಗುತ್ತಿದೆ ಎಂದು ನಾಗರಿಕರು ಅಂದುಕೊಳ್ಳುತ್ತಾರೆ ಎನ್ನುವ ಭಾವನೆ ಇವರಲ್ಲಿ ಇದೆ!
Leave A Reply